For Quick Alerts
ALLOW NOTIFICATIONS  
For Daily Alerts

ಮೆದುಳಿನ ಕ್ಯಾನ್ಸರ್! ಆವರಿಸುವ ಪ್ರಾರಂಭಿಕ ಸೂಚನೆಗಳು

By Arshad
|

ಮೆದುಳಿಲ್ಲದವರಿಗೆ ಮೆದುಳಿನ ಕ್ಯಾನ್ಸರ್ ಬರುವುದಿಲ್ಲವಂತೆ. ನಗೆಹನಿ ಎಂದು ಅಲಕ್ಷಿಸುವ ವಿಷಯವಲ್ಲವಿದು. ಏಕೆಂದರೆ ಮೆದುಳಿನ ಕ್ಯಾನ್ಸರ್ ಯಾರಿಗೂ ಆವರಿಸಬಹುದು. ಮೆದುಳಿನ ಕೆಲವು ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆ ಪಡೆದು ಗಡ್ಡೆಯ ರೂಪ ತಾಳುವುದೇ ಮೆದುಳಿನ ಕ್ಯಾನ್ಸರ್ ಆಗಿದ್ದು ಮೆದುಳಿನ ಕ್ಷಮತೆಯನ್ನೇ ಉಡುಗಿಸುವ ಗಂಭೀರವಾದ ಕಾಯಿಲೆಯಾಗಿದೆ. ಮೆದುಳಿನ ಕ್ಯಾನ್ಸರ್‌‌ಗೆ ಮೆದುಳಿನ ಜೀವಕೋಶಗಳೇ ಗಡ್ಡೆಯ ರೂಪ ತಳೆದಿರಬಹುದು ಅಥವಾ ಮೆದುಳಿಗೆ ಅಂಟಿಕೊಂಡಿರುವ ಇತರ ಅಂಗಗಳ ಜೀವಕೋಶಗಳು ಬೆಳೆದು ಬಂದು ಮೆದುಳಿಗೂ ಹರಡಿರಬಹುದು.

ಮೆದುಳಿನ ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳು

ಮೆದುಳಿನ ಕ್ಯಾನ್ಸರ್ ಒಮ್ಮೆಲೇ ಆವರಿಸುವುದಿಲ್ಲ. ಬದಲಿಗೆ ನಿಧಾನವಾಗಿ ಒಂದು ಜೀವಕೋಶದಿಂದ ಬೆಳೆಯುತ್ತಾ ಗಡ್ಡೆಯರೂಪ ತಳೆಯಲು ಕೆಲವು ವರ್ಷಗಳೇ ಬೇಕಾಗಬಹುದು. ಆದ್ದರಿಂದ ಪ್ರಾರಂಭಿಕ ಹಂತದಲ್ಲಿದ್ದಾಗಲೇ ಇದರ ಇರುವಿಕೆಯನ್ನು ಕಂಡುಕೊಂಡು ತಕ್ಷಣ ಚಿಕಿತ್ಸೆ ಪ್ರಾರಂಭಿಸಿದರೆ ಇದರ ಬೆಳವಣಿಗೆಯನ್ನು ನಿಯಂತ್ರಿಸಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸಬಹುದು. ಬನ್ನಿ, ಕ್ಯಾನ್ಸರ್ ಆವರಿಸುವ ಪ್ರಾರಂಭಿಕ ಸೂಚನೆಗಳ ಬಗ್ಗೆ ಅರಿಯೋಣ...

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ಒಂದು ವೇಳೆ ಹೊಟ್ಟೆಯಲ್ಲಿರುವುದನ್ನೆಲ್ಲಾ ಹೊರಹಾಕುವಷ್ಟು ಪ್ರಬಲವಾದ ವಾಕರಿಕೆ ಮತ್ತು ಇದನ್ನು ತಡೆಯಲಾರದೇ ವಾಂತಿಯಾಗುವುದು, ಇದಕ್ಕೆ ಸೂಕ್ತ ಕಾರಣವನ್ನು ನೀಡಲು ವಿಫಲವಾದರೆ ಇದಕ್ಕೆ ಮೆದುಳಿನಲ್ಲಿರುವ ಗಡ್ಡೆ ಕಾರಣವಾಗಿರಬಹುದು. ಏಕೆಂದರೆ ಮೆದುಳಿನಲ್ಲಿರುವ ಗಡ್ಡೆ ಮೆದುಳಿನ ಭಾಗಗಳ ಮೇಲೆ ಒತ್ತಡವನ್ನು ಹೇರುತ್ತಾ ಅನಗತ್ಯವಾಗಿ ವಾಂತಿಯಾಗುವಂತಹ ಸೂಚನೆಗಳನ್ನು ನೀಡುತ್ತದೆ. ಸಾಮಾನ್ಯವಾಗಿ ವಾಂತಿ ವಾಕರಿಕೆಯೊಂದಿಗೇ ತಲೆತಿರುವುಗುವುದು, ಸುಸ್ತಾಗಿ ಬೀಳುವಂತಾಗುವುದು ಸಹಾ ಇತರ ಲಕ್ಷಣಗಳಾಗಿವೆ. ಕೆಲವೊಮ್ಮೆ ಮಲಗಿದ್ದಾಗ ತಕ್ಷಣವೇ ಮಗ್ಗುಲು ಬದಲಿಸಿದಾಗ ಈ ಸೂಚನೆ ಕಾಣಿಸಿಕೊಂಡರೆ ಅಥವಾ ವಾಂತಿಯಾದರೆ ಇದು ಕ್ಯಾನ್ಸರ್‌ನ ಲಕ್ಷಣಗಳಾಗಿರುವ ಸಾಧ್ಯತೆ ಇದೆ. ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

ಕಣ್ಣು ಮಂಜಾಗುವುದು

ಕಣ್ಣು ಮಂಜಾಗುವುದು

ಪ್ರಾರಂಭಿಕ ಸೂಚನೆಗಳಲ್ಲಿ ಕಣ್ಣು ಮಂಜಾಗುವುದು ಅಥವಾ ಮುಂದಿನ ದೃಶ್ಯ ಸ್ಪಷ್ಟವಾಗಿರದೇ ಇರುವುದು ಸಹಾ ಒಂದು. ಸಾಮಾನ್ಯವಾಗಿ ಕಣ್ಣು ಮಂಜಾಗುವುದು ವಯಸ್ಸಿಗನುಗುಣವಾಗಿದ್ದರೂ ಈ ತೊಂದರೆ ಕನ್ನಡಕ ಬಳಸುವ ಮೂಲಕ ಸರಿಯಾಗುತ್ತದೆ. ಆದರೆ ಕ್ಯಾನ್ಸರ್ ಕಾರಣವಾಗಿದ್ದರೆ ಕಣ್ಣು ಮಂಜಾಗುವ ಪ್ರಮಾಣದಲ್ಲಿಯೂ ಏರಿಳಿತ ಕಾಣುತ್ತಿದ್ದು ಕನ್ನಡಕವನ್ನು ತೊಟ್ಟರೂ ಸರಿಯಾಗಿ ತೋರುವುದಿಲ್ಲ ಅಥವಾ ಹಲವಾರು ಬಾರಿ ಬದಲಿಸಬೇಕಾಗಿ ಬರುತ್ತದೆ. ಈ ಪರಿಸ್ಥಿತಿಯಲ್ಲಿ ಮೆದುಳಿನ ತಪಾಸಣೆಗೆ ಒಳಪಟ್ಟು ಸೂಕ್ತ ಸಲಹೆ ಪಡೆಯಬೇಕು. ಕಣ್ಣು ಮಂಜಾಗುವ ಜೊತೆಗೇ ಕಣ್ಣಿಗೆ ಕಾಣುವ ದೃಶ್ಯದಲ್ಲಿ ಚುಕ್ಕೆಗಳು ಅಥವಾ ವೃತ್ತಗಳು ತೇಲುತ್ತಿರುವಂತೆ, ಕೇಂದ್ರದ ಭಾಗ ಹೆಚ್ಚು ಪ್ರಕಾಶಮಾನವಾಗಿ ಮತ್ತು ಅಂಚಿನ ಭಾಗ ಕಪ್ಪಗಾಗಿದ್ದು ಒಂದು ಗುಹೆಯೊಳಗೆ ಹೋಗುತ್ತಿರುವಂತೆ ಅನ್ನಿಸಿದರೆ ಇದು ಮೆದುಳಿನ ಗಡ್ಡೆಯ ಸ್ಪಷ್ಟ ಸೂಚನೆಯಾಗಿದೆ. ಮೆದುಳಿನ ಗಡ್ಡೆ ಯಾವ ಭಾಗದಲ್ಲಿ ಆವರಿಸಿದೆ ಎಂಬ ಮಾಹಿತಿಯ ಮೇಲೆ ಈ ಲಕ್ಷಣಗಳು ಬದಲಾಗುತ್ತವೆ. ಒಂದು ವೇಳೆ ದೃಷ್ಟಿನರ ಅಥವಾ ದೃಷ್ಟಿಯನ್ನು ಗ್ರಹಿಸುವ ಮೆದುಳಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿದ್ದರೆ ಈ ಸೂಚನೆಗಳು ಕಂಡುಬರುತ್ತವೆ.

ಸ್ಮರಣ ಶಕ್ತಿ ಕುಂದುವುದು

ಸ್ಮರಣ ಶಕ್ತಿ ಕುಂದುವುದು

ಮೆದುಳಿನ ಕ್ಯಾನ್ಸರ್ ಆವರಿಸುತ್ತಿರುವ ಪ್ರಾರಂಭಿಕ ಹಂತದಲ್ಲಿ ಸ್ಮರಣಶಕ್ತಿ ಹಾಗೂ ತಾರ್ಕಿಕ ಶಕ್ತಿ ಕುಂದುವು ಸಹಾ ಪ್ರಮುಖ ಲಕ್ಷಣವಾಗಿದೆ. ಏಕಾಗ್ರತೆಯ ಕೊರತೆ ಹಾಗೂ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುವುದು, ಯೋಚನಾ ಶಕ್ತಿ ಕುಂದುವುದು ಹಾಗೂ ತಮಗೆ ದೊರೆತ ಸೂಚನೆಗಳನ್ನು ಪಾಲಿಸಲು ಅಸಮರ್ಥರಾಗುವುದು ಸಹಾ ಮೆದುಳಿನಲ್ಲಿ ಗಡ್ಡೆ ಬೆಳೆಯುತ್ತಿರುವ ಸಂಕೇತವಾಗಿವೆ.

ತಲೆನೋವು

ತಲೆನೋವು

ಸಾಮಾನ್ಯವಾಗಿ ಮೈಗ್ರೇನ್ ತಲೆನೋವಿನ ಹೊರತು ಇತರ ತಲೆನೋವುಗಳು ಗರಿಷ್ಟ ಒಂದು ದಿನ ಕಾಡುತ್ತವೆ. ಹಾಗಾಗಿ ಇವುಗಳ ಬಗ್ಗೆ ಹೆಚ್ಚು ಚಿಂತಿಸುವುದು ಅವಶ್ಯವಿಲ್ಲ. ಆದರೆ ಒಂದು ವೇಳೆ ತಲೆನೋವು ಸತತವಾಗಿದ್ದರೆ, ಪ್ರತಿದಿನ ಬೆಳಿಗ್ಗೆದ್ದಾಗಲೇ ಭಾರೀ ತಲೆನೋವು ಇರುವುದು ಕಂಡುಬಂದರೆ ಮಾತ್ರ ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಅಲ್ಲದೇ ಈ ತಲೆನೋವು ಇಡಿಯ ದಿನ ಇರುತ್ತದೆ ಹಾಗೂ ಇದರ ಗತಿ ತೀವ್ರವಾಗಿಯೂ ಇರುತ್ತದೆ. ಗುಳಿಗೆಗಳಿಗೆ ಮೊರೆಹೋಗುವ ಬದಲು ತಕ್ಷಣ ವೈದ್ಯರನ್ನು ಕಾಣುವುದು ಅಗತ್ಯ.

ಸ್ನಾಯುಗಳ ಶಕ್ತಿಗುಂದುವುದು

ಸ್ನಾಯುಗಳ ಶಕ್ತಿಗುಂದುವುದು

ಒಂದು ವೇಳೆ ಮೆದುಳಿನ ಗಡ್ಡೆ ತೀವ್ರವಾಗಿದ್ದರೆ ಇದರ ಪರಿಣಾಮವಾಗೆ ದೇಹದ ಸ್ನಾಯುಗಳು ಶಿಥಿಲಗೊಳ್ಳುತ್ತವೆ. ಇದು ದೇಹದ ಯಾವುದಾದರೊಂದು ಭಾಗದ ಸ್ನಾಯುಗಳನ್ನು ಆವರಿಸಬಹುದು ಅಥವಾ ದೇಹದ ಒಂದು ಭಾಗವನ್ನೇ ಆವರಿಸಬಹುದು. ಈ ಸ್ನಾಯುಗಳಿಗೆ ಮೆದುಳಿನಿಂದ ಬರುವ ಸೂಚನೆಗಳು ಇಲ್ಲವಾದುದರಿಂದ ಇವುಗಳಲ್ಲಿ ಸಂವೇದನೆ ಇಲ್ಲವಾಗಿ ಮರಗಟ್ಟಿದಂತಿರುತ್ತದೆ. ಒಂದು ವೇಳೆ ಮೆದುಳಿನಿಂದ ಮೆದುಳುಬಳ್ಳಿಗೆ ಹೊರಡುವ ಸೂಕ್ಷ್ಮನರಗಳು ಈ ಗಡ್ಡೆಯಿಂದ ಪ್ರಭಾವಿತವಾಗಿದ್ದರೆ ಮುಖದ ಭಾವನೆಯನ್ನು ಪ್ರಕಟಿಸುವ ಸ್ನಾಯುಗಳು ಶಿಥಿಲಗೊಂಡು ಮುಖ ವಿಕಾರಗೊಳ್ಳಬಹುದು.

ನಡೆಯಲು ಕಷ್ಟವಾಗುವುದು

ನಡೆಯಲು ಕಷ್ಟವಾಗುವುದು

ಈಗಾಗಲೇ ತಿಳಿಸಿದಂತೆ ಮೆದುಳಿನ ಯಾವ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿತೋ ಆ ಭಾಗ ನಿಯಂತ್ರಿಸುವ ದೇಹದ ಇತರ ಅಂಗಗಳು ಸರಿಯಾಗಿ ಕೆಲಸ ಮಾಡಲು ವಿಫಲವಾಗುತ್ತವೆ. ಒಂದು ವೇಳೆ ಮೆದುಳಿನ ಗಡ್ಡೆ ದೇಹದ ಸಮತೋಲನ, ನಡೆದಾಡುವುದು, ದಿಕ್ಕು ಕಂಡುಕೊಳ್ಳುವುದು ಮೊದಲಾದವುಗಳನ್ನು ನಿಯಂತ್ರಿಸುವ ಭಾಗದಲ್ಲಿ ಆವರಿಸಿಕೊಂಡರೆ ಇದರ ಪರಿಣಾಮವಾಗಿ ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಹಾಗೂ ನಡೆದಾಡಲು, ನಿಲ್ಲಲು ಕಷ್ಟಕರವಾಗುತ್ತದೆ.

ಸುಸ್ತು

ಸುಸ್ತು

ಮೆದುಳಿನ ಕ್ಯಾನ್ಸರ್‌ನ ಪರಿಣಾಮವಾಗಿ ಸುಸ್ತು ಆವರಿಸುತ್ತದೆ ಹಾಗೂ ಈ ಸುಸ್ತು ಎಷ್ಟು ವಿಶ್ರಾಂತಿ ಪಡೆದರೂ ಕಡಿಮೆಯಾಗುವುದಿಲ್ಲ. ಒಂದು ವೇಳೆ ಯಾವುದೇ ಶ್ರಮವಿಲ್ಲದೇ ಸುಸ್ತಾಗುತ್ತಿದ್ದು ಹೆಚ್ಚಿನ ಸಮಯ ಆವರಿಸುತ್ತಿದ್ದರೆ ತಕ್ಷಣ ವೈದ್ಯರನ್ನು ಕಂಡು ಸಲಹೆ ಪಡೆಯಬೇಕು. ಸುಸ್ತಿಗೆ ಕಾರಣವಾದ ಮೆದುಳಿನ ಗಡ್ಡೆ ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ಸರಿಪಡಿಸಲು ಸಾಧ್ಯವಿದೆ ಹಾಗೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ.

ಸ್ನಾಯುಗಳ ಸೆಡೆತ

ಸ್ನಾಯುಗಳ ಸೆಡೆತ

ಕೆಲವೊಮ್ಮೆ ಸ್ನಾಯುಗಳು ಸೆಡೆತಗೊಂಡ ಪರಿಣಾಮವಾಗಿ ಯಾವುದಾದರೊಂದು ಅಂಗ ಮತ್ತೆ ಬಿಡಿಸಲು ಅಸಾಧ್ಯವೆನಿಸುವಷ್ಟು ಮಟ್ಟಿಗೆ ಮಡಚಿಕೊಂಡರೆ ಇದು ಸಹಾ ಮೆದುಳಿನ ಕ್ಯಾನ್ಸರ್ ನ ಸೂಚನೆಯಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಫಿಟ್ಸ್ ಅಥವಾ ಮೂರ್ಛೆರೋಗವೂ ಇದರೊಂದಿಗೆ ಕಾಣಿಸಿಕೊಳ್ಳುತ್ತದೆ. ತಕ್ಷಣವೇ ಚಿಕಿತ್ಸೆ ಪಡೆಯುವ ಮೂಲಕ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಗಡ್ಡೆಯ ಇರುವಿಕೆಯನ್ನು ಕಂಡುಕೊಂಡು ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಇಲ್ಲವಾಗಿಸಬಹುದು.

English summary

Warning Signs Of A Brain Cancer You Should Know

Let us first shed light on what is brain cancer. The cancer cells in the form of tumour formed in the brain tissue are the cause of the brain cancer which is a serious illness that causes hindrance to the functioning of the brain. They may either form directly on the brain tissue or they may spread from other body parts to the brain. Let us have a look at the brain cancer signs that we must know to handle this illness effectively!
X
Desktop Bottom Promotion