For Quick Alerts
ALLOW NOTIFICATIONS  
For Daily Alerts

ನೆನಪಿಡಿ ಬೇಸಿಗೆಯಲ್ಲಿ ಆದಷ್ಟೂ ಇಂತಹ ಆಹಾರಗಳನ್ನು ಸೇವಿಸದಿರಿ

By Arshad
|

ಈ ವರ್ಷದ ಬೇಸಿಗೆಕಾಲ ಈಗಾಗಲೇ ಪ್ರಾರಂಭವಾಗಿದೆ. ಶಾಲೆಗೆ ರಜೆಯೂ ಪ್ರಾರಂಭವಾಗಿದ್ದು ಮನೆಯ ಹೊರಗಿನ ಚಟುವಟಿಕೆಗಳೂ ಗರಿಗೆದರುತ್ತಿವೆ. ಆದರೆ ಬೇಸಿಗೆಯಲ್ಲಿ ಬಿಸಿಲಿನ ಝಳ ಈ ಉತ್ಸಾಹಕ್ಕೆ ತಣ್ಣೀರೆರೆಚುವ ಹಾಗೂ ಆರೋಗ್ಯವನ್ನೂ ಬಾಧಿಸುವ ಅಪಾಯವಿದೆ. ಸೆಖೆಯಾದಾದ ನಮ್ಮಲ್ಲಿ ಹೆಚ್ಚಿನವರು ಅತಿ ಶೀತಲ ಐಸ್ ಕ್ರೀಂ, ಫ್ರಿಜ್ಜಿನಲ್ಲಿಟ್ಟು ತಣಿಸಿದ ಸಿಹಿ ಪಾನೀಯಗಳು, ಹಣ್ಣಿನರಸಗಳು ಮೊದಲಾದವುಗಳನ್ನು ಸೇವಿಸಿ ದೇಹವನ್ನು ತಂಪಾಗಿರಿಸಲು ಯತ್ನಿಸುತ್ತೇವೆ. ಸಾಮಾನ್ಯವಾಗಿ ನಾವೆಲ್ಲರೂ ಈ ಯತ್ನಗಳನ್ನು ಆನಂದಿಸುತ್ತೇವೆ.

ಬೇಸಿಗೆ ಬಿಸಿಲು ಸುಡುವ ಮೊದಲೇ ಎಚ್ಚೆತ್ತುಕೊಳ್ಳಿ! ಆಹಾರ ಕ್ರಮ ಹೀಗಿರಲಿ

ಬೇಸಿಗೆಯ ಸಂಭ್ರಮದಲ್ಲಿ ಸದ್ದಿಲ್ಲದೇ ಕೆಲವು ರೋಗಗಳೂ ಆವರಿಸುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ಫ್ಲೂ, ಶೀತ, ನೆಗಡಿ, ನ್ಯುಮೋನಿಯಾ ಮೊದಲಾದವು ಆವರಿಸುವಂತೆಯೇ ಬೇಸಿಗೆಯಲ್ಲಿಯೂ ಕೆಲವು ಅನಾರೋಗ್ಯಗಳು ಸಾಮಾನ್ಯವಾಗಿ ಕಾಡುತ್ತವೆ. ಅದರಲ್ಲಿಯೂ ಮಾರ್ಚ್ ಏಪ್ರಿಲ್ ಮೇ ತಿಂಗಳುಗಳಲ್ಲಿ ಭಾರತದಲ್ಲಿ ಹೆಚ್ಚು ಬಿಸಿ ಏರುತ್ತದೆ ಹಾಗೂ ಕೆಲವೆಡೆ ನಲವತ್ತು ಡಿಗ್ರಿಗೂ ಮೀರುತ್ತದೆ. ಬಳ್ಳಾರಿಯಂತಹ ಬಿರುಸಿಲಿನ ಊರುಗಳಲ್ಲಿ ಕೆಲವೆಡೆ ಐವತ್ತು ಡಿಗ್ರಿ ದಾಟಿದ್ದೂ ದಾಖಲಾಗಿದೆ. ನಮ್ಮ ಶರೀರ ಸುಮಾರು ಮೂವತ್ತಾರು ಡಿಗ್ರಿಗಳವರೆಗೆ ಬಿಸಿಯನ್ನು ಹೆಚ್ಚಿನ ಶ್ರಮವಿಲ್ಲದೇ ತಾಳಬಲ್ಲ ಕ್ಷಮತೆ ಹೊಂದಿದೆ ಇದಕ್ಕೂ ಹೆಚ್ಚಿನ ತಾಪಮಾನವನ್ನು ತಣಿಸಲು ದೇಹ ಅತಿಯಾಗಿಯೇ ಬೆವರಬೇಕಾಗುತ್ತದೆ. ಪರಿಣಾಮವಾಗಿ ನಿರ್ಜಲೀಕರಣ, ತಾಪಾಘಾತ (heat stroke), ತಲೆನೋವು, ಬಿಸಿಲಿಗೆ ಬಂದಾಗ ಕಣ್ಣುಗಳ ಮುಂದೆ ಮಿಂಚು ಸುಳಿದಂತಾಗುವುದು, ತಲೆ ತಿರುಗುವುದು, ಅತೀವ ಸುಸ್ತು ಮೊದಲಾದವು ಎದುರಾಗುತ್ತವೆ.

ಜೊತೆಗೇ ಈ ಬಿಸಿಯಲ್ಲಿಯೇ ಸಿಡಿದು ಗಾಳಿಯಲ್ಲೆಲ್ಲಾ ಪರಾಗರೇಣುಗಳನ್ನು ಹರಡುವ ಸಸ್ಯಸಂಕುಲಗಳಿವೆ, ಈ ಪರಾಗರೇಣುಗಳನ್ನು ಉಸಿರಾಡುವ, ನೀರಿನ ಮೂಲಕ ದೇಹ ಪ್ರವೇಶಿಸುವ ರೋಗಕಾರಕ ಕ್ರಿಮಿಗಳೂ, ಗಾಳಿಯಲ್ಲಿ ಈ ಸಮಯದಲ್ಲಿ ಹೆಚ್ಚುವ ಆರ್ದ್ರತೆಯೂ ಬೇಸಿಗೆಯಲ್ಲಿ ಹಲವರಲ್ಲಿ ಸೋಂಕು ಉಂಟುಮಾಡಬಹುದು. ಈ ಸಮಯದಲ್ಲಿ ನಮ್ಮ ಆಹಾರಗಳು ಈ ಸಮಯಕ್ಕೆ ಸೂಕ್ತವಾಗಿರಬೇಕು. ಅಂದರೆ ಈ ಸೋಂಕುಗಳಿಂದ ನಮ್ಮ ರೋಗ ನಿರೋಧಕ ಶಕ್ತಿ ರಕ್ಷಿಸುವಂತಿರಬೇಕು. ಬದಲಿಗೆ ಕೆಲವು ಆಹಾರಗಳು ಈ ರೋಗ ಹಾಗೂ ಸೋಂಕುಗಳನ್ನು ಹೆಚ್ಚಿಸುವಂತಿದ್ದು ಇವುಗಳನ್ನು ಬೇಸಿಗೆ ಕಳೆಯುವವರೆಗಾದರೂ ವರ್ಜಿಸಬೇಕು. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ:

ಬೆಂಕಿಯಲ್ಲಿ ಹುರಿದ ಮಾಂಸದ ಖಾದ್ಯಗಳು

ಬೆಂಕಿಯಲ್ಲಿ ಹುರಿದ ಮಾಂಸದ ಖಾದ್ಯಗಳು

ಚಳಿಗಾಲದಲ್ಲಿ ಬೆಂಕಿಯಲ್ಲಿ ನೇರವಾಗಿ ಹುರಿದ ಅಥವಾ ಸುಟ್ಟ ಮಾಂಸದ ಖಾದ್ಯಗಳು ಅಪ್ಯಾಯಮಾನವಾಗಿರುತ್ತವೆ. ಆದರೆ ಬೇಸಿಗೆಯಲ್ಲಿ ಸ್ನೇಹಿತರೊಂದಿಗೆ ಮನೆಯ ಮಾಳಿಗೆಯ ಮೇಲೆ ಬೆಂಕಿಯ ಮೇಲೆ ನೇರವಾಗಿ ಹುರಿದ ಆಹಾರಗಳನ್ನು ಸೇವಿಸಿ ಬೇಸಿಗೆಯನ್ನು ಸಂಭ್ರಮಿಸುವ ಪ್ರಯತ್ನಗಳು ವಾಸ್ತವವಾಗಿ ಆರೊಗ್ಯಕ್ಕೆ ಮಾರಕವಾಗಿದೆ. ಏಕೆಂದರೆ ಈಗಾಗಲೇ ವಾತಾವರಣ ಬಿಸಿಯಾಗಿದ್ದು ಈ ಬಿಸಿಯನ್ನೇ ತಂಪುಗೊಳಿಸಲು ದೇಹಕ್ಕೆ ಹೆಚ್ಚಿನ ಶ್ರಮದ ಅಗತ್ಯವಿದೆ. ಈ ಸಮಯದಲ್ಲಿ ಬೆಂಕಿಯಲ್ಲಿ ಹುರಿದ ಆಹಾರಗಳ ಸೇವನೆಯಿಂದ ದೇಹಕ್ಕೆ ಈ ಆಹಾರಗಳನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಈ ಮಾಂಸದ ವಿಷಕಾರಿ ಪರಿಣಾಮ ಜೀರ್ಣಕ್ರಿಯೆಯನ್ನು ಬಾಧಿಸುವುದು ಮಾತ್ರವಲ್ಲ, ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

ಐಸ್ ಕ್ರೀಂ

ಐಸ್ ಕ್ರೀಂ

ಬೇಸಿಗೆಯ ಝಳದಿಂದ ಶಮನ ಪಡೆಯಲು ಐಸ್ ಕ್ರೀಂ ತಿನ್ನುವುದನ್ನು ಎಲ್ಲಾ ವಯೋಮಾನದವರೂ ಇಷ್ಟಪಡುವ ಆಹಾರವಾಗಿದೆ. ಹಲವು ವಿವಿಧ ರುಚಿ ಹಾಗೂ ಬಣ್ಣಗಳಲ್ಲಿ ಸಿಗುವ ಈ ಬೇಸಿಗೆಯ ವಿಶೇಷ ತಿನಿಸುಗಳನ್ನು ನೋಡಿದಾಗ ತಿನ್ನದೇ ಇರಲು ಸಾಧ್ಯವೇ ಇಲ್ಲ. ಆದರೆ ಐಸ್ ಕ್ರೀಂ ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಹಾಗೂ ಕೊಬ್ಬಿನ ಅಂಶಗಳಿವೆ ಹಾಗೂ ಇವುಗಳ ಸೇವನೆಯಿಂದ ತಾತ್ಕಾಲಿಕವಾದ ಶಮನ ದೊರೆತರೂ ಸ್ಥೂಲಕಾಯ ಆವರಿಸುವ, ಮಧುಮೇಹ ಎದುರಾಗುವ ಸಾಧ್ಯತೆ ಮಾತ್ರ ಹಲವಾರು ಪಟ್ಟು ಹೆಚ್ಚುತ್ತದೆ.

ಮದ್ಯ

ಮದ್ಯ

ಬೇಸಿಗೆಯಲ್ಲಿ ಮದ್ಯಪ್ರಿಯರಿಗಾಗಿಯೇ ಅತ್ಯಂತ ಶೀತಲಗೊಳಿಸಿದ ಅಥವಾ ಚಿಲ್ಡ್ ಎಂಬ ಹೆಸರಿನಲ್ಲಿ ಮಾದಕ ಪಾನೀಯಗಳನ್ನು ಒದಗಿಸಲಾಗುತ್ತದೆ. ವಾಸ್ತವವಾಗಿ ಮದ್ಯ ದೇಹದ ತಾಪಮಾನವನ್ನು ಏರಿಸುವ ರಾಸಾಯನಿಕವಾಗಿದ್ದು ಇದನ್ನು ತಣಿಸಿ ಸೇವಿಸಿದರೂ ಆ ಕ್ಷಣಕ್ಕೆ ತಂಪುಗೊಳಿಸಿದ ಅನುಭವವಾದರೂ ಹೊಟ್ಟೆಗೆ ಹೋದ ಬಳಿಕ ಮದ್ಯ ತನ್ನ ನಿಜವಾದ ಬಣ್ಣವನ್ನೇ ತೋರುತ್ತದೆ. ಇದು ರಕ್ತದಲ್ಲಿ ಬೆರೆತ ಬಳಿಕ ಉಂಟುಮಾಡುವ ಎಲ್ಲಾ ಕೆಟ್ಟ ಪರಿಣಾಮಗಳ ಜೊತೆಗೇ ದೇಹದ ತಾಪಮಾನವನ್ನೂ ಏರಿಸುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಹಾಗೂ ಈ ಮೂಲಕ ಹಲವಾರು ಸೋಂಕುಗಳಿಗೆ ಮುಕ್ತವಾದ ಆಹ್ವಾನ ಸಿಕ್ಕಂತಾಗುತ್ತದೆ. ಹಾಗೂ ಮದ್ಯವನ್ನು ರಕ್ತದಲ್ಲಿ ಸೇರಿಸಿಕೊಳ್ಳಲು ಹೆಚ್ಚಿನ ನೀರನ್ನು ಬಳಸಿಕೊಳ್ಳಲಾಗುವ ಕಾರಣ ದೇಹ ನಿರ್ಜಲೀಕರಣಕ್ಕೆ ಸುಲಭವಾಗಿ ತುತ್ತಾಗುತ್ತದೆ. ಇವೆಲ್ಲವೂ ಒಟ್ಟಾಗೆ ಬೇಸಿಗೆಯಲ್ಲಿ ದೇಹವನ್ನು ಹೆಚ್ಚು ಶಿಥಿಲವಾಗಿಸುತ್ತವೆ ಹಾಗೂ ರೋಗಗಳು ಸುಲಭವಾಗಿ ಆವರಿಸಲು ಸಾಧ್ಯವಾಗುತ್ತದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಅರೆ, ಬೇಸಿಗೆಯಲ್ಲಿಯೇ ಸಿಗುವ ಮಾವಿನ ಹಣ್ಣನ್ನು ಬೇಸಿಗೆಯಲ್ಲದೇ ಬೇರೆ ಯಾವಾಗ ತಿನ್ನುವುದು? ಈ ಪ್ರಶ್ನೆಯನ್ನು ಮಾವುಪ್ರಿಯರು ಕೇಳಿಯೇ ಕೇಳುತ್ತಾರೆ. ಬೇಸಿಗೆಯಲ್ಲಿಯೇ ಮಾವಿನ ಬೆಲೆಯೂ ಕಡಿಮೆ ಇದ್ದು ಎಲ್ಲಾ ವರ್ಗದ ಜನರೂ ಕೊಳ್ಳಲು ಸಾಧ್ಯವಾಗುವಂತಿರುವಾಗ ಮಾವನ್ನು ತಿನ್ನದೇ ಇರಲಾಗುತ್ತದೆಯೇ? ಕಾರಣವೇನೇ ಇದ್ದರೂ ಬೇಸಿಗೆಯಲ್ಲಿ ಮಾವಿನ ಸೇವನೆಯಿಂದ ದೇಹದ ತಾಪಮಾನ ಏರುವುದು ಮಾತ್ರ ಸುಳ್ಳಲ್ಲ! ಹಾಗಾಗಿ ಏರಿದ ತಾಪಮಾನದ ಕಾರಣದಿಂದಾಗಿ ಆಮಶಂಕೆ, ಹೊಟ್ಟೆ ಕೆಡುವುದು, ತಲೆನೋವು ಮೊದಲಾದವು ಎದುರಾಗಬಹುದು. ಆದ್ದರಿಂದ ಮಾವು ಅಗ್ಗವಾಗಿ ದೊರೆತರೂ ಬಿಸಿಲಿನಲ್ಲಿರುವ ಸಮಯದಲ್ಲಿ ಸರ್ವಥಾ ಸೇವಿಸಕೂಡದು. ಅಲ್ಪ ಪ್ರಮಾಣದಲ್ಲಿ, ಮನೆಯಲ್ಲಿ, ತಂಪಾಗಿದ್ದ ಸಮಯದಲ್ಲಿ ಸೇವಿಸಬಹುದು.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಬೇಸಿಗೆಯಲ್ಲಿ ದಪ್ಪನೆಯ, ಕೆನೆಭರಿತ, ಡೈರಿ ಉತ್ಪನ್ನಗಳಿಂದ ತಯಾರಾದ ಪೇಯಗಳನ್ನು ಸವಿದು ಬಿಸಿಲಿನ ಝಳವನ್ನು ಕಡಿಮೆಗೊಳಿಸುವುದನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆಯಲ್ಲಿ ಈ ಪೇಯಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಇದು ಪ್ರತಿಕೂಲ ಪರಿಣಾಮವನ್ನುಂಟುಮಾಡಬಹುದು. ಹೊರಗೆ ಅತಿ ಹೆಚ್ಚೇ ಬಿಸಿ ಇದ್ದಾಗ ದೇಹದ ತಾಪಮಾನವೂ ಕೊಂಚ ಹೆಚ್ಚೇ ಇರುತ್ತದೆ ಹಾಗೂ ಈ ಸಮಯದಲ್ಲಿ ಸೇವಿಸುವ ಹಾಲು, ಬೆಣ್ಣೆ, ಮೊಸರು, ಚೀಸ್ ಮೊದಲಾದವು ಹೊಟ್ಟೆಯಲ್ಲಿ ಈ ಹೆಚ್ಚಿನ ತಾಪಮಾನದಲ್ಲಿ ಅಸಾಮಾನ್ಯವಾದ ಹುದುಗುವಿಕೆಗೆ ಒಳಗಾಗಬಹುದು. ಹೀಗೆ ಹುದುಗುಬಂದ ಆಹಾರ ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುವ ಸಹಿತ ಇನ್ನೂ ಹಲವಾರು ಅನಾರೋಗ್ಯಗಳಿಗೆ ಕಾರಣವಾಗಬಹುದು.

ಎಣ್ಣೆಯುಕ್ತ ಆಹಾರಗಳು:

ಎಣ್ಣೆಯುಕ್ತ ಆಹಾರಗಳು:

ಹೆಚ್ಚಿನ ಎಣ್ಣೆಯಂಶವಿರುವ ಅನಾರೋಗ್ಯಕರ ಸಿದ್ದ ಅಹಾರಗಳು, ಹುರಿದ ಪದಾರ್ಥಗಳು, ಸಾರು ಮೊದಲಾದವುಗಳು ಅನಾರೋಗ್ಯಕರ ಆಹಾರಗಳಾಗಿವೆ. ಇದು ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲ, ಎಲ್ಲಾ ಸಮಯದಲ್ಲಿಯೂ ಅನಾರೋಗ್ಯಕರವಾಗಿವೆ. ಇವುಗಳ ಸೇವನೆಯಿಂದ ಕೆಲವಾರು ಅನಾರೋಗ್ಯಗಳು ಎದುರಾಗಬಹುದು. ಈ ಸಾಧ್ಯತೆ ಬೇಸಿಗೆಯಲ್ಲಿ ಅಪಾರವಾಗಿ ಹೆಚ್ಚುತ್ತದೆ. ಏಕೆಂದರೆ ಈ ಆಹಾರಗಳು ದೇಹದ ತಾಪಮಾನವನ್ನು ಥಟ್ಟನೇ ಏರಿಸುತ್ತವೆ ಹಾಗೂ ತನ್ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಇದು ಈ ಆಹಾರಗಳು ತಂದೊಡ್ಡುವ ಅಪಾಯಗಳ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಬಿಸಿಯಾದ ಪಾನೀಯಗಳು

ಬಿಸಿಯಾದ ಪಾನೀಯಗಳು

ನಮ್ಮಲ್ಲಿ ಹೆಚ್ಚಿನವರು ಬಿಸಿಯಾದ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ ಹಾಗೂ ವರ್ಷದ ಎಲ್ಲಾ ದಿನಗಳಲ್ಲಿಯೂ ಈ ಪೇಯಗಳನ್ನು ಸೇವಿಸುತ್ತಾರೆ. ಈ ಪೇಯಗಳ ಸೇವನೆಯಿಂದ ಹೆಚ್ಚಿನ ಶಕ್ತಿ ಹಾಗೂ ಮನಸ್ಸಿಗೆ ಮುದ ಸಿಗುತ್ತದೆ. ಆದರೆ ಬೇಸಿಗೆಯ ಸಮಯದಲ್ಲಿ ಈ ಪೇಯಗಳು ದೇಹದ ತಾಪಮಾನವನ್ನು ಹೆಚ್ಚಿಸುವ ಮೂಲಕ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ ಇವುಗಳನ್ನು ಬಿಸಿಯಾಗಿದ್ದಂತೆ ಸೇವಿಸುವ ಬದಲು ತಣಿಸಿದ ಹಸಿರು ಟೀ ಅಥವಾ ಶೀತಲೀಕರಿಸಿದ ಕಾಫಿಗಳ ರೂಪದಲ್ಲಿ ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಒಣಫಲಗಳು

ಒಣಫಲಗಳು

ಖರ್ಜೂರ, ಬಾದಾಮಿ, ಒಣದ್ರಾಕ್ಷಿ, ಅಕ್ರೋಟು ಮೊದಲಾದ ಒಣಫಲಗಳನ್ನು ಸೇವಿಸುವ ಮೂಲಕ ಆರೋಗ್ಯ ವೃದ್ದಿಗೊಳ್ಳುತ್ತದೆ ಎಂದು ನಾವೆಲ್ಲಾ ಅರಿತೇ ಇದ್ದೇವೆ. ಇವುಗಳಲ್ಲಿ ಸಮೃದ್ದವಾಗಿರುವ ಪೋಷಕಾಂಶಗಳು ಇತರ ಸಮಯದಲ್ಲಿ ಆರೋಗ್ಯವನ್ನು ಹೆಚ್ಚಿಸಿದರೂ ಬೇಸಿಗೆಯಲ್ಲಿ ಮಾತ್ರ ಈ ಕಾರ್ಯದ ಜೊತೆಗೇ ದೇಹದ ತಾಪಮಾನವನ್ನೂ ಏರಿಸುತ್ತವೆ. ಆದ್ದರಿಂದ, ಬಿಸಿಲಿನ ಝಳ ಹೆಚ್ಚಿದ್ದಾಗ ಒಣಫಲಗಳನ್ನು ಸೇವಿಸುವುದು ಸೂಕ್ತವಲ್ಲ!

ಮಸಾಲೆ ಪದಾರ್ಥಗಳು

ಮಸಾಲೆ ಪದಾರ್ಥಗಳು

ಆಹಾರದ ರುಚಿಯನ್ನು ಹೆಚ್ಚಿಸಲೆಂದು ಸೇರಿಸುವ ಏಲಕ್ಕಿ, ದಾಲ್ಚಿನ್ನಿ, ಚೆಕ್ಕೆ, ಲವಂಗ, ಕಾಳುಮೆಣಸು ಮೊದಲಾದವುಗಳು ತಮ್ಮ ಮೂಲ ಉದ್ದೇಶವನ್ನು ಪೂರೈಸಿದರೂ ಬೇಸಿಗೆಯಲ್ಲಿ ಈ ಆಹಾರಗಳ ಸೇವನೆಯಿಂದ ದೇಹದ ತಾಪಮಾನವೂ ಹೆಚ್ಚುತ್ತದೆ. ಇದರಿಂದ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಇದು ಕೆಲವು ಕಾಯಿಲೆಗಳಿಗೆ ಆಮಂತ್ರಣ ನೀಡಬಹುದು.

English summary

Foods You Must Totally Avoid During The Summer Season!

Summers in tropical countries can be rather harsh with very high temperatures. So, during summers it is important to avoid certain foods to avoid summer-related ailments. Most of the summer favourite foods and drinks like ice-cream, mangoes, chilled cocktails, etc. are consumed by one and all but are they really healthy for you during the season?
X
Desktop Bottom Promotion