ಮುಂಜಾನೆ ಅರ್ಧ ಗಂಟೆ ನಡೆದರೆ ಕನಿಷ್ಠ ಹತ್ತು ಲಾಭಗಳನ್ನು ಪಡೆಯುವಿರಿ

By: Arshad
Subscribe to Boldsky

ಇಂದು ಜೀವನವನ್ನು ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಆಧುನೀಕರಣಗೊಳಿಸಿದೆ ಎಂದರೆ ನಾವೆಲ್ಲರೂ ತಂತ್ರಜ್ಞಾನದ ಬಲೆಯಲ್ಲಿ ಅನೈಚ್ಛಿಕವಾಗಿಯಾದರೂ ಸಿಲುಕಿಕೊಂಡಿದ್ದೇವೆ. ನಮ್ಮ ನಿತ್ಯದ ಹತ್ತು ಹಲವಾರು ಕೆಲಸಗಳನ್ನು ತಂತ್ರಜ್ಞಾನ ಸುಲಭಗೊಳಿಸುತ್ತಾ ಹೋದಂತೆ ದೈಹಿಕ ಕೆಲಸಗಳನ್ನೆಲ್ಲಾ ಯಂತ್ರಗಳಿಗೆ ವಹಿಸಿಕೊಟ್ಟು ಅಗತ್ಯವಿಲ್ಲದಿದ್ದರೂ ನಮ್ಮ ಮೇಲೆ ನಿಯಂತ್ರಣವನ್ನು ನಾವೇ ಹೇರಿಕೊಳ್ಳುತ್ತಿದ್ದೇವೆ.

ನಮ್ಮ ಹಿರಿಯರ ಕಾಲದಲ್ಲಿ ಜನರು ಹೆಚ್ಚಾಗಿ ಆರೋಗ್ಯವಂತರೇ ಆಗಿರುತ್ತಿದ್ದರು ಹಾಗೂ ಆಗ ಆರೋಗ್ಯ ಮತ್ತು ಫಿಟ್ ನೆಸ್ ಎಂಬುದಕ್ಕೆ ಪ್ರತ್ಯೇಕವಾಗಿ ಸಮಯ ಮತ್ತು ಹಣವನ್ನು ವ್ಯಯಿಸಬೇಕೆಂದೇ ಇರಲಿಲ್ಲ. ಇಂದು ಮಾರಕವೆಂದು ಸಾಬೀತಾಗಿರುವ ಕಾಯಿಲೆಗಳು ಅಂದು ಇದ್ದಿರಲೇ ಇಲ್ಲ ಎನ್ನುವಷ್ಟು ಅಪರೂಪವಾಗಿದ್ದವು. ನಮ್ಮ ಹಿರಿಯರು ಆರೋಗ್ಯವಾಗಿದ್ದುದರ ಕಾರಣ ಅವರ ಆಹಾರ ಸಾವಯವ ಆಹಾರವಾಗಿತ್ತು ಹಾಗೂ ಸಿದ್ಧ ಆಹಾರಗಳನ್ನು ಅವರು ಆದಷ್ಟು ಸೇವಿಸುತ್ತಲೇ ಇರಲಿಲ್ಲ.

ನಮ್ಮ ಹಿರಿಯರು ಸಾಕಷ್ಟು ನಡೆಯುತ್ತಿದ್ದರು ಹಾಗೂ ನಡೆಯುವಿಕೆಯ ಹಾಗೂ ಕೃಷಿ ಆಧಾರಿತ ವ್ಯಾಯಾಮಗಳ ಹೊರತಾಗಿ ಬೇರೆ ವ್ಯಾಯಾಮವೂ ಅವರಿಗೆ ಗೊತ್ತಿರಲಿಲ್ಲ. ಮನುಷ್ಯ ದೇಹಕ್ಕೆ ಅತ್ಯಂತ ಸೂಕ್ತವಾದ ವ್ಯಾಯಮವೆಂದರೆ ನಡಿಗೆ ಮಾತ್ರ. ಬೇರೆ ಯಾವುದೇ ದೇಹದಂಡನೆಯ ವ್ಯಾಯಾಮ ದೇಹದ ಮೇಲೆ ಅನಾರೋಗ್ಯಕರ ಒತ್ತಡ ಹೇರುತ್ತದೆ. ಆದ್ದರಿಂದ ದುಬಾರಿ ವ್ಯಾಯಾಮದ ಉಪಕರಣ, ಜಿಮ್‌ನ ಸದಸ್ಯತ್ವ ಮೊದಲಾದವುಗಳ ಮೂಲಕ ಪಡೆಯಬಹುದಾದ ಕೃತಕ ಆರೋಗ್ಯಕ್ಕಿಂತಲೂ ಸಹಜ ಆರೋಗ್ಯ ಹಾಗೂ ದೇಹದಾರ್ಢ್ಯತೆಯನ್ನು ದಿನಕ್ಕೆ ಕೇವಲ ಮೂವತ್ತು ನಿಮಿಷಗಳವರೆಗೆ ನಡೆಯುವ ಮೂಲಕ ಪಡೆಯಬಹುದು.

ನಡುಗೆಯೇನು ಸಾಮಾನ್ಯ ಅಂದುಕೊಂಡಿರಾ?

ನಡಿಗೆಯಿಂದ ದೇಹದ ಎಲ್ಲಾ ಸ್ನಾಯುಗಳಿಗೆ ಉತ್ತಮವಾದ ವ್ಯಾಯಾಮ ದೊರಕುತ್ತದೆ ಹಾಗೂ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಲು ನೆರವಾಗುತ್ತದೆ. ನಮ್ಮ ಜೀವನದಲ್ಲಿ ಸರಳವಾದ ವಿಷಯಗಳೇ ಅತಿ ಹೆಚ್ಚಿನ ಸಂತೋಷ ನೀಡುವಂತೆ ನಮ್ಮ ಆರೋಗ್ಯಕ್ಕೂ ಸರಳವಾದ ವ್ಯಾಯಾಮಗಳೇ ಅತಿ ಹೆಚ್ಚಿನ ಪ್ರಯೋಜನ ನೀಡುತ್ತವೆ. ಆದ್ದರಿಂದ ಆರೋಗ್ಯಕ್ಕೆ ನಡಿಗೆಯೇ ಮೂಲ ಎಂದು ಸುಲಭವಾಗಿ ಹೇಳಿಬಿಡಬಹುದು. ಬನ್ನಿ, ನಿತ್ಯವೂ ಅರ್ಧ ಗಂಟೆಯ ನಡಿಗೆಯಿಂದ ಪಡೆಯಬಹುದಾದ ಹತ್ತು ಪ್ರಮುಖ ಪ್ರಯೋಜನಗಳನ್ನು ನೋಡೋಣ... 

ನಡಿಗೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ

ನಡಿಗೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ

ನಿತ್ಯದ ನಡಿಗೆ ನಮ್ಮ ಹೃದಯದ ಬಡಿತವನ್ನು ಕೊಂಚ ಹೆಚ್ಚಿಸುತ್ತದೆ. ಆದರೆ ವಿಪರೀತವಾಗಿ ಅಲ್ಲ. ಇದರಿಂದ ರಕ್ತಪರಿಚಲನೆ ಕೊಂಚ ಹೆಚ್ಚುತ್ತದೆ, ಆದರೆ ಉಸಿರು ಕಟ್ಟುವಷ್ಟು ವೇಗವಾಗಿ ಅಲ್ಲ. ಹಾಗಾಗಿ ಕೊಂಚವೇ ಹೆಚ್ಚಿನ ರಕ್ತಪರಿಚಲನೆ ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರದೇ ರಕ್ತದ ಒತ್ತಡ ಆರೋಗ್ಯಕರ ಮಿತಿಗಳಲ್ಲಿರಲು ನೆರವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ಹಾಗೂ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಲು ನೆರವಾಗುತ್ತದೆ.

ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀವ ರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ನಡಿಗೆಯಿಂದ ಜೀರ್ಣಾಂಗಗಳಿಗೆ ಅಗತ್ಯವಿರುವಷ್ಟೇ ಪ್ರಚೋದನೆ ದೊರಕುತ್ತದೆ ಹಾಗೂ ಅಗತ್ಯಕ್ಕೆ ತಕ್ಕಷ್ಟೇ ಹೆಚ್ಚು ಜೀರ್ಣರಸಗಳು ಸ್ರವಿಸಲು ನೆರವಾಗುತ್ತದೆ. ಇದು ಆಹಾರವನ್ನು ಪೂರ್ಣವಾಗಿ ಪಚನಗೊಳಿಸಲು ನೆರವಾಗುತ್ತದೆ ಹಾಗೂ ತನ್ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಆಹಾರ ಪೂರ್ಣವಾಗಿ ಪಚನಗೊಳಿಸುವ ಮೂಲಕ ಅಜೀರ್ಣತೆಯಾಗುವ ಹಾಗೂ ಈ ಮೂಲಕ ಎದುರಾಗುವ ತೊಂದರೆಗಳಿಂದ ರಕ್ಷಿಸುತ್ತದೆ.

ಮೂಳೆಗಳು ಟೊಳ್ಳಾಗುವುದರಿಂದ ರಕ್ಷಿಸುತ್ತದೆ

ಮೂಳೆಗಳು ಟೊಳ್ಳಾಗುವುದರಿಂದ ರಕ್ಷಿಸುತ್ತದೆ

ನಿತ್ಯದ ನಡಿಗೆಯಿಂದ ಮೂಳೆಗಳು ದೃಢಗೊಳ್ಳುತ್ತವೆ ಹಾಗೂ ಸುಲಭದಲ್ಲಿ ತುಂಡಾಗುವುದರಿಂದ ರಕ್ಷಿಸುತ್ತದೆ. ವಿಶೇಷವಾಗಿ ಸೂರ್ಯನ ಎಳೆಯ ಕಿರಣಗಳು ಮೈಗೆ ಸೋಕುವ ಸಮಯದಲ್ಲಿ ನಡೆದಾಗ ದೇಹದಲ್ಲಿ ಹೆಚ್ಚಿನ ವಿಟಮಿನ್ D3 ಉತ್ಪಯಾಗುತ್ತದೆ. ಈ ವಿಟಮಿನ್ ಆಹಾರದಲ್ಲಿರುವ ಕ್ಯಾಲ್ಸಿಯಂ ಪ್ರಮಾಣವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ನಡಿಗೆಯಿಂದ ಮೂಳೆಗಳ ಸಂದುಗಳಲ್ಲಿ ಜಾರುಕದ್ರವ ಒಣಗದಂತೆ ತಡೆಯುತ್ತದೆ. ಈ ಮೂಲಕ ಸಂಧಿವಾತ ಆವರಿಸುವ ಸಾಧ್ಯತೆಯಿಂದಲೂ ರಕ್ಷಣೆ ಒದಗಿಸಿದಂತಾಗುತ್ತದೆ.

ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತದೆ

ಸ್ನಾಯುಗಳು ಹುರಿಗಟ್ಟಲು ನೆರವಾಗುತ್ತದೆ

ನಿತ್ಯವೂ ಒಂದು ಹೊತ್ತಿನಲ್ಲಿ ನಡೆದಾಡುವ ಮೂಲಕ ಸ್ನಾಯುಗಳು ಹುರಿಗಟ್ಟಲು ಹಾಗೂ ದೇಹದ ಸ್ನಾಯು-ಕೊಬ್ಬಿನ ಅನುಪಾತ ಹೆಚ್ಚಲು ನೆರವಾಗುತ್ತದೆ. ಪರಿಣಾಮವಾಗಿ ಹುರಿಗಟ್ಟಿದ ಸ್ನಾಯುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ತೊಡೆ ಮತ್ತು ಪ್ರಷ್ಠಭಾಗದ ಸ್ನಾಯುಗಳು ಬೆವರುಸುರಿಸಿ ಕಷ್ಟಪಡಬೇಕಾದ ವ್ಯಾಯಾಮ ಶಾಲೆಗಳಲ್ಲಿ ಪಡೆಯುವುದಕ್ಕಿಂತಲೂ ಉತ್ತಮವಾಗಿ ಹುರಿಗಟ್ಟುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಡೆಯುವುದರಿಂದ ನಮ್ಮ ದೇಹದಲ್ಲಿ ಹೆಚ್ಚಿನ ಬಿಳಿರಕ್ತಕಣಗಳು ಉತ್ಪತ್ತಿಯಾಗುತ್ತವೆ ಹಾಗೂ ತನ್ಮೂಲಕ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ. ನಿತ್ಯವೂ ನಿಯಮಿತವಾಗಿ ಹಾಗೂ ಒಂದು ದಿನವೂ ತಪ್ಪದೇ ಅರ್ಧಘಂಟೆ ಕಾಲ ನಡೆಯುವವರ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿದ್ದು ಇವರಿಗೆ ಶೀತ, ಕೆಮ್ಮು ಜ್ವರ ಆವರಿಸುವ ಸಾಧ್ಯತೆ ಇತರರಿಗಿಂತ ಅತಿ ಕಡಿಮೆ ಇರುತ್ತದೆ.

ಮೆದುಳಿನ ಸ್ನಾಯುಗಳಿಗೆ ಪ್ರಚೋದನೆ ನೀಡುತ್ತದೆ

ಮೆದುಳಿನ ಸ್ನಾಯುಗಳಿಗೆ ಪ್ರಚೋದನೆ ನೀಡುತ್ತದೆ

ನಡೆಗೆಯಿಂದ ಮೆದುಳಿನ ಜೀವಕೋಶಗಳ ಚಟುವಟಿಕೆ ಹೆಚ್ಚುತ್ತದೆ. ಮೆದುಳಿನ ಅಂಗಾಂಶಗಳ ನಷ್ಟದಿಂದ ರಕ್ಷಿಸುತ್ತದೆ ಹಾಗೂ ಈ ನಷ್ಟದಿಂದ ಎದುರಾಗುವ ಸ್ಮರಣಶಕ್ತಿಯ ಕುಂದುವಿಕೆ ಹಾಗೂ ವೃದ್ದಾಪ್ಯದಲ್ಲಿ ಎದುರಾಗುವ ಮರೆಗುಳಿತನದಿಂದ ರಕ್ಷಿಸುತ್ತದೆ. ನಿತ್ಯದ ನಡಿಗೆಯಿಂದ ಸ್ಮರಣ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಮೆದುಳಿನ ಕಾಯಿಲೆಯಾದ ಆಲ್ಜೀಮರ್ಸ್ ಕಾಯಿಲೆಯ ಸಹಿತ ಇತರ ಕಾಯಿಲೆಗಳಿಂದ ರಕ್ಷಿಸುತ್ತದೆ.

ಸದಾ ಚಟುವಟಿಕೆಯಿಂದ ಹಾಗೂ ಜಾಗರೂಗಕತೆಯಿಂದಿರಲು ನೆರವಾಗುತ್ತದೆ

ಸದಾ ಚಟುವಟಿಕೆಯಿಂದ ಹಾಗೂ ಜಾಗರೂಗಕತೆಯಿಂದಿರಲು ನೆರವಾಗುತ್ತದೆ

ನಿತ್ಯದ ನಡಿಗೆಯಿಂದ ಹಲವಾರು ಕಾಯಿಲೆಗಳನ್ನು ದೂರವಿರಿಸಬಹುದು. ತನ್ಮೂಲಕ ದೇಹ ಹಾಗೂ ಮನಸ್ಸು ಉತ್ತಮ ಸ್ಥಿತಿಯಲ್ಲಿರುತ್ತದೆ ಹಾಗೂ ನಡಿಗೆಯ ಮೂಲಕ ಹೆಚ್ಚುವ ರಕ್ತಪರಿಚಲನೆಯಿಂದ ರಕ್ತದ ಆಮ್ಲಜನಕ ಕೊಂಡೊಯ್ಯುವ ಸಾಮರ್ಥ್ಯವೂ ಹೆಚ್ಚುತ್ತದೆ. ಹೆಚ್ಚಿನ ಆಮ್ಲಜನಕದ ಮೂಲಕ ಹೆಚ್ಚಿನ ಚಟುವಟಿಕೆ ಹಾಗೂ ಹೆಚ್ಚಿನ ಜಾಗರೂಕತೆ ವಹಿಸಲು ನೆರವಾಗುತ್ತದೆ.

ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ

ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ

ನಮ್ಮ ದೇಹದ ಸ್ನಾಯುಗಳೆಲ್ಲವೂ ಚಲನಾಸ್ಥಿತಿಯಲ್ಲಿದ್ದಾಗ ಇತರ ಅಂಗಗಳು ಕಲ್ಮಶಗಳನ್ನು ವಿಸರ್ಜಿಸಲು ತೊಡಗುತ್ತವೆ. ನಡಿಗೆಯ ಸಂದರ್ಭದಲ್ಲಿ ಕರುಳುಗಳಲ್ಲಿನ ಚಟುವಟಿಕೆಯೂ ಚುರುಕುಗೊಳ್ಳುತ್ತದೆ ಹಾಗೂ ಕಲ್ಮಶಗಳನ್ನು ದೊಡ್ಡ ಕರುಳಿನತ್ತ ಸರಿಸುತ್ತದೆ. ದೇಹದಿಂದ ಕಲ್ಮಶಗಳು ಹೊರಹೋದಾಗ ದೇಹದ ಕಾರ್ಯಪಟುತ್ವವೂ ಹೆಚ್ಚುತ್ತದೆ.

 ನಡಿಗೆ ನಮ್ಮನ್ನು ಸಂತೋಷವಾಗಿರಿಸುತ್ತದೆ

ನಡಿಗೆ ನಮ್ಮನ್ನು ಸಂತೋಷವಾಗಿರಿಸುತ್ತದೆ

ನಿಮ್ಮ ಮನೆಯ ಹತ್ತಿರದ ಉದ್ಯಾನವನ ಅಥವಾ ನಿಮ್ಮ ನೆಚ್ಚಿನ ಸ್ಥಳದಲ್ಲಿ ನಿತ್ಯವೂ ಅರ್ಧ ಘಂಟೆ ನಡೆಯುವ ಮೂಲಕ ಮನಸ್ಸಿನ ದುಗುಡ ಕಡಿಮೆಯಾಗುತ್ತದೆ ಹಾಗೂ ಮೆದುಳಿನಲ್ಲಿ ಆಕ್ಸಿಟೋಸಿನ್ ಉತ್ಪತ್ತಿಯ ಮೂಲಕ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಪರಿಣಾಮವಾಗಿ ಖಿನ್ನತೆ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಮನಸ್ಸಿನ ದುಗುಡವನ್ನು ನಿವಾರಿಸುತ್ತದೆ ಹಾಗೂ ಸುಖನಿದ್ದೆ ಆವರಿಸಲು ನೆರವಾಗುತ್ತದೆ.

ಆಯಸ್ಸು ಹೆಚ್ಚಿಸುತ್ತದೆ

ಆಯಸ್ಸು ಹೆಚ್ಚಿಸುತ್ತದೆ

ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ನಿತ್ಯವೂ ಅರ್ಧಘಂಟೆಯಾದರೂ ನಡೆಯುವವರು ಹಾಗೂ ಆರೋಗ್ಯಕರ ಆಹಾರಕ್ರಮ ಅನುಸರಿಸುವವರ ಆಯಸ್ಸು ಇತರರಿಗಿಂತ ಐದರಿಂದ ಏಳು ವರ್ಷ ಹೆಚ್ಚಾಗಿರುತ್ತದೆ. ನಡಿಗೆಯಿಂದ ಕೆಲವು ಅನಾರೋಗ್ಯಗಳು ಆವರಿಸದೇ ಇರುವುದು ಆಯಸ್ಸು ಹೆಚ್ಚಲು ಕಾರಣ. ನಿತ್ಯದ ಅರ್ಧಗಂಟೆಯ ನಡಿಗೆಯಿಂದ ದೇಹ ದಾರ್ಢ್ಯತೆ ಹೆಚ್ಚುತ್ತದೆ ಹಾಗೂ ಜೀವನದ ಎಲ್ಲಾ ಕ್ಷಣಗಳನ್ನು ಪೂರ್ಣವಾಗಿ ಹಾಗೂ ಸಂತೋಷದಿಂದ ಬಾಳಲು ಸಾಧ್ಯವಾಗುತ್ತದೆ. ಈ ಲೇಖನದಲ್ಲಿರುವ ಉಪಯುಕ್ತ ಮಾಹಿತಿಗಳನ್ನು ನಿಮ್ಮ ಸ್ನೇಹಿತರು ಆಪ್ತರೂ ಪಡೆಯುವಂತಾಗಲು ಈ ಲೇಖವನ್ನು ಅವರೊಂದಿಗೂ ಹಂಚಿಕೊಳ್ಳಿ.

English summary

10 Benefits Of Walking 30 Minutes A Day

Walking was and has been the best form of exercise that a human body can get. Forget investing in a gym membership or costly exercise machines, 30 minutes of walking daily will give your whole body a workout and provide other amazing benefits. It works all the muscles of our body at once and burns calories. Simple things are often the best and walking is the perfect example of it. Here are top 10 benefits of walking 30 minutes a day.
Subscribe Newsletter