Just In
- 1 hr ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 2 hrs ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- News
ಶಿವಾಜಿನಗರದಲ್ಲಿ ಗೆದ್ದ ಕಾಂಗ್ರೆಸ್; ಲಕ್ಷ್ಮಣ ಸವದಿಗೆ ಸಂತಸ!
- Finance
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬಗೇನಾ ಕೋಟ್ಯಧಿಪತಿ?
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Automobiles
ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್
- Sports
ಹೀಗೆ ಫೀಲ್ಡಿಂಗ್ ಮಾಡಿದ್ರೆ ಯಾವ ಮೊತ್ತವೂ ಎದುರಾಳಿಗೆ ಸಾಕಾಗದು!; ಕೊಹ್ಲಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪ್ರತಿದಿನವು ಒಪ್ಪೊತ್ತಿನ ಊಟ ತ್ಯಜಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
ವೈದ್ಯವಿಜ್ಞಾನದ ಪ್ರಕಾರ ಪ್ರತಿ ದಿನಕ್ಕೆ ನಾಲ್ಕು ಹೊತ್ತಿನ ಆಹಾರಗಳನ್ನು ಸೇವಿಸುವುದು ಉತ್ತಮ. ಬೆಳಗ್ಗಿನ ಅಲ್ಪ ಉಪಾಹಾರ, ಮಧ್ಯಾಹ್ನದ ಭೋಜನ, ಸಂಜೆಯ ಅಲ್ಪ ಉಪಾಹಾರ ಮತ್ತು ರಾತ್ರಿಯ ಊಟ. ಇದರಲ್ಲಿ ಮಧ್ಯಾಹ್ನದ ಊಟಕ್ಕೆ ಮಾತ್ರ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಅವಕಾಶವಿದೆ. ಉಳಿದ ಮೂರೂ ಹೊತ್ತಿನಲ್ಲಿ ಅಲ್ಪ ಪ್ರಮಾಣವನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
ನಿಮ್ಮ ಊಟದಲ್ಲಿ ಸಾಕಷ್ಟು ನಾರಿನಂಶ, ಹಣ್ಣು, ಹಸಿಯಾಗಿ ಸೇವಿಸಬಹುದಾದ ತರಕಾರಿ, ಸೊಪ್ಪು, ಹಣ್ಣಿನ ರಸ, ಮಜ್ಜಿಗೆ, ನೀರು ಇರಬೇಕು ಎಂದು ಸೂಚಿಸುತ್ತಾರೆ. ಮಧ್ಯಾಹ್ನದ ಊಟದ ಬಳಿಕ ಕೊಂಚ ಹೊತ್ತು ವಿರಮಿಸಲು ಮತ್ತು ರಾತ್ರಿಯ ಊಟದ ಬಳಿಕ ಕೊಂಚ ದೂರ ನಡೆದಾಡುವಂತೆ ಆಂಗ್ಲ ಸುಭಾಷಿತವೊಂದು ಹೇಳುತ್ತದೆ. (after your lunch rest for a while, after your dinner, walk for a mile).
ಹಿಂದಿನ ದಿನಗಳಲ್ಲಿ ಬಡತನ ಅತೀವವಾಗಿದ್ದಾಗ ಒಪ್ಪೊತ್ತಿನ (ದಿನಕ್ಕೆರಡು ಹೊತ್ತಿನ ಊಟ) ಸಾಮಾನ್ಯವಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ಉಪವಾಸ ಮಾಡಬೇಕೆಂದೇ ಒಂದು ಹೊತ್ತಿನ ಅಥವಾ ಎರಡು ಹೊತ್ತಿನ ಊಟಗಳನ್ನು ಪ್ರಯತ್ನಪೂರ್ವಕವಾಗಿ ತ್ಯಜಿಸುವುದು ಅಥವಾ ಪ್ರಯಾಣ ಮೊದಲಾದ ಕಾರಣಗಳಿಂದ ಅನಿವಾರ್ಯವಾಗಿ ಒಂದು ಅಥವಾ ಎರಡು ಹೊತ್ತಿನ ಊಟಗಳನ್ನು ತ್ಯಜಿಸಬೇಕಾಗಿ ಬರಬಹುದು.
ಈ ಪರಿಸ್ಥಿತಿ ಆಗಾಗ ಅಥವಾ ನಿಯಮಿತವಾದ ಮಧ್ಯಂತರಗಳಲ್ಲಿ ಪಾಲಿಸಿದರೆ ದೇಹಕ್ಕೂ ಒಳ್ಳೆಯದೇ. ಆದರೆ ಪ್ರತಿದಿನವೂ ಒಂದು ಅಥವಾ ಎರಡು ಹೊತ್ತಿನ ಊಟಗಳನ್ನು ಬಿಟ್ಟೇ ಬಿಡುವುದು ಅರೋಗ್ಯಕ್ಕೆ ಹಾನಿಕರವಾಗಿದೆ. ಇದು ಹೇಗೆ ಹಾನಿಕರವಾಗಿದೆ ಎಂದು ತಿಳಿಸುವ ಹತ್ತು ವಿಷಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಎಚ್ಚರ: ಅನಿಯಮಿತ ಆಹಾರ ಅನಾರೋಗ್ಯಕ್ಕೆ ರಹದಾರಿ!

ಹಾರ್ಮೋನುಗಳಲ್ಲಿ ಏರುಪೇರು
ನಮ್ಮ ದೇಹದಲ್ಲಿ ವಯಸ್ಸಿಗೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹಲವು ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಉದಾಹರಣೆಗೆ ಒಮ್ಮೆಲೇ ನಿಮ್ಮ ಎದುರು ಹುಲಿ ಬಂದು ನಿಂತಿದೆ ಎಂದಿಟ್ಟುಕೊಳ್ಳಿ, ಹೆದರಿಕೆಯಿಂದ ನಿಮ್ಮ ಮೈ ಬೆವೆತು ಆ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚದಾಗುತ್ತದೆ. ಎದುರಿಗೆ ಮರವಿದ್ದರೆ ಜೀವಮಾನದಲ್ಲಿ ಒಮ್ಮೆಯೂ ಮರವೇರದ ನೀವು ಲೀಲಾಜಾಲವಾಗಿ ಮರವನ್ನೇರಿ ಹುಲಿಯಿಂದ ತಪ್ಪಿಸಿಕೊಳ್ಳುತ್ತೀರಿ. ಹುಲಿ ಹೋದ ಮೇಲೆ ಮರದಿಂದ ಇಳಿಯುವುದು ಹೇಗೆ ಎನ್ನುವುದು ಬೇರೆ ಪ್ರಶ್ನೆ. ಈ ಸಾಮರ್ಥ್ಯಕ್ಕೆ ನಿಮ್ಮ ಹೊಟ್ಟೆಯಲ್ಲಿ ಆ ಹೊತ್ತಿನಲ್ಲಿ ಸ್ರವಿತವಾದ ಅಡ್ರಿನಲಿನ್ ಎಂಬ ಹಾರ್ಮೋನು ಕಾರಣವಾಗಿದೆ. ಇಂತಹ ಹತ್ತು ಹಲವು ಹಾರ್ಮೋನುಗಳು ನಮ್ಮ ದೇಹದ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ.

ರಕ್ತದಲ್ಲಿನ ಗ್ಲುಕೋಸ್ ಮಟ್ಟದಲ್ಲಿ ಏರುಪೇರು
ನಾವು ಸೇವಿಸಿದ ಆಹಾರ ಅತಿಹೆಚ್ಚೆಂದರೆ ಆರು ಘಂಟೆಗಳ ಕಾಲ ನಮ್ಮ ಜಠರ ಮತ್ತು ಕರುಳುಗಳಲ್ಲಿರುತ್ತವೆ. ಆ ಬಳಿಕ ದೊಡ್ಡ ಕರುಳು ಸೇರಿ ವಿಸರ್ಜನೆಗೆ ಸಂಗ್ರಹವಾಗುತ್ತದೆ. ಈ ಆರು ಘಂಟೆಗಳ ಕಾಲ ಕರುಳುಗಳಿಂದ ಹೀರಲ್ಪಟ್ಟ ಪೋಷಕಾಂಶಗಳು ಮತ್ತು ಪ್ರಮುಖವಾಗಿ ಗ್ಲುಕೋಸ್ ರಕ್ತದ ಮೂಲಕ ಇಡಿಯ ದೇಹಕ್ಕೆ ಶಕ್ತಿಯನ್ನು ಪೂರೈಸುತ್ತಾ ಇರುತ್ತದೆ. ಒಂದು ವೇಳೆ ನಿಯಮಿತವಾಗಿ ಒಂದು ಹೊತ್ತಿನ ಊಟವನ್ನು ತ್ಯಜಿಸಿದರೆ ಆ ಹೊತ್ತಿನಲ್ಲಿ ನಿಯಮಿತವಾಗಿ ಗ್ಲುಕೋಸ್ ದೊರಕದೇ ಎಲ್ಲಾ ಜೀವಕೋಶಗಳು ಸೊರಗುತ್ತವೆ. ಆದರೆ ಇದೇ ವೇಳೆ ನಿಯಮಿತವಾಗಿ ರಕ್ತದಲ್ಲಿ ಇನ್ಸುಲಿನ್ ಪೂರೈಕೆಯಾಗುತ್ತಲೇ ಇರುತ್ತದೆ. ಇದರಿಂದಾಗಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣದಲ್ಲಿ ಭಾರೀ ಏರುಪೇರಾಗಿ ಹಾರ್ಮೋನುಗಳು ಬೇಕಾಬಿಟ್ಟಿಯಾಗಿ ಬಿಡುಗಡೆಯಾಗುತ್ತವೆ. ಇದು ಹತ್ತು ಹಲವು ಸಂಕೀರ್ಣ ಸ್ಥಿತಿಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲವೊಮ್ಮೆ ಈ ಹಾರ್ಮೋನುಗಳ ಕಾರಣ ದೇಹದ ಯಾವುದೋ ಭಾಗ ವಿಪರೀತವಾಗಿ ಬೆಳೆದು ತೂಕ ಹೆಚ್ಚುತ್ತದೆ. (ಉದಾಹರಣೆಗೆ ಸೊಂಟ ದಪ್ಪಗಾಗುವುದು, ಭುಜ ಮತ್ತು ಕಾಲುಗಳು ತೀರಾ ಒಣಗಿದ ಸ್ಥಿತಿಗೆ ಬರುವುದು)

ಜೀರ್ಣಕ್ರಿಯೆಯಲ್ಲಿ ಏರುಪೇರು
ನಮ್ಮ ಜಠರರಸ ಎಷ್ಟೊಂದು ಆಮ್ಲೀಯವಾಗಿದೆ ಎಂದರೆ ಆ ರಸದಲ್ಲಿ ತೆಳುವಾದ ಬ್ಲೇಡ್ ಸಹಾ ಕರಗುತ್ತದೆ. ಈ ಜಠರರಸದ ಬಳಕೆಯಾಗಲು ನಿಯಮಿತವಾಗಿ ಆಹಾರ ಬರುತ್ತಲೇ ಇರಬೇಕು. ಇದೇ ಕಾರಣದಿಂದ ವೈದ್ಯರು ನಾಲ್ಕು ಹೊತ್ತಿನ ಊಟವನ್ನು ಶಿಫಾರಸ್ಸು ಮಾಡಿರುವುದು. ಒಂದು ವೇಳೆ ನಿಯಮಿತವಾಗಿ ಊಟ ಮಾಡದೇ ಇದ್ದರೆ ಆ ಹೊತ್ತಿನಲ್ಲಿ ಆಹಾರ ಸಿಗದೇ ಈ ಆಮ್ಲ ನಮ್ಮ ಜಠರದ ಒಳಪದರಗಳನ್ನೇ ಸುಡಲು ತೊಡಗುತ್ತದೆ. (ಇದನ್ನೇ ಹಸಿವು ಎಂದು ಕರೆಯುತ್ತೇವೆ). ಈ ಸುಟ್ಟ ಪದರ ಮತ್ತೊಮ್ಮೆ ಉತ್ಪತ್ತಿಯಾಗಲು ಸಮಯ ಬೇಕು. ನಾಳೆ ನಾಡಿದ್ದಿರಲ್ಲಿ ಸರಿಯಾದ ಸಮಯಕ್ಕೆ ಆಹಾರದ ಆಗಮನವಾದರೆ ಅಂದಿನ ಜಠರರಸ ಬಳಕೆಯಾಗಿ ನಿನ್ನೆ ಸುಟ್ಟಿದ್ದ ಪದರ ಮತ್ತೆ ಹೊಸತಾಗಿ ರೂಪುಗೊಳ್ಳಲು ಸಮಯಾವಕಾಶ ಸಿಕ್ಕಂತಾಗುತ್ತದೆ. ಒಂದು ವೇಳೆ ಒಂದು ಹೊತ್ತಿನ ಊಟವನ್ನೇ ಬಿಟ್ಟರೆ ಪ್ರತಿದಿನವೂ ಜಠರದ ಒಳಪದರ ಸುಡುತ್ತಲೇ ಇರುತ್ತದೆ, ಪರಿಣಾಮವಾಗಿ ಇಡಿಯ ಜೀರ್ಣವ್ಯವಸ್ಥೆಯೇ ಕುಸಿಯುತ್ತದೆ. ಆದುದರಿಂದ ಸರಿಯಾದ ಸಮಯಕ್ಕೆ ಊಟ ಮಾಡಿ ಎಂದು ಹಿರಿಯರು ಹೇಳುವುದರಲ್ಲಿ ಏನೂ ತಪ್ಪಿಲ್ಲ.

ತೂಕದಲ್ಲಿ ಹೆಚ್ಚಳ
ಇಡಿಯ ವಿಶ್ವದಲ್ಲಿ ಹೆಚ್ಚಿನ ತೂಕವುಳ್ಳವರು ಸಾಮಾನ್ಯವಾಗಿ ತೆಗೆದುಕೊಳ್ಳುವ ತಪ್ಪು ನಿರ್ಧಾರವೆಂದರೆ ಊಟ ಬಿಡುವುದು. ತೂಕಕ್ಕೆ ಪ್ರಮುಖ ಕಾರಣ ಸಂಗ್ರಹವಾಗಿರುವ ಕೊಬ್ಬು. ಪ್ರತಿದಿನ ನಮ್ಮ ದೇಹ ಕೊಬ್ಬನ್ನು ಬಳಸುತ್ತಲೇ ಇರುತ್ತದೆ ಹಾಗೂ ಹೆಚ್ಚಿನ ಆಹಾರದಿಂದ ಸಂಗ್ರಹವಾದ ಪೋಷಕಾಂಶಗಳನ್ನು ಕೊಬ್ಬಾಗಿ ಪರಿವರ್ತಿಸಿ ಸಂಗ್ರಹದಲಿಟ್ಟುಕೊಳ್ಳುತ್ತಲೇ ಇರುತ್ತದೆ. ತೂಕ ಕಳೆದುಕೊಳ್ಳಲು ಕೊಬ್ಬು ಕರಗಿಸುವುದನ್ನು ಹೆಚ್ಚಿಸಿ ಸಂಗ್ರಹವನ್ನು ಕಡಿಮೆಗೊಳಿಸುವುದೇ ಅತ್ಯಂತ ಆರೋಗ್ಯಕರ ವಿಧಾನವಾಗಿದೆ. ಆದರೆ ಊಟ ಬಿಟ್ಟೇ ಬಿಡುವುದರಿಂದ ಕೊಬ್ಬು ಕರಗುವುದಿಲ್ಲ. ಬದಲಿಗೆ ಸಂಗ್ರಹವಾಗಿದ್ದ ಕೊಬ್ಬು ಕರಗದೇ ದೇಹದ ಇತರ ಪ್ರಮುಖ ಅಂಗಗಳೇ ಪ್ರಭಾವಿತವಾಗಿ ತೂಕ ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ.

ನಿಮ್ಮ ಇತರ ಊಟಗಳನ್ನೂ ಪ್ರಭಾವಿತಗೊಳಿಸುತ್ತದೆ
ಒಂದು ವೇಳೆ ಯಾವುದಾದರೂ ಒಂದು ಹೊತ್ತಿನ ಊಟವನ್ನು ತ್ಯಜಿಸಿದರೆ ಬೇರೆಹೊತ್ತಿನ ಊಟಮಾಡಲೂ ಮನಸ್ಸು ಹಿಂದೆಗೆಯಲು ತೊಡಗುತ್ತದೆ. ಈ ಸ್ಥಿತಿಗೆ pocrescophobia ಎಂದು ಕರೆಯುತ್ತಾರೆ. ಇದರಿಂದ ದೇಹದ ಚೈತನ್ಯ ಉಡುಗಿ ಪ್ರಾಣಾಪಾಯಕ್ಕೂ ಕಾರಣವಾಗಬಹುದು. ಮಾನಸಿಕವಾಗಿಯೂ ಕುಗ್ಗಿ ಜೀವನ ದುರ್ಭರವಾಗುತ್ತದೆ.

ಅತೀವ ಸುಸ್ತು
ಒಂದು ಹೊತ್ತಿನ ಊಟ ಬಿಟ್ಟು ಇನ್ನುಳಿದ ಹೊತ್ತಿನ ಊಟ ಮಾಡಿದರೂ ದೇಹದ ಲಯ ತಪ್ಪುವುದರಿಂದ ನಿಧಾನಕ್ಕೆ ಚೈತನ್ಯ ಕಳೆದುಕೊಂಡ ದೇಹ ದಿನನಿತ್ಯದ ಕಾರ್ಯಗಳಿಗೆ ಸ್ಪಂದಿಸುವುದನ್ನು ಕಡಿಮೆಗೊಳಿಸುತ್ತಾ ಹೋಗುತ್ತದೆ. ಪರಿಣಾಮವಾಗಿ ಇಡಿಯ ದಿನ ಸುಸ್ತು ಆವರಿಸಿರುತ್ತದೆ. ಯಾವುದೇ ಕೆಲಸಕ್ಕೆ, ಓದಿಗೆ, ಸಂಗೀತಕ್ಕೆ ಮನ ಸ್ಪಂದಿಸದೇ ಮಂಕು ಕವಿಯುತ್ತದೆ. ಇದು ನಿಮ್ಮ ಆರೋಗ್ಯಕ್ಕೂ, ನಿಮ್ಮ ದೈನಂದಿನ ಕೆಲಸಗಳಿಗೂ ಪರಿಣಾಮಬೀರಿ ಹಲವು ತೊಂದರೆಗಳು ಎದುರಾಗುತ್ತವೆ.

ಮಧುಮೇಹವಿದ್ದರೆ ಪರಿಸ್ಥಿತಿ ಸಂಕೀರ್ಣಗೊಳ್ಳುವುದು
ಒಂದು ವೇಳೆ ನೀವು ಮಧುಮೇಹಿಗಳಾಗಿದ್ದರೆ ನಿಮಗೆ ಎಂದಿಗೂ ಉಪವಾಸವಿರಲು ವೈದ್ಯರು ಅನುಮತಿ ನೀಡುವುದಿಲ್ಲ. ಕೆಲವೊಮ್ಮೆ ಧರ್ಮದ ಕಟ್ಟುಪಾಡುಗಳಿಗಾಗಿ ಉಪವಾಸವಿರಲೇಬೇಕು ಎಂದು ಗೋಗರೆದರೂ ವೈದ್ಯರು ಒಂದು ದಿನ ಮಾತ್ರ ಉಪವಾಸವಿರಲು ಅನುಮತಿ ನೀಡುತ್ತಾರೆಯೇ ಹೊರತು ಎರಡನೇ ದಿನಕ್ಕಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹಿಗಳು ಒಂದು ಹೊತ್ತಿನ ಊಟ ಬಿಟ್ಟೇ ಬಿಟ್ಟರೆ ಅವರ ಮಧುಮೇಹ ನಿಯಂತ್ರಣದಿಂದ ಹೊರಹೋಗಿ ಅತಿಹೆಚ್ಚಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳಬಹುದು. ಪರಿಸ್ಥಿತಿ ಕೈಮೀರಿದರೆ ಮೆದುಳಿಗೆ ಅಗತ್ಯವಾಗಿದ್ದ ಗ್ಲುಕೋಸ್ ದೊರಕದೇ ಪ್ರಾಣಾಪಾಯಕ್ಕೂ ಕಾರಣವಾಗಬಹುದು.

ಥಟ್ಟನೇ ಬದಲಾಗುವ ಭಾವೋದ್ವೇಗ
ಒಂದು ವೇಳೆ ಮದ್ಯಾಹ್ನದ ಊಟದ ಬಳಿಕ ಸುಖನಿದ್ದೆ ಸವಿಯುತ್ತಿರುವ ಹೊತ್ತಿನಲ್ಲಿ ಮಕ್ಕಳು ಗಲಾಟೆ ಮಾಡುತ್ತಿದ್ದು ನಿಮ್ಮ ನಿದ್ದೆ ಹಾಳಾದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಇದೇ ಪರಿಸ್ಥಿತಿ ನಿಯಮಿತವಾಗಿ ಊಟ ಬಿಟ್ಟಾಗಲೂ ಬರುತ್ತದೆ. ಪರಿಸ್ಥಿತಿಗೆ ವಿಪರೀತವಾಗಿ ಭಾವೋದ್ವೇಗಕ್ಕೆ ಒಳಗಾಗುತ್ತೀರಿ. ಸರಿಯಾದ ಆಹಾರವಿಲ್ಲದಿರುವ ಕಾರಣ ಹಾರ್ಮೋನುಗಳ ಏರುಪೇರಿನಿಂದ ಈ ಪರಿಸ್ಥಿತಿ ಎದುರಾಗುತ್ತದೆ.

ಮೆದುಳಿನ ಕಾರ್ಯಕ್ಷಮತೆಯಲ್ಲಿ ಕೊರತೆ
ನಮ್ಮ ದೇಹದ ರಕ್ತಪೂರೈಕೆಯಲ್ಲಿ ಸಿಂಹಪಾಲು ಮೆದುಳಿಗೆ ರವಾನೆಯಾಗುತ್ತದೆ. ಅದರಲ್ಲೂ ಮೆದುಳಿಗೆ ಹೋಗುವ ರಕ್ತದಲ್ಲಿ ಗ್ಲುಕೋಸ್ ನಿರಂತರವಾಗಿ ಪೂರೈಕೆಯಾಗುತ್ತಲೇ ಇರಬೇಕು. ಪ್ರತಿ ಆರು ಘಂಟೆಗಳಿಗೆ ಊಟ ಮಾಡುವ ಮೂಲಕ ಈ ಪೂರೈಕೆಯನ್ನು ನಿಯಮಿತರೂಪದಲ್ಲಿಡುವುದು ಆರೋಗ್ಯಕಾರಿಯಾಗಿದೆ. ಒಂದು ವೇಳೆ ಒಂದು ಹೊತ್ತಿನ ಊಟ ಬಿಟ್ಟೇ ಬಿಟ್ಟರೆ ಮೆದುಳಿಗೆ ಪೂರೈಕೆಯಾಗುವ ಗ್ಲುಕೋಸ್ ನಲ್ಲಿ ಏರುಪೇರಾಗಿ ಮೆದುಳು ಸೊರಗುತ್ತದೆ. ಇದರಿಂದಾಗಿ ತಲೆನೋವು, ವಾಕರಿಕೆ ಮೊದಲಾದ ನೇರಪರಿಣಾಮಗಳೂ, ಸರಿಯಾಗಿ ಸ್ಪಂದಿಸಲಾಗದ ಹಲವು ಪ್ರಕ್ರಿಯೆಗಳು ಇತರ ಪರೋಕ್ಷ ತೊಂದರೆಗಳಿಗೂ ಕಾರಣವಾಗುತ್ತವೆ. ಉದಾಹರಣೆಗೆ ಈ ಪರಿಸ್ಥಿತಿಯಲ್ಲಿ ವಾಹನ ಚಲಾಯಿಸುತ್ತಿದ್ದು ಎದುರು ತೀವ್ರವಾದ ತಿರುವಿದ್ದು ಬ್ರೇಕ್ ಹೊಡೆಯಲು ಮೆದುಳು ಆಜ್ಞೆ ನೀಡಲು ಕೊಂಚ ತಡಮಾಡಿದರೆ? ಪರಿಸ್ಥಿತಿ ಊಹಿಸಬಲ್ಲಿರಾ?

ಇನ್ನುಳಿದ ಎರಡು ಹೊತ್ತು ಬಿರಿಯುವಷ್ಟು ತಿನ್ನುವುದು
ಒಂದು ಹೊತ್ತು ಊಟ ಬಿಟ್ಟವರ ಹೊಟ್ಟೆ ತೀವ್ರವಾಗಿ ಹಸಿಯುವ ಕಾರಣ ಮುಂದಿನ ಊಟವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಒಂದು ಹೊತ್ತು ಊಟಮಾಡದೇ ಕಳೆದುಕೊಂಡಿದ್ದರ ಹತ್ತರಷ್ಟು ಹೆಚ್ಚು ಕೊಬ್ಬು ಸಂಗ್ರಹವಾಗುವಷ್ಟು ಆಹಾರವನ್ನು ಒಮ್ಮೆಲೇ ಸೇವಿಸಿದ್ದರ ಪರಿಣಾಮವಾಗಿ ತೂಕ ಇನ್ನಷ್ಟು ಹೆಚ್ಚುತ್ತದೆ. ಆದುದರಿಂದ ತೂಕ ಇಳಿಸುವ ಇರಾದೆಯುಳ್ಳವರು ಒಂದು ವೇಳೆ ಒಂದು ಹೊತ್ತಿನ ಊಟ ಬಿಡುವ ಇರಾದೆಯಿದ್ದರೆ ಅದನ್ನು ಬದಲಿಸುವುದು ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಮೂರು ಹೊತ್ತು ಅಥವಾ ಚಿಕ್ಕ ಪ್ರಮಾಣದಲ್ಲಿ ನಾಲ್ಕು ಹೊತ್ತು ಉಣ್ಣುವುದೇ ಶ್ರೇಯಸ್ಕರವಾಗಿದೆ.