For Quick Alerts
ALLOW NOTIFICATIONS  
For Daily Alerts

ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

By Deepu
|

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದಾಗಿದ್ದರೂ ಅತಿ ಕಡಿಮೆ ಕಾಳಜಿಯನ್ನು ಪಡೆಯುವ ಅಂಗವೂ ಆಗಿದೆ. ಏಕೆಂದರೆ ನಾವು ಅರಿವಿದ್ದೂ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯದ ಮೇಲಿನ ಭಾರವನ್ನು ಹೆಚ್ಚಿಸುತ್ತೇವೆ. ವಿಶೇಷವಾಗಿ ಕೊಬ್ಬು ಹೆಚ್ಚಿರುವ ಆಹಾರಗಳ ಸೇವನೆಯಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಎಂಬ ಜಿಡ್ಡಿನ ಪ್ರಮಾಣ ಹೆಚ್ಚುತ್ತಾ ಕವಲು ಮತ್ತು ತಿರುವುಗಳಿರುವಲ್ಲೆಲ್ಲಾ ಒಳಭಾಗದಲ್ಲಿ ಅಂಟಿಕೊಂಡು ಇಲ್ಲಿನ ವ್ಯಾಸವನ್ನು ಕಿರಿದಾಗಿಸಿ ರಕ್ತಸಂಚಾರಕ್ಕೆ ಅಡ್ಡಿಪಡಿಸುತ್ತವೆ. ಈ ರಕ್ತವನ್ನು ಈ ಕಿರಿದಾದ ದಾರಿಯಲ್ಲಿ ಮುಂದೆ ಸಾಗಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಇದೇ ಅಧಿಕ ಹೃದಯದೊತ್ತಡ.

ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು. ಚಿಕ್ಕ ವಯಸ್ಸಿನಿಂದಲೇ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತ ಬರುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮವಾದ ಆರೋಗ್ಯ ಪಡೆಯಬಹುದು ಹಾಗೂ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು. ಈ ಆಹಾರಗಳು ಯಾವುದೆಂದು ನೋಡೋಣ...

ಗಿಡಮೂಲಿಕೆಗಳು

ಗಿಡಮೂಲಿಕೆಗಳು

ಗಿಡಮೂಲಿಕೆಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇವುಗಳು ಉಪ್ಪಿಗಿಂತಲೂ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪು ಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಕಡಿಮೆ ಕೊಬ್ಬಿನ ಪ್ರೋಟೀನ್ ನ್ನು ಒಳಗೊಂಡಿರುವ ಸಾಲ್ಮನ್ ನಲ್ಲಿ ಒಮೆಗಾ3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಸಾಲ್ಮನ್ ಅಥವಾ ಒಮೆಗಾ 3 ಕೊಬ್ಬಿನಾಮ್ಲವನ್ನು ಹೊಂದಿರುವ ಮೀನನ್ನು ವಾರದಲ್ಲಿ ಎರಡು ಸಲ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇಡೀ ಗೋಧಿಯ ಬ್ರೆಡ್

ಇಡೀ ಗೋಧಿಯ ಬ್ರೆಡ್

ಬಿಳಿಯ ಬ್ರೆಡ್ ನಲ್ಲಿ ಇರುವುದಕ್ಕಿಂತ ಹೆಚ್ಚಿನ ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶವು ಈ ಬ್ರೆಡ್ ನಲ್ಲಿದೆ. ಹೃದಯದ ಆರೋಗ್ಯಕ್ಕೆ ಬಂದರೆ ಇದನ್ನು ಒಂದು ಸೂಪರ್ ಫುಡ್ ಎಂದು ಪರಿಗಣಿಸಬಹುದು.

ಬಾರ್ಲಿ

ಬಾರ್ಲಿ

ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

ಮೊಸರು

ಮೊಸರು

ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ. ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು.

ಊಟದ ಬಳಿಕ ಸಿಹಿ ತಿನ್ನಬೇಡಿ!

ಊಟದ ಬಳಿಕ ಸಿಹಿ ತಿನ್ನಬೇಡಿ!

ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು.

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ನಮಗೆ ಗೊತ್ತಿರುವ ಹಾಗೆ ಮಧುಮೇಹವಿದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಾಳಿಂಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವ ಮತ್ತು ಹೆಚ್ಚು ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇರುವ ಕಾರಣ ಈ ರಸ ಮಧುಮೇಹಿಗಳೂ ಸೇವಿಸಬಹುದಾಗಿದ್ದು ದಿನವಿಡೀ ಬಾಯಾರಿಕೆಯಾಗದಂತೆಯೂ ನೋಡಿಕೊಳ್ಳಬಹುದು.

ಗ್ರೀನ್ ಟೀ

ಗ್ರೀನ್ ಟೀ

ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಗ್ರೀನ್ ಟೀ. ಗ್ರೀನ್ ಟೀಯಲ್ಲಿರುವ ಕಾಟೆಚಿನ್ ಎನ್ನುವ ಅಂಶವು ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಹೃದಯವನ್ನು ಕಾಪಾಡುವುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಚಯಾಪಚಾಯ ಕ್ರಿಯೆಯನ್ನು ವೃದ್ಧಿಸುವುದು. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ ಫಲಿತಾಂಶ ನೀಡುವುದು.

ಕೆಂಪು ವೈನ್

ಕೆಂಪು ವೈನ್

ರಕ್ತನಾಳಗಳ ಒಳಗೆ ಅಂಟಿಕೊಂಡಿರುವ ಕೊಬ್ಬಿನ ಕಣಗಳನ್ನು ಸಡಿಲಿಸಿ ರಕ್ತ ಸಂಚಾರವನ್ನು ಸುಗಮಗೊಳಿಸಲು ಕೆಂಪು ವೈನ್ ಸಹಾ ಉತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲ, ತೂಕ ಇಳಿಸಲು ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುವ ಮೂಲಕ ಹೃದಯಕ್ಕೆ ಪರೋಕ್ಷ ನೆರವು ನೀಡುತ್ತದೆ. ಆದರೆ ಕೆಂಪು ವೈನ್ ಮಾದಕ ಪಾನೀಯವೂ ಆಗಿರುವ ಕಾರಣ ಇದರ ಪ್ರಮಾಣ ಅತ್ಯಂತ ಕಡಿಮೆ ಇರಬೇಕು. ಈ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಗರಿಷ್ಟ 147.8 ಮಿಲೀ ಸೇವಿಸಬಹುದು. ಇದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಸುಮಾರು 60-70% ರಷ್ಟು ಕೋಕೋ ಇರುವ ಕಪ್ಪು ಚಾಕಲೇಟು ಅಧಿಕ ರಕ್ತದೊತ್ತಡವನ್ನು ಸೂಕ್ತ ಮಿತಿಗಳಲ್ಲಿರಿಸಲು ನೆರವಾಗುತ್ತದೆ. ವಿಶೇಷವಾಗಿ ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟದೇ ಇರಲು ಹಾಗೂ ಉರಿಯೂತವಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಮೂಲಕ ಕಪ್ಪು ಚಾಕಲೇಟು ಹೃದಯದ ಸ್ನೇಹಿತನಾಗಿದೆ.

ಅಗಸೆ ಬೀಜಗಳು: (Flax Seeds)

ಅಗಸೆ ಬೀಜಗಳು: (Flax Seeds)

ಹಿಂದಿಯಲ್ಲಿ ಅಲ್ಸಿ ಎಂದೂ ಕರೆಯಲ್ಪಡುವ ಅಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ. ಈ ಆಮ್ಲಗಳು ರಕ್ತನಾಳಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗಿರುವ 'ಆಮ' ಅಥವಾ ತಡೆಯನ್ನು ನಿವಾರಿಸಿ ಹೃದಯದ ಕ್ಷಮತೆ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿಯನ್ನು ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಲು ಕೇವಲ ಇದರ ಸುವಾಸನೆ ಮಾತ್ರ ಕಾರಣವಲ್ಲ, ಇದರ ಆರೋಗ್ಯಕರ ಗುಣಗಳೂ ಇದಕ್ಕೆ ಕಾರಣವಾಗಿವೆ. ಆಯುರ್ವೇದದಲ್ಲಿ ಹೃದಯಸಂಬಂಧಿ ತೊಂದರೆಗಳಿಗೆ ಏಲಕ್ಕಿಯನ್ನು ಬಳಸುವಂತೆ ಸಲಹೆ ಮಾಡಲಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಉತ್ತಮ ಗುಣವೆಂದರೆ ದೇಹದ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುವ ಸಾಮರ್ಥ್ಯ. ಇದರಿಂದ ರಕ್ತಕ್ಕೆ ಈ ಕೆಲಸಕ್ಕಾಗಿ ಹೆಚ್ಚಿನ ಒತ್ತಡದಿಂದ ರಕ್ತವನ್ನು ಕಳುಹಿಸುವ ಅಗತ್ಯ ತಲೆದೋರದೇ ಅಷ್ಟರ ಮಟ್ಟಿಗೆ ಒತ್ತಡದಿಂದ ದೂರವಾಗುತ್ತದೆ. ಅಲ್ಲದೇ ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಪ್ರತಿದಿನ ಬಿಟ್ಟು ದಿನ ರಾತ್ರಿ ಊಟದ ಬಳಿಕ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಟ್ಟಕ್ಕೆ ಬರುತ್ತದೆ.

ಅರ್ಜುನ ಮರದ ತೊಗಟೆ

ಅರ್ಜುನ ಮರದ ತೊಗಟೆ

ಗ್ರಂಥಿಗೆ ಅಂಗಡಿಯಲ್ಲಿ ಅರ್ಜುನ ಮರದ ತೊಗಟೆಯ ಪುಡಿ ಸಿಗುತ್ತದೆ. ಈ ಪುಡಿ ರಕ್ತದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ರಕ್ತನಾಳಗಳ ಒಳಭಾಗದಲ್ಲಿ ಜಿಡ್ಡು ತುಂಬಿಕೊಂಡು ತಡೆ ಉಂಟಾಗಿರುವುದು, ಹೃದಯದ ಪ್ರಮುಖ ರಕ್ತನಾಳದ ತೊಂದರೆ ಮೊದಲಾದ ತೊಂದರೆಗೆ ಸೂಕ್ತವಾದ ಔಷಧಿಯಾಗಿದೆ. ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರಿಸಲು ನೆರವಾಗುವ ಈ ಪುಡಿಯನ್ನು ರಕ್ತಪರಿಚಲನೆಗೆ ತಡೆ ಇರುವ ಹೃದಯವನ್ನು ಸುಗಮಗೊಳಿಸಲು ಆಯುರ್ವೇದ ಶಿಫಾರಸ್ಸು ಮಾಡುತ್ತದೆ. ಈ ಪುಡಿಯಲ್ಲಿ ರಕ್ತಕ್ಕೆ ಆಮ್ಲಜನಕ ಒದಗಿಸುವ ಗುಣವೂ ಇದ್ದು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ದಾಲ್ಚಿನ್ನಿ ಚೆಕ್ಕೆ

ದಾಲ್ಚಿನ್ನಿ ಚೆಕ್ಕೆ

ದಾಲ್ಚಿನ್ನಿಯ ಚೆಕ್ಕೆ ಅಥವಾ ಸಾಮಾನ್ಯ ಅಡುಗೆಯಲ್ಲಿ ಬಳಸುವ ಚೆಕ್ಕೆಯನ್ನು ಹಲವು ತೊಂದರೆಗಳಿಗೆ ಔಷಧಿಯ ರೂಪದಲ್ಲಿ ಸಹಾ ಬಳಸಬಹುದು. ಇದರ ಹಲವು ಉಪಯೋಗಗಳಲ್ಲಿ ಹೃದಯದ ನಾಳಗಳನ್ನು ಸ್ವಚ್ಛಗೊಳಿಸುವ ಕ್ಷಮತೆಯೂ ಸೇರಿದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಅತಿ ಶೀಘ್ರವಾಗಿ ಕಡಿಮೆಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ಇದರ ರಕ್ತಕ್ಕೆ ಆಮ್ಲಜನಕ ಒದಗಿಸುವ ಗುಣ ಕೆಲಸಕ್ಕೆ ಬರುತ್ತದೆ.ನಿಯಮಿತವಾಗಿ ಚೆಕ್ಕೆಯ ಪುಡಿಯನ್ನು ಸೇವಿಸುತ್ತಾ ಬರುವ ಮೂಲಕ ಉಸಿರಾಟ ಕಷ್ಟಕರವಾಗಿರುವುದನ್ನು ಸುಗಮಗೊಳಿಸುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಕಫವನ್ನು ಸಡಿಲಗೊಳಿಸಿ ಉಸಿರಾಟ ಸರಾಗ ಮತ್ತು ನಿರಾಳವಾಗಿಸಲು ನೆರವಾಗುತ್ತದೆ.

English summary

natural Foods that help prevent heart disease

Did you know that almost half of the young adults between the ages of 18 and 24 have at least one coronary heart risk factor, such as a high blood pressure, stress or an unhealthy diet? Even having a slightly high level of blood pressure in your 20s can increase the risk of developing clogged arteries in the later years. Hence, it is important that you start including heart healthy foods in your diet at the earliest. In this article we have listed some of the best foods to take care of your heart.
Story first published: Thursday, April 26, 2018, 10:38 [IST]
X
Desktop Bottom Promotion