For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ಮಧುಮೇಹ ಅಪಾಯ ಹೃದಯಾಘಾತದ ಸಾಧ್ಯತೆ ಹೆಚ್ಚಿಸುತ್ತದೆ

|

ಸಕ್ಕರೆ ಕಾಯಿಲೆ ಎಂದೇ ಹೆಚ್ಚಾಗಿ ಗುರುತಿಸಲ್ಪಡುವ ಮಧುಮೇಹ ಸಕ್ಕರೆ ಹೆಚ್ಚು ತಿಂದರೆ ಬರುತ್ತದೆ ಎಂದೇ ಹೆಚ್ಚಿನವರು ಅಂದುಕೊಂಡಿದ್ದಾರೆ. ವಾಸ್ತವದಲ್ಲಿ, ಮಧುಮೇಹಿಗಳಿಗೆ ಮಾತ್ರವಲ್ಲ, ಯಾವುದೇ ವ್ಯಕ್ತಿಗಳಿಗೆ ಒಂದು ಮಿತಿ ಮೀರಿದರೆ ಸಕ್ಕರೆ ಸಹಾ ವಿಷ! ಕಳೆದ ವರ್ಷ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟ ಐದು ಬಿಳಿವಿಷಗಳಲ್ಲಿ ಸಕ್ಕರೆಯೂ ಒಂದು. ಉಳಿದವೆಂದರೆ ಪ್ಯಾಶ್ಚರೀಕರಿಸಿದ ಹಾಲು, ಸಂಸ್ಕರಿಸಿದ ಉಪ್ಪು (ಪುಡಿಯುಪ್ಪು), ಸಂಸ್ಕರಿಸಿದ ಬಿಳಿ ಅಕ್ಕಿ (ಅತಿಯಾಗಿ ಪಾಲಿಶ್ ಮಾಡಿದ ಮತ್ತು ತುಂಡಾಗದಂತೆ ಮಾಡಿರುವ) ಮತ್ತು ಅತ್ಯಂತ ದೊಡ್ಡ ವಿಷವಾಗಿದೆ ಬಿಳಿ ಮೈದಾ (ಗೋಧಿಯ ಹೊರಕವಚವನ್ನು ನಿವಾರಿಸಿ ಒಳಗಿರುವ ಹಿಟ್ಟು ಮಾತ್ರ).

ನಾವು ಸೇವಿಸುವ ಅಹಾರದಿಂದ (ಸಕ್ಕರೆಯೇ ಆಗಬೇಕೆಂದಿಲ್ಲ) ಪಡೆಯುವ ಗ್ಲುಕೋಸ್ ಎಂಬ ಸಕ್ಕರೆಯ ವಿಧವನ್ನು ನಮ್ಮ ದೇಹ ಬಳಸಿಕೊಳ್ಳಲಾರದೇ ಹೋದರೆ ಇದು ಮೂತ್ರದ ಮೂಲಕ ಹೊರಹೋಗುತ್ತದೆ. ಈ ತೊಂದರೆಯನ್ನು ಸಾವಿರಾರು ವರ್ಷದ ಹಿಂದೆಯೇ ಆಯುರ್ವೇದ ಗುರುತಿಸಿ ಮಧುಮೇಹ ಎಂದು ಕರೆದಿದೆ. ಮಧು ಎಂದರೆ ಸಕ್ಕರೆ, ಮೇಹನ ಎಂದರೆ ಮೂತ್ರ. ನ ಅಕ್ಷರವನ್ನು ಕಳೆದು ಮಧುಮೇಹ ಎಂದು ಈಗ ಗುರುತಿಸಲಾಗುತ್ತಿದೆ. ನಮ್ಮ ದೇಹದ ಪ್ರತಿ ಜೀವಕೋಶದ ಕಾರ್ಯನಿರ್ವಹಣೆಗೆ, ಮೆದುಳಿನ ಚಟುವಟಿಕೆಗೆ, ಪ್ರತಿ ಅಂಗಾಂಶ ತನ್ನ ಕೆಲಸ ಪೂರೈಸಲು ಗ್ಲುಕೋಸ್ ಬೇಕೇ ಬೇಕು. ಹಾಗಾಗಿ ದೇಹದಿಂದ ಬಳಸಲ್ಪಡದೇ ಹೋಗುವ ಗ್ಲೂಕೋಸ್ ನಿಂದ ಇವೆಲ್ಲಾ ಕಾರ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಗ್ಲುಕೋಸ್ ಅನ್ನು ಬಳಸಿಕೊಳ್ಳಲು ಇನ್ಸುಲಿನ್ ಎಂಬ ರಸದೂತದ ಅಗತ್ಯವಿದ್ದು ನಮ್ಮ ಮೇದೋಜೀರಕ ಗ್ರಂಥಿ ಇದನ್ನು ಉತ್ಪಾದಿಸುತ್ತದೆ.

ಎರಡು ರೀತಿಯ ಮಧುಮೇಹ

ಎರಡು ರೀತಿಯ ಮಧುಮೇಹ

ಮಧುಮೇಹದಲ್ಲಿ ಎರಡು ವಿಧಗಳಿವೆ. ಟೈಪ್-1 ಅಂದರೆ ಸಾಕಷ್ಟು ಇನ್ಸುಲಿನ್ ಉತ್ಪಾದನೆಯಾಗದೇ ಇರುವ ಮೂಲಕ ಎದುರಾಗುವ ಮಧುಮೇಹ, ಟೈಪ್-2 ಅಂದರೆ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲಾಗದೇ ಹೋಗುವ ಮಧುಮೇಹ.

ಟೈಪ್-1 ಮಧುಮೇಹ: ವಿಶ್ವದಲ್ಲಿ ಶೇಖಡ ಐದು ರಷ್ಟು ಜನರಿಗೆ ಈ ಬಗೆಯ ಮಧುಮೇಹವಿರುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನಕ್ರಮವನ್ನು ಸರಳಗೊಳಿಸಿ, ಆಹಾರದಲ್ಲಿ ಕಟ್ಟುನಿಟ್ಟು ಸಾಧಿಸುವ ಮೂಲಕ ಈ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು. ಸಾಮಾನ್ಯವಾಗಿ ಇದು ನಲವತ್ತಕ್ಕೂ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಅಚ್ಚರಿ ಎಂದರೆ ಯುವಜನರಲ್ಲೂ, ಚಿಕ್ಕ ಮಕ್ಕಳಲ್ಲೂ ಈ ಬಗೆಯ ಮಧುಮೇಹ ಕಾಣಿಸಿಕೊಂಡಿದೆ.

ಟೈಪ್-2 ಮಧುಮೇಹ: ಇದು ಹೆಚ್ಚು ಜನರಲ್ಲಿ ಕಾಣಬರುವ ಬಗೆಯಾಗಿದ್ದು ವಯಸ್ಸು ಹೆಚ್ಚಿದಂತೆಲ್ಲಾ ದೇಹದ ಭಾಗಗಳು ತಮ್ಮ ಕ್ಷಮತೆಯನ್ನು ಕೊಂಚಕೊಂಚವಾಗಿ ಕಳೆದುಕೊಳ್ಳುತ್ತಾ ಬರುತ್ತವೆ. ವಿಶೇಷವಾಗಿ ನಲವತ್ತೈದು ದಾಟಿದ ಬಳಿಕ ಹಲವು ಕಾಯಿಲೆಗಳು ಆವರಿಸುವ ಸಾಧ್ಯತೆ ಹಚ್ಚುತ್ತಾ ಹೋಗುತ್ತದೆ. ಈ ವ್ಯಕ್ತಿಗಳ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಬಳಸದೇ ಹೋಗುವ ಕಾರಣ ದೇಹವೇ ಇದರ ಅಗತ್ಯವಿಲ್ಲ ಎಂದು ನಿಧಾನವಾಗಿ ಇನ್ಸುಲಿನ್ ಉತ್ಪಾದನೆಯನ್ನೇ ಕಡಿಮೆಗೊಳಿಸುತ್ತಾ ಬರುತ್ತದೆ.

ಮಹಿಳೆಯರಲ್ಲಿ ಮಧುಮೇಹ

ಮಹಿಳೆಯರಲ್ಲಿ ಮಧುಮೇಹ

ಮಧುಮೇಹವು ಪುರುಷರು ಮತ್ತು ಮಹಿಳೆಯರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮಧುಮೇಹ ಹೊಂದಿರುವ ಮಹಿಳೆಯರಿಗೆ ವಿವಿಧ ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚು. ಇವುಗಳಲ್ಲಿ ಪ್ರಮುಖವಾದವು ಎಂದರೆ:

ಹೃದ್ರೋಗ, ಇದು ಮಧುಮೇಹದಿಂದ ಸಾಮಾನ್ಯವಾಗಿ ಎಲ್ಲರಲ್ಲಿಯೂ ಎದುರಾಗುವ ಸಮಸ್ಯೆಯಾಗಿದೆ. ಅದರಲ್ಲೂ ಮಧುಮೇಹ ಆವರಿಸಿರುವ ಮಹಿಳೆಯರಿಗೆ ಹೃದಯ ಸಮಸ್ಯೆ ಕಾಡುವುದು ಹೆಚ್ಚು ಎಂದು ಹೇಳಲಾಗುತ್ತದೆ. ಕುರುಡುತನ, ಖಿನ್ನತೆ. ಒಂದು ವೇಳೆ ನಿಮಗೆ ಈ ಬಗೆಯ ಮಧುಮೇಹ ಇದೆ ಎಂದು ಖಾತ್ರಿಯಾದರೆ, ನೀವು ಇಂದಿನಿಂದಲೇ ನಿಮ್ಮ ಜೀವನಕ್ರಮವನ್ನು ಬದಲಿಸಿಕೊಳ್ಳಲು ಪ್ರಾರಂಭಿಸಬೇಕಾಗುತ್ತದೆ ಹಾಗೂ ಮುಖ್ಯವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದರಲ್ಲಿ ಪ್ರಮುಖವಾದುದೆಂದರೆ ಸಮತೋಲನ ಆಹಾರ ಸೇವನೆ, ಸಾಕಷ್ಟು ನಿಯಮಿತ ವ್ಯಾಯಾಯ ಮತ್ತು ವೈದ್ಯರು ಸೂಚಿಸುವ ಔಷಧಿಗಳನ್ನು ತಪ್ಪದೇ ಸೇವಿಸುವುದು.

ಮಹಿಳೆಯರ ಮಧುಮೇಹದ ಲಕ್ಷಣಗಳೇನು

ಮಹಿಳೆಯರ ಮಧುಮೇಹದ ಲಕ್ಷಣಗಳೇನು

ಸಾಮಾನ್ಯವಾಗಿ ಟೈಪ್-2 ಮಧುಮೇಹ ಎದುರಾದರೆ ಪ್ರಾರಂಭದ ದಿನಗಳಲ್ಲಿ ಯಾವುದೇ ಪ್ರಮುಖ ಸೂಚನೆಯನ್ನು ನೀಡುವುದಿಲ್ಲ. ಟೈಪ್-1 ಮಧುಮೇಹ ಮಾತ್ರ ಕೆಲದಿನಗಳಲ್ಲಿಯೇ ತನ್ನ ಸೂಚನೆಯನ್ನು ನೀಡುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ಸುಸ್ತು

* ಅತೀವವಾದ ಬಾಯಾರಿಕೆ

* ಸತತ ಮೂತ್ರಕ್ಕೆ ಅವಸರವಾಗುವುದು

* ದೃಷ್ಟಿ ಮಂಜಾಗುವುದು

* ಸಕಾರಣವಿಲ್ಲದೇ ತೂಕದಲ್ಲಿ ಇಳಿಕೆ

* ಹಸ್ತ ಮತ್ತು ಪಾದಗಳಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿದಂತೆ ಭಾಸವಾಗುವುದು

* ಒಸಡುಗಳು ತೀವ್ರಸಂವೇದಿಯಾಗುವುದು

* ಗಾಯವಾದರೆ ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು

ಆದರೆ ಮಧುಮೇಹ ಎದುರಾದ ಎಲ್ಲರಿಗೂ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳದೇ ಹೋಗಬಹುದು. ಕೆಲವು ಮಾತ್ರವೇ ಗಮನಕ್ಕೆ ಬರಬಹುದು. ಒಂದು ವೇಳೆ ನಿಮಗೆ ಇವುಗಳಲ್ಲಿ ಒಂದಾದರೂ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯರಲ್ಲಿ ಸಲಹೆ ಪಡೆಯಬೇಕು. ಏಕೆಂದರೆ ಈ ಸೂಚನೆಗಳು ಮಧುಮೇಹವಲ್ಲದಿದ್ದರೂ ಬೇರೆ ಕಾಯಿಲೆಯ ಲಕ್ಷಣವಾಗಿರಬಹುದು.

ಕೆಲವು ಸಂದರ್ಭಗಳಲ್ಲಿ ಮಧುಮೇಹ ಎದುರಾಗಿದ್ದರೂ ದೇಹ ಯಾವುದೇ ಲಕ್ಷಣವನ್ನು ಪ್ರಮುಖವಾಗಿ ತೋರದೇ ಹೋಗಬಹುದು. ಹಾಗಾಗಿ ನಿಮ್ಮ ವೈದ್ಯರು ಸೂಚಿಸುವ ನಿಯಮಿತವಾದ ರಕ್ತಪರೀಕ್ಷೆಯನ್ನು ಮಾಡಿಸುತ್ತಿರುವುದು ಒಳ್ಳೆಯದು. ಯಾವುದೇ ಅನುಮಾನ ಬಂದರೂ ವೈದ್ಯರಲ್ಲಿ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಪರೀಕ್ಷಿಸಲು ಕೇಳಿಕೊಳ್ಳಬೇಕು.

ಮಹಿಳೆಯರಲ್ಲಿ ಮಧುಮೇಹ ಎದುರಾಗಲು ಕಾರಣಗಳೇನು?

ಮಹಿಳೆಯರಲ್ಲಿ ಮಧುಮೇಹ ಎದುರಾಗಲು ಕಾರಣಗಳೇನು?

ದೇಹದಲ್ಲಿ ಇನ್ಸುಲಿನ್ ಇಲ್ಲದಿದ್ದರೆ ಅಥವಾ ಇದ್ದರೂ ಬಳಸಿಕೊಳ್ಳಲಾಗದೇ ಹೋದರೆ ಗ್ಲುಕೋಸ್ ಬಳಸಲ್ಪಡದೇ ಹೋಗುತ್ತದೆ. ಇನ್ಸುಲಿನ್ ಗ್ಲುಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಹಾಗೂ ಹೆಚ್ಚುವರಿ ಗ್ಲುಕೋಸ್ ಅನ್ನು ಯಕೃತ್ ನಲ್ಲಿ ಸಂಗ್ರಹಿಸಿಡುತ್ತದೆ. ಮಧುಮೇಹಿಗಳ ರಕ್ತದಲ್ಲಿ ಗ್ಲುಕೋಸ್ ಅಂಶ ಹೆಚ್ಚಿರುತ್ತದೆ ಹಾಗೂ ಕಾಲಕ್ರಮೇಣ ಮಧುಮೇಹದಲ್ಲಿ ನಿಯಂತ್ರಣವಿಲ್ಲದಿದ್ದರೆ ಹಲವಾರು ಪ್ರಮುಖ ಕಾಯಿಲೆಗಳು ಎದುರಾಗಬಹುದು. ಮಧುಮೇಹ ಯಾರಿಗೂ ಎದುರಾಗಬಹುದು. ಆದರೆ ಕೆಲವು ಕಾರಣಗಳು ಮಧುಮೇಹ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇವುಗಳೆಂದರೆ:

* ನಲವತ್ತು ವಯಸ್ಸು ದಾಟಿದ ವ್ಯಕ್ತಿಗಳು

* ಸ್ಥೂಲಕಾಯ

* ಅನುವಂಶಿಕ ಕಾರಣಗಳು

* ಆರಾಮದಾಯಕ ಜೀವನಕ್ರಮ

* ತೀವ್ರ ರಕ್ತದೊತ್ತಡ

* ಅನಾರೋಗ್ಯಕರ ಆಹಾರಾಭ್ಯಾಸ

* ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ ಮಾಡದೇ ಇರುವುದು

* ಧೂಮಪಾನ, ತಂಬಾಕು ಸೇವನೆ

* ಕುಟುಂಬದ ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಎದುರಾಗುವ ಮಧುಮೇಹ

* ಮಹಿಳೆಯರಿಗೆ ರಜೋನಿವೃತ್ತಿಯ ಬಳಿಕ ಮಧುಮೇಹ

* ಹಲವಾರು ಬಾರಿ ವೈರಲ್ ಸೋಂಕಿಗೆ ಒಳಗಾಗಿರುವುದು

ಮಹಿಳೆಯರಲ್ಲಿ ಮಧುಮೇಹ ಪತ್ತೆಹಚ್ಚುವಿಕೆ

ಮಹಿಳೆಯರಲ್ಲಿ ಮಧುಮೇಹ ಪತ್ತೆಹಚ್ಚುವಿಕೆ

ಎಲ್ಲಿಯವರೆಗೆ ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕ ನಿಮಗೆ ಆವರಿಸಿರುವುದು ಮಧುಮೇಹವೇ ಹೌದು ಎಂದು ಖಚಿತಪಡಿಸುವುದಿಲ್ಲವೋ, ಅಲ್ಲಿಯವರೆಗೆ ನಿಮಗೆ ಮಧುಮೇಹ ಇದೆ ಎಂದು ನೀವಾಗಿಯೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ವೈದ್ಯರು ಉಪವಾಸದ ಅವಧಿಯಲ್ಲಿ ಸಂಗ್ರಹಿಸಿದ ರಕ್ತದ ಪ್ಲಾಸ್ಮಾದಲ್ಲಿರುವ ಗ್ಲುಕೋಸ್ ಮಟ್ಟವನ್ನು ಅಳೆದು ಮಧುಮೇಹವಿರುವ ಸೂಚನೆಯನ್ನು ಗುರುತಿಸುತ್ತಾರೆ.

ರಕ್ತಪರೀಕ್ಷೆಗೂ ಮುನ್ನ ವೈದ್ಯರು ಕನಿಷ್ಟ ಎಂಟು ಘಂಟೆಗಳ ಕಾಲ ಉಪವಾಸವಿರಲು ಸೂಚಿಸುತ್ತಾರೆ. ಈ ಅವಧಿಯಲ್ಲಿ ನೀವು ನೀರನ್ನು ಬಿಟ್ಟು ಬೇರೇನನ್ನೂ ಸೇವಿಸಬಾರದು. ರಕ್ತ ಸಂಗ್ರಹಿಸಿದ ಬಳಿಕ ಪ್ರಯೋಗಾಲಯ ತಜ್ಞರು ರಕ್ತದ ಮಾದರಿಯನ್ನು ಪರೀಕ್ಷಿಸುತ್ತಾರೆ. ಈ ರಕ್ತದಲ್ಲಿ ಎಷ್ಟು ಗ್ಲುಕೋಸ್ ಇದೆಯೋ ಅದೇ ಉಪವಾಸದ ಗ್ಲುಕೋಸ್ (fasting glucose) ಎಂದು ಪರಿಗಣಿಸಲ್ಪಡುತ್ತದೆ ಹಾಗೂ ಇದೇ ಮಧುಮೇಹ ಗುರುತಿಸಲು ಮುಖ್ಯ ಮಾನದಂಡವಾಗಿದೆ. ಇದು 126 ಮಿಲಿಗ್ರಾಂ / ಡೆಸಿಲೀಟರ್ (mg/dL) ಕ್ಕೂ ಮೀರಿದ್ದರೆ ನಿಮಗೆ ಮಧುಮೇಹ ಇರಬಹುದು ಎಂದು ವೈದ್ಯರು ಪರಿಗಣಿಸುತ್ತಾರೆ. ಆದರೆ ಪರಿಪೂರ್ಣವಾಗಿ ಖಚಿತಪಡಿಸುವುದಿಲ್ಲ.

ಈ ಅನುಮಾನವನ್ನು ಪರಿಹರಿಸಲು ವೈದ್ಯರು ಬೇರೊಂದು ಪರೀಕ್ಷೆಯನ್ನು ಮಾಡಿಸಿಕೊಳ್ಳಲು ಸೂಚಿಸುತ್ತಾರೆ. ಇದರಲ್ಲಿ ಸಕ್ಕರೆಭರಿತ ಪೇಯವನ್ನು ಕುಡಿದ ಎರಡು ಘಂಟೆಗಳ ಬಳಿಕ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಈ ಎರಡು ಘಂಟೆಗಳಲ್ಲಿ ಬೇರೇನನ್ನೂ ತಿನ್ನಬಾರದು ಅಥವಾ ದೈಹಿಕ ಚಟುವಟಿಕೆ ಇರಬಾರದು. ಈ ಸಂದರ್ಭದಲ್ಲಿ ಸಂಗ್ರಹಿಸಿದ ರಕ್ತದ ಪರೀಕ್ಷೆಯಲ್ಲಿ ಎಷ್ಟು ಗ್ಲುಕೋಸ್ ಇದೆ ಎಂದು ಪರಿಶೀಲಿಸಲಾಗುತ್ತದೆ. ಅಂದರೆ ನಿಮ್ಮ ದೇಹ ಈಗ ಲಭ್ಯವಿರುವ ಗ್ಲುಕೋಸ್ ಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎಂದು ಅಳೆಯಲಾಗುತ್ತದೆ. ಅಗತ್ಯಬಿದ್ದರೆ ಮತ್ತೆರಡು ಘಂಟೆಗಳ ನಂತರದ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತದೆ. ಈಗ ಗ್ಲುಕೋಸ್ ಮಟ್ಟ 200 mg/dL ಕ್ಕೂ ಹೆಚ್ಚಿದ್ದರೆ ಮಾತ್ರ, ನಿಮಗೆ ಮಧುಮೇಹವಿರುವುದು ಖಚಿತ ಎಂದು ಪರಿಗಣಿಸಲಾಗುತ್ತದೆ.

ಮಧುಮೇಹಕ್ಕೆ ಚಿಕಿತ್ಸೆ

ಮಧುಮೇಹಕ್ಕೆ ಚಿಕಿತ್ಸೆ

ಮಧುಮೇಹ ಎದುರಾದ ಬಳಿಕ ಇದನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಔಷಧಿಗಇದನ್ನು ನಿಯಂತ್ರಿಸಲು ಕೆಲವುಳನ್ನು ವೈದ್ಯರು ಸೂಚಿಸಬಹುದು. ಅಗತ್ಯಬಿದ್ದರೆ ಇನ್ಸುಲಿನ್ ಇಂಜೆಕ್ಷನ್ ಗಳನ್ನೂ ತೆಗೆದುಕೊಳ್ಳಲು ಅಥವಾ ಎರಡನ್ನೂ ಜೊತೆಯಾಗಿ ತೆಗೆದುಕೊಳ್ಳಲು ಹೇಳಬಹುದು.

ಈಗ ನಿಮ್ಮ ಜೀವನಕ್ರಮವನ್ನು ಆರೋಗ್ಯಕರ ರೂಪದಲ್ಲಿ ಕಾಯ್ದುಕೊಳ್ಳುವುದು ನಿಮಗೆ ಅಗತ್ಯವಾಗಿದ್ದು ಇದರಿಂದ ಮಧುಮೇಹದ ಪರೋಕ್ಷ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿತ್ಯವೂ ಕನಿಷ್ಟ ಅರ್ಧಘಂಟೆಯ ವ್ಯಾಯಾಮ, ಸಾಕಷ್ಟು ನಡಿಗೆ ಹಾಗೂ ಸಮತೋಲನದ ಆಹಾರ ಸೇವನೆ ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಮಧುಮೇಹಿಗಳಿಗೆ ಸೂಕ್ತವಾದ ಆಹಾರಗಳನ್ನೇ ಸೇವಿಸಬೇಕು. ಅಲ್ಲದೇ ವೈದ್ಯರು ಸೂಚಿಸಿರುವ ಔಷಧಿಗಳನ್ನು ಕ್ರಮತಪ್ಪದೇ ಸೇವಿಸಬೇಕು.

ಮಹಿಳೆಯರಿಗೆ ಮಧುಮೇಹ ಬಾರದಂತೆ ತಡೆಗಟ್ಟುವ ಕ್ರಮಗಳು

ಮಹಿಳೆಯರಿಗೆ ಮಧುಮೇಹ ಬಾರದಂತೆ ತಡೆಗಟ್ಟುವ ಕ್ರಮಗಳು

ವಿಶೇಷವಾಗಿ ನಲವತ್ತು ದಾಟಿದ ಮಹಿಳೆಯರು ತಮ್ಮ ದೇಹದಲ್ಲಿ ರಕ್ತದ ಗ್ಲುಕೋಸ್ ಮಟ್ಟಗಳನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ಕೆಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ಎಂದಿಗೂ ಬೆಳಗ್ಗಿನ ಉಪಾಹಾರವನ್ನು ತ್ಯಜಿಸದಿರಿ. ಇದು ದೇಹದಲ್ಲಿ ಆರೋಗ್ಯಕರ ಮಟ್ಟದ ಗ್ಲೂಕೋಸ್ ದೇಹದಲ್ಲಿ ಇರುವಂತೆ ಮಾಡುತ್ತದೆ.

* ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟುಗಳನ್ನು ಕಡಿಮೆ ಮಾಡಿ. ಅಂದರೆ ಬ್ರೆಡ್, ಆಲೂಗಡ್ಡೆ ಮೊದಲಾದ ಪಿಷ್ಟ ಪದಾರ್ಥಗಳನ್ನು ಕಡಿಮೆ ಮಾಡಿ.

* ನಿತ್ಯವೂ ವಿವಿಧ ಬಣ್ಣಗಳ ಹಸಿ ತರಕಾರಿಗಳನ್ನು ಸೇವಿಸಿ. ಬೆರ್ರಿ, ಕಿತ್ತಳೆ ಮೊದಲಾದ ಪ್ರಖರ ಬಣ್ಣದ ಹಣ್ಣುಗಳು, ಸೌತೆ, ಬೀಟ್ರೂಟ್, ಮೂಲಂಗಿ ಮೊದಲಾದ ಹಸಿಯಾಗಿ ಸೇವಿಸಬಹುದಾದ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಾಲಾಡ್ ರೂಪದಲ್ಲಿ ಸೇವಿಸಿ.

* ಪ್ರತಿ ಹೊತ್ತಿನ ಊಟದಲ್ಲಿಯೂ ವಿಭಿನ್ನ ಬಗೆಯ ಧಾನ್ಯಗಳನ್ನು ಸೇವಿಸಿ.

* ಬುರುಗು ಬರುವ ಯಾವುದೇ ಪಾನೀಯಗಳನ್ನು ಸೇವಿಸದಿರಿ. ಒಂದು ವೇಳೆ ನಿಮಗೆ ಲಘು ಪಾನೀಯಗಳು ಬಿಡಲಾಗದಷ್ಟು ಅಭ್ಯಾಸವಾಗಿದ್ದರೆ ಇದರದಲ್ಲಿ ಅರ್ಧಭಾಗ ನೀರು ಬೆರೆಸಿ ಅಥವಾ ಲಿಂಬೆರಸ ಬೆರೆಸಿ ಕುಡಿಯಲು ಪ್ರಾರಂಭಿಸಿ, ಕ್ರಮೇಣ ಇದನ್ನು ಕಡಿಮೆಯಾಗಿಸುತ್ತಾ ಬಂದು ಕೊನೆಗೆ ಬಿಟ್ಟೇ ಬಿಡಿ.

* ನಿಮಗೆ ಸೂಕ್ತವಾಗುವ ಈ ಆಹಾರಗಳು ನಿಮ್ಮ ಕುಟುಂಬವರ್ಗದವರಿಗೂ ಇಷ್ಟವಾಗುವಂತಿರಲಿ. ಹೀಗೆ ಮಾಡಿದಾಗ ಕುಟುಂಬವರ್ಗದವರಿಗೆ ಬೇರೆ, ನಿಮಗೇ ಬೇರೆ ಆಹಾರವನ್ನು ತಯಾರಿಸುವ ಕಷ್ಟ ಎದುರಾಗುವುದಿಲ್ಲ.

* ದಿನವಿಡೀ ನಿಮ್ಮನ್ನು ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಈ ಅಭ್ಯಾಸಗಳು ನಿಮ್ಮ ದೇಹದಲ್ಲಿ ಚೈತನ್ಯ ಒದಗಿಸುವ ಮೂಲಕ ಮಧುಮೇಹ ಎದುರಾಗುವ ಸಾಧ್ಯತೆಯನ್ನು ತಡವಾಗಿಸುತ್ತವೆ ಹಾಗೂ ಒಂದು ವೇಳೆ ಈಗಾಗಲೇ ಇದ್ದರೆ ಉಲ್ಬಣಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಯಾವುದೇ ಕಾಯಿಲೆ ಇದ್ದರೂ ಸರಿ, ಇಲ್ಲದಿದ್ದರೂ ಸರಿ, ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದನ್ನು ಯಾವುದೇ ವಯಸ್ಸಿನವರು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮವಾಗಿದೆ.

English summary

After 40 Diabetes In Women: Symptoms, Causes, Risk Factors, Treatment And Prevention

Diabetes affects how your body processes glucose, which is a type of sugar. Glucose is important for your overall health. It serves as a source of energy for your brain, muscles, and other tissue cells. Without the right amount of glucose, your body has trouble functioning properly.
Story first published: Thursday, November 14, 2019, 15:15 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X