For Quick Alerts
ALLOW NOTIFICATIONS  
For Daily Alerts

ರೀ, ಎಲ್ಲಿ ಹೊಂಟಿರೆಂದು ಹೇಳಿ ಹೋಗಬಾರದಾ?

By * ನಿವೇದಿತಾ ಪ್ರಭಾಕರ್
|
Do tell when you go out
ನೀವು ಮನೆಯಿಂದ ಹೊರಗಡೆ ಹೋಗುವಾಗ ಎಲ್ಲಿಗೆ ಹೋಗುತ್ತೀರೆಂದು ಮನೆಯವರಿಗೆ ಹೇಳಿ ಹೋಗುತ್ತೀರಾ? ಅಥವಾ ಮನೆಯಿಂದ ಯಾರಾದರೂ ಹೊರಹೋಗುತ್ತಿರುವಾಗ 'ಎಲ್ಲಿಗೆ ಹೊಂಟಿರಿ' ಎಂದು ಪ್ರಶ್ನೆ ಕೇಳುತ್ತೀರಾ? ಕರ್ನಾಟಕದಲ್ಲಿ ಅನೇಕ ಮನೆತನಗಳಲ್ಲಿ ಇಂದಿಗೂ ಕೂಡ ಹೋಗುವಾಗ ಕಾರಣ ಹೇಳುವ ಅಥವಾ ಹೊಂಟವರನ್ನು ಪ್ರಶ್ನಿಸುವ ಪರಿಪಾಠವಿಲ್ಲ. ಹಾಗೆ ಕೇಳಿದರೆ, ಆಗುವ ಕೆಲಸ ಆಗುವುದಿಲ್ಲ ಎಂಬ (ಮೂಢ)ನಂಬಿಕೆಯಿದೆ.

ಒಂದು ಪಕ್ಷ ಮಕ್ಕಳೇನಾದರೂ ಹಿರಿಯರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ, 'ಕೇಳಬೇಡವೆಂದು ಹೇಳಿರಲಿಲ್ಲ, ಮತ್ಯಾಕೆ ಕೇಳಿದೆ?' ಎಂದು ಗದರಿಸಿ ಸುಮ್ಮನೆ ಕೂಡಿಸುತ್ತಾರೆ. ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವ ಇವರು ಯಾಕೆ ಕೇಳಬೇಕು, ಯಾಕೆ ಕೇಳಬಾರದು ಎಂಬ ಬಗ್ಗೆ ಚಿಂತನೆಯನ್ನೇ ಮಾಡಿರುವುದಿಲ್ಲ, ಪ್ರಾಕ್ಟಿಕಲ್ ಚಿಂತನೆ ಇರುವುದಿಲ್ಲ.

ನಮ್ಮ ನಾಡಿನಲ್ಲಿ ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಮೂರು ಜನ ಮನೆಯಿಂದ ಹೊರ ಹೋಗಬಾರದು, ಅಂಗಿಗೆ ಎಡಗೈ ಮೊದಲು ಹಾಕಬಾರದು, ಬೆಕ್ಕು ಅಡ್ಡ ಬಂದರೆ ಮುಂದೆ ಹೋಗಬಾರದು, ಗಡಿಯಾರ ಕೆಟ್ಟರೆ ನಮ್ಮ ಟೈಮೂ ಕೆಟ್ಟುಹೋಗುತ್ತದೆ, ನಾಯಿ ಊಳಿಡುವ ಧ್ವನಿ ಕೇಳಿದರೆ ಏನೋ ಕೆಡುಕಾಗುತ್ತದೆ, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ... ಇತ್ಯಾದಿ ಇತ್ಯಾದಿ.

ಈ ಮೂಢನಂಬಿಕೆಗಳನ್ನು ಆಚರಿಸಿದರೆ ಕೆಡುಕು ಆಗುವುದಿಲ್ಲವಾದರೂ, ಪ್ರಯೋಜನವಾದರೂ ಆಗುತ್ತದಾ? ಇಲ್ಲ. ಆದರೆ, ಹೋಗುವಾಗ ಹೇಳಿಹೋಗದಿದ್ದರೆ ಎಂತೆಂಥ ಅವಘಡಗಳು ಸಂಭವಿಸುತ್ತವೆ ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆಯೇ ಸಾಕ್ಷಿ. ಮನೆಯಿಂದ ಹೇಳದೆ ಕೇಳದೆ ಹೊರಟ ಒಬ್ಬ ಮನೆಯವರನ್ನೆಲ್ಲ ಪೇಚಿಗೆ ಸಿಕ್ಕಿಸಿದ ವಿಚಿತ್ರ ಘಟನೆ ಸಂಭವಿಸಿದೆ.

ಹೇಳದೆ ಕೇಳದೆ ಬೆಂಗಳೂರಿಗೆ ಬಂದ ಆ ಹುಬ್ಬಳ್ಳಿ ಹೈದನ ಎಡಗಾಲಿಗೆ ಆರು ಬೆರಳು. ಅವನನ್ನು ಹುಡುಕುತ್ತಿರುವಾಗ ಎಡಗಾಲಿಗೆ ಆರು ಬೆರಳಿರುವ ವ್ಯಕ್ತಿಯೊಬ್ಬನ ಶವ ಉಣಕಲ್ ಕೆರೆಯಲ್ಲಿ ಪತ್ತೆಯಾಗುತ್ತದೆ. ಅವನು ಇವನೇ ಎಂದು ತಿಳಿದು ಹೂತುಬಿಡಲಾಗುತ್ತದೆ. ಆದರೆ, ಆಶ್ಚರ್ಯಕರವೆಂಬಂತೆ, 'ಸತ್ತ'ವನೆಂದು ತಿಳಿದವ ವಾಪಸ್ ಬಂದಿರುತ್ತಾನೆ. ಅವನನ್ನು ಜೀವಂತವಾಗಿ ಕಂಡವರಿಗೆ ಆಶ್ಚರ್ಯ, ದುಗುಡ, ಸಿಟ್ಟು, ಭಯ.

ಚಂದ್ರಕಾಂತ್ ಕುಸನೂರು ಅವರ 'ಆನಿ ಬಂತಾನಿ' ಅಸಂಗತ ನಾಟಕದಲ್ಲಿ ಇಂಥದೇ ಪ್ರಸಂಗ ಬರುತ್ತದೆ. ಅಪ್ಪ ಹೊರಗೆ ಹೊಂಟಾಗ ಮಗ ಎಲ್ಲಿ ಹೊಂಟಿ ಎಂದು ಕೇಳಿದಾಗ ಅಮ್ಮ ಗದರಿಸುತ್ತಾಳೆ. ಆಗ ಪೆದ್ದ ಮಗ ಬಸವ, "ಎಲ್ಲಿ ಹೊಂಟಿರೆಂದು ಯಾಕೆ ಕೇಳಬೇಕಂದರ, ಅವರು ಹೋಗುವ ಸ್ಥಳ ಗೊತ್ತಾಗತದ ಮತ್ತ ಅವರು ಬರಲಾರದಂಥ ಸ್ಥಿತಿಯಲ್ಲಿದ್ದರ ಕರೆತರಲು ಅನುವಾಗುತ್ತದ" ಎಂಬ ಉತ್ತರ ಕೊಡುತ್ತಾನೆ. ಈಗ ಹೇಳಿ, ಹೊರಗೆ ಹೊಂಟವರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ ತಪ್ಪೆ?

English summary

Do tell when you go out | Do ask when someone goes out | Superstitions and ille effects | ಎಲ್ಲಿ ಹೊಂಟಿರೆಂದು ಹೇಳಿ ಹೋಗಬಾರದಾ? | ಹೇಳಿ ಹೋಗು ಕಾರಣ

There is a belief in Karnataka that when someone goes out he won't tell the reason or they don't ask where is he going. Is it a good practice? Or do we have to think in practical manner? Here is thought provoking write up.
X
Desktop Bottom Promotion