For Quick Alerts
ALLOW NOTIFICATIONS  
For Daily Alerts

ಹೊಡೆಯೋ ಗಂಡ ಅಳೋ ಹೆಂಡತಿ ಎದ್ದು ಕುಣಿಯೋ ಸಮಾಜ

By Shami
|
Husband wife Indian society
ಹೆಸರಾಂತ ನಟನೊಬ್ಬ ಮಧ್ಯರಾತ್ರಿ ಅವನ ಹೆಂಡತಿಯ ಮೇಲೆ ಕೈ ಮಾಡುತ್ತಾನೆ. ಆಕೆಗೆ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಆಸ್ಪತ್ರೆಗೆ ಸೇರಿಸಲಾಗುತ್ತದೆ. ಗಾಯಕ್ಕೆ ನಾಲ್ಕು ಹೊಲಿಗೆಗಳನ್ನು ಹಾಕುವ ವೈದ್ಯರು ಆಕೆಯನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಇಡುತ್ತಾರೆ.

ಇತ್ತ, ಕೌಟುಂಬಿಕ ಹಿಂಸೆ, ದೌರ್ಜನ್ಯ, ಕಾನೂನನ್ನು ಕೈಗೆತ್ತಿಕೊಂಡ ಆರೋಪದ ಮೇಲೆ ನಟನನ್ನು ಪೊಲೀಸರು ಬಂಧಿಸುತ್ತಾರೆ. ವಿಚಾರಣೆ ವೇಳೆ ಆತ ತಾನು ಯಕ್ಕಾ ಮಕ್ಕಾ ಮದ್ಯಪಾನ ಮಾಡಿದುದಾಗಿಯೂ, ಕುಡಿದ ಅಮಲಿನಲ್ಲಿ ಚಪ್ಪಲಿಯಿಂದ ಹೆಂಡತಿಯನ್ನು ಹೊಡೆದುದಾಗಿಯೂ ತಪ್ಪೊಪ್ಪಿಕೊಳ್ಳುತ್ತಾನೆ.

ಈ ಗಂಡ ಹೆಂಡತಿಯ ನಡುವಿನ ಮನಸ್ತಾಪ ಏಕಾಏಕಿ ಉಂಟಾದುದಲ್ಲ. ಕಳೆದ ಒಂದು ವರ್ಷದಿಂದ ನಿತ್ಯ ಜಗಳ ಕದನ ಇತ್ತು, ಇಂದು ಅದು ಪ್ರಕೋಪಕ್ಕೆ ಹೋಯಿತು ಅಷ್ಟೇ ಎಂದು ನಟನ ಅತ್ತೆ ಪೊಲೀಸರಿಗೆ ಹೇಳಿಕೆ ಕೊಡುತ್ತಾರೆ. ಹೆಂಡತಿ ಬರೆದ ದೂರು ಐದು ಪುಟಗಳಷ್ಟಿರುತ್ತದೆ.

ಇಷ್ಟಕ್ಕೂ ಸಂಸಾರದಲ್ಲಿ ಮನಸ್ತಾಪ ಯಾಕೆ ಬಂತು, ಅದಕ್ಕೆ ಹಿನ್ನೆಲೆ ಏನು. ಮನಸ್ತಾಪ ಇದ್ದರೆ ಅದಕ್ಕೆ ಪರಿಹಾರ ಹಿಂಸೆನಾ. ಇದೊಂದೂ ಅರ್ಥವಾಗದ ಸ್ಥಿತಿಯಲ್ಲಿರುವಾಗ ನಟನ ಸಂಸಾರವನ್ನು ಮತ್ತೆ ಸರಿದಾರಿಗೆ ತರುವ ಜವಾಬ್ದಾರಿಯನ್ನು ಸಮಾಜ ತನ್ನ ಹೆಗಲ ಮೇಲೆ ಎಳೆದುಕೊಳ್ಳುತ್ತದೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಮನವೊಲಿಸಿ ಗಂಡನ ಮೇಲೆ ಕೊಟ್ಟ ದೂರನ್ನು ವಾಪಸ್ಸು ಪಡೆಯುವಂತೆ ಗಣ್ಯರು ಮನವೊಲಿಸುತ್ತಾರೆ. ಮತ್ತೆ ತಪ್ಪು ಮಾಡುವುದಿಲ್ಲ ಎಂದು ನಟರಾಜ ಬರವಣಿಗೆಯಲ್ಲಿ ಕೊಟ್ಟರೆ ಮಾತ್ರ ಕೇಸ್ ವಾಪಸ್ ಎಂದು ಹೆಂಡತಿ ಮತ್ತು ಅತ್ತೆ ಹಠ ಹಿಡಿಯುತ್ತಾರೆ.

ಗಂಡ ಹೆಂಡತಿ ನಡುವೆ ಪ್ಯಾಚ್ ಅಪ್ ಮಾಡುವ ಕೆಲಸದಲ್ಲಿ ಉದ್ಯಮದ ಗಣ್ಯರು ನಿರತರಾಗುತ್ತಾರೆ. ತಮ್ಮ ಆರಾಧ್ಯ ದೇವನನ್ನು ಬಂಧಿಸಿರುವುದರ ವಿರುದ್ಧ ಅವನ ಅಭಿಮಾನಿ ಸಮೂಹ ಸಿಟ್ಟಾಗುತ್ತದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತದೆ. ಬಸ್ಸಿಗೆ ಕಲ್ಲು ತೂರುತ್ತದೆ. ಟಿವಿ ಚಾನಲ್ಲಿನವರ ಕ್ಯಾಮರಾಗಳು ಪುಡಿಪುಡಿ ಮಾಡುತ್ತಾರೆ.

ಈ ಮಧ್ಯೆ ಮಹಿಳಾ ಆಯೋಗವೂ ತನ್ನ ಮೂಗು ತೂರಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅದೆಲ್ಲ ನಿಮಗೆ ಟಿವಿಗಳಲ್ಲಿ ಕಾಣಸಿಗುತ್ತದೆ. ಮುಂದೇನು ಮುಂದೇನು ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ.

ಇವಿಷ್ಟೂ ಒಂದು ಶುಕ್ರವಾರ ಬೆಳಗ್ಗೆ ನಡೆಯುವ ಕರ್ನಾಟಕದ ಬ್ರೇಕಿಂಗ್ ಸುದ್ದಿಗಳೆಂದು ಮಾಧ್ಯಮಗಳು ಓತಪ್ರೋತವಾಗಿ ವರದಿ, ಸುದ್ದಿಬಿಂಬ, ಸಂದರ್ಶನ, ಚಕ್ರಗೋಷ್ಠಿಗಳನ್ನು ನಡೆಸುತ್ತವೆ. ಬರೆದದ್ದನ್ನೇ ಬರೆಯುತ್ತಾರೆ, ಓದಿದ್ದನ್ನೇ ಓದುತ್ತಾರೆ.

ನಟ ಮತ್ತು ಆತನ ಹೆಂಡತಿಯ ನಡುವಿನ ಮನಸ್ತಾಪಕ್ಕೆ ನಿಜವಾದ ಕಾರಣಗಳೇನು ಎನ್ನುವುದು ಕಡೆಗೂ ಬಹಿರಂಗವಾಗುವುದಿಲ್ಲ. ಸೆಲೆಬ್ರಿಟಿ ನಟನ ನೆರವಿಗೆ ಸಮಾಜ ಧಾವಿಸುತ್ತದೆ. ಹೆಣ್ಣು ಕರಳು ಮತ್ತೆ ಹೇಗೋ ಹೊಂದಿಕೊಂಡು ಬಾಳುವ ಹಾದಿ ಹಿಡಿಯಲು ಹವಣಿಸುತ್ತದೆ.

ಇದೇ ಟೈಪ್ ಪ್ರಕರಣಗಳು ನಾಗರಿಕತೆಯ ಉದ್ದಕ್ಕೂ ನಡೆಯುತ್ತಾ ಬರುತ್ತವೆ. ಓಪಿಎಚ್ ರಸ್ತೆಯ ಓರ್ವ ಕುಡುಕ ಬಡಗಿ ಆತನ ಹೆಂಡತಿಗೆ ಹೊಡೆದುದು ಕಂಪ್ಲೇಟ್ ಆದರೆ ಆತ ಅಂದರ್ ಆಗುತ್ತಾನೆ. ಗಂಡನ ಕಣ್ತಪ್ಪಸಿ ಕಳ್ಳಾಟ ಆಡುವ ಮಾವಳ್ಳಿಯ ಮಳ್ಳಿ ಎದೆ ಎತ್ತಿಕೊಂಡು ತಿರುಗುತ್ತಾಳೆ. ಅವಳ ವಿರುದ್ಧ ಕೇಸು ಹಾಕಲೊಲ್ಲದ ಗಂಡ ಜೀವನದಲ್ಲಿ ಮೊದಲ ಬಾರಿಗೆ ಬಾರಿನ ಕಡೆ ನಡೆದು ಹೋಗುತ್ತಾನೆ.

English summary

Domestic Violence in Karnataka | Injustice anywhere is a threat to justice everywhere | Law is an Ass| ಕೌಂಟುಬಿಕ ದೌರ್ಜನ್ಯ | ಕರ್ನಾಟಕ

Police make the news, Journalist break the news, Doctors cure the news, lawyers money the news. Wah.. wah...civilization is high on SEN SEX board!
Story first published: Friday, September 9, 2011, 16:41 [IST]
X
Desktop Bottom Promotion