For Quick Alerts
ALLOW NOTIFICATIONS  
For Daily Alerts

ಸೈಕಲ್ ತುಳಿಯುವದರಿಂದ ಸೊಂಟದ ಕೊಬ್ಬು ಕರಗಿಸಲು ನೆರವಾಗುವುದೇ?

|

ಸೊಂಟದ ಕೊಬ್ಬು, ಡೊಳ್ಳು ಹೊಟ್ಟೆ ಇರುವರ ಶಾರೀರವನ್ನು ಹೊಗಳುವವರು ಈ ಜಗತ್ತಿನಲ್ಲಿ ಅತಿ ಕಡಿಮೆ ಇರಬಹುದು. ವಾಸ್ತವವಾಗಿ, ಸ್ಥೂಲದೇಹ ಹೊಂದಿದ್ದೂ ಉತ್ತಮ ಆರೋಗ್ಯ ಹೊಂದಿದ್ದರೆ ಈ ವ್ಯಕ್ತಿಗಳು ತಮ್ಮ ಬಗ್ಗೆ ಕೀಳರಿಮೆ ಬೆಳಸಿಕೊಳ್ಳಬೇಕಾಗಿಯೇ ಇಲ್ಲ. ಆದರೆ ಸೊಂಟದ ಕೊಬ್ಬು ಹೆಚ್ಚು ಸಂಗ್ರಹವಾದಷ್ಟೂ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಹಲವಾರು! ಹಾಗಾಗಿ ಕೊಂಚ ಕಷ್ಟ ಅನುಭವಿಸಬೇಕಾದರೂ ಸರಿ, ಈ ಕೊಬ್ಬನ್ನು ನಿವಾರಿಸುವತ್ತ ಪ್ರಾಮಾಣಿಯ ಪ್ರಯತ್ನಗಳನ್ನಂತೂ ತಕ್ಷಣದಿಂದ ಮಾಡಲೇ ಬೇಕು.

ಸೊಂಟದ ಕೊಬ್ಬು ಅನಾರೋಗ್ಯಕರ ಹೌದು ಎಲ್ಲರೂ ಇದನ್ನು ಒಪ್ಪುತ್ತಾರೆ, ಆದರೆ ಹೇಗೆ? ಉತ್ತರ ಇಲ್ಲಿದೆ: ಸೊಂಟದ ಕೊಬ್ಬು ಎಂದರೆ ದೇಹ ನಾಳಿನ ಅಗತ್ಯಕ್ಕಾಗಿ ಉಳಿಸಿಕೊಳ್ಳುವ ಶಾಶ್ವತ ಕೊಬ್ಬು (visceral fat), ಇದು ಸಾಮಾನ್ಯವಾಗಿ ಹೊಟ್ಟೆಯನ್ನು ಮುಂದೂಡಿದಂತೆ ಕಾಣಿಸುತ್ತದೆ. ಆದರೆ ಕೊಬ್ಬು ನಮ್ಮ ಹೊಟ್ಟೆಯಲ್ಲಿರುವ ಪ್ರತಿಯೊಂದೂ ಅಂಗವನ್ನು ಸುತ್ತುವರೆದಿರುತ್ತದೆ ಹಾಗೂ ಈ ಮೂಲಕ ಪ್ರತಿ ಅಂಗದ ಕಾರ್ಯನಿರ್ವಹಣೆಗಾಗಿ ಹೆಚ್ಚಿನ ರಕ್ತಸಂಚಾರದ ಅಗತ್ಯ ಬೀಳುತ್ತದೆ ಮತ್ತು ಹೃದಯದ ಮೇಲಿನ ಒತ್ತಡ ಹೆಚ್ಚುತ್ತದೆ. ಪರಿಣಾಮವಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮೊದಲಾದವು ಎದುರಾಗುತ್ತವೆ.

ಆದ್ದರಿಂದ ಸೊಂಟದ ಕೊಬ್ಬನ್ನು ಬೆಳೆಯಗೊಡದೇ ಇರುವುದೇ ಸೂಕ್ತ ಮುನ್ನೆಚ್ಚರಿಕಾ ಕ್ರಮವಾಗಿದೆ. ಆದರೆ ಈಗಾಗಲೇ ಕೊಬ್ಬು ತುಂಬಿಕೊಂಡಿದ್ದರೆ ಇದನ್ನು ಕರಗಿಸಲು ಕೊಂಚ ಕಷ್ಟಪಡಲೇಬೇಕಾಗುತ್ತದೆ. ಆಹಾರಕ್ರಮದಲ್ಲಿ ಬದಲಾವಣೆ, ಜೀವನಕ್ರಮದಲ್ಲಿ ಬದಲಾವಣೆ, ನಿಯಮಿತ ವ್ಯಾಯಾಮ, ಅನಾರೋಗ್ಯಕರ ಆಹಾರಗಳ ಆಕರ್ಷಣೆಗೆ ಒಳಗಾಗದೇ ಇರುವುದು ಇತ್ಯಾದಿಗಳು ಸೊಂಟದ ಕೊಬ್ಬು ಇಳಿಸಲು ನೆರವಾಗುತ್ತವೆ.

cycling

ಇದರಲ್ಲೊಂದು ಉತ್ತಮ ಬದಲಾವಣೆ ಎಂದರೆ ನಿಮ್ಮ ನಿತ್ಯದ ಚಲನವಲನಗಳಿಗೆ ಸೈಕಲ್ ಸವಾರಿಯನ್ನು ಅವಲಂಬಿಸುವುದು! ನೆನಪಿದೆಯೇ? ಚಿಕ್ಕವರಿದ್ದಾಗ ನಾವು ಇಡಿಯ ದಿನ ಸೈಕಲ್ ತುಳಿಯುತ್ತಿದ್ದೆವು ಹಾಗೂ ಮನಬಂದಲ್ಲಿ ಸ್ವತಂತ್ರರಾಗಿ ತಿರುಗಾಡುತ್ತಿದ್ದೆವು. ಸೈಕಲ್ ತುಳಿಯುವುದು ಆರೋಗ್ಯವನ್ನು ಹಲವು ವಿಧಗಳಲ್ಲಿ ಉತ್ತಮಗೊಳಿಸುತ್ತದೆ ಹಾಗೂ ವಿಶೇಷವಾಗಿ ಸೊಂಟದ ಕೊಬ್ಬನ್ನು ಕರಗಿಸುವ ಮೂಲಕ ಹಲವು ರೋಗಗಳಿಂದ ರಕ್ಷಣೆಯನ್ನೂ ಒದಗಿಸುತ್ತದೆ.

ಹೊಟ್ಟೆಯ ಬೊಜ್ಜು ಕರಗಿಸುವ ಸೂಪರ್ ಟ್ರಿಕ್ಸ್! ಯಾವುದೇ ಕಸರತ್ತು ಬೇಡ!

ವ್ಯಾಯಾಮಗಳಲ್ಲಿಯೇ ಅತಿ ಸುಲಭವಾದ ವ್ಯಾಯಾಮವಾದ ಸೈಕ್ಲಿಂಗ್ ಇಂದು ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿದೆ ಹಾಗೂ ಸೈಕಲ್ ತುಳಿಯಲು ನಡೆಯುವುದಕ್ಕೂ ಐದನೆಯ ಒಂದರಷ್ಟು ಶ್ರಮ ವಹಿಸಿದರೆ ಸಾಕು ಹಾಗೂ ಇದೇ ಶ್ರಮದಿಂದ ನಡೆದು ತಲುಪಬಹುದಾದ ದೂರವನ್ನು ಐದನೆಯ ಒಂದರಷ್ಟು ಸಮಯದಲ್ಲಿ ತಲುಪುತ್ತೇವೆ. ಕೆಲವು ದೇಶಗಳಲ್ಲಂತೂ (ಕೊಲಂಬಿಯಾ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಚೀನಾ, ಜಪಾನ್) ಕೆಲವು ನಗರಗಳಲ್ಲಿ ಬೈಸಿಕಲ್ಲುಗಳೇ ನಿತ್ಯದ ಸಂಚಾರದ ಮುಖ್ಯ ವಾಹನಗಳಾಗಿವೆ. ನಮ್ಮ ಭಾರತದಲ್ಲಿಯೂ ಸೈಕಲ್ಲುಗಳಿಗೆಂದೇ ವಿಶೇಷ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ (ಪ್ರಥಮವಾಗಿ ಪೂನಾದಲ್ಲಿ, ಈಗ ನಮ್ಮ ಮೈಸೂರಿನಲ್ಲಿಯೂ ಈ ಬಗ್ಗೆ ಹೆಚ್ಚಿನ ಪ್ರಗತಿ ಕಂಡುಬರುತ್ತಿದೆ).

ಸೈಕ್ಲಿಂಗ್ ಅನ್ನು ಮುಖ್ಯ ವಾಹನವಾಗಿ ಬಳಸುವ ಮೂಲಕ ಅಷ್ಟರ ಮಟ್ಟಿಗೆ ವಾಹನವನ್ನು ಬಳಸದೇ ಪ್ರದೂಷಣೆಯನ್ನು ಮಾಡದೇ ಹೋದ ತೃಪ್ತಿಯೂ ದೊರಕುತ್ತದೆ. ಬನ್ನಿ, ಸೈಕ್ಲಿಂಗ್ ನಿಂದ ಸೊಂಟದ ಕೊಬ್ಬು ಹೇಗೆ ಕರಗುತ್ತದೆ ಎಂಬುದನ್ನು ನೋಡೋಣ.. ಯಾವುದೇ ಕೊಬ್ಬು ತಕ್ಷಣ ಕರಗುತ್ತದೆ ಎಂಬುದು ಒಂದು ದೊಡ್ಡ ಮಿಥ್ಯೆಯಾಗಿದೆ. ಕೊಬ್ಬಿನ ಸಂಗ್ರಹ ನಮ್ಮ ದೇಹದಲ್ಲಿ ಒಂದೆರಡು ದಿನದಿಂದ ಆಗಿದ್ದಲ್ಲ, ಬದಲಿಗೆ ಕೆಲವಾರು ವರ್ಷಗಳ ಕಾಲ ನಿಧಾನವಾಗಿ ಹೆಚ್ಚುತ್ತಾ ಬಂದಿರುವ ಪರಿಣಾಮವೇ ಆಗಿದೆ.

ಅಲ್ಲದೇ ದೇಹದ ಕೇಂದ್ರವನ್ನು ಆಧರಿಸಿ ಕೊಬ್ಬಿನ ಸಂಗ್ರಹವೂ ದೇಹದ ತುದಿಭಾಗಗಳಲ್ಲಿ ಕನಿಷ್ಟವಾಗಿದ್ದು ಸೊಂಟದ ಭಾಗದಲ್ಲಿಯೇ ಗರಿಷ್ಟವಾಗಿರುತ್ತದೆ. ಹಾಗಾಗಿ ಕೇವಲ ಸೊಂಟದ ಕೊಬ್ಬನ್ನು ಮಾತ್ರವೇ ಕರಗಿಸಲು ಸಾಧ್ಯ ಎಂದುಕೊಂಡಿದ್ದವರಿಗೆ ನಿರಾಶೆ ಕಾದಿದೆ. ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ದೇಹದ ಇತರ ಭಾಗಗಳ ಕೊಬ್ಬು ಕರಗಿದ ಬಳಿಕವೇ ಸೊಂಟದ ಕೊಬ್ಬು ಕಡೆಯದಾಗಿ ಕರಗುತ್ತದೆ.

ಸೈಕ್ಲಿಂಗ್ ನಿಂದ ಏನಾಗುತ್ತದೆ ಎಂದರೆ, ಈ ಸಮಯದಲ್ಲಿ ಹೃದಯದ ಬಡಿತ ಹೆಚುತ್ತದೆ ಹಾಗೂ ಹೀಗೆ ಹೆಚ್ಚಿದ ಬಡಿತದಿಂದ ದೇಹದ ಎಲ್ಲಾ ಕೆಲಸಗಳೂ, ವಿಶೇಷವಾಗಿ ಜೀವರಾಸಯನಿಕ ಕ್ರಿಯೆಯೂ ಚುರುಕುಗೊಳ್ಳುತ್ತದೆ. ಅಲ್ಲದೇ ಸ್ನಾಯುಗಳ ಚಲನೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುವ ಕಾರಣ ಅನಿವಾರ್ಯವಾಗಿ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಿಕೊಳ್ಳಲೇಬೇಕಾಗಿ ಬರುತ್ತದೆ, ಇದೇ ತೂಕ ಇಳಿಯುವ ಗುಟ್ಟು.

ಆದರೆ, ಯಾವುದೇ ವ್ಯಾಯಾಮದಂತೆ ಸೈಕ್ಲಿಂಗ್ ಕೂಡಾ ವಿಫಲವಾಗಲು ಮುಖ್ಯ ಕಾರಣ ನಮ್ಮೆಲ್ಲರ ಪ್ರಾರಂಭಶೂರತನ! ಅಂದರೆ ಒಂದೆರಡು ದಿನ ಸೈಕಲ್ ತುಳಿದ ಅಥವಾ ವ್ಯಾಯಾಮ ಮಾಡಿದ ಬಳಿಕ ಮೂರನೆಯ ದಿನ ನಿಧಾನವಾಗಿ ನಾವು ಈ ಪರಿಯನ್ನು ನಿರ್ಲಕ್ಷಿಸಿ ಆರಾಮದಾಯಕ ಪ್ರಯಾಣವನ್ನೇ ಪಡೆಯುತ್ತೇವೆ.

ಹೆಚ್ಚಿನ ಕಷ್ಟದ ವ್ಯಾಯಾಮದಂತೆಯೇ ಹೆಚ್ಚಿನ ಶ್ರಮದ ಸೈಕಲ್ ತುಳಿಯುವಿಕೆಯಿಂದಲೂ ಹೆಚ್ಚಿನ ಕೊಬ್ಬು ಕರಗುತ್ತದೆ ಹಾಗೂ ಶೀಘ್ರವೇ ಸೊಂಟದ ಕೊಬ್ಬು ಸಹಾ ಕರಗಲು ಪ್ರಾರಂಭವಾಗುತ್ತದೆ. ಆದರೆ ಹೆಚ್ಚಿನ ಶ್ರಮದ ಮಟ್ಟಕ್ಕೆ ಪ್ರಾರಂಭದಿಂದಲೇ ಹೋಗಬಾರದು, ಮೊದಲಿಗೆ ವಾರಕ್ಕೊಮ್ಮೆ ಅಥವಾ ಎರಡು ದಿನ ಮಾತ್ರವೇ ನಿತ್ಯದ ಅಂತರಕ್ಕಿಂತಲೂ ಕೊಂಚ ಹೆಚ್ಚಿನ ಅಂತವನ್ನು ಕ್ರಮಿಸಬೇಕು. ಬಳಿಕ ಕ್ರಮೇಣ ಇದನ್ನು ಹೆಚ್ಚಿಸುತ್ತಾ ಬರಬೇಕು. ಈ ಬಗ್ಗೆ ಹೆಚ್ಚಿನ ತರಬೇತಿಯನ್ನು ವೃತ್ತಿಪರರಿಂದಲೂ ಪಡೆಯಬಹುದು. ಆದರೆ ಪ್ರತಿಯೊಬ್ಬರೂ ತಮ್ಮ ಸಮಯಾವಕಾಶ, ಕ್ರಮಿಸಬೇಕಾದ ದೂರ, ಲಭಿಸುವ ಸಮಯ ಮೊದಲಾದವನ್ನು ಪರಿಗಣಿಸಿ ತಮ್ಮದೇ ಆದ ಸೈಕಲ್ ತುಳಿಯುವಿಕೆಯ ವೇಳಾಪಟ್ಟಿಯನ್ನು ಹಮ್ಮಿಕೊಂಡು ಆ ಪ್ರಕಾರವೇ ನಿತ್ಯವೂ ಮುಂದುವರೆಯಬೇಕು.

ಆದರೆ ಯಾವುದೇ ವ್ಯಾಯಮದಂತೆಯೇ ಸೈಕಲ್ ತುಳಿಯುವುದು ಮಿತಿಮೀರಬಾರದು. ಅತಿಯಾದ ಶ್ರಮದಿಂದ ದೇಹ ಅತಿಯಾಗಿ ಬಳಲುತ್ತದೆ ಮಾತ್ರವಲ್ಲ, ತೀವ್ರವಾದ ಉರಿಯೂತವನ್ನೂ ಉಂಟುಮಾಡಬಹುದು. ಹಾಗಾಗಿ ಸೊಂಟದ ಕೊಬ್ಬು ಇಳಿಸುವ ನಿಟ್ಟಿನಲ್ಲಿ ಮಾಡುವ ಸೈಕ್ಲಿಂಗ್ ಮಿತಿಮೀರಿದರೆ ಹಸಿವು ಹೆಚ್ಚಿ ಹೆಚ್ಚಿನ ಆಹಾರ ಸೇವನೆಗೆ ಕಾರಣವಾಗುವ ಮೂಲಕ ಸೊಂಟದ ಕೊಬ್ಬು ಇಳಿಯುವ ಬದಲು ಹೆಚ್ಚಬಹುದು!

ಹಾಗಾಗಿ, ಸೈಕ್ಲಿಂಗ್ ತುಳಿಯುವಿಕೆಯನ್ನು ದೇಹ ತಾಳುವ ಮಿತಿಯಲ್ಲಿಯೇ ನಡೆಸಬೇಕು ಹಾಗೂ ವಾರದಲ್ಲಿ ನಡುನಡುವೆ ಮಾತ್ರವೇ ಹೆಚ್ಚಿನ ಅಂತರವನ್ನು ಕ್ರಮಿಸಬೇಕು. ಸುಮಾರು ಎರಡು ವಾರಗಳಲ್ಲಿಯೇ ಸೊಂಟದ ಕೊಬ್ಬು ಇಳಿಯಲು ಪ್ರಾರಂಭವಾಗುವುದನ್ನು ಗಮನಿಸಬಹುದು. ಇತ್ತೀಚೆಗೆ ಒಂದು ಹೊಸ ವಿಧಾನವನ್ನು ಪ್ರಸ್ತುತಪಡಿಸಲಾಗಿದೆ, ಅದೇ 80/20 ನಿಯಮ. ಈ ನಿಯಮದ ಪ್ರಕಾರ 80%ರಷ್ಟು ನಿಮ್ಮ ಒಟ್ಟು ಸೈಕಲ್ ತುಳಿಯುವಿಕೆಯ ಅವಧಿಯನ್ನು ದೇಹದ ಮೇಲೆ ಹೆಚ್ಚಿನ ಶ್ರಮ ಹೇರದೇ ನಡೆಸಬೇಕು ಹಾಗೂ 20%ರಷ್ಟು ಸಮಯವನ್ನು ದೇಹವನ್ನು ಹೆಚ್ಚಾಗಿ ದಂಡಿಸುವಷ್ಟು ತುಳಿಯಬೇಕು.

ಹಾಗಾಗಿ, ಪ್ರಾರಂಭದಲ್ಲಿ ಸುಲಭವಾದ ತುಳಿಯುವಿಕೆಯ ಬಳಿಕವೇ ಹೆಚ್ಚಿನ ಶ್ರಮದ ತುಳಿಯುವಿಕೆಯನ್ನು ನಡೆಸುವ ಮೂಲಕ ದೇಹ ಹೆಚ್ಚಿನ ತಾಜಾತನವನ್ನೂ, ಶಕ್ತಿ ಹಾಗೂ ಹುಮ್ಮಸ್ಸನ್ನೂ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಈ ಶ್ರಮದ ಗರಿಷ್ಟ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಸೊಂಟದ ಕೊಬ್ಬು ಕರಗಿಸಲು ಸೈಕಲ್ ತುಳಿಯುವ ಈ ವಿಧಾನ ನಿಜವಾಗಿಯೂ ಫಲಪ್ರದ, ಸುಲಭ ಹಾಗೂ ಹೆಚ್ಚಿನ ಖರ್ಚಿಲ್ಲದ್ದಾಗಿರುವ ಕಾರಣ ಸೈಕಲ್ ತುಳಿಯಲು ಬರುವ ಪ್ರತಿಯೊಬ್ಬರೂ ಖಂಡಿತವಾಗಿಯೂ ಪ್ರಯತ್ನಿಸಬೇಕಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಸೊಂಟದ ಕೊಬ್ಬು ಕರಗಿಸಬೇಕೇ? ಇಂದಿನಿಂದಲೇ ಸೈಕಲ್ ತುಳಿಯಲು ಪ್ರಾರಂಭಿಸಿ.

ಅಂತಿಮವಾಗಿ: ಸೈಕಲ್ ತುಳಿಯುವುದು ಆರೋಗ್ಯಕರ ಎಂದು ಪ್ರತಿಯೊಬ್ಬರಿಗೆ ಗೊತ್ತಿದ್ದರೂ ಈ ಬಗ್ಗೆ ಏಕೆ ಆಸಕ್ತಿ ವಹಿಸುವುದಿಲ್ಲ? ಸರಳ ಉತ್ತರ, ನಮ್ಮ ಸಮಾಜ ಸೈಕಲ್ ಸವಾರರಿಗೆ ನೀಡುವ ಸ್ಪಂದನೆ, ವಾಹನ ಸವಾರರು ಸೈಕಲ್ ಸವಾರರನ್ನು ನಿಕೃಷ್ಟವಾಗಿ ನೋಡುವುದೂ, ಹಾರನ್ ಹೊಡೆದು ಅವಹೇಳನ ಮಾಡುವುದೂ, ದೊಡ್ಡ ದನಿಯಲ್ಲಿ ಬೆದರಿಸುವುದೂ ಮೊದಲಾದವು ಸೈಕಲ್ ಸವಾರರು ನಿತ್ಯ ಎದುರಿಸುವ ತೊಂದರೆಗಳಾಗಿವೆ.

ಆದರೆ ಹೀಗೆ ಬೆದರಿಸುವವರಲ್ಲಿ ರಿಕ್ಷಾ ಡ್ರೈವರು, ಲಾರಿ ಡ್ರೈವರು ಮೊದಲಾವರು ಇದ್ದರೆ ಸೈಕಲ್ ಸವಾರರು ಈ ಪರಿಯನ್ನು ಅವಮಾನವೆಂದೇ ಪರಿಗಣಿಸುತ್ತಾರೆ ಹಾಗೂ ಇದಕ್ಕೆ ಕಾರಣವಾದ ಸೈಕಲ್ ಅನ್ನು ಮುಂದೆಂದೂ ಮುಟ್ಟದೇ ಹೋಗಬಹುದು. ಇದು ಕಹಿಯಾಗಿದ್ದರೂ ವಾಸ್ತವ! ಸೈಕಲ್ ಸವಾರರು ಈ ಪರಿಯನ್ನು ಮೀರಿ ಅವಹೇಳನಗಳನ್ನು ನಿರ್ಲಕ್ಷಿಸಿ ತಮ್ಮ ಪಾಡಿಗೆ ಮುಂದುವರೆಯುವ ದೃಢ ಮನಸ್ಸನ್ನು ಪಡೆದರೆ ಮಾತ್ರ ಸೈಕಲ್ ಸವಾರಿ ನಿಜಕ್ಕೂ ಆನಂದಮಯ ಹಾಗೂ ಆರೋಗ್ಯಕರವಾಗುತ್ತದೆ.

English summary

Does Cycling Help In The Reduction Of Belly Fat?

Looking down at their bellies, very few people would compliment their tummies if there are rolls of fat accumulated on them. I mean, one should be all in for accepting their bodies and being proud of themselves, if they are healthy. However, an unhealthy amount of fat on the belly or any part of the body for that matter should be reduced, immediately. Let me tell you why. Belly fat is not just an extra padding below the skin; it includes visceral fat, also known as the bad kind of fat because it lies deep within one's abdomen and surrounds all our organs which increases the risk of heart diseases, diabetes, high blood pressure, cancer and so on.
X
Desktop Bottom Promotion