For Quick Alerts
ALLOW NOTIFICATIONS  
For Daily Alerts

ಕೈಕಾಲುಗಳ ಆರೋಗ್ಯ ವೃದ್ಧಿಗೆ ಅನುಸರಿಸಿ ವಸಿಷ್ಠಾಸನ

By Manu
|

ನನ್ನ ಕೈಕಾಲುಗಳಲ್ಲಿ ಬಲ ಇರುವವರೆಗೂ ಈ ಕೆಲಸ ಮುಂದುವರೆಸುತ್ತೇನೆ, ಮುಂದಿನದ್ದು ದೇವರಿಗೆ ಬಿಟ್ಟಿದ್ದು ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಕೈಕಾಲುಗಳಲ್ಲಿ ಬಲವನ್ನು ಬಲುವರ್ಷಗಳವರೆಗೆ ಉಳಿಸಿಕೊಂಡು ಹೋಗಬೇಕೆಂದಿದ್ದರೆ ನಿತ್ಯವೂ ದೈಹಿಕ ಶ್ರಮವನ್ನು ಅನುಸರಿಸುವುದು ಒಂದು ಕ್ರಮವಾದರೆ ವಸಿಷ್ಠಾಸನವನ್ನು ನಿತ್ಯವೂ ಅನುಸರಿಸುವುದು ಇನ್ನೊಂದು ಸುಲಭ ವಿಧಾನ. ವೀರಭದ್ರಾಸನ: ಕುರ್ಚಿ-ಮೇಜು ಆಧಾರಿತ ಉದ್ಯೋಗಿಗಳಿಗೆ ವರದಾನ

ಈ ಆಸನದಿಂದ ವಿಶೇಷವಾಗಿ ಕೈತೋಳುಗಳು, ಕಾಲಿನ ಮೀನಖಂಡ, ತೊಡೆ, ಪಾದಗಳು, ಹೊಟ್ಟೆ ಮತ್ತು ಭುಜದ ಸ್ನಾಯುಗಳು ಅತಿಹೆಚ್ಚಿನ ಸೆಳೆತ ಪಡೆಯುವ ಮೂಲಕ ಕೈಕಾಲುಗಳನ್ನು ಹುರಿಗಟ್ಟಿಸುತ್ತವೆ. ಬನ್ನಿ, ಅತಿ ಕಷ್ಟವೂ ಅಲ್ಲದ, ಅಂತೆಯೇ ಬಾಳೆಹಣ್ಣು ಸುಲಿದಷ್ಟು ಸುಲಭವೂ ಅಲ್ಲದ ವಸಿಷ್ಠಾಸನವನ್ನು ಅನುಸರಿಸುವ ಬಗೆಯನ್ನು ಹಂತಹಂತವಾಗಿ ನೋಡೋಣ.... ಸಂಧಿವಾತ ವಿರುದ್ಧ ಹೋರಾಡಲು ಬಳಸಿ 'ಗರುಡಾಸನ' ಎಂಬ ಅಸ್ತ್ರ!

ಹಂತ 1

ಹಂತ 1

ಮೊದಲು ನೆಲದ ಮೇಲೆ ಅಂಗಾತರಾಗಿ ಮಲಗಿ. ಆಸನವನ್ನು ಪ್ರಾರಂಭಿಸಲು ಮೊದಲು ಎಡಮಗ್ಗುಲಿಗೆ ತಿರುಗಿ ಮಲಗಿ. ಬಲಗಾಲು ಎಡಗಾಲಿನ ಮೇಲೆ ಇರಲಿ, ಕಾಲುಗಳನ್ನು ಅಥವಾ ಸೊಂಟವನ್ನು ಬಗ್ಗಿಸಬೇಡಿ.

ಹಂತ 2

ಹಂತ 2

ಬಲಗೈಯನ್ನು ಬಲಸೊಂಟದ ಮೇಲೆ ಹಸ್ತ ತಾಕುವಂತೆ ಇರಿಸಿ, ಕೈ ಮಡಚಬೇಡಿ. ಎಡಗೈಯನ್ನು ಅರ್ಧ ಮಡಚಿ ಸೊಂಟದ ಪಕ್ಕ ಬರುವಂತಿರಿಸಿ ದೇಹವನ್ನು ಸಮತೋಲನದಲ್ಲಿರಿಸಿ.

ಹಂತ 3

ಹಂತ 3

ಈ ಹಂತದಲ್ಲಿ ಕೊಂಚ ಜಾಗರೂಕರಾಗಿರಬೇಕು. ದೇಹದ ಇಡಿಯ ಭಾರ ಮೊಣಕೈ ಮೇಲೆ ಬೀಳಬಾರದು, ಕೊಂಚವೇ ಪಕ್ಕದಲ್ಲಿದ್ದು ಸೊಂಟ ನೆಲತಾಕುವಂತಿರಬೇಕು. ಈಗ ಎಡಗೈಯ ಸ್ನಾಯುಗಳನ್ನು ಬಳಸಿ ದೇಹದ ಮೇಲ್ಭಾಗವನ್ನು ಮೇಲೆತ್ತಬೇಕು. ಅಂದರೆ ಭುಜವನ್ನು ಬಲಭಾಗಕ್ಕೆ ಎತ್ತಬೇಕು, ಸೊಂಟ ನೆಲದಲ್ಲಿಯೇ ಇರಲಿ.

ಹಂತ 4

ಹಂತ 4

ಬಳಿಕ ಮೊಣಕೈ ಮೇಲೆ ದೇಹದ ಮೇಲ್ಭಾಗದ ಭಾರ ಬರುವಂತೆ ಸೊಂಟವನ್ನು ನೇರವಾಗಿಸಿ ಇಡಿಯ ದೇಹ ನೆಟ್ಟಗಾಗಿಸಿ. ಈ ಹಂತದಲ್ಲಿ ತೊಡೆಯ ಸ್ನಾಯುಗಳು, ಕಾಲಿನ ಮೀನಖಂಡ, ಸೊಂಟದ ಸ್ನಾಯುಗಳೆಲ್ಲವೂ ಹುರಿಗಟ್ಟಬೇಕು. ಎಡಪಾದದ ಮೇಲೇ ದೇಹದ ಕೆಳಗಿನ ಭಾರ ಇರಲಿ. ಈ ಹಂತದಲ್ಲಿ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಿ.

ಹಂತ 5

ಹಂತ 5

ಈಗ ಬಲಗೈಯನ್ನು ಭುಜಕ್ಕೆ ಸಮಾನವಾಗಿ ಮೇಲೆತ್ತಿ, ಕೈಬೆರಳುಗಳನ್ನು ಮುಂದಕ್ಕೆ ಚಾಚಿ.

ಹಂತ 6

ಹಂತ 6

ಈ ಹಂತವನ್ನು ಉಸಿರುಗಟ್ಟಿ ಸುಮಾರು ಅರ್ಧನಿಮಿಷದವರೆಗಾದರೂ ಉಳಿಸಿಕೊಳ್ಳಿ. ಪ್ರಾರಂಭದಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಾಗದಿದ್ದರೂ ಕ್ರಮೇಣವಾಗಿ ಸ್ನಾಯುಗಳು ಹುರಿಗಟ್ಟುತ್ತಾ ಹೋದಂತೆ

ಸಾಧ್ಯವಾಗುತ್ತಾ ಹೋಗುತ್ತದೆ. ಬಳಿಕ ಈ ಹಂತಕ್ಕೆ ಹೇಗೆ ಬಂದಿರೋ ಹಾಗೇ ಹಿಮ್ಮುಖವಾಗಿ ಅನುಸರಿಸುತ್ತಾ ಮೊದಲ ಸ್ಥಾನಕ್ಕೆ ಬನ್ನಿ. ಹೀಗೆ ಬರುವಾಗ ಉಸಿರನ್ನು ಪೂರ್ಣವಾಗಿ ಹೊರಬಿಡುತ್ತಾ ಬನ್ನಿ. ಮೊದಲ ಸ್ಥಾನಕ್ಕೆ ಬಂದ ಬಳಿಕ ದೀರ್ಘವಾಗಿ ಕೆಲವು ಬಾರಿ ಉಸಿರಾಡಿ.

ಹಂತ 7

ಹಂತ 7

ಈ ವಿಧಾನವನ್ನು ಈಗ ಇನ್ನೊಂದು ಬದಿಗೆ ಅಂದರೆ ಬಲಮಗ್ಗುಲಿಗೆ ಮಲಗಿ ಪುನರಾವರ್ತಿಸಿ. ಪ್ರಾರಂಭದಲ್ಲಿ ಈ ಆಸನ ಕೊಂಚ ಕಷ್ಟಕರ ಅನ್ನಿಸಿದರೂ ಕ್ರಮೇಣ ಬಾಳೆಹಣ್ಣು ಸುಲಿಯುವಷ್ಟು ಸುಲಭವೂ ಆಗುತ್ತದೆ. ಈ ಆಸನದ ಮುಖ್ಯ ಅಂಗವೆಂದರೆ ದೇಹವನ್ನು ಮೊಣಕೈಮೇಲೆ ಸಮತೋಲನದಲ್ಲಿರಿಸುವುದು. ಹೊಸಬರಿಗೆ ಇದು ಯೋಗಶಿಕ್ಷಕರ ನೆರವಿಲ್ಲದೇ ಅನುಸರಿಸಲು ಸಾಧ್ಯವಾಗದೇ ಹೋಗಬಹುದು. ಆಗ ಗೋಡೆಯ ಬದಿಯಲ್ಲಿ ಮಲಗಿ ಗೋಡೆಯ ಸಹಾಯದಿಂದ ಸಮತೋಲನದಲ್ಲಿರಿಸಲು ತೊಡಗಿದರೆ ಸುಲಭವಾಗುತ್ತದೆ.

ವಸಿಷ್ಠಾಸನದ ಪ್ರಯೋಜನಗಳು

ವಸಿಷ್ಠಾಸನದ ಪ್ರಯೋಜನಗಳು

• ಕೈ ಮತ್ತು ಕಾಲುಗಳ ಸ್ನಾಯುಗಳಿಗೆ ಅತ್ಯುತ್ತಮ ಬಲ ನೀಡುತ್ತದೆ.

• ಮಣಿಕಟ್ಟು ಮತ್ತು ಹೊಟ್ಟೆಯ ಸ್ನಾಯುಗಳನ್ನೂ ಬಲಪಡಿಸುತ್ತದೆ.

• ಇಡಿಯ ದೇಹವನ್ನು ಪೂರ್ಣವಾಗಿ ಸೆಳೆಯಲು ನೆರವಾಗುತ್ತದೆ.

• ಕಂಕುಳ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

• ದೇಹದ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಎಚ್ಚರಿಕೆ

ಎಚ್ಚರಿಕೆ

ಭುಜ, ಸೊಂಟದ ನರದ ತೊಂದರೆ, ಕೆಳಬೆನ್ನಿನ ನೋವು, ಸ್ಲಿಪ್ ಡಿಸ್ಕ್ ತೊಂದರೆ ಇರುವವರು ಈ ಆಸನವನ್ನು ಅನುಸರಿಸಬಾರದು. ಈ ನೋವುಗಳ ತೀವ್ರತೆಯನ್ನು ಪರಿಗಣಿಸಿ ಯೋಗಶಿಕ್ಷಕರು ಅಥವಾ ನಿಮ್ಮ ವೈದ್ಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡಬಲ್ಲರು.

English summary

Vasisthasana (Side Plank Pose) To Strengthen Arms & Legs

Take a look at the steps for vasisthasana. The vasisthasana or the side plank pose helps you to strenghten arms and legs. Take a look.This asana has also been derived from the Sanskrit term "Vasistha" which means most excellent, best and richest.
X
Desktop Bottom Promotion