For Quick Alerts
ALLOW NOTIFICATIONS  
For Daily Alerts

ಸಂಗಾತಿಯ ಬೇರೆ ಸಂಬಂಧದ ಬಗ್ಗೆ ಗೊತ್ತಾದಾಗ ಹೇಳಬೇಕಾದ ಮಾತುಗಳಿವು

|

ದಾಂಪತ್ಯದಲ್ಲಿ ನಂಬಿಕೆ, ಪ್ರಾಮಾಣಿಕತೆ ತುಂಬಾ ಮುಖ್ಯ. ನನ್ನ ಸಂಗಾತಿ ನನಗೆ ಮೋಸ ಮಾಡುತ್ತಿದ್ದಾಳೆ/ನೆ ಎಂದು ಗೊತ್ತಾದರೆ ಅದನ್ನು ಸಹಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ವ್ಯಕ್ತಿಯನ್ನು ಇಷ್ಟೊಂದು ಪ್ರೀತಿಸಿದೆ, ಆದರೆ ಅವನು/ ಅವಳಿಗೆ ನನಗೆ ಮೋಸ ಮಾಡಲು ಹೇಗೆ ತಾನೆ ಮನಸ್ಸು ಬಂತು? ಎಂದು ಯೋಚಿಸಿ ಕುಸಿದು ಹೋಗಿ ಬಿಡುತ್ತಾರೆ.

ಕೆಲವರು ಮೋಸ ಮಾಡಿದ ವ್ಯಕ್ತಿ ಜೊತೆ ಇನ್ನು ಮುಂದೆ ಬಾಳಲ್ಲ ಎಂದು ಸಂಬಂಧ ಮುರಿದರೆ, ಇನ್ನು ಕೆಲವರಿಗೆ ಆ ವ್ಯಕ್ತಿಯನ್ನು ಬಿಡಲೂ ಆಗದೆ, ಜೊತೆಗೆ ಇರಲು ಆಗದೆ ತುಂಬಾ ಮಾನಸಿಕ ನೋವು ಅನುಭವಿಸುತ್ತಾರೆ. ಇನ್ನು ಕೆಲವರು ನಾನು ಎಷ್ಟೊಂದು ನಂಬಿಕೆ ಇಟ್ಟಿದ್ದೆ, ಅದಕ್ಕೆ ಮೋಸ ಮಾಡಿದರು ಎಂದು ಕೋಪಗೊಂಡು ಅದನ್ನು ಅವರ ಬಳಿ ಕೆಳುವುದು, ಗಲಾಟೆ ಮಾಡುವುದು ಮಾಡುತ್ತಾರೆ. ಹೀಗೆ ಮಾಡಿದಾಗ ಸಮಸ್ಯೆ ಅಲ್ಲಿಗೆ ಮುಗಿಯುವ ಬದಲಿಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚು.

Dealing With Cheating Partner

ಸಂಗಾತಿ ಮೋಸ ಮಾಡುತ್ತಿದ್ದಾರೆ, ಆದರೆ ಆ ಕಾರಣಕ್ಕೆ ಅವರನ್ನು ಕಳೆದುಕೊಳ್ಳಲು ರೆಡಿಯಿಲ್ಲ, ತಪ್ಪು ದಾರಿಯಲ್ಲಿ ಹೋಗುತ್ತಿರುವ ಅವರನ್ನು ಮತ್ತೆ ಸರಿ ದಾರಿಗೆ ತರಬೇಕು ಹೇಗೆ ಎಂದು ಯೋಚಿಸುತ್ತಿದ್ದರೆ ಸೆಂಟಿಮೆಂಟ್‌ ವರ್ಕ್ ಆಗುತ್ತೆ. ಹೌದು ಅವರು ಮಾಡುತ್ತಿರುವ ಮೋಸ ನಿಮಗೆ ಗೊತ್ತಾಗಿದೆ ಎಂದು ಅವರಿಗೆ ಗೊತ್ತಾಗಬಾರದು, ಆದರೆ ಅವರಿಗೆ ಅವರು ಮಾಡಿದ ತಪ್ಪಿನಿಂದ ಪಶ್ಚಾತಾಪ ಉಂಟಾಗಬೇಕು ಎಂದಾದರೆ ಈ ಮಾತುಗಳನ್ನು ಹೇಳಿ ನೋಡಿ....

1.

1. "ನನಗೆ ನಿನ್ನ ಮೇಲೆ ತುಂಬಾ ನಂಬಿಕೆ ಇದೆ"

ಸುಮ್ಮನೆ ಏನೋ ಮಾತನಾಡುತ್ತಾ ಯಾರದೋ ಕತೆ ಹೇಳಿ ಅಥವಾ ಯಾವುದೋ ಸಿನಿಮಾದ ಕತೆ ನೋಡುವಾಗ ಸುಮ್ಮನೆ ಅವರನ್ನು ನೋಡಿ, ನಂತರ ನನಗೆ ನಿನ್ನ ಮೇಲೆ ತುಂಬಾ ನಂಬಿಕೆ, ನಿನಗೆ ಮೋಸ ಮಾಡಲು ಖಂಡಿತ ಸಾಧ್ಯವಿಲ್ಲ ಎಂದು ಹೇಳಿ. ಅವರ ಜೊತೆ ಖುಷಿ-ಖುಷಿಯಾಗಿರಿ. ಅವರ ವಂಚನೆ ನಿಮಗೆ ಗೊತ್ತಾಗಿದೆ ಎಂಬ ಚಿಕ್ಕ ಸುಳಿವು ಬಿಡಬೇಡಿ. ನೀವು ಹೀಗೆ ಮಾಡಿದಾಗ ಛೇ... ನಾನು ತಪ್ಪು ಮಾಡುತ್ತಿದ್ದೇನೆ ಎಂಬ ಪಶ್ಚಾತಾಪ ಉಂಟಾಗಿ ಅವರು ನಿಮ್ಮ ಜೊತೆ ನಂತರದ ದಿನಗಳಲ್ಲಿ ನಿಯತ್ತಿನಿಂದ ಇರಬಹುದು. ಅವರು ಸರಿ ದಾರಿಗೆ ಬಮದ ಮೇಲೆ ಎಂದೂ ಕೂಡ ಅವರು ಮಾಡಿದ ವಂಚನೆ ಗೊತ್ತಿತ್ತು ಎಂದು ಹೇಳಲೇಬೇಡಿ.

2.

2. "ನನಗೆ ಈ ಪ್ರಪಂಚದಲ್ಲಿಯೇ ನೀನೇ ಬೆಸ್ಟ್"

ವ್ಯಕ್ತಿಗಳನ್ನು ಹೊಗಳಿದಾಗ ಅವರಿಗೂ ನಾನು ಅವರಿಗೆ ತುಂಬಾ ಸ್ಪೆಷಲ್ ಎಂಬ ಭಾವನೆ ಮೂಡುತ್ತದೆ ಅಲ್ಲದೆ ನೀವು ಹೀಗೆ ಹೇಳಿದಾಗ ಇಂಥ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ, ನಾನೇನು ಮಾಡುತ್ತಿದ್ದೇನೆ ಇಂಥ ವ್ಯಕ್ತಿ ಬಿಟ್ಟು ಬೇರೆಯವರ ಹಿಂದೆ ಹೋಗುತ್ತಿದ್ದೇನೆ, ಮಾಡುತ್ತಿರುವುದು ತಪ್ಪು ಎಂದು ಅವರ ಒಳ ಮನಸ್ಸು ಚುಚ್ಚುತ್ತದೆ. ನನ್ನನ್ನು ಎಷ್ಟೊಂದು ಪ್ರೀತಿಸುವ ಇವರಿಗೆ ಮೋಸ ಮಾಡುತ್ತಿದ್ದೇನೆ ಅಲ್ವಾ? ನಾನು ತಪ್ಪು ಮಾಡುತ್ತಿದ್ದೇನೆ ಎಂದು ಅವರ ಮನಸಾಕ್ಷಿ ಹೇಳಲಾರಂಭಿಸುತ್ತದೆ. ಆಗ ಅವರು ನೀವು ಬಯಸಿದಂತೆಯೇ ನಿಮ್ಮವರಾಗಿ ಮುಂದುವರೆಯುತ್ತಾರೆ.

3.

3. "ನೀನು ಬೇರೆ ಪುರುಷ/ ಮಹಿಳೆಯ ರೀತಿ ಅಲ್ಲ"

ಸಂಗಾತಿಗೆ ಮೋಸ ಮಾಡಿದ ಕತೆಗಳು ಟಿವಿಯಲ್ಲಿ ಬರ್ತಾ ಇರುತ್ತದೆ, ಅವುಗಳನ್ನು ನೋಡಿ ಪುಣ್ಯ...ನನಗೆ ಅಂಥ ವ್ಯಕ್ತಿ ಸಿಕ್ಕಿಲ್ಲ, ನಾನು ಅದೃಷ್ಟವಂತ/ಅದೃಷ್ಟವಂತೆ ಅಂತ ಹೇಳಿ. ಈ ಮಾತಿನ ಮೂಲಕ ನಿಮಗೆ ಅವರ ಮೇಲೆ ತುಂಬಾ ನಂಬಿಕೆ ಇದೆ ಎಂಬುವುದನ್ನು ತೋರಿಸಿಕೊಳ್ಳಿ. ಸಂಗಾತಿಗೆ ನಿಷ್ಠೆಯಾಗಿರುವ ವ್ಯಕ್ತಿ ಬದುಕಿನಲ್ಲಿ ಸಿಗುವುದೇ ಪುಣ್ಯ ಎಂದು ಹೇಳಿ. ಇಂಥ ಮಾತುಗಳನ್ನು ಕೇಳಿದರೆ ಅವರಿಗೆ ನಿಮ್ಮ ಮೇಲೆ ಕಿಂಚಿತ್ತು ಪ್ರೀತಿ ಇದ್ದರೆ ಮತ್ತೆ ಮೋಸ ಮಾಡಲು ಮುಂದಾಗುವುದಿಲ್ಲ.

4.

4. "ನನಗೆ ಗೊತ್ತು ನೀನು ನನಗೆ ಮೋಸ ಮಾಡಲ್ಲ"

ನಿಮ್ಮ ಬಾಯಿಂದ ಈ ಮಾತು ಬಂದಾಗ ಅವರಿಗೆ ಪಶ್ಚಾತಾಪ ಉಂಟಾಗುವುದು ಖಂಡಿತ. ಅಲ್ಲದೆ ನೀವು ಅವರ ಮೇಲೆ ಇಟ್ಟಿರುವ ನಂಬಿಕೆ ನೋಡಿ ಅವರಿಗೆ ನಾನು ಮಾಡುತ್ತಿರುವುದು ಶುದ್ಧ ತಪ್ಪು ಎಂದು ಅನಿಸಲಾರಂಭಿಸುತ್ತದೆ. ನಿಮ್ಮನ್ನು ಸಂಗಾತಿಯಾಗಿ ಪಡೆದಿದ್ದಕ್ಕೆ ಖುಷಿ ಪಡುತ್ತಾರೆ. ನೀವು ಅಷ್ಟೊಂದು ನಂಬಿರುವಾಗ ನಿಮ್ಮ ನಂಬಿಕೆಗೆ ಮೋಸ ಮಾಡಬಾರದು ಎಂದು ಅನಿಸಿ ಅವರು ನಿಮ್ಮ ದಾರಿಗೆ ಬರಬಹುದು.

5.

5. "ನೀನು ಮೋಸ ಮಾಡಿದರೆ ನನಗೆ ಯಾರನ್ನೂ ನಂಬಲು ಸಾಧ್ಯವಾಗುವುದಿಲ್ಲ"

ಈ ಮಾತನ್ನು ನೀವು ಹೇಳಿದರೆ ಅದು ನಿಮ್ಮ ಸಂಗಾತಿಗೆ ನೀಡುವ ಎಚ್ಚರಿಕೆಯ ಮಾತುಗಳು ಎಂದು ಅವರಿಗೆ ಗೊತ್ತಾಗುತ್ತದೆ. ಈ ಮಾತಿನಲ್ಲಿ ನೀವು ಅವರನ್ನು ಎಷ್ಟೊಂದು ನಂಬಿದ್ದೀರಾ, ಅವರು ಮೋಸ ಮಾಡುವುದರಿಂದ ಮುಂದೆ ಎದುರಾಗುವ ಪರಿಣಾಮ ಏನು ಎಂಬ ಸ್ಪಷ್ಟ ಚಿತ್ರಣ ಅವರಿಗೆ ದೊರೆಯುತ್ತದೆ. ಹೀಗೆ ಏನೋ ಮಾತನಾಡುತ್ತಾ 'ನನಗೆ ನಿನ್ನ ಮೇಲೆ ತುಂಬಾ ನಂಬಿಕೆ ಒಂದು ವೇಳೆ ನೀನು ಮೋಸ ಮಾಡಿದರೆ ಖಂಡಿತ ಇನ್ನು ಯಾರನ್ನೂ ನಾನು ನಂಬಲು ಸಿದ್ಧವಿಲ್ಲ' ಎಂದರೆ ಅವರು ನಿಮ್ಮ ಜೊತೆ ಬಾಳಲು ಇಚ್ಛಿಸುವುದಾದರೆ ಖಂಡಿತ ಮತ್ತೆ ನಮಗೆ ಮೋಸ ಮಾಡಲು ಮುಂದಾಗುವುದಿಲ್ಲ.

6.

6. "ನಾನು ನಿನಗೆ ಮೋಸ ಮಾಡಿದರೆ ನಿನಗೆ ಏನನಿಸುತ್ತದೆ?"

ಈ ಪ್ರಶ್ನೆ ಅವರಿಗೆ ಅವರನ್ನೇ ವಿಮರ್ಶೆ ಮಾಡಿಕೊಳ್ಳುವಂತೆ ಮಾಡುತ್ತದೆ. ನಿಮ್ಮ ಸ್ಥಾನದಲ್ಲಿ ಅವರನ್ನು ಕಲ್ಪಿಸಿಕೊಳ್ಳುತ್ತಾರೆ. ಹೌದು... ನಾನು ಬೇರೆ ಯಾವುದೋ ವ್ಯಕ್ತಿಗೋಸ್ಕರ ನನ್ನ ನಂಬಿ ಬಂದ ವ್ಯಕ್ತಿಗೆ ಮೋಸ ಮಾಡುತ್ತಿದ್ದೇನೆ, ಅದು ಮಾಡಬಾರದು ಎಂದು ಪಶ್ಚಾತಾಪ ಪಡುವಂತೆ ಮಾಡುತ್ತದೆ. ಅಲ್ಲದೆ ನನ್ನವನು/ಳು ಎಷ್ಟೊಂದು ಪ್ರೀತಿಸುತ್ತಿದ್ದಾರೆ, ನಾನ್ಯಾಕೆ ಬೇರೆಯವರ ಮೋಹಕ್ಕೆ ಬಿದ್ದೆ ಎಂದು ತನ್ನ ಬುದ್ಧಿಗೆ ಹಿಡಿಶಾಪ ಹಾಕಿ ಸರಿ ಹೋಗಬಹುದು.

7.

7. "ನನ್ನ ಸ್ನೇಹಿತನ/ಸ್ನೇಹಿತೆಯ ಸಂಗಾತಿ ಮೋಸ ಮಾಡಿದ್ದಾರೆ"

ನಿಮ್ಮ ಸಂಗಾತಿಗೆ ನಿಮಗೆ ಗೊತ್ತಿರುವ ವ್ಯಕ್ತಿಯ ಬದುಕಿನಲ್ಲಿ ನಡೆದ ಮೋಸದ ಘಟನೆಯ ಕತೆಯನ್ನುಹೇಳಿ. ಇದರಿಂದ ನೆಮ್ಮದಿಯಾಗಿದ್ದ ಅವರ ಬದುಕಿನಲ್ಲಿ ಏನೆಲ್ಲಾ ಆಯ್ತು? ಎಲ್ಲರ ಮುಂದೆ ಏನೆಲ್ಲಾ ಅವಮಾನ ಉಂಟಾಯ್ತು? ಇದರಿಂದ ಮಕ್ಕಳ ಮೇಲೆ ಉಂಟಾದ ಪರಿಣಾಮ ಏನು ಎಂದೆಲ್ಲಾ ಹೇಳಿ. ಈ ಕತೆಯಿಂದ ಅವರಿಗೆ ನನ್ನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲ್ಲ ಅಂತ ಅರ್ಥವಾದರೆ ನಿಮ್ಮ ಪ್ರಯತ್ನ ಸಾರ್ಥಕ.

8.

8. "ನೀವು ನನ್ನ ಜೊತೆ ನಿಷ್ಠೆಯಿಂದ ಇರುತ್ತೀರಾ ತಾನೆ?"

ನಿಮಗೆ ಏನಾದರೂ ಸಂದೇಹ ಬಂದಾಗ ಈ ಪ್ರಶ್ನೆ ಕೇಳುವುದರಲ್ಲಿ ತಪ್ಪಿಲ್ಲ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ, ಅಷ್ಟೇ ನಂಬಿಕೆ ಇಟ್ಟಿದ್ದೇನೆ. ಅದೇ ನಿಷ್ಠೆಯನ್ನು ನಿಮ್ಮಿಂದ ಬಯಸುತ್ತೇನೆ. ನೀವು ಇರುತ್ತೀರಾ ತಾನೆ? ಎಂದು ಕೇಳಿ. ನಿಮ್ಮ ಸಂಗಾತಿಯ ನಡುವಳಿಕೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡು ಬಂದರೆ, ಅವರು ಯಾರ ಜೊತೆಯೋ ತುಂಬಾ ಹೊತ್ತು ಫೋನ್‌ನಲ್ಲಿದ್ದು, ನೀವು ಬಂದಾಗ ಕಟ್ ಮಾಡುವುದು, ಫೋನ್‌ ನಿಮ್ಮ ಕಣ್ಣಿಗೆ ಬೀಳದಂತೆ ಇಡುವುದು ಮಾಡುತ್ತಿದ್ದರೆ ಈ ಪ್ರಶ್ನೆ ಕೇಳಿ. ಅವರಿಗೆ ಅವರು ತಪ್ಪು ಮಾಡುತ್ತಿದ್ದೇನೆ ಎಂದು ಅನಿಸಿದರೆ ಖಂಡಿತ ಬದಲಾಗುತ್ತಾರೆ. ಅವರು ಬದಲಾಗುವ ಲಕ್ಷಣ ಕಾಣದಿದ್ದರೆ ಅವರ ಜೊತೆ ಸಂಬಂಧ ಮುಂದುವರೆಸಬೇಕಾ, ಬೇಡ್ವಾ? ಎಂಬ ನಿರ್ಧಾರ ನಿಮಗೆ ಬಿಟ್ಟದ್ದು.

ಕೊನೆಯದಾಗಿ ಹೇಳುವುದಾದರೆ

ಕೆಲವೊಮ್ಮೆ ಯಾವುದೋ ಒಂದು ಕಾರಣಕ್ಕೆ ತಮಗೆ ಅರಿವು ಇಲ್ಲದೆಯೇ ಬೇರೆಯ ವ್ಯಕ್ತಿಯ ಮೋಹಕ್ಕೆ ಸಿಲುಕುತ್ತಾರೆ. ಅವರಿಗೆ ತಮ್ಮ ಸಂಗಾತಿಯನ್ನು ದೂರ ಮಾಡಬೇಕೆಂದು ಇರುವುದಿಲ್ಲ. ಆದರೆ ಅವರಿಗೆ ಗೊತ್ತಾಗದಂತೆ ಮುಂದುವರೆಸಿಕೊಂಡು ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಇರಬಹುದೆಂದು ಅಂದುಕೊಂಡಿರುತ್ತಾರೆ. ಆಗ ನೀವು ಇಂಥ ಪ್ರಶ್ನೆಗಳನ್ನು ಕೇಳಿದಾಗ ಅವರಿಗೆ ಪಶ್ಚಾತಾಪ ಉಂಟಾಗಿ ಸರಿ ಹೋಗಬಹುದು.

ಸಂಬಂಧ ಎಂಬುವುದು ಎಂಬುವುದು ತುಂಬಾ ಸೂಕ್ಷ್ಮ ಭಾವದ ಕೊಂಡಿ. ಅದನ್ನು ಜೋಪಾನ ಮಾಡಿಕೊಂಡು ಹೋಗಲು ಇಂಥ ಟ್ರಕ್ಸ್ ಬಳಸಿದರೆ ಒಳ್ಳೆಯದು.

English summary

Words You Can Say To Your Cheating Partner And Make Them Feel Guilty

If you come o know your partner having extra marital affair, we are here with some ideas or lines that you can throw at your partner and make him or her feel guilty for cheating on you.
Story first published: Tuesday, January 21, 2020, 16:03 [IST]
X
Desktop Bottom Promotion