For Quick Alerts
ALLOW NOTIFICATIONS  
For Daily Alerts

ಬೃಹತ್ ಕಟ್ಟಡಗಳಿಂದ ಮಕ್ಕಳನ್ನು ರಕ್ಷಿಸಿ

By * ಬ್ರಹ್ಮಾಣಿ ಪಿ. ರಾವ್, ಮೈಸೂರು
|
ಬಹು ಅಂತಸ್ತಿನ ಕಟ್ಟಡದಿಂದ ಧರೆಗೆ ಜಾರಿ ಬಿದ್ದು ಪ್ರಾಣತೆತ್ತ ಹಸುಕಂದನ ವಿಷಯ ಓದಿ ತುಂಬಾ ಸಂಕಟವಾಯಿತು. ಹಿಂದೆ ಬೆಂಗಳೂರಿನಲ್ಲಿ ಮಹಡಿ ಮನೆಗಳು ಅಪರೂಪವಾಗಿದ್ದ ಕಾಲ.

ಮನೆಯ ಮುಂದೆ, ಹಿಂದೆ ಅಂಗಳಕ್ಕೆ ಅಷ್ಟಿಷ್ಟು ಜಾಗ ಬಿಟ್ಟೇ ಮನೆ ಕಟ್ಟುತ್ತಿದ್ದರು. ಮುಂದಿನ ಅಂಗಳದಲ್ಲಿ ಮಲ್ಲಿಗೆ, ಜಾಜಿ, ಪಾರಿಜಾತ, ಸಂಪಿಗೆಯಂತಹ ಹೂವು ಗಿಡಮರ ಬಳ್ಳಿಗಳು, ಚಿಕ್ಕು, ಚಕೋತ, ಸೀಬೆಯಂತಹ ಹಣ್ಣಿನ ಗಿಡಗಳು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಕಾಣಬರುತ್ತಿದ್ದವು. ಇವಲ್ಲದೆ ಬಣ್ಣ ಬಣ್ಣದ ತರಹಾವರಿ ಹೂಗಿಡಗಳು ಬೇರೆ. ಅಮ್ಮನೋ ಅಜ್ಜಿಯೋ ಬಟ್ಟಲಲ್ಲಿ ಅನ್ನ ಕಲಸಿ ಪುಟ್ಟ ಮಕ್ಕಳಿಗೆ ಉಣಿಸಲು ಅಂಗಳಕ್ಕೆ ಕರೆತರುತ್ತಿದ್ದರು.

ಮಡಿಲಲ್ಲಿ ಕುಳಿತೋ ಅಥವಾ ಪುಟು ಪುಟು ಹೆಜ್ಜೆಯಿಟ್ಟು ಅಂಗಳದ ತುಂಬಾ ಓಡಾಡುತ್ತಲೋ ಕಂದಮ್ಮಗಳು ತುತ್ತು ಉಣ್ಣುತ್ತಿದ್ದವು. ಹೂವಿಂದ ಹೂವಿಗೆ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು, ಮರದ ಕೊಂಬೆಗಳಲ್ಲಿ ಜೂಜಾಟವಾಡುವ ಅಳಿಲುಗಳು, ಬೇಲಿಯ ಮೇಲಿನ ಓತಿಕೇತ, ಚೆಲ್ಲಿದ ಅಗಳನ್ನು ಹೆಕ್ಕಲು ಬರುವ ಗುಬ್ಬಚ್ಚಿಗಳು, ಈ ಎಲ್ಲ ಪುಟ್ಟ ಮಿತ್ರರನ್ನು ಬೆರಗು ಕಣ್ಣಿನಿಂದ ನೋಡುತ್ತ ಆಟವಾಡಿಕೊಂಡೇ ಊಟ ಮುಗಿಸುತ್ತಿದ್ದವು.

ಈಗ ಬೃಹತ್ ಬೆಂಗಳೂರಿನ ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಇವೆಲ್ಲವೂ ಕಳೆದುಹೋಗಿವೆ. ಮನೆಗಳಿಗೆ ಅಂಗಳವಿಲ್ಲ. ಗುಬ್ಬಿ, ಚಿಟ್ಟೆ, ಇಣಚಿಗಳನ್ನು ಚಿತ್ರಪಟದಲ್ಲಿ ತೋರಿಸಬೇಕಷ್ಟೆ. ಎಷ್ಟೋ ಮನೆಗಳಿಂದ ಚಂದ್ರ ನಕ್ಷತ್ರಗಳೇ ಕಾಣುವುದಿಲ್ಲ.

ವಿಧಿಯಿಲ್ಲ, ಕಾಲಾಯ ತಸ್ಮೈ ನಮಃ. ಆದರೆ ಬಹು ಮಹಡಿಗಳನ್ನು ಕಟ್ಟುವ ತಜ್ಞರು, ಮಕ್ಕಳ ಭದ್ರತೆಯ ಬಗ್ಗೆ ಗಮನಕೊಟ್ಟು, ಕಿಟಕಿ ಬಾಗಿಲುಗಳು ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಿದಲ್ಲಿ ಮುಂದಾದರೂ ಇಂತಹ ದಾರುಣ ದುರಂತಗಳನ್ನು ತಡೆಗಟ್ಟಬಹುದೇನೋ.

English summary

Child life in apartment- Take extra care, ಬೃಹತ್ ಕಟ್ಟಡಗಳಿಂದ ಮಕ್ಕಳನ್ನು ರಕ್ಷಿಸಿ

Bramhani P Rao from Mysore has pleaded the people living in Aprtments to take extra care about their little wards. 
Story first published: Monday, August 8, 2011, 10:57 [IST]
X
Desktop Bottom Promotion