For Quick Alerts
ALLOW NOTIFICATIONS  
For Daily Alerts

  ಥಟ್ಟಂತ ತಯಾರಾಗುವ ಇನ್‌ಸ್ಟೆಂಟ್ ನೂಡಲ್ಸ್ ತುಂಬಾನೇ ಡೇಂಜರ್!

  |

  ಊಟ ತಮ್ಮಿಷ್ಟವಾಗುವಂತೆ ಮಾಡಿ, ಬಟ್ಟೆಯನ್ನು ಪರರಿಗೆ ಇಷ್ಟವಾಗುವಂತೆ ತೊಡಿ ಎಂಬುದೊಂದು ಹಿಂದಿ ಗಾದೆ. ಅಂತೆಯೇ ಪ್ರತಿಯೊಬ್ಬರಿಗೂ ವಿಶಿಷ್ಟವಾದ ಜಿಹ್ವಾಚಾಪಲ್ಯವಿರುತ್ತದೆ. ಕೆಲವು ಆಹಾರಗಳನ್ನು ತಿನ್ನದೇ ಜೀವಿಸಲೇ ಸಾಧ್ಯವಿಲ್ಲ ಎಂಬಷ್ಟರಮಟ್ಟಿಗೆ ಕೆಲವರು ಆ ಆಹಾರಕ್ಕೆ ಒಗ್ಗಿಕೊಂಡಿರುತ್ತಾರೆ. ಇದರಲ್ಲಿ ಸಾಮಾನ್ಯವಾಗಿರುವ ಒಂದು ಆಹಾರವೆಂದರೆ ಧಿಡೀರನೇ ಸಿದ್ದವಾಗುವ ಇನ್ಸ್ಟಂಟ್ ನೂಡಲ್ಸ್. ಹೆಸರೇ ಸೂಚಿಸುವಂತೆ ಕೆಲವೇ ನಿಮಿಷಗಳಲ್ಲಿ ಬಿಸಿಬಿಸಿಯಾಗಿ ಸಿದ್ದವಾಗುವ, ರುಚಿಕರ ಹಾಗೂ ಅಗ್ಗವೂ ಸಹಾ! ಹೆಚ್ಚಿನ ಅಡುಗೆ ಮನೆಗಳಲ್ಲಿ ಈ ನೂಡಲ್ಸ್ ಸ್ಥಾನ ಪಡೆಯಲು ಕಾರಣವೆಂದರೆ ಎರಡೇ ನಿಮಿಷಗಳಲ್ಲಿ ತಯಾರಾಗುವ ಇದರ ವೈಶಿಷ್ಟ್ಯತೆ ಹಾಗೂ ಭಿನ್ನ ರುಚಿಗಳ ಲಭ್ಯತೆ.

  ಆದ್ದರಿಂದ, ಸಮಯಾಭಾವವಿರುವ ವ್ಯಕ್ತಿಗಳಿಗೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ, ಒಂಟಿಯಾಗಿ ವಾಸವಾಗಿರುವ ವಿದ್ಯಾರ್ಥಿಗಳಿಗೆ, ತಿಂಗಳ ಕೊನೆಯ ದಿನಗಳು ಆರಂಭಿಸುತ್ತಿದ್ದಂತೆಯೇ ಜೇಬು ಖಾಲಿಯಾಗುವವರಿಗೆ, ಅಡುಗೆಯೇ ಬರದಿರುವವರಿಗೆ, ಈ ನೂಡಲ್ಸ್ ಗಳು ಒಂದು ಬಗೆಯ ವರದಾನವಿದ್ದಂತೆ. ಅಲ್ಲವೇ? ಜಾಹೀರಾತುಗಳು ವಿವರಿಸುವಂತೆ ಇವುಗಳ ಈ ಎಲ್ಲಾ ವೈಶಿಷ್ಟ್ಯತೆಗಳ ಜೊತೆಗೇ ಇವು ಅಪ್ಪಟ ಆರೋಗ್ಯಕರವೂ ಆಗಿದ್ದರೆ ಚೆನ್ನಿತ್ತು, ಆದರೆ ಹೊಟ್ಟೆ ತುಂಬಿಸುವ ಈ ಸಿದ್ದ ಅಹಾರಗಳು ನಿಜ ಹೇಳಬೇಕೆಂದರೆ ಅನಾರೋಗ್ಯಕರ ಆಹಾರಗಳು! ಆ ಕ್ಷಣಕ್ಕೆ ಹೊಟ್ಟೆ ತುಂಬಿಸುವ, ರುಚಿಕರ ಆಹಾರವಾಗಿ ಪರಿಣಮಿಸಿದರೂ ನಿಧಾನವಾಗಿ ಇದರ ಸತತ ಸೇವನೆಯಿಂದ ಆರೋಗ್ಯ ಹಲವು ಬಗೆಯಲ್ಲಿ ಬಾಧೆಗೊಳಗಾಗುತ್ತದೆ. ಆದಷ್ಟೂ ಮಟ್ಟಿಗೆ ಈ ನೂಡಲ್ಸ್ ಗಳನ್ನು ಸೇವಿಸಬಾರದು ಎಂದು ಆಹಾರ ತಜ್ಞರು ಅಭಿಪ್ರಾಯಪಡುತ್ತಾರೆ. ಇದಕ್ಕಾಗಿ ಇವರು ನೀಡುವ ಕಾರಣಗಳು ಇಂತಿವೆ..

  Noodles

  ಇವುಗಳನ್ನು ಅತಿ ಬಿಸಿಯಾಗಿ ಹುರಿಯಲಾಗಿರುತ್ತದೆ

  ಈ ಆಹಾರಗಳನ್ನು ಅತಿಬಿಸಿಯಾದ ಎಣ್ಣೆಯಲ್ಲಿ ಆಳವಾಗಿ ಹುರಿದಿರಲಾಗಿರುತ್ತದೆ, ಹೆಚ್ಚಿನ ಸಿದ್ದ ಅಹಾರಗಳೆಲ್ಲವೂ ಅತಿಯಾಗಿ ಹುರಿದಿರಲಾಗಿರುತ್ತದೆ ನಿಜ, ಇದರಲ್ಲಿ ಅಚ್ಚರಿಯೇನಿಲ್ಲ. ಆದರೆ ಈ ನೂಡಲ್ಸ್ ಗಳ ಪೊಟ್ಟಣದಲ್ಲಿ ಮುದ್ರಣಗೊಂಡಿರುವ ಆಹಾರಸಾಮಾಗ್ರಿಗಳ ಪಟ್ಟಿಯನ್ನು ಗಮನಿಸಿದರೆ ಇದರಲ್ಲಿ ಎಡಿಬಲ್ ಆಯಿಲ್ ಅಥವಾ ಸೇವಿಸಬಹುದಾದ ಎಣ್ಣೆ ಎಂದು ಬರೆದಿರುವುದನ್ನು ಗಮನಿಸಿ, ಇದು ಅಧಿಕ ಪ್ರಮಾಣದಲ್ಲಿರುತ್ತದೆ.

  ಅಂದರೆ ಅತಿ ಬಿಸಿಯಾದ ಎಣ್ಣೆಯಲ್ಲಿ ಆಳವಾಗಿ (ಅಂದರೆ ಎಣ್ಣೆ ಹೀರಿಕೊಂಡಿರುವಂತೆ) ಹುರಿದ ಬಳಿಕ ಈ ಎಣ್ಣೆಯಂಶವೂ ತಣ್ಣಗಾದ ಬಳಿಕ ಗಟ್ಟಿಯಾಗಿ ಶಾವಿಗೆಯನ್ನು ಗರಿಗರಿಯಾಗಿಸಿರುತ್ತದೆ. ಹೆಚ್ಚಿನವರು ಕೇಳಬಹುದು, ಇದರಲ್ಲಿ ತಪ್ಪೇನಿದೆ? ವಾಸ್ತವವಾಗಿ ಹೀಗೆ ಆಳವಾಗಿ ಹುರಿದ ಯಾವುದೇ ಆಹಾರ ಅನಾರೋಗ್ಯಕರ! ಹುರಿಯಲು ಬಳಸಿರುವ ಎಣ್ಣೆಯಲ್ಲಿರುವ ಸಂತುಲಿತ ಕೊಬ್ಬು ಮತ್ತು ಟ್ರಾನ್ಸ್ ಫ್ಯಾಟ್ ಗಳು ಅತಿ ಹೆಚ್ಚಾಗಿದ್ದು ಈ ಆಹಾರಗಳನ್ನು ಸೇವಿಸಿದ ಬಳಿಕ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟು ಜಿಡ್ಡಿನ ಪ್ರಮಾಣವನ್ನು ಅತಿಯಾಗಿ ಹೆಚ್ಚಿಸುತ್ತವೆ. ತನ್ಮೂಲಕ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ!

  ಇದರಲ್ಲಿದೆ ಸಂಸ್ಕರಿತ ಗೋಧಿ ಹಿಟ್ಟು

  ಎಲ್ಲೋ ಅಪರೂಪಕ್ಕೊಂದರೆಡು ಬಿಟ್ಟರೆ ಉಳಿದೆಲ್ಲಾ ನೂಡಲ್ಸ್ ಗಳನ್ನು ಮೈದಾ ಅಥವಾ ಸಂಸ್ಕರಿತ ಗೋಧಿಹಿಟ್ಟಿನಿಂದ ತಯಾರಿಸಲಾಗುತ್ತದೆ. ಮೈದಾ ಎಂದರೆ ಗೋಧಿಯಲ್ಲಿರುವ ನೈಸರ್ಗಿಕ ನಾರು (ಹೊರಕವಚ) ಹಾಗೂ ಮೊಳಕೆಬರುವ ಮೂಲವನ್ನು ನಿವಾರಿಸಿ ಕೇವಲ ಬಿಳಿಭಾಗವನ್ನು ಉಳಿಸಿರುವ ಹಿಟ್ಟು. ಹಾಗಾಗಿ ಈ ಹಿಟ್ಟಿನಲ್ಲಿ ಗೋಧಿಯಲ್ಲಿರುವ ಪೌಷ್ಟಿಕ ಮೌಲ್ಯಗಳಿರುವುದಿಲ್ಲ ಹಾಗೂ ಸುಲಭವಾಗಿ ನೂಲಾಗುವಂತೆ ಇವುಗಳನ್ನು ಕೃತಕವಾಗಿ ಸಂಸ್ಕರಿಸುವಾಗ ಇದ್ದಬದ್ದ ಉಳಿದ ಪೋಷಕಾಂಶಗಳೂ ನಷ್ಟವಾಗಿರುತ್ತವೆ. ಅಲ್ಲದೇ ಇವುಗಳನ್ನು ಹೆಚ್ಚು ಕಾಲ ಕೆಡದಿರುವಂತೆ ಉಳಿಸಿಡಲು ಕೃತಕ ಸಂರಕ್ಷಕಗಳನ್ನು ಬಳಸುವುದರಿಂದಲೂ ಈ ಆಹಾರಗಳು ಕ್ಯಾಲೋರಿರಹಿತವಾಗಿದ್ದು ಅನಾರೋಗ್ಯಕರವಾಗಿವೆ.

  Noodles

  ಸೀಸದ ಸಿದ್ಧಾಂತ

  ಕೆಲವು ತಿಂಗಳುಗಳ ಹಿಂದೆ ಪ್ರಸಿದ್ದ ಸಂಸ್ಥೆಯೊಂದರೆ ನೂಡಲ್ಸ್ ಗಳನ್ನು ಅದರಲ್ಲಿರುವ ಸೀಸದ ಅಂಶಕ್ಕಾಗಿ ಭಾರತ ಸರ್ಕಾರ ನಿರ್ಬಂಧಿಸಿದ್ದು ನಿಮಗೆ ನೆನಪಿರಬಹುದು. ನಿರ್ಬಂಧವಿದ್ದಾಗ ಖರೀದಿಸದಿದ್ದ ಜನರು ಯಾವಾಗ ಈ ನಿರ್ಬಂಧವನ್ನು ಹಿಂಪಡೆಲಾಗಿತ್ತೋ ಆಗ ಭಾರೀ ಸಂಖ್ಯೆಯಲ್ಲಿ ಧಾವಿಸಿ ಅಂಗಡಿಯಲ್ಲಿದ್ದ ಅಷ್ಟೂ ನೂಡಲ್ಸ್ ಪೊಟ್ಟಣಗಳನ್ನು ಕ್ಷಣಮಾತ್ರದಲ್ಲಿ ಖಾಲಿ ಮಾಡಿದ್ದು ಮಾತ್ರ ನೂಡಲ್ಸ್ ನ ಜನಪ್ರಿಯತೆಗೆ ಸಾಕ್ಷಿ. ಈ ನೂಡಲ್ಸ್ ಗಳಲ್ಲಿ ಸೀಸದ ಅಂಶ ಹೆಚ್ಚಾಗಿದ್ದು ಆರೋಗ್ಯಕ್ಕೆ ಮಾರಕವಾಗಿದೆ ಎಂದು ಪ್ರಯೋಗಾಲಯದ ವರದಿಯೇ ಈ ನಿಷೇಧಕ್ಕೆ ಕಾರಣವಾಗಿತ್ತು.

  ಸೀಸ ಒಂದು ಭಾರವಾದ ಲೋಹವಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿ ಸೀಸದ ಅಂಶ ಹೆಚ್ಚುತ್ತದೆ ಹಾಗೂ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ವಾಹನದ ಇಂಧನ ಪೆಟ್ರೋಲ್ ಅನ್ನು ಸಹಿತ ಸೀಸರಹಿತವಾಗಿಸಿ (ಅನ್ ಲೆಡೆಡ್ ಪೆಟ್ರೋಲ್) ಆಗಿಯೇ ಮಾರಾಟ ಮಾಡಬೇಕೆಂಬ ಕಟ್ಟುಪಾಡು ವಿಧಿಸಲಾಗಿದೆ. ಆದರೆ ಈಗ ಈ ನೂಡಲ್ಸ್ ಗಳಲ್ಲಿ ಈ ಸೀಸ ಅಪಾಯಕರ ಮಟ್ಟದಲ್ಲಿಲ್ಲ ಎಂದಷ್ಟೇ ವರದಿಗಳು ತಿಳಿಸಿವೆಯೇ ಹೊರತು ಸೀಸವೇ ಇಲ್ಲ ಎಂದು ಹೇಳಿಲ್ಲ. ಹಾಗಾಗಿ ಅಲ್ಪಪ್ರಮಾಣದಲ್ಲಿದ್ದರೂ ಸರಿ, ಈ ಸೀಸ ಮಾರಕವೇ ಹೌದು. ವಿಶೇಷವಾಗಿ ಗರ್ಭಿಣಿಯರಿಗೆ ಮತ್ತು ಪುಟ್ಟ ಮಕ್ಕಳಿಗೆ ಸೀಸ ಅತಿ ಅಪಾಯಕರ ಹಾಗೂ ಇದು ಕೇಂದ್ರ ನರವ್ಯವಸ್ಥೆಯನ್ನೇ ಶಿಧಿಲಗೊಳಿಸುತ್ತದೆ.

  ಇದರಲ್ಲಿರುವ ಸೋಡಿಯಂ ಅಂಶ ಉಸಿರುಗಟ್ಟಿಸಬಹುದು

  ನಿತ್ಯದ ಅಗತ್ಯದ ಸೋಡಿಯಂ ನ 46%ರಷ್ಟು ಪ್ರಮಾಣವನ್ನು ಒಂದು ಪೊಟ್ಟಣ ನೂಡಲ್ಸ್ ಒದಗಿಸುತ್ತದೆ. ಆದರೆ ದಿನದಲ್ಲಿ ನಾವು ನೂಡಲ್ಸ್ ಬಿಟ್ಟು ಬೇರೇನೂ ಸೇವಿಸುವುದೇ ಇಲ್ಲವೇ? ದಿನದ ಅಗತ್ಯದ ಸೋಡಿಯಂ ನ ಅರ್ಧದಷ್ಟು ಈ ನೂಡಲ್ಸ್ ನಿಂದ ಬಂದುಬಿಟ್ಟರೆ ಉಳಿದ ಆಹಾರಗಳಿಂದ ಬರಬಹುದಾದ ಸೋಡಿಯಂ ದಿನದ ಅಗತ್ಯವನ್ನು ಮೀರುತ್ತದೆ. ಸೋಡಿಯಂ ಅಂಶ ಹೆಚ್ಚಾದರೆ ಇದು ಹೆಚ್ಚು ಹೆಚ್ಚಾಗಿ ನೀರನ್ನು ಹೀರಿಕೊಳ್ಳುತ್ತದೆ ಹಾಗೂ ಇದನ್ನು ವಿಸರ್ಜಿಸಲು ಮೂತ್ರಪಿಂಡಗಳ ಮೇಲೆ ಭಾರೀ ಒತ್ತಡ ಬೀಳುತ್ತದೆ. ಅಲ್ಲದೇ ಹೃದಯವೂ ಅಧಿಕ ಒತ್ತಡದಿಂದ ರಕ್ತವನ್ನು ನೂಕಿಕೊಡಬೇಕಾಗುತ್ತದೆ. ಹಾಗಾಗಿ ಹೆಚ್ಚುವರಿ ಸೋಡಿಯಂ ಸೇವನೆಯಿಂದ ಹೃದಯ ಸ್ತಂಭನದ ಸಾಧ್ಯತೆ, ಮೂತ್ರಪಿಂಡದ ವೈಫಲ್ಯ, ಹೊಟ್ಟೆಯ ಕ್ಯಾನ್ಸರ್ ಮೊದಲಾದವು ಎದುರಾಗುವ ಸಾಧ್ಯತೆಗೆಳು ಅಪಾರವಾಗಿ ಹೆಚ್ಚುತ್ತವೆ.

  ಹೊಟ್ಟೆಯ ಆಮ್ಲೀಯತೆ ಹೆಚ್ಚಿಸುತ್ತದೆ

  ಸಿಟ್ರಿಕ್ ಆಮ್ಲ ಎಂದರೆ ಲಿಂಬೆಯಲ್ಲಿರುವಂತಹ ಆಮ್ಲವಾಗಿದ್ದು ಆರೋಗ್ಯಕರ ಎಂದೇ ಪರಿಗಣಿಸಲ್ಪಡುತ್ತದೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ. ಹಲವಾರು ಆಂಟಿ ಆಕ್ಸಿಡೆಂಟುಗಳ ಕಾರ್ಯನಿರ್ವಹಣೆಯನ್ನು ಚುರುಕುಗೊಳಿಸುವ ಈ ಆಮ್ಲ ತಾನೇ ಸ್ವತಃ ಒಂದು ಆಂಟಿ ಆಕ್ಸಿಡೆಂಟ್ ಅಲ್ಲ! ವಾಸ್ತವವಾಗಿ ಸಿಟ್ರಿಕ್ ಆಮ್ಲ ಹೊಟ್ಟೆಯ ಆಮ್ಲೀಯತೆಯನ್ನು ಹೆಚ್ಚಿಸಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಾಗಿ ಎಲ್ಲಿಯವರೆಗೆ ಹೊಟ್ಟೆಯ ಆಮ್ಲೀಯತೆ ಆರೋಗ್ಯಕರ ಮಟ್ಟ ಮೀರುವುದಿಲ್ಲವೋ ಅಲ್ಲಿಯವರೆಗೆ ಈ ಆಮ್ಲ ಕ್ಷೇಮ. ಒಂದು ವೇಳೆ ಈಗಾಗಲೇ ಆಮ್ಲೀಯತೆಯಿಂದ ಬಳಲುತ್ತಿದ್ದರೆ ಈ ಆಮ್ಲ ಹೊಟ್ಟೆಯನ್ನು ಇನ್ನಷ್ಟು ಕೆಡಿಸಬಹುದು.

  ಒಂದು ಪೊಟ್ಟಣದಲ್ಲಿರುವ ಸಿಟ್ರಿಕ್ ಆಮ್ಲ ಹಲವರು ಲಿಂಬೆಗಳಲ್ಲಿರುವಷ್ಟಿದ್ದು ಕೆಲವಾರು ತೊಂದರೆಗಳಿಗೆ ಕಾರಣವಾಗಬಹುದು. ಇದೇ ಕಾರಣಕ್ಕೆ ಹಿರಿಯರು ದಿನಕ್ಕೊಂದು ಲಿಂಬೆಗಿಂತ ಹೆಚ್ಚು ಸೇವಿಸಬೇಡಿ ಎಂದು ತಿಳಿಸುತ್ತಾರೆ. ಆದ್ದರಿಂದ ಹಲವಾರು ಲಿಂಬೆಯಲ್ಲಿರುವಷ್ಟು ಸಿಟ್ರಿಕ್ ಆಮ್ಲದ ಸೇವನೆ ಖಂಡಿತವಾಗಿಯೂ ಅನಾರೋಗ್ಯಕರವಾಗಿದೆ.

  ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ

  ಸತತವಾಗಿ ನೂಡಲ್ಸ್ ಸೇವಿಸುವ ಮೂಲಕ ಜೀರ್ಣಕ್ರಿಯೆಯ ಲಯಬದ್ದತೆ ಹಾನಿಗೊಳಗಾಗುತ್ತದೆ. ಕೆಲವು ದಿನಗಳ ಬಳಿಕ ಮಲಬದ್ದತೆ, ಆಮಶಂಕೆ, ಹೊಟ್ಟೆಯಲ್ಲಿ ನೋವು, ಆಮ್ಲೀಯತೆ, ಎದೆಯುರಿ, ಹೊಟ್ಟೆಯಲ್ಲಿ ಗುಡುಗುಡು, ಹೊಟ್ಟೆಯುಬ್ಬರಿಕೆ ಹಾಗೂ ಸದಾ ಹೊಟ್ಟೆ ತುಂಬಿದಂತಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. 

  ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ

  ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದೆ. ಇದು ರಕ್ತದ ಒತ್ತಡವನ್ನು ಹೆಚ್ಚಿಸಲು ಪ್ರಮುಖವಾದ ಕಾರಣವಾಗಿದೆ. ಅಷ್ಟೇ ಅಲ್ಲ, ಈ ಹೆಚ್ಚುವರಿ ಪ್ರಮಾಣವನ್ನು ನಮ್ಮ ದೇಹದಿಂದ ಹೊರಹಾಕಲು ನಮ್ಮ ಮೂತ್ರಪಿಂಡಗಳು ಅತಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದಕ್ಕಾಗಿ ಮೂತ್ರಪಿಂಡಗಳು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಬೇಕಾಗುತ್ತದೆ (fluid retention) ಪರಿಣಾಮವಾಗಿ ಕೈಕಾಲುಗಳು ನೀರುತುಂಬಿಕೊಂಡಂತೆ ಊದಿಕೊಳ್ಳುತ್ತವೆ. ಒಂದು ವೇಳೆ ಈಗಾಗಲೇ ಹೃದಯದೊತ್ತಡ ಮತ್ತು ಮೂತ್ರಪಿಂಡದ ತೊಂದರೆ ಇರುವ ವ್ಯಕ್ತಿಗಳಿಗೆ ನೂಡಲ್ಸ್ ನೇರವಾದ ವಿಷಾಹಾರವಾಗಿದೆ. 

  ಜೀವರಾಸಾಯನಿಕ ಕ್ರಿಯೆಯನ್ನು ಕುಗ್ಗಿಸುತ್ತದೆ

  ಒಂದು ವೇಳೆ ನಿಮ್ಮ ಜೀವರಾಸಾಯನಿಕ ಕ್ರಿಯೆ ಕುಗ್ಗಿದರೆ ಇದು ಸ್ಥೂಲಕಾಯಕ್ಕೆ ನೇರವಾದ ಕಾರಣವಾಗುತ್ತದೆ. ಈ ಆಹಾರ ದೇಹದಲ್ಲಿ ವಿಷವಸ್ತುಗಳ ಸಂಗ್ರಹ ಹೆಚ್ಚುತ್ತದೆ ಹಾಗೂ ಇದೇ ಕಾರಣಕ್ಕೆ ಜೀವರಾಸಾಯನಿಕ ಕ್ರಿಯೆ ಕುಗ್ಗುತ್ತದೆ. ಈ ವಿಷಗಳೆಲ್ಲಾ ನಾಲಿಗೆಗೆ ರುಚಿಕರವಾಗಿರುವ ರಾಸಾಯನಿಕ ಹಾಗೂ ಸಂರಕ್ಷಕಗಳಾಗಿದ್ದು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನುವಂತೆ ಪ್ರಚೋದಿಸುತ್ತದೆ. 

  Noodles

  ಅಜಿನೋಮೋಟೋ ಸಹಾ ಇದೆ

  Mono Sodium Glutamate (MSG) ಅಥವ Chinese Salt ಎಂದೂ ಕರೆಯಲ್ಪಡುವ ಅಜಿನೋಮೋಟೋ (ವಾಸ್ತವವಾಗಿ ಇದು ಉತ್ಪಾದಿಸುವ ಸಂಸ್ಥೆಯ ಹೆಸರು) ಒಂದು ರುಚಿಹೆಚ್ಚಿಸುವ ಉಪ್ಪಾಗಿದ್ದರೂ ಮಾರಕವಾದ ರಾಸಾಯನಿಕವಾಗಿದೆ. ಇದರ ಹೆಸರು ಗೊತ್ತಿಲ್ಲದ ಮುಗ್ಧ ಬಾಣಸಿಗರು ಇಂದಿಗೂ ಇದಕ್ಕೆ ಟೇಸ್ಟಿಂಗ್ ಪೌಡರ್ ಎಂದೇ ಕರೆಯುತ್ತಾರೆ. ಆದರೆ ಸಂಶೋಧನೆಗಳ ಮೂಲಕ ಈ ರಾಸಾಯನಿಕದ ಸೇವನೆ ಮೆದುಳಿಗೆ ಹಾನಿಕಾರಕ ಎಂದು ಸಾಬೀತಾಗಿದೆ. ಅಲ್ಲದೇ ಮೂತ್ರಪಿಂಡಗಳ ವೈಫಲ್ಯ ಹಾಗೂ ಇತರ ದೈಹಿಕ ತೊಂದರೆಗಳನ್ನೂ ತಂದೊಡ್ಡುತ್ತದೆ. ಕೆಲವರಿಗೆ ಈ ರಾಸಾಯನಿಕ ಅಲರ್ಜಿಕಾರಕವಾಗಿದ್ದು ಕೊಂಚ ಹೆಚ್ಚಿನ ಪ್ರಮಾಣ ದೇಹ ಸೇರಿದರೂ ಇವರಿಗೆ ಎದೆಯಲ್ಲಿ ನೋವು, ತಲೆನೋವು ಮೊದಲಾದವು ಎದುರಾಗುತ್ತವೆ. 

  ಮೇಣ

  ಶ್ಯಾವಿಗೆಯ ನೂಲುಗಳು ಒಂದಕ್ಕೊಂದು ಅಂಟಿಕೊಂಡಿರದಂತೆ ಇರಲು ಈ ಉತ್ಪನ್ನಗಳಲ್ಲಿ ಮೇಣವನ್ನು ಬಳಸಲಾಗುತ್ತದೆ. ಒಣಗಿದ್ದಾಗ ಈ ಮೇಣ ಕಾಣಲು ಬರುವುದಿಲ್ಲ. ಇದನ್ನು ಪರೀಕ್ಷಿಸಬೇಕೆಂದರೆ ಕುದಿಯುವ ನೀರಿನಲ್ಲಿ ಕೊಂಚ ನೂಡಲ್ಸ್ ಗಳನ್ನು ಮಾತ್ರ ಹಾಕಿ ಒಂದು ನಿಮಿಷ ಬಿಟ್ಟರೆ ಸಾಕು. ಮೇಣಕರಗಿ ನೀರಿನ ಮೇಲ್ಮೈಯಲ್ಲಿ ತೇಲುತ್ತಾ ರಂಗುರಂಗಿನ ಚಿತ್ತಾರ ಬಿಡಿಸುವುದನ್ನು ಕಾಣಬಹುದು. ಈ ಮೇಣವನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇದು ವಿಸರ್ಜನೆಗೊಳ್ಳುವ ಮೊದಲು ಕರುಳುಗಳಲ್ಲಿ ತೊಂದರೆ, ಮಲಬದ್ಧತೆ, ವಾಯುಪ್ರಕೋಪ ಮೊದಲಾದವುಗಳನ್ನು ಉಂಟುಮಾಡಿಯೇ ವಿದಾಯ ಹೇಳುತ್ತದೆ. 

  ಕ್ಯಾನ್ಸರ್‌ಕಾರಕ ಕಣಗಳು

  ಈ ನೂಡಲ್ಸ್‌ಗಳಲ್ಲಿ ಕೆಲವಾರು ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಹೊಂದಿವೆ. ವಿಶೇಷವಾಗಿ ಕಪ್‌ಗಳಲ್ಲಿ ಪ್ಯಾಕ್ ಮಾಡಿಸುವ ಉತ್ಪನ್ನಗಳು. ಈ ಕಪ್ ಗಳನ್ನು ಥರ್ಮೋಕೋಲ್ ಆಧಾರಿತ ಉತ್ಪನ್ನಗಳಿಂದ ತಯಾರಿಸಲಾಗಿದ್ದು ಇದಕ್ಕೆ ಬಿಸಿನೀರು ತಗುಲಿದೊಡನೆ ಇದರಲ್ಲಿರುವ ಕೆಲವು ರಾಸಾಯನಿಕಗಳು ಕರಗಿ ನೀರಿನೊಡನೆ ಬೆರೆಯುತ್ತವೆ. ಎಷ್ಟೋ ಮುಂದುವರೆದ ರಾಷ್ಟ್ರಗಳಲ್ಲಿ ಥರ್ಮೋಕೋಲ್ ಆಧಾರಿತ ಉತ್ಪನ್ನಗಳನ್ನು ಬಿಸಿದ್ರವಗಳಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ಇದರ ನಿಷೇಧದ ಅಗತ್ಯವಿದ್ದು ಈಗಲೂ ಈ ಉತ್ಪನ್ನಗಳನ್ನು ನೂಡಲ್ಸ್‌ನಲ್ಲಿ ಪ್ಯಾಕ್ ಮಾಡಿರುವ ಕಾರಣ ಇದನ್ನು ಸೇವಿಸುವವರಲ್ಲಿ ಕ್ಯಾನ್ಸರ್ಆ ವರಿಸುವ ಸಾಧ್ಯತೆ ಇದ್ದೇ ಇರುತ್ತದೆ. 

  ಯಕೃತ್‌ಗೆ ಆಗುವ ಹಾನಿಯ ಸಾಧ್ಯತೆ

  ನೂಡಲ್ಸ್ ನಲ್ಲಿರುವ humectants ಅಥವಾ ಮಂಜುಗಡ್ಡೆಯಾಗದಂತೆ ತಡೆಯಲು ಬಳಸಲಾಗುವ ಕೆಲವು ರಾಸಾಯನಿಕಗಳು ವಿಶೇಷವಾಗಿ ಯಕೃತ್ ಮತ್ತು ಮೂತ್ರಪಿಂಡಗಳಿಗೆ ಹಾನಿ ಎಸಗುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ ಬಳಸಲಾಗುವ propylene glycol ಎಂಬ ರಾಸಾಯನಿಕ ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಬಲ್ಲುದು. 

  ತೂಕದಲ್ಲಿ ಹೆಚ್ಚಳ

  ಥಟ್ಟನೇ ತಯಾರಾಗುವ ನೂಡಲ್ಸ್‌ನಲ್ಲಿ ಸಂಸ್ಕರಿತ ಕಾರ್ಬೋಹೈಡ್ರೇಟುಗಳಾದ ಮೈದಾ ಹಾಗೂ ಇತರ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದರೊಂದಿಗೇ ಅಜಿನೋಮೋಟೋ, ಉಪ್ಪು, ರುಚಿಕಾರಕಗಳು ಹೆಚ್ಚು ಹೆಚ್ಚು ತಿನ್ನಲು ಹಾಗೂ ತೂಕ ಹೆಚ್ಚಲು ಬೆಂಬಲ ನೀಡುತ್ತವೆ. ಅಲ್ಲದೇ ಈ ಆಹಾರದ ಸೇವನೆಯಿಂದ ನಮ್ಮ ರಕ್ತದಲ್ಲಿಯೂ ಸಕ್ಕರೆಯ ಪ್ರಮಾಣ ಥಟ್ಟಂತ ಏರುತ್ತದೆ ಹಾಗೂ ಈ ಆಗಾಧ ಪ್ರಮಾಣವನ್ನು ನಿಭಾಯಿಸಲು ಮೇದೋಜೀರಕ ಗ್ರಂಥಿ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅನ್ನೂ ಬಿಡುಗಡೆಗೊಳಿಸಬೇಕಾಗಿ ಬರುತ್ತದೆ. ಇದು ದೇಹದಲ್ಲಿ ಕೊಬ್ಬಿನ ಸಂಗ್ರಹಕ್ಕೆ ಕಾರಣವಾಗುತ್ತದೆ ಹಾಗೂ ಈ ಏರುಪೇರು ಹಲವಾರು ತೊಂದರೆಗಳನ್ನು ಹುಟ್ಟುಹಾಕುತ್ತದೆ. 

  ಹೊಟ್ಟೆಯುಬ್ಬರಿಕೆ, ಗ್ಯಾಸ್ ಟ್ರಬಲ್ ಹಾಗೂ ಅಜೀರ್ಣತೆ

  ನೂಡಲ್ಸ್ ಅನ್ನೇ ಹೆಚ್ಚು ಇಷ್ಟಪಟ್ಟು ತಿನ್ನುವವರಿಗೆ ಕೊಂಚ ನಿರಾಶೆಯಾಗುವುದಂತೂ ಖಂಡಿತಾ. ಏಕೆಂದರೆ ಈ ಆಹಾರ ನಮ್ಮ ಕರುಳುಗಳ ಒಳಗಿನ ವಿಲ್ಲೈ ಎಂಬ ಹೀರುಕ ಭಾಗಕ್ಕೆ ಅಂಟಿಕೊಳ್ಳುವ ಗುಣವಿದ್ದು ಇದು ಮುಂದೆಹೋಗದೇ ಅಲ್ಲಿಯೇ ವಾಯುವಿನ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆಯುಬ್ಬರಿಕೆ, ಹೊಟ್ಟೆಯಲ್ಲಿ ಉರಿ, ಹುಳಿತೇಗು, ಅಜೀರ್ಣತೆ ಮೊದಲಾದ ತೊಂದರೆಗಳು ಎದುರಾಗುತ್ತವೆ. 

  ಅಷ್ಟಕ್ಕೂ ಇವನ್ನು ಸರ್ಕಾರವೇಕೆ ನಿಷೇಧಿಸುವುದಿಲ್ಲ?

  ಕೆಲದಿನಗಳ ಹಿಂದೆ ಮ್ಯಾಗಿ ಎಂಬ ಉತ್ಪನ್ನವನ್ನು ಭಾರತದ ಮಾರುಕಟ್ಟೆ ನಿಷೇಧಿಸಿತ್ತು. ಈ ಉತ್ಪನ್ನಗಳಲ್ಲಿ ಅಪಾಯಕರ ಮಟ್ಟದಲ್ಲಿ ಬೂದಿ ಇದೆ ಎಂದು ಪ್ರಯೋಗಾಲಯಗಳಲ್ಲಿ ಸಿದ್ಧಪಡಿಸಿ ತೋರಿಸಲಾಗಿತ್ತು. ಇದನ್ನು ಸರಿಪಡಿಸಿದ ಬಳಿಕ ಮತ್ತೆ ಇದು ಮಾರುಕಟ್ಟೆಗೆ ಬಂದಿದೆ. ಆದರೆ ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವಾಗ ಇದರ ಸೇವನೆ ಆರೋಗ್ಯಕ್ಕೆ ಹೇಗೆ ಮಾರಕ ಎಂದು ಅಧ್ಯಯನ ಮಾಡಿಯೇ ಬಿಡುಗಡೆಮಾಡಲಾಗುತ್ತದೆ. ಆದ್ದರಿಂದ ಇದರ ಪರಿಣಾಮಗಳು ತಕ್ಷಣದ ಬಳಕೆಯಿಂದ ಗೋಚರಿಸಲ್ಪಡುವುದಿಲ್ಲ.  ಹಾಗಾಗಿ ಈ ಸಂಸ್ಥೆಗಳು ಬಚಾವು. ಒಂದು ವರ್ಷದ ಮೇಲೆ ಯಾವುದಾದರೂ ತೊಂದರೆ ಎದುರಾದರೂ ಅದು ನೀವು ಒಂದು ವರ್ಷದಿಂದ ನೂಡಲ್ಸ್ ತಿಂದಿದ್ದಕ್ಕೇ ಬಂದಿರುವುದು ಎಂದು ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ಇವನ್ನು ನಿಷೇಧಿಸಲು ಸರ್ಕಾರಕ್ಕೂ ಸ್ಪಷ್ಟ ಕಾರಣ ದೊರಕುವುದಿಲ್ಲ. ಹಾಗಾಗಿ ಇವು ಎಗ್ಗಿಲ್ಲದೇ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಆದರೆ ಬಳಕೆದಾರರಾದ ನಾವೇ ಎಚ್ಚೆತ್ತು ಸ್ವತಃ ಈ ಉತ್ಪನ್ನಗಳನ್ನು ಕೊಳ್ಳದೇ ಇರುವ ಮೂಲಕ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳುವುದೇ ಜಾಣತನ...

  English summary

  Is Instant Noodles Really Bad For You?

  Instant noodles are made from refined carbs (such as maida) that lack fibres and cause a sharp increase in the blood sugar level. This leads to weight gain and many other health-related complications. Also, the additives such as flavours, preservatives and colours also contribute to its harmful effects.
  Story first published: Wednesday, May 30, 2018, 8:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more