For Quick Alerts
ALLOW NOTIFICATIONS  
For Daily Alerts

ಒಸಡುಗಳಿಂದ ರಕ್ತ ಬರುತ್ತಿದ್ದರೆ ತಕ್ಷಣ ಏನು ಮಾಡಬೇಕು?

By Arshad
|

ಪ್ರತಿದಿನ ಬೆಳಿಗ್ಗೆದ್ದಾಗ ಅದು ದೇವರು ನಮಗೆ ನೀಡಿದ ಜೀವನದ ಇನ್ನೊಂದು ಅವಕಾಶವಂತೆ. ರಾತ್ರಿಯ ಅನೈಚ್ಛಿಕ ಚಟುವಟಿಕೆಗಳಿಂದ ನಮ್ಮ ಬಾಯಿಯಲ್ಲಿಯೂ ಕೆಲವಾರು ಬದಲಾವಣೆಗಳು ಕಂಡುಬರುತ್ತದೆ. ವಿಶೇಷವಾಗಿ ಆಹಾರ ಕೊಳೆತು ಬಾಯಿಯಿಂದ ಹೊರಡುವ ದುರ್ವಾಸನೆ. ಆದ್ದರಿಂದ ಬೆಳಿಗ್ಗೆದ್ದ ತಕ್ಷಣ ಹಲ್ಲುಜ್ಜಿಕೊಳ್ಳುವುದನ್ನು ಪ್ರಥಮ ಕಾರ್ಯವಾಗಿಸುವುದು ಅಗತ್ಯ. ಒಂದು ವೇಳೆ ಈ ನಿತ್ಯಕರ್ಮದಲ್ಲಿ ನಮ್ಮ ಹಲ್ಲುಜ್ಜುವ ಬ್ರಶ್ ನಲ್ಲಿ ರಕ್ತ ಕಂಡುಬಂದರೆ? ರಕ್ತ ನೋಡಿದಾಕ್ಷಣ ನಮಗೆ ತಲೆ ತಿರುಗಬಹುದು. ವಾಸ್ತವದಲ್ಲಿ ನಮ್ಮಲ್ಲಿ ಹೆಚ್ಚಿನವರು ತಮ್ಮ ಬಾಯಿ, ಹಲ್ಲು, ಒಸಡುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ.

ನಾವೆಲ್ಲಾ ಒಳ್ಳೆಯ ಗುಣಮಟ್ಟದ ಪೇಸ್ಟ್ (ಕಟ್ಟ ಕಡೆಯ ತೊಟ್ಟಿನವರೆಗೂ ಹಿಂಡಿ ಹೀರಿ) ಬಳಸುತ್ತೇವೆ ಹಾಗೂ ಅಸಡಾ ಬಸಡಾ ಬ್ರಶ್ ನಿಂದ ಉಜ್ಜಿಕೊಂಡು ಮುಕ್ಕಳಿಸಿದರೆ ಮುಗಿಯಿತು. ಇದರಿಂದ ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸಿದಂತಾಯಿತೇ ವಿನಃ ಒಸಡುಗಳನ್ನಲ್ಲ. ಅಲ್ಲದೇ ಕೆಲವೊಮ್ಮೆ ಸೋಮಾರಿತನದಿಂದ ಹಲ್ಲುಜ್ಜಿಕೊಳ್ಳದೇ ಮಲಗುವುದು ಅಥವಾ ಎದ್ದ ಬಲುಹೊತ್ತಿನವರೆಗೆ ಹಲ್ಲುಜ್ಜಿಕೊಳ್ಳದೇ ಇರುವುದು ಮೊದಲಾದವು ಒಸಡುಗಳಲ್ಲಿ ಸೋಂಕು ಉಂಟಾಗಲು ಕಾರಣವಾಗಬಹುದು. ಪರಿಣಾಮವಾಗಿ ಒಸಡುಗಳ ಅಂಚುಗಳಿಂದ ರಕ್ತ ಜಿನುಗಲು ಪ್ರಾರಂಭಿಸುತ್ತದೆ. ಇದಕ್ಕೆ ಜಿಂಜಿವೈಟಿಸ್ ಎಂದು ಕರೆಯುತ್ತಾರೆ.

ಹಲ್ಲು ಮತ್ತು ಒಸಡುಗಳ ನಡುವೆ ಇರುವ ಅತಿ ಸೂಕ್ಷ್ಮ ಅಂಚುಗಳಲ್ಲಿ ಆಹಾರಕಣಗಳು ಉಳಿದುಕೊಳ್ಳುತ್ತವೆ. ಇದಕ್ಕೆ ಹಲ್ಲಿನ ಪಿಟ್ಟು (plague) ಎಂದು ಕರೆಯುತ್ತಾರೆ. ಈ ಪಿಟ್ಟು ನಮ್ಮ ಒಸಡುಗಳಲ್ಲಿ ಸದಾ ಅಂಟಿಕೊಳ್ಳುತ್ತಲೇ ಇರುತ್ತದೆ. ಇದನ್ನು ನಿವಾರಿಸಲು ಆಗಾಗ ಮುಕ್ಕಳಿಸಿಕೊಳ್ಳುವುದು ಹಾಗೂ ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಳ್ಳಬೇಕು. ಅಂದ ಹಾಗೆ ದಿನಕ್ಕೆರಡು ಬಾರಿಗಿಂತ ಹೆಚ್ಚು ಬ್ರಶ್ ಮೂಲಕ ಹಲ್ಲುಜ್ಜಿದರೂ ಇದು ಒಸಡುಗಳನ್ನು ಸವೆಸಬಹುದು! ಈ ಪಿಟ್ಟನ್ನು ಆಗಾಗ ತೆಗೆಯದೇ ಇದ್ದರೆ ಇಲ್ಲಿ ಬ್ಯಾಕ್ಟೀರಿಯಾಗಳು ಆಹಾರವನ್ನು ಕೊಳೆಸಿ ಒಸಡುಗಳ ಅಂಚುಗನ್ನು ಹಲ್ಲಿನಿಂದ ಬೇರ್ಪಡಿಸಿ ಅಲ್ಲಿನ ಸೂಕ್ಷ್ಮ ರಕ್ತನಾಳಗಳು ತೆರೆದುಕೊಳ್ಳುವಂತೆ ಮಾಡುತ್ತವೆ. ಇದೇ ರಕ್ತ ಒಸರಲು ಕಾರಣ.

ಒಸಡಿನ ನೋವಿಗೆ ಸಾಂತ್ವನ ನೀಡುವ ಫಲಪ್ರದ ಮನೆಮದ್ದು

ರಕ್ತ ಒಸರಿದಾದ ಹಲ್ಲುಗಳಲ್ಲಿ ಭಾರೀ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡುವುದು ಅಗತ್ಯ. ನಾಳೆ ಹೋಗೋಣ ಎಂದು ನಮ್ಮ ಯಥಾವತ್ತಾದ ನೆಪ ಇಲ್ಲಿ ನಡೆಯದು. ಏಕೆಂದರೆ ಇದು ಉಲ್ಬಣಗೊಂಡರೆ periodontitis ಎಂಬ ಸ್ಥಿತಿ ಎದುರಾಗಬಹುದು. ಇದರಲ್ಲಿ ಹಲ್ಲಿಗೆ ಅಂಟಿಕೊಂಡಿದ್ದ ಒಸಡು ನಿಧಾನವಾಗಿ ಬಿಟ್ಟುಕೊಳ್ಳುತ್ತಾ ಹಲ್ಲಿನ ಬುಡದವರೆಗೆ ಶಿಥಿಲವಾಗಿ ಹಲ್ಲು ಸುಲಭವಾಗಿ ಬುಡಸಹಿತ ಕಿತ್ತು ಬರಬಹುದು. ಅಷ್ಟೇ ಅಲ್ಲ, ಆಹಾರ ಅಗಿಯುವಾಗ ನೋವು ಅಥವಾ ಹಲ್ಲು ಜುಮ್ಮೆನ್ನಿಸಬಹುದು. ಈ ಸ್ಥಿತಿಯನ್ನು ಸರಿಪಡಿಸಲು ದಂತವೈದ್ಯರು ಕೆಲವು ಆಂಟಿ ಬಯೋಟಿಕ್ ಗಳನ್ನು ನೀಡಬಹುದು. ಆದರೆ ಇದರ ಪರಿಣಾಮ ಕಂಡುಬರಲು ಕೊಂಚ ಕಾಲ ಕಾಯಬೇಕಾಗಿ ಬರಬಹುದು. ಈ ಪರಿಸ್ಥಿತಿಗೆ ಒಳಗಾದರೆ ಇದನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ನೋಡೋಣ....

ಉಪ್ಪುನೀರಿನ ಮುಕ್ಕಳಿಕೆ

ಉಪ್ಪುನೀರಿನ ಮುಕ್ಕಳಿಕೆ

ಎಲ್ಲಕ್ಕೂ ಮೊದಲು ಮಾಡಬೇಕಾದ ಕಾರ್ಯವೆಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಉಪ್ಪು (ಕಲ್ಲುಪ್ಪು ಆದರೆ ಉತ್ತಮ) ಹಾಕಿ ಬಾಯಿಯನ್ನು ಮುಕ್ಕಳಿಸುವುದು. ಇದರಿಂದ ತೆರೆದುಕೊಂಡಿದ್ದ ರಕ್ತನಾಳಗಳು ಮುಚ್ಚಲು ಹಾಗೂ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಪುದಿನಾ ಎಣ್ಣೆ

ಪುದಿನಾ ಎಣ್ಣೆ

ಈ ಎಣ್ಣೆ ಒಸಡುಗಳ ತೊಂದರೆಗಳಿಗೆ ಹೇಳಿ ಮಾಡಿಸಿದಂತಹ ಔಷಧಿಯಾಗಿದೆ. ಇದೇ ಕಾರಣಕ್ಕೆ ಹಲವಾರು ದಂತ ಪ್ರಸಾದನಗಳಲ್ಲಿ ಇದನ್ನು ಬಳಸಲಾಗುತ್ತದೆ. ವಿಶೇಷವಾಗಿ ಈ ಎಣ್ಣೆ ಬ್ಯಾಕ್ಟೀರಿಯಾಗಳನ್ನು ಕೊಂದು ಊತವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಅಲ್ಲದೇ ಇದರ ಸುವಾಸನೆ ಬಾಯಿಯ ದುರ್ವಾಸನೆಯನ್ನು ದೂರವಾಗಿಸುತ್ತದೆ. ಉಪ್ಪುನೀರಿನಿಂದ ಮುಕ್ಕಳಿಸಿದ ಬಳಿಕ ಈ ಎಣ್ಣೆಯನ್ನು ಕೊಂಚವೇ ಒಸಡುಗಳ ಮೇಲೆ ಹಚ್ಚಿ ಬೆರಳುಗಳಿಂದ ನಯವಾಗಿ ಮಸಾಜ್ ಮಾಡಿದರೆ ಸಾಕು, ನೋವು ಕಡಿಮೆಯಾಗುತ್ತದೆ ಹಾಗೂ ಶೀಘ್ರವಾಗಿ ಗುಣವಾಗುತ್ತದೆ.

ದಾಲ್ಚಿನ್ನಿ ಪುಡಿ

ದಾಲ್ಚಿನ್ನಿ ಪುಡಿ

ಚೆಕ್ಕೆ ಎಂದು ನಾವು ಅಡುಗೆ ಮನೆಯಲ್ಲಿ ಉಪಯೋಗಿಸುವ ಪುಡಿಯಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಗುಣವಿದೆ. ಇದು ಹಲ್ಲುಗಳು ಕೊಳೆಯುವುದರಿಂದ ರಕ್ಷಿಸಿ ಹಲ್ಲಿನ ಪಿಟ್ಟ ನಿವಾರಣೆಯಾಗಲು ನೆರವಾಗುತ್ತದೆ. ಇದರಿಂದ ಜಿಂಜಿವೈಟಿಸ್ ತೊಂದರೆ ಇಲ್ಲವಾಗುತ್ತದೆ. ಅಲ್ಲದೇ ಬಾಯಿಯ ದುರ್ವಾಸನೆಯನ್ನೂ ನಿವಾರಿಸುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿಯನ್ನು ಕೊಂಚವೇ ನೀರಿನೊಂದಿಗೆ ಬೆರೆಸಿ ಇದನ್ನು ಒಸಡುಗಳಿಗೆ ಹಚ್ಚಿಕೊಳ್ಳಿ. ಕೊಂಚ ಉರಿಯಬಹುದು, ಎರಡು ನಿಮಿಷದ ಬಳಿಕ ತಣ್ಣೀರಿನಿಂದ ಮುಕ್ಕಳಿಸಿ ನಿವಾರಿಸಿ.

ಹಾಲಿನ ಉತ್ಪನ್ನಗಳನ್ನು ಸೇವಿಸಿ

ಹಾಲಿನ ಉತ್ಪನ್ನಗಳನ್ನು ಸೇವಿಸಿ

ಹಲ್ಲು ಮತ್ತು ಮೂಳೆಗಳಿಗೆ ಕ್ಯಾಲ್ಸಿಯಂ ಹೆಚ್ಚು ಅಗತ್ಯವಿರುತ್ತದೆ. ಅಲ್ಲದೇ ಒಸಡು ಮತ್ತು ಹಲ್ಲುಗಳ ಅಂಚುಗಳು ಬಿಗಿಯಾಗಿ ಹಿಡಿದುಕೊಂಡಿರಲು ಸಹಾ ಕ್ಯಾಲ್ಸಿಯಂ ಅಗತ್ಯ. ಇದು ಸಡಿಲವಾದರೆ ಇಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳುತ್ತವೆ. ಪರಿಣಾಮವಾಗಿ ಊತ, ಕೆಂಪಗಾಗುವುದು ಹಾಗೂ ರಕ್ತ ಒಸರುವುದು ಕಂಡುಬರುತ್ತವೆ. ಆದ್ದರಿಂದ ನಿತ್ಯವೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಉತ್ತಮ. ಹಾಲನ್ನು ಹಾಗೇ ಕುಡಿಯುವ ಬದಲು ಕೊಂಚ ಜೇನು ಸೇರಿಸಿ ಹಾಗೂ ಉಪಾಹಾರದಲ್ಲಿ ಕೊಂಚ ಚೀಸ್ ಇರುವಂತೆ ನೋಡಿಕೊಳ್ಳಬೇಕು.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಇದು ಉತ್ತಮ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಈ ಎಣ್ಣೆಯನ್ನು ಒಸಡುಗಳ ಮೇಲೆ ಮಸಾಜ್ ಮಾದುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ತೆರೆದುಕೊಂಡಿದ್ದ ಒಸಡುಗಳ ಅಂಚುಗಳು ಮತ್ತೆ ಕೂಡಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಇಲ್ಲಿ ಉಂಟಾಗಿದ್ದ ಸೋಂಕು ಇಲ್ಲವಾಗಿ ಇತರೆಡೆ ಹರಡದಂತೆ ರಕ್ಷಣೆ ಒದಗಿಸುತ್ತದೆ. ಮಸಾಜ್ ಮಾಡಿದ ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ಒಂದು ಲೋಟ ನೀರಿಗೆ ಕೆಲವು ಹನಿ ಎಣ್ಣೆಯನ್ನು ಬೆರೆಸಿ ಮುಕ್ಕಳಿಸಬೇಕು.

ಗೊಂಡೆಹೂವಿನ ದಳಗಳು

ಗೊಂಡೆಹೂವಿನ ದಳಗಳು

ಗೊಂಡೆಹೂವು (Marigold/Calendula) ಗಳಲ್ಲಿಯೂ ಉತ್ತಮ ಔಷಧೀಯ ಗುಣಗಳಿವೆ. ಇದರ ಉರಿಯೂತ ನಿವಾರಕ ಹಾಗೂ ಪರಾವಲಂಬಿ ನಿವಾರಕ ಗುಣ ಹಲ್ಲುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ ಹಾಗೂ ಪಿಟ್ಟ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ. ಅಲ್ಲದೇ ಇದರಲ್ಲಿ ದೇಹದ ಕಲ್ಮಶಗಳನ್ನು ನಿವಾರಿಸುವ ಹಾಗೂ ರಕ್ತವನ್ನು ಶುದ್ದೀಕರಿಸುವ ಗುಣವಿದೆ. ಒಸಡುಗಳನ್ನು ಬಲಪಡಿಸಿ ಹಲ್ಲುಗಳನ್ನು ಗಟ್ಟಿಯಾಗಿಸಲೂ ಈ ಹೂವು ನೆರವಾಗುತ್ತದೆ. ಇದಕ್ಕಾಗಿ ತಾಜಾ ಹೂವಿನ ಕೆಲವು ದಳಗಳನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಉಗುರುಬೆಚ್ಚಗಾಗುವಷ್ಟು ತಣಿಸಿದ ಬಳಿಕ ಸೋಸಿ ಈ ನೀರಿನಿಂದ ಬಾಯಿಯನ್ನು ಆಗಾಗ ಮುಕ್ಕಳಿಸಿಕೊಳ್ಳುತ್ತಿರಬೇಕು.

ಎಣ್ಣೆಯಿಂದ ಮುಕ್ಕಳಿಸುವ ಚಿಕಿತ್ಸೆ (Oil Pulling)

ಎಣ್ಣೆಯಿಂದ ಮುಕ್ಕಳಿಸುವ ಚಿಕಿತ್ಸೆ (Oil Pulling)

ಇದು ಭಾರತದ ಅತ್ಯಂತ ಪುರಾತನಾ ಚಿಕಿತ್ಸಾ ವಿಧಾನವಾಗಿದ್ದು ಬಾಯಿಯ ಆರೋಗ್ಯವನ್ನು ಉಳಿಸಿಕೊಳ್ಳಲು ಬಳಸಲ್ಪಡುತ್ತಾ ಬಂದಿದೆ. ಇದರಲ್ಲಿ ಕೆಲವಾರು ಅವಶ್ಯಕ ತೈಲಗಳನ್ನು ಬಾಯಿಯೊಳಗೆ ಸುಮಾರು ಐದು ನಿಮಿಷಗಳ ಕಾಲ ಮುಕ್ಕಳಿಸಿಕೊಳ್ಳುತ್ತಾ ಇರುವ ಮೂಲಕ ಹಲ್ಲುಗಳ ನಡುವೆ ಸಿಲುಕಿರುವ ಕಣಗಳನ್ನು ನಿವಾರಿಸಲಾಗುತ್ತದೆ. ಇದರಿಂದ ಹಲ್ಲುಗಳ ನಡುವೆ ಅಡಗಿದ್ದ ಬ್ಯಾಕ್ಟೀರಿಯಾಗಳೂ ದೂಡಲ್ಪಡುತ್ತವೆ ಹಾಗೂ ಹಲ್ಲುಗಳು ಗಟ್ಟಿಯಾಗುತ್ತವೆ. ಬಾಯಿಯ ದುರ್ವಾಸನೆ ಇಲ್ಲವಾಗಿ ಒಸಡುಗಳೂ ಆರೋಗ್ಯಕರವಾಗಿರುತ್ತವೆ. ಪುರಾತನ ವಿಧಾನದಲ್ಲಿ ಕೊಬ್ಬರಿ ಎಣ್ಣೆ ಬಳಸಲಾಗುತ್ತಿತ್ತು. ಬದಲಿಗೆ ಆಲಿವ್ ಎಣ್ಣೆಯನ್ನೂ ಬಳಸಬಹುದು. ಉತ್ತಮ ಪರಿಣಾಮಕ್ಕಾಗಿ ತಲಾ ಅರ್ಧ ಚಿಕ್ಕ ಚಮಚದಷ್ಟು ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆ, ಕೆಲವು ಹನಿ ಟೀ ಟ್ರೀ ಆಯಿಲ್ ಬೆರೆಸಿ ನೇರವಾಗಿ ಬಾಯಿಗೆ ಹಾಕಿಕೊಂಡು ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಬಾಯಿಯೊಳಗೇ ಇರುವಂತೆ ಮುಕ್ಕಳಿಸಿಕೊಳ್ಳುತ್ತಿರಬೇಕು ಹಾಗೂ ನುಂಗಬಾರದು. ಮೊದಮೊದಲು ಕನ್ನೆಗಳು ನೋಯತೊಡಗುತ್ತವೆ. ಕ್ರಮೇಣ ಇದು ಅಭ್ಯಾಸವಾಗುತ್ತದೆ.(ಪತ್ನಿಯರು ಇನ್ನೂ ಹೆಚ್ಚು ಹೊತ್ತು ಮುಕ್ಕಳಿಸಬೇಕೆಂದು ಪತಿಯರು ಆಗ್ರಹಿಸುತ್ತಿದ್ದಾರೆ!)

ಕ್ಯಾರೆಟ್ ಮೊದಲಾದ ಆಹಾರ ಜಗಿಯಿರಿ

ಕ್ಯಾರೆಟ್ ಮೊದಲಾದ ಆಹಾರ ಜಗಿಯಿರಿ

ಕ್ಯಾರೆಟ್, ಹಸಿ ಪೇರಲೆ, ಗಟ್ಟಿಯಗಿರುವ ಸೇಬು ಮೊದಲಾದವನ್ನು ಜಗಿಯುವಾಗ ಕರಕುರ ಸದ್ದು ಬರುತ್ತದೆ. ಈ ಬಗೆಯ ಆಹಾರಗಳನ್ನು ಹಸಿಯಾಗಿ ಜಗಿದು ನುಂಗುವ ಮೂಲಕ ಹಲ್ಲುಗಳ ನಡುವೆ ಇರುವ ಆಹಾರಕಣಗಳೂ ಸಡಿಲವಾಗಿ ನಿವಾರಣೆಯಾಗುತ್ತವೆ. ಅಲ್ಲದೇ ಬಾಯಿಯ ದುರ್ವಾಸನೆಯೂ ಇಲ್ಲವಾಗುತ್ತದೆ. ಈ ಹಸಿ ತರಕಾರಿಗಳಲ್ಲಿ ವಿಟಮಿನ್ ಸಿ ಮತ್ತು ಡಿ ಉತ್ತಮ ಪ್ರಮಾಣದಲ್ಲಿವೆ. ಇವು ಜಿಂಜಿವೈಟಿಸ್ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ. ಅಲ್ಲದೇ ರಕ್ತಪರಿಚಲನೆ ಹೆಚ್ಚಿಸಿ ತೆರೆದ ರಕ್ತನಾಳಗಳನ್ನು ಮುಚ್ಚುವ ಮೂಲಕ ರಕ್ತ ಒಸರುವುದು ಹಾಗೂ ಹಲ್ಲುಗಳಲ್ಲಿ ಜುಮ್ಮೆನ್ನಿಸುವುದನ್ನೂ ಇಲ್ಲವಾಗಿಸುತ್ತದೆ. ಕ್ಯಾರೆಟ್, ಮೂಲಂಗಿ ಟೊಮಾಟೋ ಮೊದಲಾದವುಗಳನ್ನು ಊಟಕ್ಕೂ ಮುನ್ನ ಕೊಂಚ ಸೇವಿಸಿದರೆ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ.

English summary

What To Do When You Have Bleeding Gums?

Waking up in the morning after a good night's sleep is just divine. But our morning breath just makes us head straight to the bathroom and grab the toothbrush. This everyday routine may suddenly turn into a nightmare when we notice blood on our tooth brush. A lot of us do not take oral health seriously. All we do is brush regularly with a good toothpaste, which will help fight cavities. We do nothing for our gums which are as important to us as our teeth. Not taking regular care of our oral hygiene can lead to infections in our gums known as Gingivitis or more commonly, bleeding gums.
X
Desktop Bottom Promotion