For Quick Alerts
ALLOW NOTIFICATIONS  
For Daily Alerts

ಈ 9 ಸೂತ್ರಗಳನ್ನು ಅನುಸರಿಸಿ, ಖಂಡಿತ ಮಧುಮೇಹ ನಿಯಂತ್ರಿಸಬಹುದು

By Arshad
|

ಇಂದಿನ ದಿನಗಳಲ್ಲಿ 'ಮಧುಮೇಹ' ಎಂಬ ಪದ ಸಾಮಾನ್ಯವಾಗಿ ಕೇಳಿಬರುವ ಪದವಾಗಿದೆ. ಮನೆಗೆ ಆಗಮಿಸುವ ಅತಿಥಿಗಳಲ್ಲಿ ಹಿರಿಯರಿದ್ದರೆ ಕೆಲವರಿಗಾದರೂ ಮಧುಮೇಹವಿದ್ದೇ ಇರುತ್ತದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದಿನ ದಿನಗಳಲ್ಲಿ ಹೆಚ್ಚಿನ ವ್ಯಕ್ತಿಗಳು ಮಧುಮೇಹಕ್ಕೆ ತುತ್ತಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ನಿಮ್ಮ ಅಪ್ತರಲ್ಲಿಯೂ ಮಧುಮೇಹ ಸುಪ್ತವಾಗಿ ಅಡಗಿ ಕುಳಿತಿರಬಹುದು!

ಮಧುಮೇಹಿಗಳು ಬೆಲ್ಲವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ಒಂದು ಸಮೀಕ್ಷೆಯಲ್ಲಿ ಕಂಡುಕೊಂಡಂತೆ 1980 ರಲ್ಲಿ 10.8 ಕೋಟಿ ಮಧುಮೇಹಿಗಳಿದ್ದರು. ಆದರೆ 2014ರಲ್ಲಿ ಈ ಸಂಖ್ಯೆಯಲ್ಲಿ ಆಗಾಧ ವೃದ್ಧಿಯಾಗಿ 42.2 ಕೋಟಿಗೇರಿದೆ. ಈ ವರ್ಷದಲ್ಲಿ ಈ ಸಂಖ್ಯೆ ಇನ್ನೆಷ್ಟು ಬೆಳೆದಿರಬಹುದು? ಮಧುಮೇಹವೆಂದರೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುವ ಮೂಲಕ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವುದು ಅಥವಾ ಉತ್ಪಾದನೆಯಾದರೂ ಬಳಸಿಕೊಳ್ಳಲು ಅಸಮರ್ಥವಾಗುವುದೇ ಆಗಿದೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಗಾಧವಾಗಿ ಏರುತ್ತದೆ. ಈ ಪರಿಸ್ಥಿತಿಯಲ್ಲಿ ಸುಸ್ತು ಆವರಿಸುವುದು, ಸತತವಾಗಿ ಮೂತ್ರ ವಿಸರ್ಜನೆಗೆ ಅವಸರವಾಗುವುದು, ರೋಗ ನಿರೋಧಕ ಶಕ್ತಿ ಕುಂದುವುದು, ಗಾಯಗಳು ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಮೊದಲಾದವು ಎದುರಾಗುತ್ತವೆ.

ayurveda tips for diabetes

ಮಧುಮೇಹ ಒಂದು ಬಾರಿ ಎದುರಾದ ಬಳಿಕ ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿಯಂತ್ರಣದಲ್ಲಿರಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು. ಮಧುಮೇಹ ಆವರಿಸುವ ಸಾಧ್ಯತೆಯಿಂದ ದೂರವಿರಲು ಕೆಲವು ಉತ್ತಮ ಮಾರ್ಗಗಳಿದ್ದು ಇವುಗಳಲ್ಲಿ ಒಂಭತ್ತು ಅತ್ಯಂತ ಉತ್ತಮ ಹಾಗೂ ಸಾಬೀತುಪಡಿಸಿದ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಆದರೆ ಮಧುಮೇಹ ಅನುವಂಶಿಕವಾಗಿದ್ದರೆ ಇದನ್ನು ಕೊಂಚ ಮುಂದೂಡಲು ಸಾಧ್ಯವೇ ಹೊರತು ತಡೆಗಟ್ಟಲು ಸಾಧ್ಯವಿಲ್ಲ.

ಆರೋಗ್ಯಕರ ಬಿ ಎಂ ಐ ಹೊಂದಿರಬೇಕು

ಆರೋಗ್ಯಕರ ಬಿ ಎಂ ಐ ಹೊಂದಿರಬೇಕು

ಎತ್ತರಕ್ಕೆ ತಕ್ಕ ತೂಕ ಎಷ್ಟಿರಬೇಕೆಂಬ ಕೋಷ್ಟಕವೇ ಬಿಎಂ ಐ ಅಥವಾ BMI (Body Mass Index). ಈ ಕೋಷ್ಟಕದಲ್ಲಿ ವಿವರಿಸಿದ ಗರಿಷ್ಟ ಕನಿಷ್ಟಗಳೊಳಗೇ ತೂಕವನ್ನು ಉಳಿಸಿಕೊಳ್ಳುವುದರಿಂದ ಹಲವಾರು ತೊಂದರೆಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹಲವಾರು ಸಂಶೋಧನೆಗಳು ಸಾಬೀತುಪಡಿಸಿವೆ. ಸೂಕ್ತ ಬಿ ಎಂ ಐ ಮಿತಿಯೊಳಗಿರಲು ನಿಮ್ಮ ತೂಕವನ್ನು ಇಳಿಸಬೇಕು ಅಥವಾ ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಜೀವನಶೈಲಿಯನ್ನು ಅನಿವಾರ್ಯವಾಗಿ ಬದಲಿಸಬೇಕಾಗಿಯೂ ಬರಬಹುದು. ಸೂಕ್ತ ಬಿ ಎಂ ಐ ಹೊಂದಿದ್ದರೆ ಮಧುಮೇಹ ಆವರಿಸುವ ಸಾಧ್ಯತೆ 70%ರಷ್ಟು ಕಡಿಮೆಯಾಗುತ್ತದೆ.!

ಹೆಚ್ಚು ಸಾಲಾಡ್ ಸೇವಿಸಿ

ಹೆಚ್ಚು ಸಾಲಾಡ್ ಸೇವಿಸಿ

ನಿತ್ಯವೂ ಒಂದು ಬೋಗುಣಿಯಷ್ಟಾದರೂ ಕ್ಯಾರೆಟ್, ಸೌತೆ, ಲೆಟ್ಯೂಸ್, ಟೊಮಾಟೋ, ನೀರುಳ್ಳಿ, ಬೆಳ್ಳುಳ್ಳಿ ಮೊದಲಾದ ಹಸಿ ತರಕಾರಿ, ಹಸಿರು ಎಲೆ ಗಳನ್ನು ಮದ್ಯಾಹ್ನದ ಅಥವಾ ರಾತ್ರಿಯ ಊಟಕ್ಕೂ ಮುನ್ನ ಸೇವಿಸಿ. ಸಾಲಾಡ್ ರುಚಿಯನ್ನು ಹೆಚ್ಚಿಸಲು ಕೊಂಚ ಶಿರ್ಕಾವನ್ನೂ ಸೇರಿಸಿಕೊಳ್ಳಬಹುದು. ಶಿರ್ಕಾ ಸೇರಿಸಿದ ಸಾಲಾಡ್ ಸೇವನೆಯಿಂದ ನಂತರ ಸೇವಿಸುವ ಆಹಾರದಿಂದ ಕಡಿಮೆ ಸಕ್ಕರೆಯನ್ನು ದೇಹ ಹೀರಿಕೊಳ್ಳುವಂತಾಗುತ್ತದೆ ಹಾಗೂ ಈ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿರುತ್ತದೆ. ಇದು ಮಧುಮೇಹದ ಸಾಧ್ಯತೆಯನ್ನು ದೂರವಾಗಿಸುತ್ತದೆ.

ಹೆಚ್ಚು ನಡೆಯಿರಿ

ಹೆಚ್ಚು ನಡೆಯಿರಿ

ಉತ್ತಮ ಆರೋಗ್ಯ ಮತ್ತು ದೇಹದಾರ್ಡ್ಯತೆ ಕಾಯ್ದುಕೊಳ್ಳಲು ವ್ಯಾಯಾಮ ಎಷ್ಟು ಅಗತ್ಯ ಎಂದು ನಮಗೆಲ್ಲಾ ಗೊತ್ತೇ ಇದೆ. ಉತ್ತಮ ದೇಹದರ್ಢ್ಯತೆಯನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಬೇಕಾದರೆ ಹಾಗೂ ಮಧುಮೇಹವನ್ನು ದೂರವಿರಿಸಬೇಕಾದರೆ ನಡಿಗೆ ಅತ್ಯುತ್ತಮವಾದ ವ್ಯಾಯಾಮವಾಗಿದೆ. ನಿತ್ಯವೂ ಕನಿಷ್ಟ ನಲವತ್ತು ನಿಮಿಷಗಳಾದರೂ ವೇಗವಾಗಿ ನಡೆಯುವಂತೆ ಕಡ್ಡಾಯ ನಿಯಮವೊಂದನ್ನು ಅಳವಡಿಸಿಕೊಳ್ಳುವ ಮೂಲಕ, ಅದೂ ಆದಷ್ಟೂ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭಿಸುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ಇದರಿಂದ ಜೀವರಾಸಾಯನಿಕ ಕ್ರಿಯೆಯ ಗತಿ ಏರುತ್ತದೆ ಹಾಗೂ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ ಈ ಮೂಲಕ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ.

ಇಡಿಯ ಧಾನ್ಯಗಳನ್ನು ಸೇವಿಸಿ

ಇಡಿಯ ಧಾನ್ಯಗಳನ್ನು ಸೇವಿಸಿ

ನಿಮ್ಮ ಆಹಾರದಲ್ಲಿ ಸಾಕಷ್ಟು ಇಡಿಯ ಧಾನ್ಯಗಳಿರುವಂತೆ ನೋಡಿಕೊಳ್ಳಿ. ಓಟ್ಸ್, ಬಾರ್ಲಿ, ಕಂದು ಅಕ್ಕಿ, ಏಕದಳಧಾನ್ಯಗಳು ಮೊದಲಾದವುಗಳನ್ನು ವಿಶೇಷವಾಗಿ ಉಪಾಹಾರದಲ್ಲಿ ಅಳವಡಿಸಿಕೊಳ್ಳಿ. ಇಡಿಯ ಧಾನ್ಯಗಳಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳು ಹಾಗೂ ಕರಗದ ನಾರು ಇರುತ್ತದೆ. ಈ ಕರಗದ ನಾರು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನೈಸರ್ಗಿಕವಾಗಿ ತಗ್ಗಿಸಲು ನೆರವಾಗುತ್ತವೆ. ಈ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತವೆ. ಇಡಿಯ ಧಾನ್ಯಗಳ ಸೇವನೆಯಿಂದ ಇತರ ಲಾಭಗಳೂ ಇವೆ. ಮಲಬದ್ದತೆ ಇಲ್ಲವಾಗುವುದು, ಇವುಗಳಲ್ಲಿ ಅಧಿಕ ರಕ್ತದೊತ್ತಡ ಕಡಿಮೆಯಾಗುವುದು ಇತ್ಯಾದಿಗಳು ಪ್ರಮುಖವಾಗಿವೆ.

ಕಾಫಿ ಸೇವಿಸಿ

ಕಾಫಿ ಸೇವಿಸಿ

ಹೌದು, ಕಾಫಿ ಸೇವನೆಯ ಸಾಧಕ ಬಾಧಕಗಳ ಬಗ್ಗೆ ವೈದ್ಯ ಜಗತ್ತಿನಲ್ಲಿ ಹಲವಾರು ಚರ್ಚೆಗಳಾಗುತ್ತಿವೆ. ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಂತೆ ದಿನಕ್ಕೆ ಎರಡು ಕಪ್ ಕಾಫಿ ಕುಡಿಯುವ ಮೂಲಕ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ 29%ರಷ್ಟು ಕಡಿಮೆಯಾಗುತ್ತದೆ. ಆದರೆ ಈ ಕಾಫಿ ಸಕ್ಕರೆ ರಹಿತವಾಗಿರುವುದು ಅವಶ್ಯ. ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ಎಲ್ಲಾ ಪ್ರಯೋಜನಗಳಿಗೆ ಮೂಲವಾಗಿದೆ.

ಸಿದ್ಧ ಆಹಾರಗಳನ್ನು ತ್ಯಜಿಸಿ

ಸಿದ್ಧ ಆಹಾರಗಳನ್ನು ತ್ಯಜಿಸಿ

ಇಂದು ಬೆರಳನ್ನು ಆಪ್ ಗಳ ಆಯ್ಕೆಗಳ ಮೇಲೆ ನವಿರಾಗಿ ಮುಟ್ಟುವ ಮೂಲಕ ಸಿದ್ಧ ಆಹಾರಗಳನ್ನು ಮನೆಗೇ ತರಿಸಿಕೊಳ್ಳಬಹುದು. ಇವುಗಳ ಭರ್ಜರಿ ಜಾಹೀರಾತುಗಳಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಹುರಿದ ಆಲುಗಡ್ಡೆ, ಪಿಜ್ಜಾ, ಬರ್ಗರ್ ಮೊದಲಾದವುಗಳಲ್ಲಿ ಸೇರಿಸಿರುವ ಸಂರಕ್ಷಕಗಳು ಆರೋಗ್ಯಕ್ಕೆ ಮಾರಕವಾಗಿವೆ. ಇವುಗಳ ಸೇವನೆಯಿಂದ ಸ್ಥೂಲಕಾಯ, ಅಧಿಕ ಕೊಲೆಸ್ಟ್ರಾಲ್, ಅಜೀರ್ಣತೆ, ಹೃದಯದ ತೊಂದರೆಗಳು ಮೊದಲಾದವು ಎದುರಾಗಬಹುದು. ಅಲ್ಲದೇ ಈ ಆಹಾರಗಳ ಪ್ರಮಾಣ ಸತತವಾಗಿದ್ದರೆ ಇವು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಏರುಪೇರುಗೊಳಿಸುವ ಮೂಲಕ ಮಧುಮೇಹವನ್ನು ಶೀಘ್ರವಾಗಿ ಆವರಿಸುವಂತೆ ಮಾಡಬಹುದು. ಆದ್ದರಿಂದ ಮಧುಮೇಹದಿಂದ ರಕ್ಷಣೆ ಪಡೆಯಲಾದರೂ ಸರಿ, ಈ ಅನಾರೋಗ್ಯಕರ ಆಹಾರಗಳನ್ನು ವರ್ಜಿಸಬೇಕು.

ದಾಲ್ಚಿನ್ನಿ ಸೇವಿಸಿ

ದಾಲ್ಚಿನ್ನಿ ಸೇವಿಸಿ

ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ದಾಲ್ಚಿನ್ನಿ ಪುಡಿ ಅಥವಾ ಎಣ್ಣೆಯನ್ನು ಸೇರಿಸಿಕೊಳ್ಳುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು 48%ರಷ್ಟು ಕಡಿಮೆ ಮಾಡಬಹುದು! ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಇವು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಪ್ರಮಾಣವನ್ನು ಕಡಿಮೆಗೊಳಿಸಿ ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಈ ಪ್ರಮಾಣಗಳು ಕಡಿಮೆ ಇದ್ದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವೂ ನಿಯಂತ್ರಣದಲ್ಲಿಯೇ ಇರುತ್ತದೆ. ಇದು ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ.

ಒತ್ತಡದಿಂದ ಮುಕ್ತಿ ಪಡೆಯಿರಿ

ಒತ್ತಡದಿಂದ ಮುಕ್ತಿ ಪಡೆಯಿರಿ

ಕೆಲವಾರು ಕಾಯಿಲೆಗಳಿಗೆ ಮಾನಸಿಕ ಒತ್ತಡ ಪ್ರಮುಖ ಕಾರಣವಾಗಿದೆ. ತಲೆನೋವಿನಿಂದ ತೊಡಗಿ ಕ್ಯಾನ್ಸರ್ ವರೆಗೂ ಈ ಪರಿಣಾಮಗಳು ಕಂಡುಬರಬಹುದು. ಒಂದು ವೇಳೆ ನೀವು ಸತತವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವ ವ್ಯಕ್ತಿಯಾಗಿದ್ದರೆ ನಿಮಗೂ ಮಧುಮೇಹ ಆವರಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಒತ್ತಡದಿಂದ ಮುಕ್ತಿ ಪಡೆಯುವ ವಿಧಾನಗಳು, ಯೋಗಾಭ್ಯಾಸ, ಧ್ಯಾನ ಮೊದಲಾದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ಕ್ರಮವನ್ನು ಅಳವಡಿಸಿಕೊಂಡು ಈ ಮೂಲಕ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ಕಾರ್ಟಿಸೋಲ್ ಎಂಬ ರಸದೂತವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ಮಧುಮೇಹವನ್ನೂ ದೂರವಿರಿಸಬಹುದು.

ಧೂಮಪಾನ ತ್ಯಜಿಸಿ

ಧೂಮಪಾನ ತ್ಯಜಿಸಿ

ಒತ್ತಡದ ಸಹಿತ ಇನ್ನೂ ಅನೇಕ ಅಪಾಯಕಾರಿ ರೋಗಗಳು ಆವರಿಸಲು ಇನ್ನೊಂದು ಕಾರಣವೆಂದರೆ ಧೂಮಪಾನ ಮಾಡುವುದು. ಶ್ವಾಸಕೋಶದ ಕ್ಯಾನ್ಸರಿನಂತಹ ಇತರ ಪ್ರಮುಖ ರೋಗಗಳ ಜೊತೆಗೇ ಧೂಮಪಾನದಿಂದ ಮಧುಮೇಹವೂ ಎದುರಾಗಬಹುದು. ಆದ್ದರಿಂದ, ಸಾಧ್ಯವಾದಷ್ಟು ಬೇಗನೇ ಈ ಅಭ್ಯಾಸದಿಂದ ಹೊರಬರಲು ಮತ್ತು ಮಧುಮೇಹ ಪಡೆಯುವ ಅಪಾಯವನ್ನು ಕಡಿಮೆ ಮಾಡಲು ಧೂಮಪಾನದಿಂದ ಹೊರಬರುವುದು ಅನಿವಾರ್ಯ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Proven Ways To Never Get Diabetes

The word 'diabetes' has become so common in our daily vocabulary today, because it is one of the most prevalent ailments in human beings!When we think about it, most of us would know someone close to us who may have or is currently suffering from diabetes, right? Here are a few proven ways to never get diabetes, unless you have a family history of this disease.
Story first published: Wednesday, February 21, 2018, 12:26 [IST]
X
Desktop Bottom Promotion