Just In
Don't Miss
- News
ಪುಣೆಯಲ್ಲಿ ಕೊರೊನಾ ಕಾಟ: ಮಾರ್ಚ್.14ರವರೆಗೂ ರಾತ್ರಿ ನಿಷೇಧಾಜ್ಞೆ
- Sports
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಜೀವಮಾನ ಶ್ರೇಷ್ಠ ಸ್ಥಾನಕ್ಕೇರಿದ ರೋಹಿತ್ ಶರ್ಮಾ, ಅಶ್ವಿನ್ ನಂಬರ್ 3
- Movies
ಪುನೀತ್ ರಾಜ್ ಕುಮಾರ್ ಸಾಧನೆಗೆ ಶುಭಕೋರಿದ ಕಿಚ್ಚ ಸುದೀಪ್
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಟ್ಟೆ ಕ್ಯಾನ್ಸರ್‌ನ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ
ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೂರಕ್ಕೂ ಅಧಿಕ ಬಗೆಯ ಕ್ಯಾನ್ಸರ್‌ಗಳಿವೆ. ಸ್ತನ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ತ್ವಚೆ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಹೀಗೆ ಅನೇಕ ಬಗೆಯ ಕ್ಯಾನ್ಸರ್ ಮನುಷ್ಯನ ಜೀವವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ನಾವಿಂದು ಇಲ್ಲಿ ಹೊಟ್ಟೆ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದ್ದೇವೆ.
ಹೊಟ್ಟೆ ಕ್ಯಾನ್ಸರ್ ಅನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದು ಕೂಡ ಕರೆಯುತ್ತಾರೆ. ಈ ಕ್ಯಾನ್ಸರ್ ಪ್ರಾರಂಭದಲ್ಲಿಯೇ ಗುರುತಿಸಿದರೆ ಬದುಕಿಳಿಯುವ ಸಾಧ್ಯತೆ ಶೇ.90ರಷ್ಟಿದೆ. ಅದೇ ಕೊನೆಯ ಹಂತದಲ್ಲಿ ಗುರುತಿಸಿದರೆ ಬದುಕುವ ಸಾಧ್ಯತೆ ಶೇ.1ರಷ್ಟಿದೆ.
ಸಾಮಾನ್ಯವಾಗಿ ಹೊಟ್ಟೆ ಕ್ಯಾನ್ಸರ್ ಉಂಟಾದಾಗ ಮೊದಲಿಗೆ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಆದ್ದರಿಂದಲೇ ಈ ಕ್ಯಾನ್ಸರ್ ಮೊದಲಿನ ಹಂತದಲ್ಲಿ ಗುರುತಿಸದೆ ಕೊನೆಯ ಹಂತ ತಲುಪುವಾಗ ತಿಳಿಯುವ ಸಾಧ್ಯತೆ ಹೆಚ್ಚು.
ಹೆಚ್ಚಿನವರು ಹೊಟ್ಟೆನೋವು ಕಾಣಿಸಿದಾಗ ಗ್ಯಾಸ್ಟ್ರಿಕ್‌ಗೆ ಮದ್ದು ತೆಗೆದುಕೊಳ್ಳುತ್ತಾ ಇರುತ್ತಾರೆ, ಆದರೆ ಹೊಟ್ಟೆ ನೋವು ಮದ್ದು ತೆಗೆದಾಗ ಕಡಿಮೆಯಾದಂತೆ ಅನಿಸಿ ಮತ್ತೆ ಮರುಕಳಿಸುತ್ತಿರುತ್ತದೆ. ಆಗಾಗ ಹೊಟ್ಟೆ ನೋವು ಕಾಡುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಅದು ಹೊಟ್ಟೆ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿದೆ.
ಇಲ್ಲಿ ನಾವು ಹೊಟ್ಟೆಕ್ಯಾನ್ಸರ್‌ನ ಲಕ್ಷಣಗಳ ಬಗ್ಗೆ ಹೇಳಿದ್ದೇವೆ, ಈ ಲಕ್ಷಣಗಳು ಕಂಡು ಬಂದರೆ ತಡಮಾಡದೆ ವೈದ್ಯರಿಗೆ ತೋರಿಸಿ ಕ್ಯಾನ್ಸರ್ ಪರೀಕ್ಷೆ ಮಾಡಿಸುವುದು ಒಳ್ಳೆಯದು.

1.ಮಲದಲ್ಲಿ ವ್ಯತ್ಯಾಸ
ಆಗಾಗ ಬೇಧಿ, ಮಲದಲ್ಲಿ ವ್ಯತ್ಯಾಸ ಹಾಗೂ ಸರಿಯಾಗಿ ಮಲವಿಸರ್ಜನೆಯಾಗದೇ ಇರುವುದು ಇವೆಲ್ಲಾ ಹೊಟ್ಟೆ ಅಥವಾ ಗ್ಯಾಸ್ಟ್ರಿಕ್ ಕ್ಯಾನ್ಸರ್‌ನ ಲಕ್ಷಣವಾಗಿದೆ. ಇನ್ನು ಮಲದಲ್ಲಿ ರಕ್ತ ಕಂಡು ಬಂದರೆ ಕೂಡಲೇ ವೈದ್ಯರಿಗೆ ತೋರಿಸುವುದು ಒಳ್ಳೆಯದು. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಬದುಕುಳಿಯುವ ಸಾಧ್ಯತೆ ಹೆಚ್ಚು.

2. ಕೆಳಹೊಟ್ಟೆಯಲ್ಲಿ ಆಗಾಗ ನೋವು ಉಂಟಾಗುವುದು
ತುಂಬಾ ಸಮಯದಿಂದ ಆಗಾಗ ಕೆಳಹೊಟ್ಟೆ ನೋವು ಬರುತ್ತುದೆಯೇ ಅದು ನಿಮ್ಮ ಹೊಟ್ಟೆಯಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗಿರುವ ಲಕ್ಷಣವಾಗಿರಬಹುದು.ಆಗಾಗ ಕೆಳ ಹೊಟ್ಟೆ ನೋವು ಬರುತ್ತಿದ್ದರೆ ನೋವು ನಿವಾರಕ ನುಂಗಿ ಸುಮ್ಮನಾಗಬೇಡಿ, ಕೂಡಲೇ ಕ್ಯಾನ್ಸರ್‌ಗೆ ಸಂಬಂಧಿಸಿದ ಪರೀಕ್ಷೆ ಮಾಡಿ ಅದು ಕ್ಯಾನ್ಸರ್ ಇರಬಹುದೇ, ಇಲ್ಲವೇ ಎಂಬುವುದನ್ನು ಖಚಿತ ಪಡಿಸಿಕೊಳ್ಳಿ.

3. ಹಸಿವು ಇಲ್ಲದಿರುವುದು
ಸರಿಯಾಗಿ ಹಸಿವು ಇಲ್ಲದಿರುವುದು ಕೂಡ ಹೊಟ್ಟೆ ಕ್ಯಾನ್ಸರ್ ಅಥವಾ ಅಲ್ಸರ್‌ನ ಲಕ್ಷಣವಾಗಿರುತ್ತದೆ. ಅಲ್ಸರ್ ಉಂಟಾದಾಗ ಅದಕ್ಕೆ ಚಿಕಿತ್ಸೆ ದೊರೆಯದೇ ಇದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇದೆ. ಆದ್ದರಿಂದ ಹಸಿವು ಇಲ್ಲದಿದ್ದರೆ ಸುಮ್ಮನಾಗಬೇಡಿ, ಸೂಕ್ತ ಪರೀಕ್ಷೆ ಮಾಡಿಸಿ ನಿಮ್ಮ ಸಮಸ್ಯೆಗೆ ಕಾರಣವೇನೆಂದು ತಿಳಿದುಕೊಳ್ಳಿ.

4. ಇದ್ದಕ್ಕಿದ್ದಂತೆ ತೂಕ ಇಳಿಕೆ
ನೀವು ತೂಕ ಇಳಿಕೆಗೆ ಡಯಟ್ ಅಥವಾ ವ್ಯಾಯಾಮ ಏನೂ ಮಾಡದೆ ಕೂಡ ತುಂಬಾ ತೂಕ ಇಳಿಕೆಯಾಗುತ್ತಿದೆಯೇ ಹಾಗಾದರೆ ನಿಮ್ಮ ದೇಹಕ್ಕೆ ಏನೋ ತೊಂದರೆಯಾಗಿದೆ ಎಂದರ್ಥ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಜೊತೆಗೆ ತೂಕ ಇಳಿಕೆಯಾಗುತ್ತಿದ್ದರೆ ಅದು ಹೊಟ್ಟೆ ಕ್ಯಾನ್ಸರ್‌ನ ಲಕ್ಷಣವಾಗಿರುತ್ತದೆ.
ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗುವುದು ಖಂಡಿತ ಒಳ್ಳೆಯ ಲಕ್ಷಣವಲ್ಲ, ಅದು ಕ್ಯಾನ್ಸರ್ ಅಲ್ಲದಿದ್ದರೂ ಮತ್ಯಾವುದೋ ಕಾಯಿಲೆಯ ಲಕ್ಷಣವಾಗಿರುತ್ತದೆ, ಆದ್ದರಿಂದ ಕೂಡಲೇ ವೈದ್ಯರನ್ನು ಕಂಡು ನಿಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ.

5. ಎದೆಯುರಿ
ಅಜೀರ್ಣ ಸಮಸ್ಯೆ, ಎದಯುರಿ ಇವೆಲ್ಲಾ ಕೂಡ ಹೊಟ್ಟೆ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ. ಎದೆಯುರಿ ಸಮಸ್ಯೆ ಆಗಾಗ ಕಾಡುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ.

6. ಹೊಟ್ಟೆ ಉಬ್ಬುವುದು ಹಾಗೂ ಮಲಬದ್ಧತೆ
ಕ್ಯಾನ್ಸರ್ ಗಡ್ಡೆಗಳು ಬೆಳೆಯುತ್ತಿದ್ದಂತೆ ನಿಮಗೆ ಹೊಟ್ಟೆ ಉಬ್ಬಿದಂತೆ ಅನಿಸುವುದು ಅಲ್ಲದೆ ಮಲಬದ್ಧತೆ ಸಮಸ್ಯೆ ಕೂಡ ಕಾಡುತ್ತದೆ. ಆದ್ದರಿಂದ ಇಂಥ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ. ಪ್ರಾರಂಭದ ಹಂತದಲ್ಲಾದರೆ ರೋಗ ಗುಣಪಡಿಸಲು ವೈದ್ಯರಿಗೆ ಸಾಧ್ಯವಾದೀತು.

7. ನುಂಗಲು ಕಷ್ಟವಾಗುವುದು
ಇನ್ನು ಕೆಲವರಿಗೆ ಕ್ಯಾನ್ಸರ್ ಅನ್ನನಾಳಕ್ಕೆ ವ್ಯಾಪಿಸಿ ಆಹಾರ ನುಂಗಲು ಕಷ್ಟವಾಗುವುದು. ನೀರು ಹಾಗೂ ಆಹಾರ ತಿನ್ನಲು ಕಷ್ಟವಾಗುವುದು, ನುಂಗಿದ ಆಹಾರ ವಾಪಾಸ್ ಬರುವುದು ಇವೆಲ್ಲಾ ಕ್ಯಾನ್ಸರ್‌ನ ಲಕ್ಷಣಬವಾಗಿದೆ.

8. ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತೆ ಅನಿಸುವುದು
ಇದು ಕೂಡ ಆರೋಗ್ಯಕರವಾದ ಲಕ್ಷಣವಲ್ಲ, ನಿಮ್ಮ ಹೊಟ್ಟೆಯ ಸ್ನಾಯುಗಳು ಆಹಾರವನ್ನು ತಳ್ಳಲು ಅಸಮರ್ಥವಾದಾಗ ಈ ರೀತಿ ಉಂಟಾಗುತ್ತದೆ. ಸ್ವಲ್ಪ ಆಹಾರ ತಿಂದರೆ ಸಾಕು ಹೊಟ್ಟೆ ತುಂಬಿದಂತೆ ಅನಿಸುವುದು.

ಹೊಟ್ಟೆ ಕ್ಯಾನ್ಸರ್ ಬರದಂತೆ ತಡೆಗಟ್ಟುವುದು ಹೇಗೆ?
ತಜ್ಞರ ಪ್ರಕಾರ ಈ ಕೆಳಗಿನ ಜೀವನಶೈಲಿ ಮೂಲಕ ಹೊಟ್ಟೆ ಕ್ಯಾನ್ಸರ್ ಉಂಟಾಗುವುದನ್ನು ತಡೆಗಟ್ಟಬಹುದು
- ಮದ್ಯ, ತಂಬಾಕು ಸೇವನೆಯಿಂದ ಹೊಟ್ಟೆ ಕ್ಯಾನ್ಸರ್ ಬರುವುದು, ಇವುಗಳನ್ನು ದೂರವಿಡಿ.
- ಸೊಪ್ಪು ತರಕಾರಿ ಹೆಚ್ಚು ತಿನ್ನಬೇಕು
- ಹೊಗೆಯಲ್ಲಿ ಬೆಂದ ಹಾಗೂ ಉಪ್ಪಿನಕಾಯಿ ಆಹಾರಗಳನ್ನು ಹೆಚ್ಚಾಗಿ ಸೇವಿಸಬಾರದು
- ಧಾನ್ಯಗಳು, ಕಾಳು, ಪಾಸ್ತಾ, ಅನ್ನ ಇವುಗಳ ಸೇವನೆ ಮಾಡಿ.
- ಆರೋಗ್ಯಕರ ತೂಕವನ್ನು ಕಾಪಾಡಿ.
ಸಲಹೆ: ಹೊಟ್ಟೆ ನೋವಿನ ಸಮಸ್ಯೆಯಿದ್ದರೆ ಅದು ಕ್ಯಾನ್ಸರ್ ಇರಬಹುದೆಂದು ಭಯಪಡಬೇಡಿ, ಹಾಗಂತ ನಿರ್ಲಕ್ಷ್ಯ ಕೂಡ ಬೇಡ, ಯಾವ ಕಾರಣಕ್ಕೆ ಹೊಟ್ಟೆನೋವು ಕಾಡುತ್ತಿದೆ ಎಂದು ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.