For Quick Alerts
ALLOW NOTIFICATIONS  
For Daily Alerts

ಗುದದ್ವಾರದ ಕ್ಯಾನ್ಸರ್ : ಪ್ರತಿಯೊಬ್ಬರೂ ತಿಳಿದಿರಬೇಕಾದ 5 ಅಪಾಯಕಾರಿ ಲಕ್ಷಣಗಳು

By Lekhaka
|

ಅಪಘಾತ, ಸಾವು ಮೊದಲಾದವುಗಳ ಜೊತೆಗೇ ಮನುಷ್ಯರಿಗೆ ಎದುರಾಗುವ ಅತ್ಯಂತ ಘೋರ ಅಪಾಯ ಯಾವುದು ಎಂದು ಕೇಳಿದರೆ ಹೆಚ್ಚಿನವರು ಕ್ಯಾನ್ಸರ್ ಎಂಬ ಉತ್ತರವನ್ನು ನೀಡಬಹುದು. ಥಟ್ಟನೇ ಈ ಪದವೇ ನೆನಪಿಗೆ ಬರಲು ಮುಖ್ಯ ಕಾರಣ ಇದು ಆವರಿಸಿದ ಬಳಿಕ ಸಾವು ಅನಿವಾರ್ಯ ಎಂಬ ನಂಬಿಕೆ. ಕ್ಯಾನ್ಸರ್ ಸಾವಿರಾರು ವರ್ಷಗಳಿಂದಲೇ ಕಾಡುತ್ತಾ ಬಂದಿದ್ದರೂ ಇವುಗಳ ಇರುವಿಕೆ ಹಾಗೂ ಚಿಕಿತ್ಸೆಗಳ ಬಗ್ಗೆ ಪರಿಚಯವಾಗಿದ್ದೇ ತೀರಾ ಇತ್ತೀಚಿಗೆ. ಆದರೆ ಅಂದಿನಿಂದಲೂ ಕ್ಯಾನ್ಸರ್ ಮನುಕುಲವನ್ನು ಕಾಡುತ್ತಲೇ ಇದೆ, ಇಂದಿಗೂ ಕ್ಯಾನ್ಸರ್ ನ ಕರಾಳಬಾಹುಗಳು ವಿಸ್ತರಿಸುತ್ತಲೇ ಇವೆ!

ಆಧುನಿಕ ವೈದ್ಯವಿಜ್ಞಾನ ಹಾಗೂ ಔಷಧಿಗಳು ಬಹುತೇಕ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಗುಣಪಡಿಸುವ ಖಾತರಿಯನ್ನು ನೀಡುತ್ತವಾದರೂ ಕ್ಯಾನ್ಸರ್ ಸಹಿತ ಮನುಷ್ಯರಿಗೆ ಕಾಡುವ ಕೆಲವು ಖಾಯಿಲೆಗಳಿಗೆ ಇನ್ನೂ ಖಚಿತವಾದ ಮದ್ದನ್ನು ಇನ್ನೂ ಕಂಡುಹಿಡಿಯಲಾಗಿಲ್ಲ! ಏಕೆಂದರೆ ಕ್ಯಾನ್ಸರ್ ಹೇಗೆ ಪ್ರಾರಂಭವಾಗುತ್ತದೆ, ಹಾಗೂ ಉಲ್ಬಣಗೊಳ್ಳುತ್ತಾ ಹೇಗೆ ಮುಖ್ಯ ಅಂಗವೊಂದನ್ನು ನಿಷ್ಕ್ರಿಯಗೊಳಿಸುತ್ತದೆ ಎಂಬುದು ತೀರಾ ಕ್ಲಿಷ್ಟಕರ ವಿಷಯವಾಗಿದೆ. ಹಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಕೆಲವಾರು ವರ್ಷಗಳಿಂದ ಬೆಳೆಯುತ್ತಲೇ ಇದ್ದರೂ ಇದರ ಇರುವಿಕೆಯ ಬಗ್ಗೆ ತಿಳಿದುಬರುವುದೇ ಅಂತಿಮ ಘಟ್ಟದಲ್ಲಿ, ಆಗ ಏನೂ ಮಾಡದ ಸ್ಥಿತಿಯಿಂದ ವೈದ್ಯರೂ ಹತಾಶರಾಗಿ ಕೈಚೆಲ್ಲಬೇಕಾಗುತ್ತದೆ.

Here Are 5 Dangerous Symptoms Of Anal Cancer To Beware Of!

ಉಳಿದ ಸಂದರ್ಭಗಳಲ್ಲಿ ಕ್ಯಾನ್ಸರ್ ನ ಇರುವಿಕೆ ಪ್ರಾರಂಭಿಕ ಹಂತದಲ್ಲಿಯೇ ಕಂದುಬಂದರೂ ಇದು ಪೂರ್ಣವಾಗಿ ಆವರಿಸಲು ಕೆಲವು ತಿಂಗಳುಗಳಿಂದ ಕೆಲವಾರು ವರ್ಷಗಳನ್ನೇ ಪಡೆದುಕೊಳ್ಳಬಹುದು. ನಾವು ಈಗಾಗಲೇ ತಿಳಿದಿರುವಂತೆ ಮಾನವ ದೇಹದ ಕೆಲವು ಅಂಗಾಂಶಗಳ ಜೀವಕೋಶಗಳು ಅಗತ್ಯಕ್ಕೂ ಮೀರಿ ಅನಿಯಂತ್ರಿತವಾಗಿ ಬೆಳೆಯುತ್ತವೆ ಹಾಗೂ ಗಡ್ಡೆಯ ರೂಪ ತಳೆದು ಈ ಅಂಗಾಂಶ ಹೊಂದಿರುವ ಅಂಗವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಾ ಅಂಗವನ್ನು ನಿಷ್ಕ್ರಿಯಗೊಳಿಸುತ್ತದೆ. ಯಾವ ಅಂಗವನ್ನು ಈ ಗಡ್ಡೆ ಆವರಿಸುತ್ತದೆಯೋ ಆ ಅಂಗದ ಕ್ಯಾನ್ಸರ್ ನ ಹೆಸರಿನಲ್ಲಿಯೇ ಈ ಗಡ್ಡೆಯನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ ಶ್ವಾಸಕೋಶ, ಪ್ರಾಸ್ಟೇಟ್, ಕರುಳು, ಗರ್ಭಕಂಠ ಇತ್ಯಾದಿ. ಇಂದು ಅತಿ ಹೆಚ್ಚಾಗಿ ಕಂಡುಬರುತ್ತಿರುವ ಕ್ಯಾನ್ಸರ್ ಎಂದರೆ ಸ್ತನ, ಮೆದುಳು, ಪ್ರಾಸ್ಟೇಟ್, ಶ್ವಾಸಕೋಶ ಹಾಗೂ ಕರುಳಿನ ಕ್ಯಾನ್ಸರ್ ಆಗಿದೆ. ಉಳಿದಂತೆ ಇತರ ಅಂಗಗಳ ಕ್ಯಾನ್ಸರ್ ಗಳೂ ಅಪರೂಪವಾಗಿ ಕಾಣಬರುತ್ತವೆ. ಇಂತಹದ್ದೊಂದು ಕ್ಯಾನ಼್ಸರ್ ಎಂದರೆ ಗುದದ್ವಾರದ ಕ್ಯಾನ್ಸರ್ ('anal cancer'). ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯೋಣ:

ಗುದದ್ವಾರದ ಕ್ಯಾನ್ಸರ್ ಎಂದರೇನು?

ನಮ್ಮ ದೇಹದ ಜೀರ್ಣವ್ಯವಸ್ಥೆಯ ಅಂತಿಮ ಭಾಗವೇ ಗುದದ್ವಾರವಾಗಿದ್ದು ಮುಂಡಭಾಗದ ತಳದಲ್ಲಿರುತ್ತದೆ ಹಾಗೂ ನಿತಂಬಗಳ ನಡುವೆ ಇರುತ್ತದೆ. ಇದರ ಮುಖ್ಯ ಕಾರ್ಯವೆಂದರೆ ಜೀರ್ಣಗೊಂಡ ಆಹಾರದ ತ್ಯಾಜ್ಯಗಳನ್ನು ಮಲದ ರೂಪದಲ್ಲಿ ದೇಹದಿಂದ ವಿಸರ್ಜಿಸುವುದು.

ಗುದದ್ವಾರ ಸುಮಾರು ಒಂದರಿಂದ ಒಂದೂವರೆ ಇಂಚಿನಷ್ಟು ಆಳವಿದ್ದು ಶಕ್ತಿಯುತ ಸ್ನಾಯುಗಳನ್ನು ಹೊಂದಿದೆ. ಈ ಭಾಗದಲ್ಲಿ ಎದುರಾಗುವ ಕ್ಯಾನ್ಸರ್ ಗೆ ಗುದದ್ವಾರದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಈ ಅಂಗದ ಒಳಗೋಡೆಗಳಲ್ಲಿ ಮ್ಯೂಕೋಸಾ (mucosa) ಎಂಬ ಜೀವಕೋಶಗಳ ಪದರವಿದೆ. ಇದು ಅತೀವವಾಗಿ ಜಾರುವ ಗುಣ ಹೊಂದಿದೆ. ಈ ಗುಣದ ಕಾರಣದಿಂದಲೇ ಗಟ್ಟಿಯಾದ ಮಲ ಕೊಂಚ ಒತ್ತಡದಲ್ಲಿ ಸುಲಭವಾಗಿ ದೇಹದಿಂದ ವಿಸರ್ಜನೆಗೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪದರದಲ್ಲಿಯೇ ಕ್ಯಾನ್ಸರ್ ಆವರಿಸುತ್ತದೆ.

ಈ ಬಗ್ಗೆ ನಡೆಸಿದ ಸಂಶೋಧನೆಗಳ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚಾಗಿ ಆವರಿಸುತ್ತಿದ್ದು ವಿಶೇಷವಾಗಿ ಅರವತ್ತು ವರ್ಷ ದಾಟಿದ ವ್ಯಕ್ತಿಗಳಲ್ಲಿಯೇ ಕಂಡು ಬರುತ್ತಿರುವುದನ್ನು ಗಮನಿಸಬಹುದು. ಆದರೆ ಈ ಪರಿಸ್ಥಿತಿಗೆ ಒಳಗಾದವರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಆರೋಗ್ಯವಂತರಾಗಿ ಗುಣಮುಖರಾಗುವ ಸಾಧ್ಯತೆ ಹೆಚ್ಚು ಎಂದು ತಜ್ಞರ ಅಭಿಪ್ರಾಯವಾಗಿದೆ. ಬನ್ನಿ, ಈ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕಾದ ಕೆಲವು ಅಮೂಲ್ಯ ಮಾಹಿತಿಯನ್ನು ನೋಡೋಣ:

ಮುಖ್ಯ ಲಕ್ಷಣಗಳು
1. ಗುದದ್ವಾರದಲ್ಲಿ ತುರಿಕೆ
2. ಗುದದ್ವಾರದಲ್ಲಿ ರಕ್ತಸ್ರಾವ
3. ಗುದದ್ವಾರದೊಳಗೆ ಗಡ್ಡೆ ಇರುವ ಸೂಚನೆ
4. ಅಸಾಮಾನ್ಯ ಸ್ರಾವ
5. ಮಲ ಸಪೂರವಾಗಿರುವುದು

1. ಗುದದ್ವಾರದಲ್ಲಿ ತುರಿಕೆ

ಸ್ವಚ್ಛತೆಯ ಕೊರತೆಯಿಂದ ಈ ಭಾಗದಲ್ಲಿ ಆಗಾಗ ತುರಿಕೆಯಾಗುತ್ತಿರುತ್ತದೆ. ಆದರೆ ಈ ತುರಿಕೆ ಅಸಾಮಾನ್ಯವಾಗಿದ್ದು ನಿತ್ಯವೂ ಮುಜುಗರ ತರಿಸುವಷ್ಟು ಹೆಚ್ಚಾಗಿದ್ದರೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಮತ್ತು ಒತ್ತು ನೀಡಿದ ಬಳಿಕವೂ, ಯಾವುದೇ ಸೋಂಕು ಇರದೇ ಇರುವ ಲಕ್ಷಣವೂ ಇಲ್ಲದಿದ್ದರೆ ಇದು ಗುದದ್ವಾರದ ಕ್ಯಾನ್ಸರ್ ನ ಪ್ರಾರಂಭಿಕ ಲಕ್ಷಣಗಳಾಗಿರಬಹುದು. ಗುದದ್ವಾರದ ಒಳಗೋಡೆಯ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುತ್ತಿರುವುದೇ ಈ ಭಾಗದಲ್ಲಿ ಉರಿಯೂತವುಂಟು ಮಾಡಿ ತುರಿಕೆಗೆ ಮುಖ್ಯ ಕಾರಣವಾಗಿರುತ್ತವೆ.

2. ಗುದದ್ವಾರದಲ್ಲಿ ರಕ್ತಸ್ರಾವ

ಕೆಲವಾರು ಬಾರಿ, ವ್ಯಕ್ತಿಗಳು ತಮ್ಮ ಮಲ ರಕ್ತದಿಂದ ಆವರಿಸಿರುವುದನ್ನು ಗಮನಿಸುತ್ತಾರೆ. ಈ ಸ್ಥಿತಿಗೆ ಮಲಬದ್ದತೆ, ಹೊಟ್ಟೆಯಲ್ಲಿ ಸೋಂಕು, ಕರುಳಿನಲ್ಲಿ ಗಾಯ ಅಥವಾ ಜಿಯಾರ್ಡಿಯಾಸಿಸ್ ಎಂಬ ಕಾರಣದಿಂದಲೂ ಎದುರಾಗಬಹುದು. ಆದರೆ ಒಂದು ವೇಳೆ ಮಲದ ಒಂದೇ ಭಾಗದಲ್ಲಿ ರಕ್ತ ಅಂಟಿಕೊಂಡಿರುವುದು ಕಂಡುಬಂದರೆ ಹಾಗೂ ಇದರೊಂದಿಗೆ ಸತತವಾಗಿ ಅತೀವ ನೋವು ಹಾಗೂ ಮಲವಿಸರ್ಜನೆಯ ವೇಳೆ ಒತ್ತಿದಂತೆ ಅನ್ನಿಸಿದರೆ ಈ ಸೂಚನೆಗಳನ್ನು ಸರ್ವಥಾ ಕಡೆಗಣಿಸಬಾರದು ಹಾಗೂ ತಕ್ಷಣ ವೈದ್ಯರ ಸಲಹೆಯನ್ನು ಪಡೆಯಬೇಕು. ಅಲ್ಲದೇ ಆಗಾಗ ಮಲವಿಸರ್ಜನೆಯ ಬಳಿಕ ರಕ್ತದ ಸ್ರಾವದ ಇರುವಿಕೆಯನ್ನು ಗಮನಿಸುತ್ತಿರಬೇಕು.

3. ಗುದದ್ವಾರದೊಳಗೆ ಗಡ್ಡೆ ಇರುವ ಸೂಚನೆ

ಸ್ತನದ ಕ್ಯಾನ್ಸರ್ ನ ಇರುವಿಕೆಯನ್ನು ಸ್ತನದ ಒಳಗಣ ಗಡ್ಡೆಯ ಇರುವಿಕೆಯಿಂದ ಗಮನಿಸಬಹುದು. ಅಂತೆಯೇ ಗುದದ್ವಾರದಲ್ಲಿ ಗಡ್ಡೆಯ ಇರುವಿಕೆಯನ್ನೂ ಬೆರಳಿನಿಂದ ಮುಟ್ಟಿ ಗಮನಿಸಬಹುದು. ಇದನ್ನು ಸ್ವತಃ ಅಥವಾ ವೈದ್ಯರಿಂದ ತಪಾಸಿಸಿಕೊಳ್ಳಬಹುದು. ಈ ಗಡ್ಡೆಗಳು ಕ್ಯಾನ್ಸರ್ ನ ಇರುವಿಕೆಯ ಸ್ಪಷ್ಟ ಲಕ್ಷಣವಾಗಿರಬಹುದು. ಈ ಗಡ್ಡೆ ಗಟ್ಟಿಯಾಗಿರದೇ ಮಲದ್ವಾರ ತೆರೆದಿರುವಲ್ಲಿ ತೆಳುವಾದ ಹಾಳೆಯೊಂದು ಒಳಗಿನಿಂದ ಹೊರಬಂದಿರುವಂತೆಯೂ ಇರಬಹುದು. ಕೆಲವೊಮ್ಮೆ ಈ ಗಡ್ಡೆ ಅಥವಾ ಜೋಲುಬಿದ್ದಿರುವ ಭಾಗದಲ್ಲಿ ನೋವಿಲ್ಲದೇ ಇರಬಹುದು ಹಾಗೂ ಇದು ಸಹಾ ಗುದದ್ವಾರದ ಕ್ಯಾನ್ಸರ್ ನ ಲಕ್ಷಣ ಆಗಿರಬಹುದು.

4. ಅಸಾಮಾನ್ಯ ಸ್ರಾವ

ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಗುದದ್ವಾರದಿಂದ ಮಲದ ಹೊರತಾಗಿ ಇತರ ಯಾವುದೇ ಸ್ರಾವ ಕಂಡುಬರುವುದಿಲ್ಲ. ಅತಿ ಹೆಚ್ಚು ಎಂದರೆ ಸ್ವಚ್ಛತೆಯ ಕೊರತೆಯಿಂದ ಉಳಿದ ಮಲದ ಉಚ್ಛಿಷ್ಟಗಳು, ಮೂತ್ರ ಅಥವಾ ಬೆವರು ಸಂಗ್ರಹಗೊಂಡು ಈ ಭಾಗ ತೇವವಾಗಿರುತ್ತದೆ. ಇದರ ಹೊರತಾಗಿ ಒಂದು ವೇಳೆ ನಿಧಾನವಾಗಿ ಸ್ರಾವ ಹೆಚ್ಚುತ್ತಾ ಹೋಗುತ್ತಿದ್ದರೆ ಹಾಗೂ ಈಗ ಇಲ್ಲಿ ನೋವಿಲ್ಲದೇ ಇದ್ದರೂ ಇದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು ಹಾಗೂ ಈ ಸೂಚನೆಯನ್ನು ಸರ್ವಥಾ ನಿರ್ಲಕ್ಷಿಸಕೂಡದು.

5. ಮಲ ಸಪೂರವಾಗಿರುವುದು

ಆರೋಗ್ಯವಂತ ವ್ಯಕ್ತಿಯ ಮಲ ಸುಮಾರು ಪಚ್ಚೆಬಾಳೆಹಣ್ಣಿನಷ್ಟು ದಪ್ಪವಿರಬೇಕು. ಒಂದು ವೇಳೆ ಇದು ತನ್ನ ಎಂದಿನ ಗಾತ್ರದಂತಿಲ್ಲದಿದ್ದರೆ ಸಪೂರ ಹಾಗೂ ಅಸಾಮಾನ್ಯವಾಗಿದ್ದರೆ ಹಾಗೂ ಮಲವಿಸರ್ಜನೆಯ ಬಳಿಕವೂ ಹೊಟ್ಟೆ ಖಾಲಿಯಾಗಿಲ್ಲ ಎಂದು ಅನ್ನಿಸಿದರೆ ಇದು ಸಹಾ ಗುದದ್ವಾರದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಏಕೆಂದರೆ ಈ ಭಾಗದಲ್ಲಿ ಉಂಟಾಗಿರುವ ಗಡ್ಡೆಗಳು ಮಲವಿಸರ್ಜನೆಯ ಸಮಯದಲ್ಲಿ ಪೂರ್ಣವಾದ ಸ್ಥಳಾವಕಾಶ ನೀಡದೇ ಇರುವುದೇ ಮಲ ಸಪೂರವಾಗಿರಲು ಕಾರಣವಾಗಿರುತ್ತದೆ.

English summary

Here Are 5 Dangerous Symptoms Of Anal Cancer To Beware Of!

Cancer is one of the deadliest types of diseases which can affect umans. According to researches, a spike has been seen in the rate of anal cancer and people over 60 years are affected by it & the chances of anal cancer to relapse are high. Here are 5 symptoms of anal cancer: rectal itching & bleeding, lump in the anus,
Story first published: Saturday, July 7, 2018, 12:12 [IST]
X
Desktop Bottom Promotion