For Quick Alerts
ALLOW NOTIFICATIONS  
For Daily Alerts

ಬೊಕ್ಕ ತಲೆ: ಅಷ್ಟಕ್ಕೂ ಇದಕ್ಕೆ ಚಿಕಿತ್ಸೆ ಇದೆಯೇ?

|

ವಿಶ್ವದಾದ್ಯಂತ 80% ರಷ್ಟು ಪುರುಷರು ಕೊಂಚ ಮಟ್ಟಿಗಾದರೂ ಬಕ್ಕತಲೆಯ ಹಾಗೂ ಕೂದಲುದುರುವಿಕೆಯ ತೊಂದರೆಗೆ ಒಳಗಾಗಿಯೇ ಇದ್ದಾರೆ. ಒಂದು ಹಂತದ ವಯಸ್ಸು ದಾಟಿದ ಬಳಿಕ ಹೆಚ್ಚಿನ ಪುರುಷರಲ್ಲಿ ಬಕ್ಕತನ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆದರೆ ಈಗ ಬಕ್ಕತನ ಕೇವಲ ಒಂದು ವಯಸ್ಸಿಗೆ ಮಾತ್ರವೇ ಸೀಮಿತವಾಗಿಲ್ಲ, ಇನ್ನೂ ಚಿಕ್ಕ ವಯಸ್ಸಿನಲ್ಲಿರುವವರಲ್ಲಿಯೂ ಬಕ್ಕತನ ಆವರಿಸುತ್ತಿರುವುದನ್ನು ಗಮನಿಸಬಹುದು.

ಅನಾರೋಗ್ಯಕರ ಆಹಾರಕ್ರಮ, ಒತ್ತಡದಲ್ಲಿರುವ ಜೀವನ, ಹತ್ತು ಹಲವು ಸೌಂದರ್ಯಪ್ರಸಾದನಗಳು ಹಾಗೂ ಕೂದಲುದುರುವುದನ್ನು ತಡೆಗಟ್ಟಲು ವಿಭಿನ್ನ ಪ್ರಸಾದನಗಳ ಪ್ರಯೋಗ ಮೊದಲಾದವುಗಳು ಇಂದು ಹದಿಹರೆಯದವರಲ್ಲಿಯೂ ಬಕ್ಕತನವನ್ನು ಆವರಿಸುವಂತೆ ಮಾಡುತ್ತಿವೆ. ಬಕ್ಕತನಕ್ಕೆ ವೈದ್ಯವಿಜ್ಞಾನದಲ್ಲಿ alopecia ಎಂಬ ಹೆಸರಿದೆ ಹಾಗೂ ಹೆಚ್ಚು ಹೆಚ್ಚು ಕೂದಲು ಉದುರಿ ಆ ಭಾಗದಲ್ಲಿ ಹೊಸ ಕೂದಲು ಬೆಳೆಯದಿರಲು (ವಾಸ್ತವವಾಗಿ ಈ ಸ್ಥಳದಲ್ಲಿ ಅತಿ ಸೂಕ್ಷ್ಮ ಹಾಗೂ ಪಾರದರ್ಶಕ ಚಿಕ್ಕ ಕೂದಲು ಬೆಳೆಯುತ್ತದೆ, ಇದು ಮೇಲ್ನೋಟಕ್ಕೆ ಕಾಣದೇ ಇರುವ ಕಾರಣದಿಂದ ಕೂದಲು ಇಲ್ಲದಂತೆ ಭಾಸವಾಗುತ್ತದೆ) ಕಾರಣವಾಗಿ ಬಕ್ಕತಲೆ ಆವರಿಸಿ ಒಂದು ವಿನ್ಯಾಸದಲ್ಲಿ ವಿಸ್ತರಿಸುತ್ತಾ ಹೋಗುತ್ತದೆ.

ಕೂದಲ ಬಗ್ಗೆ ಒಂದಿಷ್ಟು
ಸಸ್ತನಿಗಳ ಶರೀರದದ ಚರ್ಮದ ಬಹುತೇಕ ಭಾಗದಲ್ಲಿ ಕೂದಲು ಆವರಿಸುವುದು ನೈಸರ್ಗಿಕವಾಗಿದೆ. ಮಾನವರ ದೇಹವೂ ಅಷ್ಟೇ, ತುಟಿ, ಹಸ್ತ, ಪಾದ ಮೊದಲಾದ ಕೆಲವೇ ಭಾಗಗಳನ್ನು ಬಿಟ್ಟು ಉಳಿದೆಲ್ಲಾ ಕಡೆ ಕೂದಲುಗಳಿವೆ. ಆದರೆ ಕೂದಲ ದಟ್ಟತೆ ಮತ್ತು ನೀಳತೆ ಕೆಲವು ಭಾಗದಲ್ಲಿ ಮಾತ್ರವೇ ಅತಿ ಹೆಚ್ಚಾಗಿರುತ್ತದೆ. ಇದರಲ್ಲಿ ತಲೆಯ ಚರ್ಮದಲ್ಲಿ ಅತಿ ಹೆಚ್ಚು ಸಾಂದ್ರತೆಯಲ್ಲಿ ಕೂದಲ ಬುಡಗಳಿರುತ್ತವೆ ಹಾಗೂ ಇದು ತಲೆಬುರುಡೆಯ ರಕ್ಷಣೆ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ.

Baldness in men

ಉಳಿದೆಲ್ಲಾ ಭಾಗದ ಚರ್ಮದಲ್ಲಿಯೂ ಕೂದಲುಗಳಿದ್ದೇ ಇರುತ್ತವೆ ಆದರೆ ಇವು ಕಣ್ಣಿಗೆ ಗೋಚರವಾಗದಷ್ಟು ಸೂಕ್ಷ್ಮ ಹಾಗೂ ಪಾರದರ್ಶಕವಾಗಿರುತ್ತವೆ. ಕೂದಲು ಕೆರಾಟಿನ್ ಎಂಬ ಬಗೆಯ ಪ್ರೋಟೀನ್ ನಿಂದ ನಿರ್ಮಿಸಲ್ಪಟ್ಟಿದೆ ಹಾಗೂ ವಿಶೇಷವಾದ ಜೀವಕೋಶಗಳಿಂದ ಕೂಡಿದ ಕೂದಲ ಬುಡ (hair follicle) ಕೂದಲನ್ನು ಸೃಷ್ಟಿಸಿ ಹೆಚ್ಚು ಹೆಚ್ಚು ಕೆರಾಟಿನ್ ತುಂಬಿಸಿ ದೂಡುವ ಮೂಲಕ ಕೂದಲು ಉದ್ದವಾಗಲು ಕಾರಣವಾಗುತ್ತದೆ. ಕೂದಲಿಗೆ ಅಗತ್ಯವಾದ ಆರ್ದ್ರತೆ, ಹೊಳಪು, ಆಮ್ಲಜನಕ, ಪೋಷಕಾಂಶ ಎಲ್ಲವನ್ನೂ ಕೂದಲ ಬುಡದಲ್ಲಿರುವ ಚಿಕ್ಕ ಗಡ್ಡೆಯಂತಹ ಅಂಗ (bulb)ವೇ ಪೂರೈಸುತ್ತದೆ.

ಕೂದಲು ಇರುವುದು ಅನಿವಾರ್ಯವಾದರೆ ಬಕ್ಕತನವೇಕೆ?
ನಮ್ಮ ದೇಹದ ಇತರ ಭಾಗದ ಕೂದಲು ಕಾಣೆಯಾದರೆ ನಾವಾರೂ ದೊಡ್ಡ ಕೊರತೆಯೆಂದು ಪರಿಗಣಿಸುವುದಿಲ್ಲ. ಆದರೆ ತಲೆಯ ಕೂದಲು ಇಲ್ಲವಾದಾಗ ಮಾತ್ರವೇ ಚಿಂತೆ ಆವರಿಸುತ್ತದೆ. ಪ್ರತಿಯೊಬ್ಬರ ತಲೆಯಿಂದಲೂ ನಿತ್ಯವು ನೂರರಷ್ಟು ಕೂದಲುಗಳು ಉದುರುತ್ತವೆ ಹಾಗೂ ಹೆಚ್ಚೂ ಕಡಿಮೆ ಅಷ್ಟೇ ಪ್ರಮಾಣದ ಕೂದಲು ಹೊಸದಾಗಿ ಹುಟ್ಟುತ್ತವೆ, ಹುಟ್ಟಬೇಕು. ವೈದ್ಯವಿಜ್ಞಾನಕ್ಕೂ ಸವಾಲಾಗಿರುವ ಯಾವುದೋ ಸ್ಥಿತಿಯಿಂದಾಗಿ ಒಂದು ಹಂತದಲ್ಲಿ ಈ ದಪ್ಪನೆಯ ನೀಳ ಕೂದಲು ಉದುರಿದ ಬಳಿಕ ಆ ಸ್ಥಳದಲ್ಲಿ ದಟ್ಟವಾದ ಕಪ್ಪು ಕೂದಲು ಹುಟ್ಟುವ ಬದಲು ಅತಿ ಸೂಕ್ಷ್ಮವಾದ ನವಿರಾದ, ಪಾರದರ್ಶಕ (ಸರಿಸುಮಾರು ನಸುಗಂದು ಬಣ್ಣದ) ಅತಿ ಚಿಕ್ಕ ಕೂದಲು ಹುಟ್ಟುತ್ತದೆ. ಹೊರನೋಟಕ್ಕೆ ಈ ಕೂದಲು ಕಾಣದೇ ಹೋಗುವ ಮೂಲಕ ಕೂದಲು ಇಲ್ಲದೇ ಇರುವ ಭಾವನೆ ಮೂಡಿಸುತ್ತದೆ. ಈ ಪರಿ ಒಂದು ವಿನ್ಯಾಸದಲ್ಲಿ ಪ್ರಾರಂಭವಾಗಿ ಹರಡುತ್ತಾ ಹೋಗುತ್ತದೆ. ಇದನ್ನೇ ಬಕ್ಕತನ ಎಂದು ಕರೆಯುತ್ತಾರೆ.

ಬಕ್ಕತನ ಒಂದು ಹಂತದಲ್ಲಿ ಪ್ರಾರಂಭವಾಗಿ ಸರಿಸುಮಾರು ವೃದ್ಧಾದವರೆಗೂ ವಿಸ್ತರಿಸುತ್ತಾ ಹೋಗುವ ಕಾರಣ 90%ರಷ್ಟು ಬಕ್ಕತನದ ಪುರುಷರಲ್ಲಿ ವಿಸ್ತರಣಾ ಹಂತದಲ್ಲಿಯೇ ಇರುತ್ತಾರೆ ಹಾಗೂ 10% ರಷ್ಟು ಬಕ್ಕತಲೆಯ ಪುರುಷರದಲ್ಲಿ ಗರಿಷ್ಟ ಹಾಗೂ ಇನ್ನೂ ವಿಸ್ತರಿಸದ ಹಂತ ತಲುಪಿರುತ್ತಾರೆ. ಒಂದು ಕೂದಲು ಹುಟ್ಟಿದ ಬಳಿಕ ಸುಮಾರು ಮೂರು ತಿಂಗಳವರೆಗೆ ಇದರ ಆಯಸ್ಸು ಇರುತ್ತದೆ ಹಾಗೂ ಬಳಿಕ ಇದು ಉದುರುವುದು ನೈಸರ್ಗಿಕವಾಗಿದೆ. ಈ ಸ್ಥಳದಲ್ಲಿ ಮೊದಲಿನಂತಹ ಹೊಸ ಕೂದಲು ಹುಟ್ಟುತ್ತದೆಯೋ ಅಥವಾ ಪಾರದರ್ಶಕ ಚಿಕ್ಕ ಕೂದಲು ಹುಟ್ಟುತ್ತದೆಯೋ ಎಂಬ ನಿರ್ಧಾರವನ್ನು ನಮ್ಮ ವಂಶವಾಹಿನಿಗಳೇ ನಿರ್ಧರಿಸುವ ಕಾರಣ ಬಕ್ಕತನ ವಂಶವಾಹಿನಿಯಲ್ಲಿದ್ದರೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಬಕ್ಕತನಕ್ಕೆ ಏನು ಕಾರಣಗಳಿವೆ?
ಬಕ್ಕತನ ಕೂದಲ ಬದಲಾವಣೆಯ ನೈಸರ್ಗಿಕ ಪರಿಣಾಮವಾಗಿದ್ದು ಇದಕ್ಕೆ ವಂಶವಾಹಿನಿಯೇ ಪ್ರಮುಖ ಕಾರಣವಾಗಿದೆ. ಜೊತೆಗೇ ಕೆಳಗಿನ ಅಂಶಗಳೂ ಬಕ್ಕತನವನ್ನು ನಿರ್ಧರಿಸುತ್ತವೆ:

• ಅನುವಂಶಿಕ ಕಾರಣಗಳು
ಕೆಲವು ಕುಟುಂಬಗಳಲ್ಲಿ ಅನುವಂಶಿಕವಾಗಿ ಬಕ್ಕತನ ಆವರಿಸಿರುತ್ತದೆ ಹಾಗೂ ಈ ಕುಟುಂಬದ ಸದಸ್ಯರು ಒಂದು ವಯಸ್ಸಿಗೆ ಆಗಮಿಸುತ್ತಿದ್ದಂತೆಯೇ ನಿಸರ್ಗದ ಒಂದು ನಿಯಮಕ್ಕೆ ಒಳಪಟ್ಟಂತೆ ಬಕ್ಕತನವನ್ನು ಪ್ರಕಟಿಸತೊಡಗುತ್ತಾರೆ.

• ಕೇಶವಿನ್ಯಾಸ ಹಾಗೂ ಕೇಶ ಚಿಕಿತ್ಸೆಗಳು
ಇಂದು ಬಾಹ್ಯಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ದೊರಕುತ್ತಿದ್ದಂತೆಯೇ ಸೌಂದರ್ಯ ಪ್ರಸಾಧನಗಳೂ ಹೆಚ್ಚಿನ ಬೇಡಿಕೆ ಪಡೆದಿವೆ. ವಿಶೇಷವಾಗಿ ಯುವಜನಾಂಗವನ್ನು ಸೆಳೆಯಲು ಈ ಉತ್ಪನ್ನಗಳನ್ನು ಅತ್ಯುತ್ತಮ ಗುಣಮಟ್ಟದ ಜಾಹೀರಾತುಗಳ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಈ ಜಾಹೀರಾತುಗಳಿಗೆ ಸುರಿಯುವ ವೆಚ್ಚ ಆ ಉತ್ಪನ್ನದ ಶೇಖಡಾ 60 ರಷ್ಟಿರುತ್ತದೆ ಎಂದರೆ ಈ ಉದ್ಯಮ ಯಾವ ಮಟ್ಟಿಗೆ ಜನರ ಮನಸ್ಸನ್ನು ಆವರಿಸಿರಬಹುದು ಎಂಬುದನ್ನು ಗಮನಿಸಬಹುದು. ಕೇಶವಿನ್ಯಾಸ ಸುಂದರವಾಗಿರಬೇಕೆಂದು ಬಿಗಿಯಾಗಿ ಕಟ್ಟುವುದು, ರಬ್ಬರ್ ಬ್ಯಾಂಡ್ ಮೂಲಕ ಬಂಧಿಸುವುದು ಮೊದಲಾದವು ಕೂದಲ ಬುಡದ ಮೇಲೆ ಹೆಚ್ಚಿನ ಸೆಳೆತ ಹೇರಿ ಸುಲಭವಾಗಿ ಉದುರಲು ಕಾರಣವಾಗುತ್ತದೆ.
ಕೂದಲಿಗೆ ನೀಡುವ ಚಿಕಿತ್ಸೆಗಳಾದ ಬ್ಲೀಚಿಂಗ್, ಬಣ್ಣ ಹಚ್ಚುವುದು, ಗುಂಗುರನ್ನು ನೇರಗೊಳಿಸಲು ಬಿಸಿಯಾಗಿಸುವುದು, ಕೃತಕ ರಾಸಾಯನಿಕಗಳನ್ನು ಬಳಸುವುದು ಮೊದಲಾದವು ತಲೆಯ ಚರ್ಮ ಹಾಗೂ ಕೂದಲ ಬುಡಗಳನ್ನು ಶಿಥಿಲವಾಗಿಸುತ್ತವೆ. ಈ ಅಭ್ಯಾಸಗಳು ತಲೆಯ ಚರ್ಮವನ್ನು ಶಿಥಿಲವಾಗಿಸಿ ಮುಂದೆಂದೋ ಎದುರಾಗಬಹುದಾಗಿದ್ದ ಬಕ್ಕತಲೆಯನ್ನು ಶೀಘ್ರವೇ ಆವರಿಸುವಂತೆ ಮಾಡುತ್ತವೆ.

• ರಸದೂತಗಳ ಏರುಪೇರು
ಕೂದಲ ಉದುರುವಿಕೆಗೆ ರಸದೂತಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಪುರುಷರೇ ಹೆಚ್ಚು ಬಕ್ಕತಲೆ ಹೊಂದಿರುತ್ತಾರೆ. ಮಹಿಳೆಯರಲ್ಲಿ ಗರ್ಭಾವಸ್ಥೆಯ ಸಮಯದಲ್ಲಿ, ಹೆರಿಗೆ ಅಥವಾ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಸಮಯದಲ್ಲಿ ತಾತ್ಕಾಲಿಕವಾದ ಬಕ್ಕತನ ಆವರಿಸಬಹುದು. ಆದರೆ ಈ ಸ್ಥಿತಿಗಳನ್ನು ದಾಟಿದ ಬಳಿಕ ಮಹಿಳೆಯರಲ್ಲಿ ಮತ್ತೊಮ್ಮೆ ಕೂದಲು ಮೂಡುತ್ತದೆ. ಅತಿ ಅಪರೂಪದ ಸಂದರ್ಭಗಳಲ್ಲಿ ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಗೆ ನೀಡುವ ಖೀಮೋಥೆರಪಿ ಮೊದಲಾದ ಚಿಕಿತ್ಸೆಗಳ ಅಡ್ಡಪರಿಣಾಮವಾಗಿಯೂ ಬಕ್ಕತನ ಆವರಿಸಬಹುದು.

• ಮಾನಸಿಕ ಒತ್ತಡ
ಕೆಲಸದ ಒತ್ತಡ ಹೆಚ್ಚುತ್ತಿದ್ದಂತೆಯೇ ಬಕ್ಕತನ ಆವರಿಸುವ ಸಾಧ್ಯತೆಯೂ ಹೆಚ್ಚುವುದನ್ನು ಗಮನಿಸಲಾಗಿದೆ. ಕೌಟುಂಬಿಕ ಕಲಹ, ಆತ್ಮೀಯರೊಡನೆ ಮೂಡುವ ವೈಮನಸ್ಸು, ಪ್ರೀತಿಯ ವೈಫಲ್ಯ ಮೊದಲಾದವು ಬಕ್ಕತನವನ್ನು ಶೀಘ್ರವಾಗಿ ಅವರಿಸುವಂತೆ ಮಾಡುತ್ತವೆ.

• ಅನಾರೋಗ್ಯ
ಕೆಲವು ಕಾಯಿಲೆಗಳು ಹಾಗೂ ಇವುಗಳಿಗೆ ನೀಡುವ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಳೂ ಅಡ್ಡಪರಿಣಾಮದ ರೂಪದಲ್ಲಿ ಬಕ್ಕತನವನ್ನು ಮೂಡಿಸಬಹುದು.

ಬಕ್ಕತನದ ಸೂಚನೆಗಳು
ನಿತ್ಯವೂ ಕೊಂಚ ಪ್ರಮಾಣದ ಕೂದಲು ಉದುರುವುದು ಸಾಮಾನ್ಯವಾದರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಹಾಗೂ ಈ ಪ್ರಮಾಣ ಹೆಚ್ಚಾಗಿ ಆ ಸ್ಥಳದಲ್ಲಿ ಹೊಸ ಕೂದಲು ಮೂಡದೇ ಇದ್ದರೆ ಬಕ್ಕತನ ಪ್ರಾರಂಭವಾಯಿತು ಎಂದು ತಿಳಿದುಕೊಳ್ಳಬಹುದು.
• ಪುರುಷರದಲ್ಲಿ ಬಕ್ಕತನ ಎಡ ಮತ್ತು ಬಲ ಹುಬ್ಬಿನ ಮೇಲ್ಭಾಗದಿಂದ ಹಣೆ ವಿಸ್ತಾರಗೊಳ್ಳಲು ಆರಂಭಿಸಿ ಇಂಗ್ಲಿಷ್ ನ ಎಂ ಅಕ್ಷರದ ರೂಪದಲ್ಲಿ ಮುಂದುವರೆಯುತ್ತದೆ. ಮಹಿಳೆಯರಲ್ಲಿ ಈ ಬಗೆಯ ವಿನ್ಯಾಸ ಕಂಡುಬರದೇ ಹೋದರೂ ಎರಡು ಕೂದಲುಗಳ ನಡುವೆ ಅಲ್ಲಲ್ಲಿ ಒಂದೊಂದು ಕೂದಲು ಉದುರಿ ಒಟ್ಟಾರೆಯಾಗಿ ಅಲ್ಲದಿದ್ದರೂ ಮೊದಲಿನಷ್ಟು ಘನವಾಗಿಲ್ಲದಿರುವುದು ಕಂಡುಬರುತ್ತದೆ.
• ಪುರುಷರಲ್ಲಿ ತಲೆಯ ಮೇಲ್ಭಾಗದಲ್ಲಿ ಪುಟ್ಟ ವೃತ್ತಾಕಾರದ ಬಕ್ಕತನ ಆವರಿಸಲು ಪ್ರಾರಂಭಿಸಿ ನಿಧಾನವಾಗಿ ವಿಸ್ತರಿಸತೊಡಗುತ್ತದೆ. ಕೊಂಚ ತುರಿಕೆ ಹಾಗೂ ನೋವು ಇರುವ ಈ ವೃತ್ತಾಕಾರ ಯಾವಾಗ ಪ್ರಾರಂಭವಾಯಿತೋ ಆಗಲೇ ಬಕ್ಕತನವೂ ಪ್ರಾರಂಭವಾಯಿತೆಂದು ಹೇಳಬಹುದು. ಸುಮಾರು ನಾಣ್ಯದ ಗಾತ್ರದಲ್ಲಿ ಪ್ರಾರಂಭವಾಗುವ ಈ ವಿನ್ಯಾಸ ದಿನೇ ದಿನೇ ವಿಸ್ತರಿಸುತ್ತಾ ಕೆಲವು ವರ್ಷಗಳ ಬಳಿಕ ಹಣೆಯಿಂದ ಪ್ರಾರಂಭವಾಗಿದ್ದ ಎಂ ವಿನ್ಯಾಸವನ್ನು ಕೂಡಿ ಹೆಚ್ಚೂ ಕಡಿಮೆ ಇಡಿಯ ತಲೆಯ ನೆತ್ತಿಯನ್ನು ಬರಿದಾಗಿಸುತ್ತವೆ.
• ತಲೆ ತೊಳೆದುಕೊಳ್ಳುವಾಗ, ಹೆಚ್ಚಿನ ಒತ್ತಡವಿಲ್ಲದೇ ಕೂದಲನ್ನು ಬಾಚಿಕೊಳ್ಳುವಾಗ ಸುಲಭವಾಗಿ ಕೂದಲು ಕಿತ್ತುಬಂದರೂ ಇದು ಬಕ್ಕತನ ಆರಂಭವಾಗಿರುವ ಸೂಚನೆಯಾಗಿದೆ.

ಬಕ್ಕತನಕ್ಕೇನು ಚಿಕಿತ್ಸೆ?
ಬಕ್ಕತನ ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಆವರಿಸಿರುವ ತೊಂದರೆಯಾಗಿದ್ದು ಪ್ರತಿಯೊಬ್ಬರೂ ಭಿನ್ನವಾದ ಸ್ಥಿತಿಯನ್ನು ಎದುರಿಸುತ್ತಾರೆ. ಬಕ್ಕತನ ನೈಸರ್ಗಿಕವಾಗಿದ್ದು ಸೌಂದರ್ಯದ ಕಾರಣದ ಹೊರತು ಇತರ ಯಾವುದೇ ಆರೋಗ್ಯದ ತೊಂದರೆಯನ್ನು ಉಂಟುಮಾಡುವುದಿಲ್ಲ. ಸಾವಿನ ಭಯವಂತೂ ಇಲ್ಲವೇ ಇಲ್ಲ. ಆದರೆ ಇತರರು ಮಾಡುವ ಅವಹೇಳನವೇ ಮಾನಸಿಕವಾಗಿ ಕುಗ್ಗಿಸಲು ಇದು ಸಾಕಾಗುತ್ತದೆ ಹಾಗೂ ಹೆಚ್ಚಿನವರು ಕೀಳರಿಮೆಯಿಂದ ಬಳಲುತ್ತಾರೆ. ಬಕ್ಕತನವನ್ನು ನಿವಾರಿಸಲು ಸದ್ಯಕ್ಕೆ ಈ ಜಗತ್ತಿನಲ್ಲಿ ಯಾವುದೇ ಸಿದ್ದೌಷಧವಿಲ್ಲ. ಆದರೆ ಬಕ್ಕತನವನ್ನು ಕೃತಕವಾಗಿ ನಿವಾರಿಸಲು ಕೆಲವಾರು ಚಿಕಿತ್ಸೆಗಳು ಲಭ್ಯವಿವೆ. ಇದರಲ್ಲಿ ಪ್ರಮುಖವಾದುದು ಕೂದಲ ಬುಡಗಳ ನೆಡುವಿಕೆ (hair transplant) ಅಂದರೆ ಕೂದಲು ಇರುವ ಚರ್ಮದಿಂದ ಆರೋಗ್ಯವಂತ ಕೂದಲ ಬುಡಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಕೂದಲು ಇಲ್ಲದ ಭಾಗದಲ್ಲಿ ನೆಡುವುದು.

ಈ ಚಿಕಿತ್ಸೆಯನ್ನು ನೀಡುವ ಸೆಲೂನ್ ಗಳು ಇಂದು ವಿಶ್ವಮಟ್ಟದಲ್ಲಿ ಭಾರೀ ಯಶಸ್ಸು ಸಾಧಿಸುತ್ತಿವೆ. ಇನ್ನೊಂದು ವಿಧಾನವೆಂದರೆ ಕೃತಕ ಕೂದಲನ್ನು ಶಾಶ್ವತವಾಗಿ ನೆಡುವುದು, ಆದರೆ ಇದು ಹೆಚ್ಚಿನವರಿಗೆ ತುರಿಕೆ ಹಾಗೂ ಅಸಹನೀಯವಾದ ಅನುಭವವನ್ನು ನೀಡಿದ್ದ ಕಾರಣ ಇಂದು ಇದರ ಜನಪ್ರಿಯತೆ ಕಡಿಮೆಯಾಗಿದೆ. ಕೂದಲ ಬುಡಗಳ ನೆಡುವಿಕೆ ತೀರಾ ದುಬಾರಿ ಹಾಗೂ ಹೆಚ್ಚಿನ ಸಮಯವನ್ನು ಕಬಳಿಸುವ ಚಿಕಿತ್ಸೆಯಾಗಿರುವ ಕಾರಣ ಹೆಚ್ಚಿನವರು ಸೇವಿಸಬಹುದಾದ ಗುಳಿಗೆಗಳ ಅಥವಾ ತಲೆಗೆ ಹಚ್ಚಿಕೊಳ್ಳಬಹುದಾದ ಎಣ್ಣೆ-ಔಷಧಿಗಳನ್ನೇ ಪ್ರಯೋಗಿಸಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.

ಆದರೆ ಇಂದು ಈ ನಿಟ್ಟಿನಲ್ಲಿ ಆಶಾವಾದದ ಕಿರಣವೊಂದು ಗೋಚರಿಸಿದೆ. ಬಕ್ಕತಲೆಯಲ್ಲಿ ಕೂದಲ ಬುಡಗಳನ್ನು ಮತ್ತೊಮ್ಮೆ ಪ್ರಚೋದಿಸಿ ಮೊದಲಿನಂತಹ ಕಪ್ಪು ಕೂದಲುಗಳನ್ನೇ ಬೆಳೆಯುವಂತೆ ಮಾಡುವ ಔಷಧಿಯನ್ನು ಕಂಡುಹಿಡಿಯಲಾಗಿದೆ ಎಂಬ ಸುದ್ದಿ ಬಂದಿದೆ. ಆದರೆ ಇದು ಜನಸಾಮಾನ್ಯರ ಬಳಿ ತಲುಪುವಂತಾಗಲು ಎಷ್ಟು ವರ್ಷ ಕಾಯಬೇಕು ಎಂದು ಗೊತ್ತಿಲ್ಲ. ವಾಸ್ತವವಾಗಿ ಈ ಔಷಧಿಯನ್ನು ಮೂಳೆಗಳ ಟೊಳ್ಳಾಗುವ ಓಸ್ಟಿಯೋಪೋರೋಸಿಸ್ ಗಾಗಿ ಬಳಸಲಾಗುತ್ತಿತ್ತು ಹಾಗೂ ಈಗ ಬಕ್ಕತನಕ್ಕೂ ಇದನ್ನು ಬಳಸುವ ಬಗ್ಗೆ ವೈದ್ಯಕೀಯ ತಜ್ಞರು ಆಶಾಭಾವ ಹೊಂದಿದ್ದಾರೆ.

ಇಂದು ಈ ಔಷಧಿ minoxidil ಮತ್ತು finasteride ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದೆ. Minoxidil ಪುರುಷರು ಮತ್ತು ಮಹಿಳೆಯರು ಸೇವಿಸಬಹುದಾದರೆ finasteride ಕೇವಲ ಪುರುಷರಿಗೆ ಮೀಸಲಾಗಿದೆ. ಆದರೆ ಈ ಔಷಧಿಗಳ ಪ್ರಭಾವ ಮತ್ತು ಪರಿಣಾಮ ಯಾವ ಬಗೆಯಲ್ಲಿ ಆಗುತ್ತದೆ, ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ, ಅಡ್ಡ ಪರಿಣಾಮಗಳೇನು ಎಂಬುದನ್ನೆಲ್ಲಾ ಪ್ರಯೋಗಗಳ ಮೂಲಕ ಇನ್ನಷ್ಟೇ ಕಂಡುಕೊಳ್ಳಬೇಕಾಗಿದ್ದು ವೈದ್ಯರ ಅನುಮತಿಯಿಲ್ಲದೇ ಈ ಔಷಧಿಗಳನ್ನು ಈಗ ಪ್ರಯೋಗಿಸಬಾರದು. ಅಲ್ಲದೇ ಕೂದಲ ಬುಡದ ನೆಡುವ ಚಿಕಿತ್ಸೆಗೆ ಒಡ್ಡಿಕೊಳ್ಳುವ ಮುನ್ನವೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಪಡೆಯುವಂತೆ ಚರ್ಮವೈದ್ಯರು ಸಲಹೆ ಮಾಡುತ್ತಾರೆ.

English summary

Is There A Cure For Baldness?

More than 80% of the population worldwide suffers from some degree of hair loss. Hair loss has generally affected men after a certain age but now it is not limited to them only. Unhealthy eating habits, a stressful life and a number of beauty products and hair experiments have also left women and even teenagers joining this bandwagon. The medical term for hair fall is alopecia and is the higher degree of hair loss which we commonly refer as baldness.
X
Desktop Bottom Promotion