For Quick Alerts
ALLOW NOTIFICATIONS  
For Daily Alerts

ಮೆನೋಪಾಸ್‌ ಸಮಸ್ಯೆ ಕಡಿಮೆ ಮಾಡಲು ಏನು ಸೇವಿಸಬೇಕು?

|

ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರೋ ಆಹಾರಪದ್ಧತಿ ನಿಜಕ್ಕೂ ಬಲು ಆರೋಗ್ಯದಾಯಕ. ಅಂತಹ ಒಂದು ಆಹಾರಪದ್ಧತಿಯಿಂದ ಅದೆಷ್ಟೆಲ್ಲ ಆರೋಗ್ಯ ಲಾಭಗಳಿವೆ ಅಂತೀರಾ ?! ಸ್ತ್ರೀಯರ ಋತುಚಕ್ರ ನಿಲ್ಲೋ ಹಂತಕ್ಕೆ ಬಂದಾಗ (ಮೆನೋಪಾಸ್) ಅವರನ್ನ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕಾಡೋ ವಿಷ್ಯ ನಮಗೆಲ್ಲ ಗೊತ್ತೇ ಇದೆ. ಇತ್ತೀಚೆಗೆ ಸಂಶೋಧಕರು ಕಂಡುಕೊಂಡಿರೋ ಪ್ರಕಾರ ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾಗಿರೋ ಆಹಾರಪದ್ಧತಿ, ಅಂತಹ ತೊಂದರೆಗಳನ್ನೂ ಕಡಿಮೆ ಮಾಡೋದ್ರಲ್ಲಿ ಮಹತ್ತರ ಪಾತ್ರ ವಹಿಸುತ್ತದೆಯಂತೆ!!

ಮೆನೋಪಾಸ್ ಹಂತದ ರೋಗಲಕ್ಷಣಗಳಿಗೆ ಸಂಬಂಧಿಸಿದ ಹಾಗೆ, ಬಹಳಷ್ಟು ಸ್ತ್ರೀಯರ ವಿಚಾರದಲ್ಲಿ ಹಾರ್ಮೋನು ಚಿಕಿತ್ಸೆ ಒಂದು ಸ್ವೀಕಾರಾರ್ಹ ವಿಧಾನ ಅನ್ನೋದೇನೋ ಸಾಬೀತಾಗಿದೆ. ಆದರೂ ಕೂಡ, ಕೆಲವು ಸ್ತ್ರೀಯರ ವಿಚಾರದಲ್ಲಿ ಈ ಚಿಕಿತ್ಸೆ ಗಂಭೀರ ಸ್ವರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗೋ ಅಪಾಯ ಇರುತ್ತೆ ಮತ್ತೆ ಇನ್ನು ಕೆಲವು ಸ್ತ್ರೀಯರ ವಿಚಾರದಲ್ಲಿ ಹಾರ್ಮೋನು ಚಿಕಿತ್ಸೆ ಆಗಿಬರದಂತಹ ಪರಿಸ್ಥಿತೀನೂ ಇರುತ್ತೆ. ಅಂತಹವರಿಗಾಗಿ ಪರ್ಯಾಯ ಚಿಕಿತ್ಸಾ ವಿಧಾನಗಳಿಗೆ ಸಂಶೋಧನೆ ನಡೀತಾನೇ ಇದೆ.

ಮೆನೋಪಾಸ್ ರೋಗಲಕ್ಷಣಗಳನ್ನ ತಡೆಗಟ್ಟಬಹುದೇ ?

ಮೆನೋಪಾಸ್ ರೋಗಲಕ್ಷಣಗಳನ್ನ ತಡೆಗಟ್ಟಬಹುದೇ ?

ಜೀವನಶೈಲಿಯ ಕೆಲವು ಆಯಾಮಗಳನ್ನ ಬದಲಾಯಿಸಿಕೊಳ್ಳೋದರ ಮೂಲಕ ಈ ಮೆನೋಪಾಸ್ ರೋಗಲಕ್ಷಣಗಳನ್ನ ತಡೆಗಟ್ಟಬಹುದೇ ಅಥವಾ ತಗ್ಗಿಸಬಹುದೇ ಅನ್ನೋದರ ಮೇಲೂ ಬೆಳಕು ಚೆಲ್ಲುವ ಕಾರ್ಯಗಳು ಚಾಲ್ತಿಯಲ್ಲಿವೆ. ಜೀವನಶೈಲಿಯ ಅಂತಹ ಆಯಾಮಗಳನ್ನ ಗುರುತಿಸುವಂತಹ ಕೆಲಸಗಳು ನಡೀತಾ ಇವೆ.

"ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾಗಿರೋ ಆಹಾರಪದ್ಧತಿಯಿಂದ ಮೆನೋಪಾಸ್ ರೋಗಲಕ್ಷಣಗಳ ಮೇಲಾಗೋ ಪರಿಣಾಮ" ಅನ್ನೋವಂತಹ ಒಂದು ಸಣ್ಣ ಪಾರ್ಶ್ವ ಅಧ್ಯಯನ, ಈ ವಿಚಾರದಲ್ಲಿ ಸಾಕಷ್ಟು ಪ್ರಾಥಮಿಕ ಪುರಾವೆಗಳನ್ನ ಒದಗಿಸಿದೆ ಅಂತಾ ನಾರ್ತ್ ಅಮೇರಿಕನ್ ಮೆನೊಪಾಸ್ ಸೊಸೈಟಿ (ಎನ್.ಎ.ಎಮ್.ಎಸ್) ಯ ಸ್ಟೀಫ಼ನ್ ಫ಼ೌಬಿಯೊನ್ ಅನ್ನೋ ಸಂಶೋಧಕರು ಹೇಳಿದ್ದಾರೆ.

ಎನ್.ಎ.ಎಮ್.ಎಸ್. ಅನ್ನೋದು ಉತ್ತರ ಅಮೇರಿಕಾದಲ್ಲಿ ಮುಂಚೂಣಿಯಲ್ಲಿರೋ ಲಾಭಾಕಾಂಕ್ಷೆ ಇಲ್ಲದ (ನಾನ್-ಫ಼್ರಾಫಿಟ್) ಒಂದು ಸಂಸ್ಥೆ. ಮಧ್ಯಮ ವಯಸ್ಸಿನ ಹಾಗೂ ಮಧ್ಯಮ ವಯಸ್ಸನ್ನು ದಾಟಿದ ಎಲ್ಲ ಸ್ತ್ರೀಯರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನ ಉನ್ನತೀಕರಿಸುವುದಕ್ಕಾಗಿ ಸಮರ್ಪಿತವಾಗಿರೋ ಸಂಸ್ಥೆ ಇದು. ಮೆನೊಪಾಸ್ ನ ಸ್ವರೂಪವನ್ನ ಮತ್ತು ಆರೋಗ್ಯಯುತವಾಗಿ ವಯಸ್ಕರಾಗೋದು ಹೇಗೆ ಅನ್ನೋದನ್ನ ಅರಿತುಕೊಳ್ಳೋದರ ಮೂಲಕ ಈ ಸಂಸ್ಥೆ ತನ್ನ ಉದ್ದೇಶವನ್ನ ಸಾಧಿಸುತ್ತದೆ.

ಹಣ್ಣುಗಳು ಹೇಗೆ ಸಹಕಾರಿ?

ಹಣ್ಣುಗಳು ಹೇಗೆ ಸಹಕಾರಿ?

ಸಂಶೋಧಕರು ಹೇಳೋ ಪ್ರಕಾರ, ಈಸ್ಟ್ರೋಜನ್ ಹಾರ್ಮೋನಿನ ಉತ್ಪಾದನೆ, ಚಯಾಪಚಯ ಕ್ರಿಯೆ, ಹಾಗೂ ಆ ಮೂಲಕ ಮೆನೋಪಾಸ್ ರೋಗಲಕ್ಷಣಗಳ ಮೇಲೆ ಆಹಾರಪದ್ಧತಿಯು ಬಹುಪ್ರಮುಖವಾದ ಪಾತ್ರ ವಹಿಸುತ್ತದೆ ಅಂತಾ ಅವರ ಹಿಂದಿನ ಅಧ್ಯಯನಗಳು ಸಾಬೀತುಪಡಿಸಿವೆಯಂತೆ.

ನಿರ್ಧಿಷ್ಟವಾಗಿ ಹೇಳಬೇಕೆಂದರೆ, ಹಣ್ಣುಗಳ ಸೇವನೆ, ಅಥವಾ ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಮತ್ತು ಕಾಳುಗಳಿಂದ ಸಮೃದ್ಧವಾಗಿರೋ ಮೆಡಿಟರೇನಿಯನ್-ಶೈಲಿಯ ಆಹಾರಪದ್ಧತಿಗೂ, ಕಡಿಮೆ ಪ್ರಮಾಣದ ಮೆನೋಪಾಸ್ ರೋಗಲಕ್ಷಣಗಳಿಗೂ ನಂಟಿರುವುದು ಸಾಬೀತಾಗಿದೆ. ಅರ್ಥಾತ್ ಯಾರು ಮೇಲೆ ಹೇಳಿದ ಶೈಲಿಯ ಆಹಾರಪದ್ಧತಿಯನ್ನ ಅಳವಡಿಸಿಕೊಂಡಿರುವರೋ ಅವರಲ್ಲಿ ಮೆನೊಪಾಸ್ ರೋಗಲಕ್ಷಣಗಳು ಕಡಿಮೆ.

ಈ ವಿನೂತನ ಅಧ್ಯಯನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವ ನಿರ್ಧಿಷ್ಟ ಹಣ್ಣುಗಳು ಮತ್ತು ತರಕಾರಿಗಳು ಮೆನೊಪಾಸ್ ರೋಗಲಕ್ಷಣಗಳನ್ನ ತಗ್ಗಿಸುತ್ತವೆ ಅನ್ನೋದರ ಮೇಲೂ ಬೆಳಕು ಚೆಲ್ಲಿದೆ.

ಮೆನೋಪಾಸ್‌ ಸಮಸ್ಯೆ ಕಡಿಮೆ ಮಾಡುವ ಆಹಾರ

ಮೆನೋಪಾಸ್‌ ಸಮಸ್ಯೆ ಕಡಿಮೆ ಮಾಡುವ ಆಹಾರ

ಅಧ್ಯಯನ ಕಂಡುಕೊಂಡಿರೋ ಪ್ರಕಾರ, "ದಿನಕ್ಕೊಂದು ಸೇಬು ಪ್ರಾಯಶ: ಮೆನೊಪಾಸ್ ರೋಗಲಕ್ಷಣಗಳನ್ನ ದೂರವಿರಿಸುತ್ತೆ"

ಕೆಲನಿರ್ಧಿಷ್ಟ ಬಗೆಯ ಹಣ್ಣುಗಳು ಮತ್ತು ತರಕಾರಿಗಳು ಮೆನೊಪಾಸ್ ರೋಗಲಕ್ಷಣಗಳೊಂದಿಗೆ ವಿಲೋಮ ಸಾಂಗತ್ಯವುಳ್ಳವಾಗಿದ್ದರೆ, ಇನ್ನು ಇತರ ಕೆಲನಿರ್ಧಿಷ್ಟ ಬಗೆಯ ಹಣ್ಣುಗಳು ಮತ್ತು ತರಕಾರಿಗಳು ಮೂತ್ರ ಹಾಗೂ ಜನನಾಂಗಗಳಿಗೆ (ಯುರೋಜೆನಿಟಲ್) ಸಂಬಂಧಿಸಿದ ಹಾಗೆ ಇನ್ನಷ್ಟು ತೊಂದರೆಗಳಿಗೆ ಕಾರಣವಾಗುತ್ತವೆ ಅಂತಾ ಕೆಲವು ಸಂಶೋಧಕರ ಅಭಿಪ್ರಾಯ.

ಉದಾಹರಣೆಗೆ ಇತರ ಜಾತಿಯ ಹಣ್ಣುಗಳಿಗೆ ಹೋಲಿಸಿದರೆ, ಸಿಟ್ರಸ್ ಜಾತಿಗೆ ಸೇರಿದ ಹಣ್ಣುಗಳು ಮೂತ್ರ ಹಾಗೂ ಜನನಾಂಗಗಳಿಗೆ ಸಂಬಂಧಿಸಿದಂತೆ ವ್ಯತಿರಿಕ್ತ ಪರಿಣಾಮಗಳನ್ನ ಉಂಟುಮಾಡುವಂತಹವು ಅಂತಾ ಗುರುತಿಸಲ್ಪಟ್ಟಿವೆ. ಅದೇ ರೀತಿ ಇತರ ತರಕಾರಿಗಳಿಗೆ ಹೋಲಿಸಿದರೆ, ಹಸುರು ಸೊಪ್ಪುಯುಕ್ತ ಅಥವಾ ಗಾಢ ಹಳದಿ ವರ್ಣದ ತರಕಾರಿಗಳೂ ಕೂಡ.

ಕೊನೆಯದಾಗಿ

ಕೊನೆಯದಾಗಿ

"ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರೋ ಆರೋಗ್ಯದಾಯಕ ಆಹಾರಪದ್ಧತಿ ಆರೋಗ್ಯದ ಮೇಲೆ ಬಹಳಷ್ಟು ಒಳ್ಳೆಯ ಪರಿಣಾಮಗಳನ್ನ ಉಂಟುಮಾಡತ್ತೆ ಅನ್ನೋದರ ಬಗ್ಗೆ ಬೇಕಾದಷ್ಟು ಸಾಕ್ಷ್ಯಾಧಾರಗಳಿವೆ, ಆದರೆ ಆಹಾರವಸ್ತುಗಳ ಆಯ್ಕೆಗಳಿಂದ ಮೆನೋಪಾಸ್ ರೋಗಲಕ್ಷಣಗಳ ಮೇಲೆ ಏನಾದರೂ ಪರಿಣಾಮಗಳಾಗುತ್ತವೆಯೇ ಅನ್ನೋದನ್ನ ನಿರ್ಧರಿಸೋಕೆ ಇನ್ನಷ್ಟು ಅಧ್ಯಯನಗಳಾಗಬೇಕಿವೆ" ಎನ್ನುತ್ತಾರೆ ಫ಼ೌಬಿಯೊನ್ ಅವರು.

English summary

Higher Intake of Fruits Linked to Lesser Menopausal Symptoms: Study

Study says higher intake of fruits linked to lesser menopausal symptoms, read on.
Story first published: Friday, November 20, 2020, 9:37 [IST]
X
Desktop Bottom Promotion