For Quick Alerts
ALLOW NOTIFICATIONS  
For Daily Alerts

ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ನೆರವಾಗುವ 8 ಯೋಗಾಭ್ಯಾಸಗಳು

|

ಫಲವಂತಿಕೆಗೂ ವೀರ್ಯಾಣುಗಳ ಸಂಖ್ಯೆಗೂ ನೇರವಾದ ಸಂಬಂಧವಿದೆ ಹಾಗೂ ಈ ಸಂಖ್ಯೆ ಪ್ರತಿ ಮಿಲಿ ಲೀಟರ್ ನಲ್ಲಿ ಇಪ್ಪತ್ತು ಮಿಲಿಯನ್ ಗೂ ಕಡಿಮೆ ಇದ್ದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಇದು ಹದಿನಾಲ್ಕಕ್ಕೂ ಕಡಿಮೆ ಇದ್ದಾಗಲೂ ಗರ್ಭ ಧರಿಸಲು ನೆರವಾಗುತ್ತದೆ. ಆದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿರಲು ಈ ಸಂಖ್ಯೆ ಇಪ್ಪತ್ತರಿಂದ ನೂರಿಪ್ಪತ್ತು ಮಿಲಿಯನ್ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡವೊಂದನ್ನು ರೂಪಿಸಿದೆ. ಇಪ್ಪತ್ತು ಮಿಲಿಯನ್ ಗೂ ಕಡಿಮೆ ಇದ್ದಾಗ ಈ ಸ್ಥಿತಿಯನ್ನು oligospermia ಎಂದು ಕರೆಯಲಾಗುತ್ತದೆ ಹಾಗೂ ಇದು ಪುರುಷರಲ್ಲಿ ಫಲವಂತಿಕೆಯ ಕೊರತೆಗೆ ಕಾರಣವಾಗುತ್ತದೆ.

ಈ ಸ್ಥಿತಿಗೆ ಏನು ಕಾರಣ?

ಪ್ರಮುಖವಾಗಿ ಈ ತೊಂದರೆಗೆ ಅನುವಂಶೀಯ ಕಾರಣಗಳು, ಪೋಷಕಾಂಶಗಳ ಕೊರತೆ, ವೃಷಣಗಳಿಗೆ ಆದ ಪೆಟ್ಟು, ಅತಿಯಾದ ಮದ್ಯಪಾನ, ಕೆಲವು ಔಷಧಿಗಳ ಅಡ್ಡ ಪರಿಣಾಮ, ವಾತಾವರಣದಲ್ಲಿರುವ ವಿಷಕಾರಿ ಕಣಗಳು, ಧೂಮಪಾನ, ಮಾದಕ ವಸ್ತುಗಳ ಸೇವನೆ, ಆಹಾರದಲ್ಲಿ ಸತು ಮೊದಲಾದ ಪೋಷಕಾಂಶಗಳ ಕೊರತೆ, ಸ್ಥೂಲಕಾಯ, ಮಾನಸಿಕ ಒತ್ತಡ ಸಹಿತ ಇನ್ನೂ ಕಾರಣಗಳಿವೆ. ಈ ಸ್ಥಿತಿಯನ್ನು ಉತ್ತಮಗೊಳಿಸಲು ಯೋಗಾಸನಗಳು ಹೇಗೆ ನೆರವಾಗುತ್ತವೆ?

Yoga Exercises

ಯೋಗಾಭ್ಯಾಸದಿಂದ ಸೊಂಟದ ಭಾಗ, ಬೆನ್ನುಮೂಳೆಯ ಕೆಳಭಾಗ, ಹೊಟ್ಟೆ ಮೊದಲಾದ ಅಂಗಗಳಲ್ಲಿ ರಕ್ತ ಪರಿಚಲನೆ ಯನ್ನು ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಸೊಂಟದ ಮತ್ತು ಕೆಳಸೊಂಟದ ಭಾಗದಲ್ಲಿ ಹೆಚ್ಚಿನ ರಕ್ತಪರಿಚಲನೆಯ ಮೂಲಕ ಹೆಚ್ಚಿನ ಆಮ್ಲಜನಕವನ್ನು ಒದಗಿಸಿ ಜನನಾಂಗಗಳ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೂ ಈ ಮೂಲಕ ನೈಸರ್ಗಿಕವಾಗಿ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತದೆ ಹಾಗೂ ತನ್ಮೂಲಕ ವ್ಯಕ್ತಿಯ ಫಲವತ್ತತೆಯ ವಯಸ್ಸನ್ನೂ ಹೆಚ್ಚಿಸುತ್ತದೆ.

ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುವ ಎಂಟು ಯೋಗಾಸನಗಳು:

1. ಸರ್ವಾಂಗಾಸನ (ಭುಜದ ಮೇಲೆ ನಿಲ್ಲುವ ಆಸನ) -ಈ ಆಸನದ ಪ್ರಯೋಜನಗಳು

ಈ ಆಸನದಿಂದ ವಿಶೇಷವಾಗಿ ಪುರುಷರಲ್ಲಿ ಥೈರಾಯ್ಡ್ ಗ್ರಂಥಿಗೆ ಹೆಚ್ಚಿನ ಪ್ರಚೋದನೆ ದೊರಕುತ್ತದೆ ಹಾಗೂ ಒಟ್ಟಾರೆ ದೇಹವನ್ನು ಬಲಗೊಳಿಸಲು ಸಾಧ್ಯವಾಗುತ್ತದೆ. ಆಸನ ಅನುಸರಿಸುವ ಬಗೆ: ಮೊದಲು ನೆಲದ ಮೇಲೆ ಬೆನ್ನಿನ ಮೇಲೆ ಮಲಗಿ ಎರಡೂ ಪಾದಗಳನ್ನು ಪರಸ್ಪರ ತಾಕಿಸಿ. ಈಗ ದೀರ್ಘ ಉಸಿರನ್ನೆಳೆದುಕೊಂಡು ಪಾದಗಳಿಂದ ಪ್ರಾರಂಭಿಸಿ ಇಡಿಯ ದೇಹವನ್ನು ಮೇಲೆತ್ತಿ, ಎರಡೂ ಕೈಗಳಿಂದ ಸೊಂಟದ ಭಾಗವನ್ನು ದೂಡುತ್ತಾ ಕುತ್ತಿಗೆ ಮಡಚಿ ಭುಜಗಳ ಮೇಲೆ ಇಡಿಯ ದೇಹ ಲಂಬವಾಗಿ ನಿಲ್ಲಲು ಸಾಧ್ಯವಾಗುವಂತಿರಲು ಯತ್ನಿಸಿ. ಈ ಸ್ಥಿತಿಯಲ್ಲಿ ಉಸಿರನ್ನು ಬಿಡುತ್ತಾ, ಮತ್ತೆ ದೀರ್ಘವಾಗಿ ಉಸಿರಾಡುತ್ತಾ ಸುಮಾರು ಇಪ್ಪತ್ತರಿಂದ ಮೂವತ್ತು ಸೆಕೆಂಡ್ ಹಾಗೇ ಇರಲು ಯತ್ನಿಸಿ, ಬಳಿಕ ನಿಧಾನವಾಗಿ ಮೊದಲಿನ ಸ್ತಿತಿಗೆ ಮರಳಿ.

2. ಧನುರಾಸನ (ಬಿಲ್ಲಿನಂತೆ ಬಾಗುವ ಭಂಗಿ) ಈ ಆಸನದ ಪ್ರಯೋಜನಗಳು

ಈ ಆಸನದಿಂದ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ ಹಾಗೂ ವಿಶೇಷವಾಗಿ ಪುರುಷರಲ್ಲಿ ಲೈಂಗಿಕ ಅರೋಗ್ಯವನ್ನು ವೃದ್ದಿಸುತ್ತದೆ. ಅಲ್ಲದೇ ಪುರುಷರಲ್ಲಿ ಎದುರಾಗುವ ನಿಮಿರು ದೌರ್ಬಲ್ಯ ಹಾಗೂ ಶೀಘ್ರಸ್ಖಲನದ ತೊಂದರೆಗಳಿಗೂ ಉತ್ತಮ ನೆರವು ದೊರಕುತ್ತದೆ, ತನ್ಮೂಲಕ ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಆಸನ ಅನುಸರಿಸುವ ಬಗೆ:

ಮೊದಲಿಗೆ ಹೊಟ್ಟೆಯ ಮೇಲೆ ಬೋರಲಾಗಿ ಮಲಗಿ ಎರಡೂ ಕೈಗಳನ್ನು ದೇಹದ ಪಕ್ಕದಲ್ಲಿ ಹರಡಿ, ಎರಡೂ ಕಾಲುಗಳನ್ನು ಕೊಂಚವೇ ಅಗಲಿಸಿ. ಮೊದಲಿಗೆ ಮೊಣಕಾಲುಗಳನ್ನು ಮಡಚಿ ಕೈಗಳಿಂದ ಕಣಕಾಲು ಅಥವಾ ಪಾದದ ಕೀಲುಭಾಗವನ್ನು ಹಿಡಿದು ದೀರ್ಘವಾಗಿ ಉಸಿರಾಡಿ. ಉಸಿರು ಎಳೆದುಕೊಳ್ಳುತ್ತಿದ್ದಂತೆಯೇ ಪಾದಗಳನ್ನು ಹಿಂದಕ್ಕೆ ವಾಲಿಸಿ ಎದೆಯನ್ನು ನೆಲದಿಂದ ಸಾಧ್ಯವಾದಷ್ಟೂ ಮೇಲಕ್ಕೆತ್ತಲು ಯತ್ನಿಸಿ. ಈ ಭಂಗಿಯಲ್ಲಿ ಉಸಿರು ಕಟ್ಟಿ ಸುಮಾರು ಹದಿನೈದರಿಂದ ಇಪ್ಪತ್ತು ಸೆಕೆಂಡ್ ಹಾಗೇ ಇರಲು ಯತ್ನಿಸಿ ಬಳಿಕ ನಿಧಾನವಾಗಿ ಮೊದಲಿನ ಸ್ಥಾನಕ್ಕೆ ಮರಳಿ.

3. ಹಾಲಾಸನ (ನೇಗಿಲು ಉಳುವ ಭಂಗಿ) ಈ ಆಸನದ ಪ್ರಯೋಜನಗಳು:

ಈ ಆಸನದಿಂದಲೂ ಸೊಂಟದ ಭಾಗದಲ್ಲಿ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ ಹಾಗೂ ಫಲವಂತಿಕೆ ಹೆಚ್ಚಲು ಸಾಧ್ಯವಾಗುತ್ತದೆ. ಆಸನ ಅನುಸರಿಸುವ ಬಗೆ: ಮೊದಲು ಬೆನ್ನಿನ ಮೇಲೆ ಮಲಗಿ ಕೈಗಳನ್ನು ನೆಲದ ಮೇಲೆ ಸೊಂಟದ ಪಕ್ಕ ಬರುವಂತೆ, ಅಂಗೈ ನೆಲಕ್ಕೆ ತಾಕುವಂತಿರಿಸಿ. ಈಗ ದೀರ್ಘ ಉಸಿರೆಳೆದುಕೊಳ್ಳುತ್ತಾ ಎರಡೂ ಪಾದಗಳನ್ನು ಮೇಲೆಕ್ಕೆತ್ತಿ ತಲೆಯ ಹಿಂಭಾಗದ ನೆಲವನ್ನು ತಾಕುವಂತಿರಿಸಿ, ಕೈಗಳನ್ನು ನೆಲದಿಂದ ಮೇಲೆತ್ತಬಾರದು ಹಾಗೂ ಅಂಗೈ ನೆಲದಿಂದ ಮೇಲಕ್ಕೇಳದಿರಲು ಯತ್ನಿಸಿ. ಈ ಸ್ಥಿತಿಯಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಸೆಕೆಂಡ್ ಹಾಗೇ ಇರಿಸಿ ಸರಾಗವಾಗಿ ಉಸಿರಾಡಿ ಬಳಿಕ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ.

4. ಪಶ್ಚಿಮೋತ್ತಾಸನ (ಕುಳಿತಲ್ಲೇ ಮುಂದೆ ಬಾಗುವ ಆಸನ) ಈ ಆಸನದ ಪ್ರಯೋಜನಗಳು:

ಈ ಆಸನದಿಂದ ಜನನಾಂಗಗಳಿಗೆ ಸಂಬಂಧಿಸಿದ ಎಲ್ಲಾ ಸ್ನಾಯುಗಳು ಹುರಿಗಟ್ಟಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ನಿಮಿರುದೌರ್ಬಲ್ಯ ಇಲ್ಲವಾಗುತ್ತದೆ.
ಈ ಆಸನ ಅನುಸರಿಸುವ ಬಗೆ: ನೆಲದ ಮೇಲೆ ಕುಳಿತು ಕಾಲುಗಳನ್ನು ಮುಂದೆ ಚಾಚಿ, ಕಾಲ್ಬೆರಳುಗಳು ಮೇಲ್ಮುಖವಾಗುವಂತಿರಿಸಿ. ದೀರ್ಘವಾಗಿ ಉಸಿರೆಳೆಯುತ್ತಾ ಮೊದಲಿಗೆ ಕೈಗಳನ್ನು ನಿಧಾನವಾಗಿ ಮೇಲೆತ್ತಿ ಕಿವಿಗೆ ತಾಕಿಸಿ, ಬಳಿಕ ಇದೇ ಭಂಗಿಯಲ್ಲಿ ಸೊಂಟವನ್ನು ಬಗ್ಗಿಸಿ ಹಣೆ ಮೊಣಕಾಲಿಗೆ ತಾಕುವಂತೆ ಹಾಗೂ ಕೈಬೆರಳುಗಳು ಕಾಲು ಬೆರಳುಗಳನ್ನು ಹಿಡಿಯಲು ಯತ್ನಿಸಿ, ಪ್ರಾರಂಭವದಲ್ಲಿ ಬೆರಳನ್ನು ಖಚಿತವಾಗಿ ಹಿಡಿದುಕೊಳ್ಳಲು ಸಾಧ್ಯವಾಗದೇ ಹೋಗಬಹುದು, ಆಗ ಮುಟ್ಟಿದರೂ ಸಾಕು, ಕಾಲಕ್ರಮೇಣ ಕಾಲ್ಬೆರಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಸ್ಥಿತಿಯಲ್ಲಿ ಸರಾಗವಗಿ ಉಸಿರಾಡುತ್ತಾ ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಇರಿ ಬಳಿಕ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ.

5. ಕಂಭಕಾಸನ (ಹಲಗೆ ಆಸನ), ಇದರ ಪ್ರಯೋಜನಗಳು:

ಇದೊಂದು ಸುಲಭ ವ್ಯಾಯಾಮವಾಗಿದ್ದು ದೇಹದ ಮೇಲ್ಭಾಗವನ್ನು ಹೆಚ್ಚು ಬಲಗೊಳಿಸುತ್ತದೆ ಹಾಗೂ ಲೈಂಗಿಕ ಶಕ್ತಿ ಮತ್ತು ಆರೋಗ್ಯವನ್ನೂ ಹೆಚ್ಚಿಸುತ್ತದೆ. ಈ ಆಸನ ಅನುಸರಿಸುವ ಬಗೆ:
ಮೊದಲು ಹೊಟ್ಟೆಯ ಮೇಲೆ ಮಲಗಿ ಕೈಗಳನ್ನು ಭುಜದ ಪಕ್ಕ ಬರುವಂತಿರಿಸಿ, ಮೊಣಕೈ ಹೊಟ್ಟೆಯ ಪಕ್ಕ ಬರುವಂತೆ ಒತ್ತಿಕೊಳ್ಳಿ. ಈಗ ದೀರ್ಘ ಉಸಿರೆಳೆದುಕೊಳ್ಳುತ್ತಾ ಹಸ್ತಗಳ ಮೇಲೆ ದೇಹದ ಪೂರ್ಣ ಭಾರ ಹಾಕಿ ಕೇವಲ ಕಾಲುಬೆರಳು ಮತ್ತು ಹಸ್ತಗಳ ಮೇಲೆ ದೇಹದ ಭಾರ ಬರುವಂತೆ ದೇಹವನ್ನು ಸರಳರೇಖೆಯಲ್ಲಿರಿಸಿ ಮೇಲಕ್ಕೆತ್ತಿ. ಕೈಬೆರಳುಗಳು ಮುಂಚಾಚಿದ್ದು ಪೂರ್ಣವಾಗಿ ನೆಲಕ್ಕೆ ತಾಕಿರಬೇಕು, ಕುತ್ತಿಗೆಯನ್ನೂ ಬಗ್ಗಿಸದಿರಿ. ಈ ಭಂಗಿಯಲ್ಲಿ ನಿಧಾನವಾಗಿ ಉಸಿರಾಡುತ್ತಾ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಇರಿ ಬಳಿಕ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ.

6. ಭುಜಂಗಾಸನ (ನಾಗರಹಾವಿನ ಭಂಗಿ) ಈ ಆಸನದ ಪ್ರಯೋಜನಗಳು:

ಈ ಭಂಗಿಯಿಂದ ವಿಶೇಷವಾಗಿ ಬೆನ್ನಿನ ಸ್ನಾಯುಗಳು ಮತ್ತು ಬೆನ್ನುಹುರಿ ಉತ್ತಮಗೊಳ್ಳುತ್ತವೆ. ಅಲ್ಲದೇ ಜನನಾಂಗಗಳಿಗೂ ಹೆಚ್ಚಿನ ಪ್ರಚೋದನೆ ಮತ್ತು ತನ್ಮೂಲಕ ಫಲವಂತಿಕೆಯನ್ನೂ ಹೆಚ್ಚಿಸುತ್ತದೆ:
ಈ ಆಸನ ಅನುಸರಿಸುವ ಬಗೆ:
ಮೊದಲು ಹೊಟ್ಟೆಯ ಮೇಲೆ ಮಲಗಿ ಹಸ್ತಗಳು ಭುಜದ ಅಕ್ಕ ಪಕ್ಕ ಬರುವಂತಿರಿಸಿ. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ ತಲೆಯನ್ನು ಮೇಲೆಕ್ಕೆತ್ತಿ ಕಣ್ಣುಗಳು ಛಾವಣಿಯನ್ನು ದಿಟ್ಟಿಸುತ್ತಿದ್ದಂತೆ ಎದೆಯ ಭಾಗವನ್ನು ಮೇಲಕ್ಕೆತ್ತಿ. ಹೊಟ್ಟೆಯ ಭಾಗ ನೆಲಕ್ಕೆ ತಾಕಿರುವಂತೆಯೇ ಕೈಗಳನ್ನು ನೇರವಾಗಿಸಿ, ಪಾದಗಳನ್ನು ನೇರವಾಗಿಸಿ ಇಡಿಯ ಪಾದ ಮೇಲ್ಭಾಗ ನೆಲಕ್ಕೆ ತಾಕಿರುವಂತಿರಿಸಿ. ಈ ಭಂದಿಯಲ್ಲಿ ದೀರ್ಘವಾದ ಐದರಿಂದ ಹತ್ತು ಉಸಿರೆಳೆದುಕೊಂಡು ಬಿಡಿ ಬಳಿಕ ನಿಧಾನವಾಗಿ ಮೊದಲ ಸ್ಥಿತಿಗೆ ಬನ್ನಿ.

7. ಪಾದ ಹಸ್ತಾಸನ (ನಿಂತಲ್ಲೇ ಮುಂದೆ ಬಾಗುವ ಭಂಗಿ) ಈ ಆಸನದ ಪ್ರಯೋಜನಗಳು:

ಈ ಆಸನದಿಂದ ನಿತಂಬ, ಕಾಲುಗಳು ಮತ್ತು ಬೆನ್ನುಹುರಿ ಹೆಚ್ಚಿನ ಸೆಳೆತ ಪಡೆಯುತ್ತವೆ ಹಾಗೂ ಮೆದುಳಿಗೂ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ.
ಈ ಆಸನ ಅನುಸರಿಸುವ ಬಗೆ:
ಮೊದಲು ನೆಟ್ಟಗೆ ನಿಂತು ಕೊಳ್ಳಿ. ಈಗ ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ ಕೈಗಳನ್ನು ಮೇಲೆತ್ತಿ ಕಿವಿಗಳಿಗೆ ತಾಕಿಸಿ, ಮೊಣಕೈ ಮಡಚದಿರಿ. ನಿಧಾನವಾಗಿ ಉಸಿರು ಬಿಡುತ್ತಾ ಕೆಳಕ್ಕೆ ಬಾಗಿ ಕೈಗಳನ್ನು ಕಾಲುಬೆರಳುಗಳಿಗೆ ತಾಕಿಸಿ ಹಾಗೂ ಹಣೆಯನ್ನು ಮೊಣಕಾಲುಗಳಿಗೆ ತಾಕಿಸಲು ಯತ್ನಿಸಿ. ಈ ಭಂಗಿಯಲ್ಲಿ ಇಪ್ಪತ್ತರಿಂದ ಮೂವತ್ತು ಸೆಕೆಂಡ್ ಕಾಲ ಹಾಗೇ ಇದ್ದು ಸರಾಗವಾಗಿ ಉಸಿರಾಡಿ ಬಳಿಕ ನಿಧಾನವಾಗಿ ಮೊದಲ ಸ್ಥಿತಿಗೆ ಬನ್ನಿ.

8.ನೌಕಾಸನ (ದೋಣಿಯ ಭಂಗಿ) ಈ ಆಸನದ ಪ್ರಯೋಜನಗಳು:

ಈ ಆಸನದಿಂದ ಹೊಟ್ಟೆ, ನಿತಂಬ ಹಾಗೂ ಕಾಲುಗಳು ಬಲಿಷ್ಟವಾಗುತ್ತವೆ. ಅಲ್ಲದೇ ಸೊಂಟದ ಭಾಗದ ಸ್ನಾಯುಗಳು ಹೆಚ್ಚು ಬಲಗೊಳ್ಳುತ್ತವೆ ಹಾಗೂ ಲೈಂಗಿಕ ರಸದೂತಗಳು ಸರಾಗವಾಗಿ ಬಿಡುಗಡೆಯಾಗಲು ನೆರವಾಗುತ್ತವೆ.
ಈ ಆಸನ ಅನುಸರಿಸುವ ಬಗೆ: ಮೊದಲು ಬೆನ್ನಿನ ಮೇಲೆ ಮಲಗಿ ಎರಡೂ ಕೈಗಳನ್ನು ತೊಡೆಗಳ ಮೇಲಿರಿಸಿ. ಈಗ ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ ಕೇವಲ ನಿತಂಬಗಳು ಮಾತ್ರವೇ ನೆಲದ ಮೇಲಿರುವಂತೆ ಕಾಲುಗಳನ್ನೂ, ಎದೆಯ ಭಾಗವನ್ನೂ ಮೇಲಕ್ಕೆತ್ತಿ ಕೈಗಳನ್ನು ಕಾಲುಬೆರಳುಗಳನ್ನು ತಾಕಿಸಲು ಯತ್ನಿಸಿ. ಈ ಭಂಗಿಯಲ್ಲಿ ನಿಮಗೆ ಸಾಧ್ಯವಾದಷ್ಟೂ ಹೊತ್ತು ಹಾಗೇ ಇರಲು ಯತ್ನಿಸಿ, ಸರಾಗವಾಗಿ ಉಸಿರಾಡಿ. ಬಳಿಕ ಉಸಿರು ಬಿಡುತ್ತಾ ಮೊದಲ ಸ್ಥಿತಿಗೆ ಬನ್ನಿ.

ಯೋಗಾಸನದಿಂದ ಪುರುಷರ ಫಲವತ್ತತೆ ಹೇಗೆ ಹೆಚ್ಚುತ್ತದೆ?

ಹಲವು ವಿಧದಲ್ಲಿ ಯೋಗಾಭ್ಯಾಸ ಪುರುಷರಲ್ಲಿ ಫಲಂತಿಕೆ ಹೆಚ್ಚಿಸಲು ನೆರವಾಗುತ್ತದೆ, ಇವುಗಳಲ್ಲಿ ಪ್ರಮುಖವಾದವು ಎಂದರೆ:
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸು ಎರಡೂ ಒತ್ತಡರಹಿತವಾಗಿರಲು ಸಾಧ್ಯವಾಗುತ್ತದೆ ಹಾಗೂ ಈ ನಿರಾಳತೆಯಲ್ಲಿ ಫಲವತ್ತತ್ತೆ ಹೆಚ್ಚುತ್ತದೆ. ಸಾಮಾನ್ಯವಾಗಿ ಮಾನಸಿಕ ಒತ್ತಡವಿದ್ದಾಗ ಸ್ರವಿಸುವ ರಸದೂತಗಳು ಲೈಂಗಿಕ ರಸದೂತಗಳ ಪ್ರಭಾವವನ್ನು ಇಲ್ಲವಾಗಿಸುತ್ತವೆ.
ಯೋಗಾಸನದ ಅನುಸರಿಸುವಿಕೆಯಿಂದ ಲೈಂಗಿಕ ರಸದೂತಗಳು ಉತ್ತಮವಾಗಿ ಸ್ರವಿಸಲ್ಪಡುತ್ತವೆ, ವಿಶೇಷವಾಗಿ ಪುರುಷರಲ್ಲಿ ಟೆಸ್ಟಾಸ್ಟೆರಾನ್ ರಸದೂತ ಹೆಚ್ಚು ಸ್ರವಿಸಿ ಫಲವತ್ತತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಯೋಗಾಭ್ಯಾಸದಿಂದ ಸೊಂಟದ ಭಾಗಕ್ಕೆ ಹೆಚ್ಚಿನ ರಕ್ತಪರಿಚಲನೆ ದೊರಕುತ್ತದೆ ಹಾಗೂ ಈ ಮೂಲಕ ಗರ್ಭಧಾರಣೆಯ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.
ಈ ಲೇಖನ ನಿಮಗೆ ಉಪಯುಕ್ತ ಎಂದು ಕಂಡುಬಂದರೆ ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮೂಲಕ ಈ ಪ್ರಯೋಜನಗಳನ್ನು ಹೆಚ್ಚಿನ ವ್ಯಕ್ತಿಗಳು ಪಡೆಯಲು ನೆರವಾಗಿ.

English summary

8 Yoga Exercises For Increasing Sperm Count

The main causes of low sperm count are genetic problems, malnutrition, testicular injury, excessive alcohol consumption, etc. The yoga exercises for increasing sperm count are shoulder stand, boat pose, cobra pose, bow pose, seated forward bend, plough pose, plank pose, and standing forward bend. These asanas strengthen the pelvic floor.
X
Desktop Bottom Promotion