For Quick Alerts
ALLOW NOTIFICATIONS  
For Daily Alerts

ವಯಸ್ಸು ನಲವತ್ತು ದಾಟಿದ ಪುರುಷರು ಆರೋಗ್ಯವಾಗಿರಲು ಕಡ್ಡಾಯವಾಗಿ ಸೇವಿಸಬೇಕಾದ ಆಹಾರಗಳು

|

ಹಿಂದೊಮ್ಮೆ ಕೇವಲ ಇಪ್ಪತ್ತೈದು ಮೂವತ್ತೈದರ ನಡುವಣ ವಯಸ್ಸನ್ನೇ ತಾರುಣ್ಯ ಎನ್ನಲಾಗುತ್ತಿತ್ತು. ಈಗ ನಲವತ್ತೇ ಹೊಸ ಇಪ್ಪತ್ತು! ಅಂದರೆ ಈ ವಯಸ್ಸಿನಲ್ಲಿಯೇ ಪುರುಷ ತನ್ನ ಹೊಸಜೀವನವನ್ನು ಪ್ರಾರಂಭಿಸುತ್ತಾನೆ. ಜೀವನದಲ್ಲಿ ಒಂದು ನೆಲೆ ಕಂಡುಕೊಳ್ಳುವ ಜೊತೆಗೇ ತಾರುಣ್ಯದ ಹುಚ್ಚಾಟವನ್ನು ನಿಲ್ಲಿಸಿ ಪ್ರಬುದ್ಧನಾಗಿರುತ್ತಾನೆ. ಇದರ ಅರ್ಥ ಇವರಿಗೆ ನಡುವಯಸ್ಸಾಗಿದೆ ಎಂದಲ್ಲ! ಈಗಲೂ ಇವರಿಗೆ ಅಕ್ಷಯ್ ಕುಮಾರ್ ನಂತಹ ಹೊಟ್ಟೆ, ಶಾರುಖ್ ಖಾನ್ ನಂತಹ ಕಳೆ, ಆಮಿರ್ ಖಾನ್ ನಂತಹ ಶಕ್ತಿ ಪಡೆಯಲು ಸಾಧ್ಯವಿದೆ.

ಹೇಗೆ ಎಂದರೆ ಇವರ ದೇಹಕ್ಕೆ ಒಗ್ಗುವ ಆಹಾರಾಭ್ಯಾಸಗಳಿಗೆ ಈಗ ಒಗ್ಗಿಕೊಳ್ಳಬೇಕಾಗುತ್ತದೆ. ಇದರಲ್ಲಿ ಆರೋಗ್ಯಕರ ಆಹಾರ ಸೇವನೆ, ಮಿತವಾದ ಮದ್ಯಪಾನ, ಸಾಕಷ್ಟು ವ್ಯಾಯಾಮ, ಸಾಕಷ್ಟು ನಿದ್ದೆ ಪಡೆಯುವುದು ಹಾಗೂ ಮುಖ್ಯವಾಗಿ ಮನಸ್ಸನ್ನು ತಿಳಿಗೊಳಿಸಲು ಸಾಕಷ್ಟು ನಗುವುದು ಎಲ್ಲವೂ ಅಗತ್ಯವಿದೆ. ಈ ಮೂಲಕ ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಎದುರಾಗುವ ಸ್ಥೂಲಕಾಯ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಮಾನಸಿಕ ಒತ್ತಡದಿಂದ ಪಾರಾಗಬಹುದು. ಇದರಲ್ಲಿ ಪ್ರಮುಖವಾಗಿರುವ ನಿತ್ಯದ ಆಹಾರ ಸೇವನೆಯ ವಿಷಯದಲ್ಲಿ ಇಂದಿನ ಲೇಖನದಲ್ಲಿ ಪ್ರಮುಖ ಮಾಹಿತಿಯನ್ನು ನೀಡಲಾಗಿದೆ:

ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳು

ನಿಮ್ಮ ಆಹಾರದಲ್ಲಿ ಸಾಕಷ್ಟು ಇಡಿಯ ಧಾನ್ಯಗಳಿರುವಂತೆ ನೋಡಿಕೊಳ್ಳಿ. ಇದರಿಂದ ಉತ್ತಮ ಪ್ರಮಾಣದ ಕರಗದ ನಾರು, ಸಸ್ಯಜನ್ಯ ಪ್ರೋಟೀನ್, ವಿಟಮಿನ್ನುಗಳು, ಖನಿಜಗಳು ಹಾಗೂ ಹಲವು ವಿಧಧ ಫೈಟೋ ನ್ಯೂಟ್ರಿಯೆಂಟ್ ಗಳು ದೊರಕುತ್ತವೆ. ಹಾಗೂ ಇವೆಲ್ಲವೂ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಕರಗದ ನಾರು. ಇದು ರಕ್ತದಲ್ಲಿರುವ ಸಕ್ಕರೆ, ಕೆಟ್ಟ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮೊದಲಾದವುಗಳನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ಅಲ್ಲದೇ ಈ ನಾರು ಹೊಟ್ಟೆಯನ್ನು ಹೆಚ್ಚಿನ ಹೊತ್ತು ತುಂಬಿರುವಂತಿರಿಸಿ ಎರಡು ಹೊತ್ತುಗಳ ನಡುವಣ ಹಸಿವನ್ನು ಹತ್ತಿಕ್ಕುತ್ತದೆ. ಅಲ್ಲದೇ ಈ ಆಹಾರದಿಂದ ಸಕ್ಕರೆ ಅತಿ ನಿಧಾನವಾಗಿ ರಕ್ತಕ್ಕೆ ಸೇರ್ಪಡೆಗೊಳ್ಳುವ ಕಾರಣ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರುವುದು ನಿಲ್ಲುತ್ತದೆ ಹಾಗೂ ಇದು ಮಧುಮೇಹದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಬೀನ್ಸ್

ಬೀನ್ಸ್

ಈ ವಯಸ್ಸಿನಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟುಗಳು, ಆಂಟಿ ಆಕ್ಸಿಡೆಂಟ್ ಹಾಗೂ ಕೊಬ್ಬು ಇರುವ ಆಹಾರವನ್ನೇ ಸೇವಿಸಬೇಕು ಎಂಬ ವಿಷಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ನಾವು ಪ್ರೋಟೀನ್ ಬಗ್ಗೆ ಮರೆತೇ ಬಿಟ್ಟಿದ್ದೇವೆ. ನಮ್ಮ ದೇಹದ ಪ್ರತಿ ಜೀವಕೋಶದಲ್ಲಿಯೂ ಪ್ರೋಟೀನ್ ಇದೆ. ನಮ್ಮ ದೇಹದ ಅರ್ಧದಷ್ಟು ಭಾಗ ಪ್ರೋಟೀನ್ ಸ್ನಾಯುಗಳಲ್ಲಿದೆ ಹಾಗೂ ಉಳಿದವು ಮೂಳೆ, ಅಸ್ಥಿಮಜ್ಜೆ ಹಾಗೂ ಚರ್ಮದಲ್ಲಿದೆ. ಬೀನ್ಸ್ ಅಥವಾ ರಾಜ್ಮಾ ಎಂಬ ಬೀಜಗಳು ಪ್ರೋಟೀನ್ ನ ಅತ್ಯುತ್ತಮ ಸಸ್ಯಜನ್ಯ ಮೂಲಗಳಾಗಿವೆ. ಬೀನ್ಸ್ ನಲ್ಲಿ ಮೀಥಿಯೋನೈನ್ ಎಂಬ ಒಂದನ್ನು ಬಿಟ್ಟು ಸುಮಾರು ಎಂಟರಿಂದ ಒಂಭತ್ತು ಬಗೆಯ ಅಮೈನೋ ಆಮ್ಲಗಳಿವೆ. ಈ ಮೀಥಿಯೋನೈನ್ ಕೇವಲ ಕಾಳುಗಳಿಂದ ಲಭಿಸುತ್ತದೆ. ಹಾಗಾಗಿ ಬೀನ್ಸ್ ನೊಂದಿಗೆ ಯಾವುದಾದರೊಂದು ಕಾಳುಗಳನ್ನು ಬೆರೆಸಿ ನೆನೆಸಿಟ್ಟು ತಯಾರಿಸುವ ಖಾದ್ಯ ಪರಿಪೂರ್ಣ ಆಹಾರವಾಗುತ್ತದೆ.

ಅಕ್ರೋಟು

ಅಕ್ರೋಟು

ಗಟ್ಟಿ ಕವಚವನ್ನು ಒಡೆದಾಗ ಲಭಿಸುವ ತಿರುಳು ನಮ್ಮ ಮೆದುಳನ್ನೇ ಹೋಲುತ್ತದೆ. ಇದರಲ್ಲಿರುವ ಅವಶ್ಯಕ ತೈಲದ ಜೊತೆಗೇ ವಿಟಮಿನ್ ಇ ಹಾಗೂ ಮೆಲಟೋನಿನ್ ಹಾಗೂ ಹಲವು ಆಂಟಿ ಆಕ್ಸಿಡೆಂಟ್ ಗಳು ಆರೋಗ್ಯವನ್ನು ವೃದ್ಧಿಸುತ್ತವೆ. ಈ ಅಂಶಗಳು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹೊಡೆದೋಡಿಸುತ್ತವೆ ಹಾಗೂ ವೃದ್ದಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ. ಅಕ್ರೋಟಿನಲ್ಲಿರುವ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳ ಬಗ್ಗೆ ನಡೆದ ಸಂಶೋಧನೆಯಲ್ಲಿ ನಡುವಯಸ್ಸು ದಾಟಿದ ಬಳಿಕ ಸಾಮಾನ್ಯವಾಗಿ ಎದುರಾಗುವ metabolic syndrome (ಸೊಂಟದ ಕೊಬ್ಬು, ಸ್ಥೂಲಕಾಯ, ರಕ್ತದಲ್ಲಿ ಅಧಿಕ ಸಕ್ಕರೆ, ಅಧಿಕ ರಕ್ತದೊತ್ತಡ ಮೊದಲಾದ ಸ್ಥಿತಿಗಳನ್ನು ಒಟ್ಟಾಗಿ ಪರಿಗಣಿಸುವುದು) ಸ್ಥಿತಿಯ ವಿರುದ್ದ ರಕ್ಷಣೆ ಒದಗಿಸುತ್ತದೆ.

ಹಸಿರು ಟೀ

ಹಸಿರು ಟೀ

ಟೀ ಗಳಲ್ಲಿಯೇ ಅತ್ಯಂತ ಆರೋಗ್ಯಕರವಾದ ಹಸಿರು ಟೀ ರುಚಿಯಲ್ಲಿ ಕಹಿಯಾಗಿದ್ದರೂ ಇದರ ಆಂಟಿ ಆಕ್ಸಿಡೆಂಟ್ ಮತ್ತು ಕ್ಯಾನ್ಸರ್ ವಿರುದ್ದ ಹೋರಾಡುವ ಗುಣಗಳಿಂದಾಗಿ ದೇಹಕ್ಕೆ ಸಿಹಿಯೇ ಆಗಿದೆ. ಇದನ್ನು ಅತಿ ಕಡಿಮೆ ಸಂಸ್ಕರಿಸಿರುವ ಕಾರಣ ಇದು ಹಚ್ಚೂ ಕಡಿಮೆ ನೈಸರ್ಗಿಕ ರೂಪದಲ್ಲಿಯೇ ಲಭಿಸುತ್ತದೆ ಹಾಗೂ ಗರಿಷ್ಟ ಪ್ರಮಾಣದ ಕ್ಯಾಟೆಚಿನ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಲಭಿಸುತ್ತದೆ. ನಿತ್ಯದ ಹಸಿರು ಟೀ ಸೇವನೆಯಿಂದ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು ಹಾಗೂ ಹೃದಯ ಸ್ತಂಭನದಿಂದ ರಕ್ಷಣೆ ದೊರಕುತ್ತದೆ.

ಬದನೇಕಾಯಿ

ಬದನೇಕಾಯಿ

ಸಾಮಾನ್ಯವಾಗಿ ಅಗ್ಗ ಎಂಬ ಕಾರಣಕ್ಕೆ ಹೆಚ್ಚಿನವರು ಕಡೆಗಣಿಸುವ ಬದನೇಕಾಯಿಯೂ ಪುರುಷರಿಗೆ ಅತ್ಯುತ್ತಮ ಆಹಾರವಾಗಿದೆ. ಈ ಮನಃಸ್ಥಿತಿಯನ್ನು ಬಿಟ್ಟು ಈ ಸುಂದರ ನೇರಳೆ ಬಣ್ಣದ ತರಕಾರಿಯನ್ನು ಸೇವಿಸತೊಡಗಿದರೆ ಇದರಲ್ಲಿರುವ ಹಲವಾರು ಪೋಷಕಾಂಶಗಳು ನಿಮ್ಮನ್ನು ಆರೋಗ್ಯಕರವಾಗಿರಿಸಲು ನೆರವಾಗುತ್ತವೆ. ಇದರಲ್ಲಿ ಹಲವು ಆಂಟಿ ಆಕ್ಸಿಡೆಂಟ್ ಗಳು, ಫೈಟೋ ನ್ಯೂಟ್ರಿಯೆಂಟ್ ಗಳು, ಫಿನಾಲಿಕ್ ಸಂಯುಕ್ತಗಳು ಹಾಗೂ ಫ್ಲೇವನಾಯ್ಡುಗಳಿದ್ದು ಕಡಿಮೆ ಕ್ಯಾಲೋರಿಗಳಿವೆ. ಅಲ್ಲದೇ ಹೆಚ್ಚಿನ ಪ್ರಮಾಣದ ನೀರು ಮತ್ತು ಕರಗದ ನಾರು ಸಹಾ ಇದೆ. ಇದರ ಸಿಪ್ಪೆಗೆ ನೇರಳೆ ಬಣ್ಣ ಬರಲು ಕಾರಣವೇನೆಂದರೆ ಇದರಲ್ಲಿರುವ ಆಂಥೋಸಯಾನಿನ್ ಎಂಬ ಪೋಷಕಾಂಶ. ಈ ಪೋಷಕಾಂಶಕ್ಕೆ ನಾಸುನಿನ್ (Nasunin) ಎಂದೂ ಕರೆಯುತ್ತಾರೆ. ಈ ಪೋಷಕಾಂಶ ಅತಿ ವಿರಳವಾಗಿದ್ದು ಇದರಲ್ಲಿ ಬದನೇಕಾಯಿ ಒಂದಗಿದೆ. ಹಾಗಾಗಿ ಪುರುಷರು ಈ ತರಕಾರಿಯನ್ನು ಆದಷ್ಟೂ ಹೆಚ್ಚು ತಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಬೇಕು.

Most Read: ಖರ್ಜೂರವನ್ನು ಹಾಲಿನೊಂದಿಗೆ ಸೇವಿಸಿದರೆ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ

ಸೀಬೆಹಣ್ಣು (Guava)

ಸೀಬೆಹಣ್ಣು (Guava)

ಪೇರಳೆ ಹಣ್ಣು ಅಥವಾ ಸೀಬೆಹಣ್ಣು ಎಂಬ ಹಣ್ಣಿನಲ್ಲಿಯೂ ವಿಟಮಿನ್ ಸಿ ಸಮೃದ್ದವಾಗಿದೆ. ಈ ಹಣ್ಣು ವಿಫುಲವಾಗಿ ದೊರಕುವಾಗ ಸಾಧ್ಯವಾದಷ್ಟೂ ಮಟ್ಟಿಗೆ ಪುರುಷರು ಸೇವಿಸಬೇಕು. ಸುಮಾರು ನೂರು ಗ್ರಾಂ ಹಣ್ಣಿನಲ್ಲಿ 212 ಮಿಲಿಗ್ರಾಂ ವಿಟಮಿನ್ ಸಿ ಈ ಹಣ್ಣಿನಲ್ಲಿರುತ್ತದೆ. ಈ ಪೋಷಕಾಂಶ ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಅತಿ ಅಗತ್ಯವಾಗಿದೆ ಹಾಗೂ ಹಲವಾರು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಹಣ್ಣಿನಲ್ಲಿರುವ ಕಣ್ಣಿಣದ ಅಂಶವನ್ನು ಹೀರಿಕೊಳ್ಳಲೂ ಈ ವಿಟಮಿನ್ ಸಿ ನೆರವಾಗುತ್ತದೆ. ಇದರ ಜೊತೆಗೇ, ಇದರಲ್ಲಿರುವ ಲೈಕೋಪೀನ್, ಕ್ವೆರ್ಸಟಿನ್ ಮತ್ತು ಇತರ ಪಾಲಿಫಿನಾಲಿಕ್ ಸಂಯುಕ್ತಗಳು ಇದನ್ನೊಂದು ಉತ್ತಮ ಆಂಟಿ ಆಕ್ಸಿಡೆಂಟ್ ಗಳ ಆಗರವನ್ನಾಗಿಸಿವೆ.

ವಿವಿಧ ಮೂಲಿಕೆಗಳು

ವಿವಿಧ ಮೂಲಿಕೆಗಳು

ಮೂಲಿಕೆಗಳಲಿ ಅಡಾಪ್ಟೋಜೆನ್ ಎಂಬ ಪೋಷಕಾಂಶಗಳಿವೆ. ಮಾನಸಿಕ ಒತ್ತಡವನ್ನು ನಿವಾರಿಸುವ ಕ್ಷಮತೆಯುಳ್ಳ ಈ ಪೋಷಕಾಂಶ ಮೋರಿಂಗಾ, ಅಶ್ವಗಂಧ, ಪವಿತ್ರ ತುಳಸಿ, ಲಿಕೋರೀಸ್ ಹಾಗೂ ಜಿನ್ಸೆಂಗ್ ಮೊದಲಾದ ಮೂಲಿಕೆಗಳಲ್ಲಿ ಹೇರಳವಾಗಿದೆ. ಈ ಮೂಲಿಕೆಗಳ ಮಹತ್ವವನ್ನು ಮನಗಂಡ ನಮ್ಮ ಹಿರಿಯರು ಬಹಳ ಹಿಂದಿನಿಂದಲೇ ಮಾನಸಿಕ ಒತ್ತಡದಿಂದ ಪಾರಾಗಲು ಬಳಸುತ್ತಾ ಬಂದಿದ್ದಾರೆ. ಈ ಮೂಲಿಕೆಗಳಲ್ಲಿ ಇನ್ನೂ ಯಾವ ಅಧ್ಬುತ ಶಕ್ತಿಗಳಿವೆ ಹಾಗೂ ಇವುಗಳನ್ನು ನಿತ್ಯದ ಸೇವನೆಗೆ ಒಗ್ಗುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಈಗ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ.

ಎಣ್ಣೆಗಳು

ಎಣ್ಣೆಗಳು

ನಮ್ಮ ದೇಹಕ್ಕೆ ಎಣ್ಣೆಯೂ ಮಿತಪ್ರಮಾಣದಲ್ಲಿ ಬೇಕು. ತೂಕ ಕಳೆದುಕೊಳ್ಳುವ ಪ್ರಯತ್ನ ಅಥವಾ ಹೃದಯ ಮತ್ತು ಕೊಲೆಸ್ಟ್ರಾಲ್ ಬಗ್ಗೆ ಕಟ್ಟುನಿಟ್ಟು ಪಾಲಿಸಲು ವೈದ್ಯರ ಸಲಹೆಯ ಹೊರತಾಗಿ ಎಣ್ಣೆಯನ್ನು ಸೇವಿಸದೇ ಇರಲು ಕಾರಣವಿಲ್ಲ. ನಮ್ಮ ಆಹಾರವನ್ನು ಸ್ವಾದಿಷ್ಟವಾಗಿಸುವ ಜೊತೆಗೇ ಆಹಾರದಲ್ಲಿರುವ ವಿಟಮಿನ್ ಎ, ಡಿ, ಇ ಮತ್ತು ಕೆ ಗಳನ್ನು ಕರುಳುಗಳು ಹೀರಿಕೊಳ್ಳುವಂತೆ ಮಾಡಲೂ ಎಣ್ಣೆಯ ಅಗತ್ಯವಿದೆ. ಇವುಗಳಿಂದ ಲಭಿಸುವ ಕೊಬ್ಬಿನ ಆಮ್ಲ, ಶಕ್ತಿ ಮತ್ತು ಇತರ ಪೋಷಕಾಂಶಗಳು ನಮ್ಮ ದೇಹದ ದ್ರವಭಾಗ ಮತ್ತು ಜೀವಕೋಶಗಳ ಪದರಕ್ಕೆ ಅತಿ ಅವಶ್ಯವಾಗಿವೆ. ನಮ್ಮ ದೇಹದ ಒಟ್ಟು ಅಗತ್ಯತೆಯ 20-25% ದಷ್ಟು ಕ್ಯಾಲೋರಿಗಳು ನಮಗೆ ಎಣ್ಣೆಯಿಂದ ಲಭಿಸುತ್ತವೆ. ಹಾಗಾಗಿ ನಮ್ಮ ಆಹಾರದಲ್ಲಿ ಎಣ್ಣೆಯೂ ಮಿತವಾಗಿರಬೇಕೇ ಹೊರತು ಇಲ್ಲದೇ ಇರಬಾರದು.

ಹಾಲು

ಹಾಲು

ಹಾಲು ಕೇವಲ ಮಕ್ಕಳಿಗೆ ಮಾತ್ರವಲ್ಲ, ಹಿರಿಯಗಿರೂ ಅಗತ್ಯವಿದೆ. ಇದೊಂದು ಪ್ರೋಟೀನ್, ವಿಟಮಿನ್ ಹಾಗೂ ವಿವಿಧ ಖನಿಜಗಳಿಂದ ಭರಿತ ಪರಿಪೂರ್ಣ ಆಹಾರವಾಗಿದೆ. ಒಂದು ಲೋಟ ಹಾಲಿನಲ್ಲಿ 58 ಕ್ಯಾಲೋರಿಗಳು ಲಭಿಸುತ್ತವೆ ಹಾಗೂ 240 ಮಿಲಿಗ್ರಾಂ ಕ್ಯಾಲ್ಸಿಯಂ ಲಭಿಸುತ್ತದೆ. ಇದು ನಮ್ಮ ನಿತ್ಯದ ಒಟ್ಟಾರೆ ಅಗತ್ಯತೆಯ ಮೂರನೆಯ ಒಂದು ಭಾಗದಷ್ಟಿದೆ. ವಿಟಮಿನ್ ಬಿ12 ಎಂಬ ಪೋಷಕಾಂಶ ಮಾಂಸಾಹಾರ ಬಿಟ್ಟರೆ ಕೇವಲ ಹಾಲಿನಲ್ಲಿ ಮಾತ್ರವೇ ಲಭಿಸುವುದರಿಂದ ಸಸ್ಯಾಹಾರಿಗಳಿಗೆ ಹಾಲು ಅನಿವಾರ್ಯವೇ ಹೌದು. ನಮ್ಮ ದೇಹದ ಹಲ್ಲು ಮತ್ತು ಮೂಳೆಗಳು ದೃಢವಾಗಿರಬೇಕೆಂದರೆ ನಿತ್ಯವೂ ಅಗತ್ಯ ಪ್ರಮಾಣದ ಕ್ಯಾಲ್ಸಿಯಂ ಲಭಿಸುತ್ತಿರಬೇಕು. ಹಾಲು ಈ ಅಗತ್ಯತೆಯನ್ನು ಪೂರೈಸುವ ಜೊತೆಗೇ ಹೃದಯಸ್ತಂಭನದಿಂದ ರಕ್ಷಣೆಯನ್ನೂ ಒದಗಿಸುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಕಪ್ಪು ಚಾಕಲೇಟಿನಲ್ಲಿರುವ ಕೋಕೋ ಪುಡಿ ಫ್ಲೇವನಾಯ್ಡುಗಳಿಂದ ತುಂಬಿದೆ ಹಾಗೂ ಇವು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಈ ಫ್ಲೇವನಾಯ್ಡುಗಳು ನಮ್ಮ ದೇಹದಲ್ಲಿ ನೈಟ್ರೈಟುಗಳು ನೊರೆಯ ರೂಪದಲ್ಲಿ ತುಂಬಿಕೊಳ್ಳುವುದನ್ನು ತಪ್ಪಿಸುತ್ತವೆ. ಈ ಮೂಲಕ ರಕ್ತದಲ್ಲಿ ಈ ಗುಳ್ಳೆಗಳು ಸಾಗುತ್ತಾ ನರಗಳ ಒಳಗೋಡೆಗಳ ಮೇಲೆ ಒತ್ತಡ ಹೇರುವುದನ್ನು ತಪ್ಪಿಸುತ್ತದೆ. ಈ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಆದರೆ ಈ ಚಾಕಲೇಟಿನ ಸೇವನೆಯ ಪ್ರಮಾಣ ಮಿತವಾಗಿರುವುದು ಅವಶ್ಯ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾನ ಕೆಫೀನ್ ಇರುವ ಕಾರಣ ದಿನಕ್ಕೆ ಒಂದು ಅಥವಾ ಎರಡು ತುಂಡುಗಳಿಗೂ ಹೆಚ್ಚು ಪ್ರಮಾಣದ ಸೇವನೆಯಿಂದ ರಕ್ತದೊತ್ತಡ ಹೆಚ್ಚಬಹುದು ಹಾಗೂ ಕೆಫೀನ್ ಆಧಾರಿತ ಇತರ ತೊಂದರೆಗಳೂ ಎದುರಾಗಬಹುದು.

English summary

Foods Men Over 40 Must Eat For Their Overall Health

Foods Men Over 40 Should Eat. Wild Salmon. Fatty fish like wild salmon contain omega-3 fatty acids that help reduce inflammation, slow the plaque buildup inside blood vessels and increase the ratio of good to bad cholesterol levels
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more