For Quick Alerts
ALLOW NOTIFICATIONS  
For Daily Alerts

  ಈ 10 ಸಂಗತಿಗಳನ್ನು ತಪ್ಪದೇ ಅನುಸರಿಸಿ, ಅಸ್ತಮಾ ರೋಗ ಖಂಡಿತ ಕಾಡದು...

  By Arshad
  |

  ಅಸ್ತಮಾ ಎಂಬುದೊಂದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಇದು ಅನುವಂಶಿಕ ಹಾಗೂ ಪರ್ಯಾವರಣದ ಕಾರಣಗಳಿಂದ ಎದುರಾಗಬಹುದು. ಮೂಗಿನಿಂದ ಒಳಗೆಳೆದುಕೊಂಡ ಉಸಿರು ಶ್ವಾಸಕೋಶಗಳಿಗೆ ತಲುಪುವ ಮುನ್ನ ಯಾವುದಾದರೂ ಅಡ್ಡಿಯುಂಟಾದರೆ ಇದರಿಂದ ಶ್ವಾಸಕೋಶದ ಕ್ಷಮತೆ ಉಡುಗುತ್ತದೆ ಹಾಗೂ ಉಸಿರಾಟ ಕಷ್ಟಕರವಾಗುವುದು, ಕೆಮ್ಮು ಮೊದಲಾದವು ಎದುರಾಗುತ್ತವೆ. ಒಂದು ವೇಳೆ ಉಸಿರು ತೆಗೆದುಕೊಳ್ಳಲು ವಿಪರೀತ ಕಷ್ಟಕರವಾಗಿ ಅಗತ್ಯವಿದ್ದಷ್ಟು ಆಮ್ಲಜನಕ ಸಿಗದೇ ಇದ್ದಲ್ಲಿ ಕುಸಿದು ಬೀಳಬಹುದು, ಪ್ರಾಣಾಪಾಯವೂ ಎದುರಾಗಬಹುದು. ಇದನ್ನೇ ಅಸ್ತಮಾಘಾತ ಎಂದು ಕರೆಯಲಾಗುತ್ತದೆ.

  ಇಂದಿನ ಲೇಖನದಲ್ಲಿ ಈ ಆಘಾತ ಎದುರಾಗದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಅಸ್ತಮಾಘಾತದ ಪರಿಣಾಮದಿಂದ ಶ್ವಾಸನಾಳದಲ್ಲಿ ಉರಿಯೂತ, ಶ್ವಾಸನಾಳಗಳ ಒಳಭಾಗದಲ್ಲಿ ಸ್ರವಿಸುವ ಕಫ (bronchospasm) ಹಾಗೂ ಕಫ ಶ್ವಾಸಕೋಶದಲ್ಲಿ ಇಳಿಯುವುದು ಮೊದಲಾದವು ಎದುರಾಗುತ್ತವೆ. ಪರಿಣಾಮವಾಗಿ ಶ್ವಾಸನಾಳಗಳು ತೀರಾ ಕಿರಿದಾಗಿ ಶ್ವಾಸ ತೆಗೆದುಕೊಳ್ಳುವುದು ವಿಪರೀತ ಕಷ್ಟಕರವಾಗುತ್ತದೆ.

  ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

  ಅಸ್ತಮಾ ರೋಗಕ್ಕೆ ಕೆಲವು ಅಲರ್ಜಿಕಾರಕ ಕಣಗಳು ಕಾರಣವಾಗುತ್ತವೆ. ಗಾಳಿಯಲ್ಲಿರುವ ಕೆಲವು ಸೂಕ್ಷ್ಮಜೀವಿಗಳು, ಹೂವಿನ ಪರಾಗ, ಹೊಗೆ, ತಣ್ಣನೆಯ ಗಾಳಿ, ಪ್ರದೂಶಿತ ಗಾಳಿ ಹಾಗೂ ಪ್ರಬಲ ಸುವಾಸನೆಗಳು ಮೊದಲಾದವು ಅಸ್ತಮಾ ರೋಗಕ್ಕೆ ಪ್ರಚೋದನೆ ನೀಡಬಹುದು. ಅಸ್ತಮಾ ರೋಗವನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದಕ್ಕೆ ಕಾರಣವಾಗುವ ಅಲರ್ಜಿಕಾರಕಗಳಿಂದ ದೂರವಿರುವ ಮೂಲಕ ಈ ರೋಗವನ್ನು ಉಲ್ಬಣಗೊಳ್ಳದಂತೆ ತಡೆದು ನಿಯಂತ್ರಣ ಸಾಧಿಸಬಹುದು ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಆಘಾತಕ್ಕೆ ಒಳಗಾಗದಿರಲು ಕೆಲವಾರು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಬನ್ನಿ, ಈ ಬಗ್ಗೆ ಹತ್ತು ಪ್ರಮುಖ ಮಾಹಿತಿಗಳನ್ನು ನೋಡೋಣ:

  ಆರ್ದತೆಯಿಂದ ದೂರವಿರಿ

  ಆರ್ದತೆಯಿಂದ ದೂರವಿರಿ

  ಅಸ್ತಮಾಘಾತಕ್ಕೆ ಗಾಳಿಯ ಗುಣಮಟ್ಟ ಪ್ರಮುಖ ಕಾರಣವಾಗಿದೆ. ಅತಿ ಬಿಸಿಯಾದ, ಕಡಿಮೆ ಗುಣಮಟ್ಟದ ಹಾಗೂ ಆರ್ದತೆಯಿಂದ ಕೂಡಿದ ಗಾಳಿ ಅಸ್ತಮಾಘಾತಕ್ಕೆ ಕಾರಣವಾಗಬಹುದು. ಒಂದು ವೇಳೆ ಈಗಾಗಲೇ ಅಸ್ತಮಾ ತೊಂದರೆ ಇರುವ ವ್ಯಕ್ತಿಗಳು ಈ ಗಾಳಿಯಲ್ಲಿ ಹೊರಹೋದರೆ ಇವರ ಸ್ಥಿತಿ ಇನ್ನಷ್ಟು ಉಲ್ಭಣಗೊಳ್ಳಬಹುದು. ಹಾಗಾಗಿ ಸ್ವಚ್ಛ ಗಾಳಿ ಸೇವನೆ ಇವರಿಗೆ ಅಗತ್ಯವಾಗಿದೆ ಹಾಗೂ ಮನೆಯಲ್ಲಿರುವ ಹವಾನಿಯಂತ್ರಣಗಳಲ್ಲಿ ಆರ್ದ್ರತೆ ಅತಿ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಆರ್ದ್ರತೆ ಹೆಚ್ಚಿರುವ ಪರಿಸರದಲ್ಲಿ ವಾಸವಾಗಿದ್ದರೆ ಕಿಟಕಿಗಳನ್ನು ಮುಚ್ಚಿರಬೇಕು. ಒಂದು ವೇಳೆ ಈ ಗಾಳಿಯ ಗುಣಮಟ್ಟ ಚೆನ್ನಾಗಿರದ ಪರಿಸರದಲ್ಲಿ ವಾಸವಾಗಿದ್ದರೆ ಇಲ್ಲಿಂದ ತಮ್ಮ ವಾಸ್ತವ್ಯವನ್ನು ಗಾಳಿಯ ಗುಣಮಟ್ಟ ಉತ್ತಮವಾಗಿರುವ ಕಡೆ ಬದಲಿಸಿಕೊಳ್ಳುವುದೇ ಉತ್ತಮ.

  ಶಿಲೀಂಧ್ರ ಮತ್ತು ಹಾವಸೆಗಳಿಂದ ದೂರವಿರಿ

  ಶಿಲೀಂಧ್ರ ಮತ್ತು ಹಾವಸೆಗಳಿಂದ ದೂರವಿರಿ

  ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಗೋಡೆಗಳ ಮೂಲೆಗಳಲ್ಲಿ, ಛಾವಣಿಗೆ ಒಳಭಾಗದಲ್ಲಿ ಕಪ್ಪಗಾಗತೊಡಗುತ್ತದೆ. ಇದಕ್ಕೆ ಸೂಕ್ಷ್ಮ ಶಿಲೀಂಧ್ರ ಹಾಗೂ ಹಾವಸೆಗಳೇ ಕಾರಣ. ಎಲ್ಲೆಲ್ಲಿ ತೇವಾಂಶ ಹನಿಗಟ್ಟುತ್ತದೆಯೋ, ಅಲ್ಲೆಲ್ಲಾ ಇವು ವಿಪುಲವಾಗಿ ಬೆಳೆಯುತ್ತವೆ. ಕಿಟಕಿ ಪರದೆಗಳು, ಕೈ ತೊಳೆಯುವ ಬೋಗುಣಿ (ವಾಶ್ ಬೇಸಿನ್) ನೆಲದ ಚಪ್ಪಡಿ, ಸ್ನಾನಗೃಹದ ಒಳಭಾಗ ಎಲ್ಲೆಲ್ಲೂ ಇವು ಬೆಳೆಯುತ್ತವೆ. ಈ ಪರಿಸ್ಥಿತಿ ಇರುವ ಸ್ಥಳ ಅಸ್ತಮಾರೋಗಿಗಳಿಗೆ ಸೂಕ್ತವಲ್ಲ. ಒಂದು ವೇಳೆ ನೀವಿರುವ ಸ್ಥಳದಲ್ಲಿ ತೇವಾಂಶ ಹೆಚ್ಚಿದ್ದರೆ ಆಗಾಗ ಮನೆಯ ಒಳಭಾಗವನ್ನು ಸ್ವಚ್ಛಗೊಳಿಸುತ್ತಿರಬೇಕು, ಮನೆಯ ಒಳಾಂಗಣದ ಅಲಂಕಾರಿಕ ಗಿಡಗಳಿಗೆ ಅಗತ್ಯಕ್ಕೂ ಹೆಚ್ಚು ನೀರು ಹಾಕದೇ ಒಳಭಾಗ ಸಾಕಷ್ಟು ಒಣದಾಗಿರುವಂತೆ ನೋಡಿಕೊಳ್ಳಬೇಕು.

  ಧೂಳಿಗೆ ಎದುರಾಗುವುದರಿಂದ ತಪ್ಪಿಸಿಕೊಳ್ಳಿ

  ಧೂಳಿಗೆ ಎದುರಾಗುವುದರಿಂದ ತಪ್ಪಿಸಿಕೊಳ್ಳಿ

  ಅಸ್ತಮಾ ತೊಂದರೆಗೆ ಪ್ರಮುಖ ಕಾರಣ ಧೂಳು. ಧೂಳು ಇಲ್ಲದ ಪ್ರದೇಶವೇ ಈ ಜಗತ್ತಿನಲ್ಲಿಲ್ಲ. ಗಾಳಿ ಇದ್ದಲ್ಲಿ ಧೂಳು ಇದ್ದೇ ಇರುತ್ತದೆ. ಧೂಳಿನಲ್ಲಿ ಹೂವಿನ ಪರಾಗ, ಬಟ್ಟೆಗಳ ಹತ್ತಿಯ ಸೂಕ್ಷ್ಮಕಣಗಳು, ಶಿಲೀಂಧ್ರ, ಹಾವಸೆಗಳ ಬೀಜಗಳು, ಹೊಗೆಯ ಕಣಗಳು ಇತ್ಯಾದಿಗಳು ಸೇರಿವೆ. ಅಲ್ಲದೇ ಧೂಳಿನ ಕ್ರಿಮಿಗಳೂ ಇನ್ನೊಂದು ಪ್ರಮುಖ ಕಾರಣವಾಗಿವೆ. ಇವು ನಮ್ಮ ದೇಹದಿಂದ ವಿಸರ್ಜಿಸಲ್ಪಡುವ ಸತ್ತ ಜೀವಕೋಶಗಳನ್ನು ತಿಂದು ಜೀವಿಸುತ್ತವೆ. ಈ ಕ್ರಿಮಿಗಳು ನಮ್ಮ ತಲೆದಿಂಬು, ಪೀಠೋಪಕರಣಗಳು, ರತ್ನಗಂಬಳಿ ಮೊದಲಾದ ಕಡೆಗಳಲ್ಲೆಲ್ಲಾ ಧಾರಾಳವಾಗಿರುತ್ತವೆ. ಆದ್ದರಿಂದ ಮನೆಯಲ್ಲಿರುವ ರತ್ನಗಂಬಳಿ, ಪರದೆ ಮೊದಲಾದವುಗಳನ್ನು ವಾರಕ್ಕೆರಡು ಬಾರಿ ವ್ಯಾಕ್ಯೂಮ್ ಕ್ಲೀನರ್ ನಿಂದ ಸ್ವಚ್ಛಗೊಳಿಸುತ್ತಿರಬೇಕು. ಮಲಗುವ ಹೊದಿಕೆ, ಬೆಡ್ ಶೀಟ್ ಮೊದಲಾದವುಗಳನ್ನು ಆಗಾಗ ಬಿಸಿನೀರಿನಿಂದ ತೊಳೆಯುತ್ತಿರಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಸ್ತಮಾಘಾತದಿಂದ ರಕ್ಷಣೆ ಪಡೆಯಬಹುದು.

  ಯಾವುದೇ ಬಗೆಯ ಹೊಗೆಗೆ ’ಬೇಡ’ ಎನ್ನಿ

  ಯಾವುದೇ ಬಗೆಯ ಹೊಗೆಗೆ ’ಬೇಡ’ ಎನ್ನಿ

  ಯಾವುದೇ ಬಗೆಯ ಹೊಗೆ ಶ್ವಾಸಕೋಶಗಳಿಗೆ ಉರಿ ತರಿಸಬಹುದು. ವಿಶೇಷವಾಗಿ ಅಸ್ತಮಾ ರೋಗಿಗಳಿಗೆ ಹೊಗೆ ಮಾರಕವಾಗಿದೆ. ಇದು ಸಿಗರೇಟು, ಅಗರಬತ್ತಿ ಅಥವಾ ಏನಾದರೂ ಸುಟ್ಟ ಹೊಗೆಯೂ ಆಗಬಹುದು ಅಥವಾ ಅಕ್ಕ ಪಕ್ಕದಲ್ಲಿ ಇತರರು ಸೇದುವ ಬೀಡಿ ಸಿಗರೇಟೂ ಆಗಬಹುದು. ಇದಕ್ಕೆ ಅವಕಾಶ ಮಾಡಿಕೊಡದೇ ಸ್ಪಷ್ಟವಾಗಿ ನಿರಾಕರಿಸಿ. ಹೊಗೆಯಿಂದ ಕೆಮ್ಮು, ಉಸಿರಾಟ ಕಷ್ಟಕರವಾಗುವುದು ಮೊದಲಾದ ತೊಂದರೆಗಳು ತಕ್ಷಣವೇ ಎದುರಾಗುತ್ತವೆ. ಹೊಗೆ ಇರುವ ಪರಿಸರದಲ್ಲಿ ಪ್ರವೇಶಿಸುವುದರಿಂದ ತಡೆಯಿರಿ. ನಿಮ್ಮ ಮನೆಯ ಅಡುಗೆ ಕೋಣೆಯಿಂದ ಹೊರಡುವ ಹೊಗೆಯನ್ನು ಹೊರಹಾಕಲು ಅಕ್ಸ್ ಹಾಸ್ಟ್ ಫ್ಯಾನ್ ಅಥವಾ ಬೇರೆ ಸೂಕ್ತ ವಿಧಾನಗಳನ್ನು ಅಳವಡಿಸಿ.

  ಸಾಕುಪ್ರಾಣಿಗಳಿಂದ ದೂರವಿರಿ

  ಸಾಕುಪ್ರಾಣಿಗಳಿಂದ ದೂರವಿರಿ

  ಅಸ್ತಮಾಘಾತಕ್ಕೆ ಸಾಕುಪ್ರಾಣಿಗಳೂ ಕಾರಣವಾಗಬಹುದು. ಹೇಗೆಂದು ಗೊತ್ತೇ? ಸಾಕುಪ್ರಾಣಿಗಳ ಮೈಮೇರಿಉವ ರೋಮಗಳು, ಪುಕ್ಕಗಳು ಹಾಗೂ ಜೊಲ್ಲು ಅಸ್ತಮಾ ರೋಗಕ್ಕೆ ಪ್ರಚೋದನೆ ನೀಡುತ್ತವೆ. ಸಾಕು ಪ್ರಾಣಿಗಳನ್ನು ನಿಮ್ಮ ಮಲಗುವ ಕೋಣೆಯಿಂದ ದೂರವಿರಿಸುವುದು ತುಂಬಾ ಅಗತ್ಯ. ಅದರಲ್ಲೂ ಪಾರಿವಾಳದ ಪುಕ್ಕದ ಪುಡಿ ಅಸ್ತಮಾರೋಗಿಗಳಿಗೆ ಪ್ರಾಣಾಂತಿಕವಾಗಿದೆ. (ಈ ಸ್ಥಿತಿಗೆ "hypersensitivity pneumonitis"ಅಥವಾ Pigeon-breeder's Disease ಎಂದು ಕರೆಯುತ್ತಾರೆ). ಬೆಕ್ಕು, ನಾಯಿ, ಗಿಳಿ ಮೊದಲಾದ ಸಾಕುಪ್ರಾಣಿಗಳ ರೋಮವೂ ಅಸ್ತಮಾಘಾತಕ್ಕೆ ಕಾರಣವಾಗಬಹುದು. ಸಾಕುಪ್ರಾಣಿಗಳ ಒಡನಾಟದಿಂದ ದೂರವಿರುವ ಮೂಲಕ ಅಸ್ತಮಾಘಾತದಿಂದ ರಕ್ಷಣೆ ಪಡೆಯಬಹುದು.

  ಒತ್ತಡದಿಂದ ದೂರವಿರಿ

  ಒತ್ತಡದಿಂದ ದೂರವಿರಿ

  ಒಂದು ವೇಳೆ ಅಸ್ತಮಾ ರೋಗಿಗಳು ಒತ್ತಡಕ್ಕೆ ಒಳಗಾದರೆ ಇವರ ಉಸಿರಾಟವೂ ತೀವ್ರಗೊಳ್ಳುತ್ತದೆ. ಇದರಿಂದ ಶ್ವಾಸನಾಳಗಳಲ್ಲಿ ಉಸಿರೆಳೆದುಕೊಳ್ಳುವುದು ಕಷ್ಟವಾಗುತ್ತದೆ ಹಾಗೂ ಅಸ್ತಮಾಘಾತಕ್ಕೆ ಕಾರಣವಾಗಬಹುದು. ಒತ್ತಡದಿಂದ ರೋಗ ನಿರೋಧಕ ಶಕ್ತಿಯೂ ಕುಸಿಯಬಹುದು ಹಾಗೂ ಅಸ್ತಮಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಈ ವ್ಯಕ್ತಿಗಳು ಆಳವಾದ ಉಸಿರಾಟದ ವ್ಯಾಯಾಮಗಳನ್ನು ಹೆಚ್ಚು ಹೆಚ್ಚಾಗಿ ಅನುಸರಿಸಬೇಕು ಹಾಗೂ ಆದಷ್ಟೂ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಧ್ಯಾನ, ಯೋಗಾಭ್ಯಾಸ ಮೊದಲಾದವುಗಳನ್ನು ಅನುಸರಿಸಿ ಮಾನಸಿಕ ಒತ್ತಡಕ್ಕೆ ತುತ್ತಾಗದಿರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಸಮಾನಮನಸ್ಕ ಸ್ನೇಹಿತರೊಂದಿಗೆ, ಕುಟುಂಬಸದಸ್ಯರೊಂದಿಗೆ ಬೆರೆತು ಸಮಯ ಕಳೆಯುವ ಮೂಲಕ ಮಾನಸಿಕ ಒತ್ತಡಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳಬೇಕು.

  ವ್ಯಾಯಾಮ

  ವ್ಯಾಯಾಮ

  ಹಲವು ವ್ಯಕ್ತಿಗಳಿಗೆ ವ್ಯಾಯಾಮ ಪ್ರಾರಂಭಿಸತೊಡಗಿದೊಡನೆಯೇ ಅಸ್ತಮಾ ತೊಂದರೆ ಎದುರಾಗತೊಡಗುತ್ತದೆ. ಕಷ್ಟಕರ ಹಾಗೂ ಹೆಚ್ಚಿನ ಸಮಯ ಮುಂದುವರೆಯುವ ವ್ಯಾಯಾಮಗಳು ಇವರಲ್ಲಿ ಅಸ್ತಮಾಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಈ ವ್ಯಕ್ತಿಗಳು ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಹೆಚ್ಚಿನ ಭಾರ ನೀಡದ ಸರಳ ವ್ಯಾಯಾಮಗಳನ್ನೇ ಮಾಡಬೇಕಾಗುತ್ತದೆ. ಸುಲಭ ಯೋಗಾಸನಗಳು, ವೇಗದ ನಡಿಗೆ, ನಿಧಾನಗತಿಯಲ್ಲಿ ಬೈಸಿಕಲ್ ಚಲಾಯಿಸುವುದು, ಈಜು, ಕಡಿಮೆ ತೂಕದ ಉಪಕರಣಗಳನ್ನು ಬಳಸಿ ಮಾಡುವ ವ್ಯಾಯಾಮಗಳು ಮೊದಲಾದವುಗಳನ್ನು ಮಾತ್ರವೇ ಅನುಸರಿಸಬೇಕು. ಯಾವುದೇ ವ್ಯಾಯಾಮ ಪ್ರಾರಂಭಿಸುವ ಮುನ್ನ ತಮ್ಮ ಕುಟುಂಬವೈದ್ಯರ ಸಲಹೆ ಪಡೆದೇ ಮುಂದುವರೆಯಬೇಕು.

  ಆದಷ್ಟೂ ಅನಾರೋಗ್ಯಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳಬೇಕು

  ಆದಷ್ಟೂ ಅನಾರೋಗ್ಯಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳಬೇಕು

  ಶೀತ, ಫ್ಲೂ, ಸೈನಸ್ ಸೋಂಕು ಮೊದಲಾದ ಶ್ವಾಸ ಸಂಬಂಧಿ ಕಾಯಿಲೆಗಳು ಅಸ್ತಮಾಘಾತದ ಸೂಚನೆಯಾಗಿದೆ. ಎದೆಯುರಿ ಸಹಾ ಶ್ವಾಸನಾಳಗಳಲ್ಲಿ ಘಾಸಿಯಾಗುವುದಕ್ಕೆ ಕಾರಣವಾಗಬಹುದು ಹಾಗೂ ಅಸ್ತಮಾ ತೊಂದರೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ ಶೀತ ನೆಗಡಿ ಫ್ಲೂ ಆವರಿಸುವ ದಿನಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಈ ಅನಾರೋಗ್ಯಗಳಿಗೆ ಒಳಗಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕು.

  ಆಹಾರಾಭ್ಯಾಸದಲ್ಲಿ ಬದಲಾವಣೆ

  ಆಹಾರಾಭ್ಯಾಸದಲ್ಲಿ ಬದಲಾವಣೆ

  ಅಸ್ತಮಾ ತೊಂದರೆ ಇರುವ ವ್ಯಕ್ತಿಗಳು ತಮ್ಮ ಆಹಾರಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿಟಮಿನ್ ಸಿ, ವಿಟಮಿನ್ ಇ, ಬೀಟಾ ಕ್ಯಾರೋಟೀನ್, ಫ್ಲೇವಾನಾಯ್ಡುಗಳು, ಮೆಗ್ನೀಶಿಯಂ, ಒಮೆಗಾ ೩ ಕೊಬ್ಬಿನ ಆಮ್ಲ ಹಾಗೂ ಸೆಲೆನಿಯಂ ಈ ವ್ಯಕ್ತಿಗಳಿಗೆ ಹೆಚ್ಚು ಅಗತ್ಯವಿರುತ್ತದೆ. ಈ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಸಾಕಷ್ಟು ಸಾವಯವ ವಿಧಾನದಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳು, ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿರುವ ಆಹಾರಗಳು, ಉದಾಹರಣೆಗೆ ಅಗಸೆ ಬೀಜ, ಸಾಲ್ಮನ್ ಮತ್ತು ಟ್ಯೂನಾ ಮೀನು ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಬೇಕು. ಡೈರಿ ಉತ್ಪನ್ನಗಳು ಹಾಗೂ ಸಂಸ್ಕರಿತ ಮತ್ತು ಪ್ಯಾಕೆಟ್ಟುಗಳಲ್ಲಿ ಲಭಿಸುವ ಸಿದ್ಧ ಆಹಾರಗಳ ಸೇವನೆಯಿಂದ ಆದಷ್ಟೂ ದೂರವಿರಬೇಕು.

  ಆರ್ದ್ರಕಗಳು (Humidifiers)

  ಆರ್ದ್ರಕಗಳು (Humidifiers)

  ಈ ಉಪಕರಣಗಳು ಕೋಣೆಯಲ್ಲಿ ಆರ್ದ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಗಾಳಿಯನ್ನು ಹೆಚ್ಚು ಹೆಚ್ಚು ತೇವವಾಗಿಸುತ್ತವೆ. ಆರ್ದ್ರತೆಯ ಅಗತ್ಯವುಳ್ಳ ವ್ಯಕ್ತಿಗಳಿಗೆ ಹೆಚ್ಚಿನ ಆರ್ದ್ರತೆ ಉತ್ತಮವಾದರೂ ಅಸ್ತಮಾ ರೋಗಿಗಳಿಗೆ ಇದು ಒಳ್ಳೆಯದಲ್ಲ. ಏಕೆಂದರೆ ಗಾಳಿಯಲ್ಲಿ ತೇವಾಂಶ ಹೆಚ್ಚಿದಷ್ಟೂ ಧೂಳಿನ ಕ್ರಿಮಿಗಳೂ ಈ ತೇವಾಂಶ ಸಂಗ್ರಹವಾದಲ್ಲಿ ಹೆಚ್ಚು ಹೆಚ್ಚು ಬೆಳೆಯುತ್ತವೆ. ಹಾಗಾಗಿ ಅಸ್ತಮಾ ರೋಗಿಗಳಿರುವಲ್ಲಿ ಈ ಉಪಕರಣಗಳನ್ನು ಉಪಯೋಗಿಸುವುದು ಅನಿವಾರ್ಯವಾಗಿದ್ದರೆ ಇವುಗಳ ಹೊರಸೂಸುವಿಕೆಯ ಪ್ರಮಾಣವನ್ನು 30 ಹಾಗೂ 45 % ದ ನಡುವೆ ಇರುವಂತೆ ಅಳವಡಿಸಿಕೊಳ್ಳುವ ಮೂಲಕ ಅಸ್ತಮಾಘಾತದ ಸಾಧ್ಯತೆಯಿಂದ ರಕ್ಷಣೆ ಪಡೆಯಬಹುದು.

  English summary

  10 Tips To Prevent Asthma Attacks

  Asthma is a disease that occurs due to a combination of genetic and environmental factors. It happens when there is an obstruction in the flow of air in the lungs. This makes breathing difficult and leads to coughing, wheezing and shortness of breath. In this article, we will be discussing about the tips to prevent asthma attacks. Breathing triggers inflammation in the airways, which can lead to an asthma attack. These attacks are the result of airway inflammation, which leads to the swelling of the lining of the airways, bronchospasm, and secretion of mucus. These factors cause the airways to become narrow and restrict the airflow.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more