Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪತ್ನಿಯ ಜತೆ ನೆಮ್ಮದಿಯ ಜೀವನ ನಡೆಸಲು ಟಿಪ್ಸ್
ವಿವಾಹ ಬಂಧನ ಈ ಜಗತ್ತಿನ ಅತಿ ಪವಿತ್ರ ಬಂಧನವಾಗಿದ್ದು ಅತಿ ಸುಂದರ ಮತ್ತು ಅನ್ಯೋನ್ಯತೆಯ ಪ್ರತೀಕವಾಗಿದೆ. ದಾಂಪತ್ಯದಲ್ಲಿ ಎಲ್ಲವೂ ಒಂದು ಮಿತಿಯಲ್ಲಿದ್ದರೇ ಚೆನ್ನ. ಪ್ರೀತಿ ಇರುವಷ್ಟೇ ಕೊಂಚ ಮಟ್ಟಿಗಿನ ಮುನಿಸೂ ಇರಬೇಕು. ಆಗಲೇ ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ ಜೀವನ ಅತ್ಯಂತ ಸುಖಕರವಾಗಿರುತ್ತದೆ.

ಆದರೆ ಉಪ್ಪಿನಕಾಯಿಯೇ ಊಟವಾಗಬಾರದು. ಕೆಲವು ದಂಪತಿಗಳು ಚಿಕ್ಕ ಪುಟ್ಟ ಕಾರಣಗಳಿಗೂ ಜಗಳವಾಡುತ್ತಾ ತಮ್ಮ ಅನಿಸಿಕೆಯೇ ಸರಿ ಎಂದು ತೋರಿಸಲು ಯತ್ನಿಸುತ್ತಾರೆ. ವಾಸ್ತವದಲ್ಲಿ, ಇವೆಲ್ಲಾ ಚಿಕ್ಕದಾಗಿ ಪ್ರಾರಂಭವಾಗಿದ್ದು ಈಗ ದೊಡ್ಡದಾಗಿದೆ ಅಷ್ಟೇ ಹೊರತು ಮೂಲತಃ ಯಾವುದೇ ಪತಿ ತನ್ನ ಪತ್ನಿಯೊಂದಿಗೆ ಜಗಳ ಮಾಡಲು ಇಚ್ಛಿಸಿರುವುದೇ ಇಲ್ಲ.
ಈ ಜಗಳಗಳು ಪ್ರಾರಂಭವಾದಾಗ ಜಗಳದ ಬೀಜ ಚಿಕ್ಕದಾಗಿದ್ದು ಇದನ್ನು ಜಗಳದಿಂದ ಬಡಿದಷ್ಟೂ ದೊಡ್ಡದಾಗುತ್ತಾ ಹೋಗುತ್ತದೆ. ಈ ಬೀಜ ಹುಟ್ಟಿದ್ದೆಲ್ಲಿ ಎಂದು ಕೊಂಚ ಗಮನಿಸಿದರೆ ಮತ್ತು ಇದನ್ನು ಹೊಡೆಯದೇ ಇರುವ ಜಾಣ್ಮೆಯನ್ನು ತೋರಿದರೆ ಈ ಬೀಜ ದೊಡ್ಡದಾಗುವುದರಿಂದ ತಡೆಯಬಹುದು.
ಸಾಮಾನ್ಯವಾಗಿ ಮಹಿಳೆಯರಿಗೆ ರಸದೂತಗಳ ಪ್ರಭಾವದಿಂದ ಮನೋಭಾವಗಳು ಏರುಪೇರಾಗುತ್ತಾ ಇರುತ್ತವೆ ಹಾಗೂ ಸಂದರ್ಭಾನುಸಾರ ಇವರ ವರ್ತನೆಯೂ ಬದಲಾಗಬಹುದು. ಇದನ್ನು ಪತಿ ಅರ್ಥೈಸಿಕೊಂಡಷ್ಟೂ ಒಳ್ಳೆಯದು.
ಎಷ್ಟೂ ಪತಿಯರು ತಮ್ಮ ಪತ್ನಿಯರ ನಡವಳಿಕೆಯನ್ನು ಅರ್ಥಮಾಡಿಕೊಳ್ಳದೇ ತಾವೂ ದನಿ ಏರಿಸುವ ಮೂಲಕ ಈ ಜಗಳದ ಬೀಜವನ್ನು ಬಡಿಯತೊಡಗುತ್ತಾರೆ. ಒಂದು ವೇಳೆ ಜಗಳ ಪ್ರಾರಂಭವಾಗಿದೆ ಎಂದಾಕ್ಷಣ ಪತಿಯಾಗಿ ನೀವು ಕೈಗೊಳ್ಳಬಹುದಾದ ಏಳು ಸಮರ್ಥ ಸೂತ್ರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ, ನೋಡೋಣ:

1. ನಿರಾಳವಾಗಿ ಇರಲು ಯತ್ನಿಸಿ
ಇಬ್ಬರಲ್ಲೊಬ್ಬರು ಅಸಮಾಧಾನಗೊಂಡಾಗ ಇದಕ್ಕೆ ವಿರುದ್ದವಾಗಿ ಪ್ರತಿಕ್ರಿಯಿಸುವುದು ಎಂದಿಗೂ ಒಳ್ಳೆಯದಲ್ಲ. ನಿಮ್ಮ ಹೆಂಡತಿ ಕೋಪಗೊಳ್ಳುವುದನ್ನು ಮತ್ತು ನಿಮ್ಮ ಮೇಲೆ ರೇಗುವುದನ್ನು ನೀವು ಕಂಡುಕೊಂಡ ಕ್ಷಣ, ನೀವು ಮಾಡಬಹುದಾದ ಅತ್ಯುತ್ತಮ ಕ್ರಮ ಎಂದರೆ ಆದಷ್ಟೂ ಶಾಂತವಾಗಿರಲು ಯತ್ನಿಸುವುದು. ಇದಕ್ಕೆ ಬದಲು ನೀವೂ ಕೋಪಗೊಂಡರೆ ಜಗಳದ ಬೀಜ ಇನ್ನಷ್ಟು ಬೆಳೆಯುತ್ತದೆ.
ಹಲವು ಸಂದರ್ಭಗಳಲ್ಲಿ ನೀವು ಕೋಪದ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಂಡರೆ ನೀವು ಕೈ ಎತ್ತಲೂಬಹುದು. ಅಪ್ಪಿ ತಪ್ಪಿ ಏನಾದರೂ ಹೀಗಾದರೆ ನಿಮ್ಮ ಸಂಬಂಧದಲ್ಲಿ ನೇರವಾಗಿ ಹುಳಿ ಹಿಂಡಿದಂತೆ. ಕೋಪ ಮತ್ತು ಕೋಪದ ಭರದಲ್ಲಿ ಕೈಗೊಳ್ಳುವ ಕ್ರಮಗಳ ಮೂಲಕ ನೀವು ಪರಿಸ್ಥಿತಿಯನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂಬುದನ್ನು ನೆನಪಿಡಿ. ನೀವೇ ಸರಿ ಇದ್ದರೂ, ನಿಮ್ಮದೇ ತಪ್ಪಿದ್ದರೂ ಈ ಸಮಯದಲ್ಲಿ ಮಾತನಾಡದೇ ಶಾಂತವಾಗಿದ್ದಷ್ಟೂ ಪರಿಸ್ಥಿತಿ ಸುಧಾರಿಸಲು ನಿಮಗೆ ಸಹಾಯವಾಗುತ್ತದೆ.

2. ಪತ್ನಿಯ ಮಾತುಗಳನ್ನು ಕೇಳುತ್ತಿರುವಂತೆ ನಟಿಸದಿರಿ
ನಿಮ್ಮ ಪತ್ನಿ ಮಾತನಾಡುತ್ತಿರುವಾಗ ಆಕೆಗೆ ನೀವು ಮಾಡಬಹುದಾದ ಅತಿ ದೊಡ್ಡ ಅಪಮಾನವೆಂದರೆ ಆಕೆಯ ಮಾತನ್ನು ಕೇಳುತ್ತಿರುವಂತೆ ನಟಿಸುವುದು ಅಥವಾ ಆಕೆಯ ಮಾತುಗಳನ್ನು ಅಲಕ್ಷಿಸುವುದು. ವಾಸ್ತವದಲ್ಲಿ ಪರಿಸ್ಥಿತಿಯನ್ನು ಸಹಿಸುವುದು ನಿಮಗೆ ಕಷ್ಟವಾಗಬಹುದು. ಆದರೆ ನಿಮ್ಮ ಅಲಕ್ಷ್ಯ ಇನ್ನಷ್ಟು ಗೊಂದಲ ಹಾಗೂ ತೊಂದರೆಗಳಿಗೆ ಕಾರಣವಾಗಬಹುದು.
ನಿಮ್ಮ ಪತ್ನಿ ಕೆಲವು ವಿಷಯಗಳ ಬಗ್ಗೆ ದೂರು ನೀಡುವಾಗ ಆಕೆಯ ಮಾತುಗಳನ್ನು ಕೇಳಲು ನಿಮಗೆ ಆಸಕ್ತಿ ಇಲ್ಲದಿದ್ದರೆ, ಈಗ ಬೇಡ ಬಳಿಕ ನಿನ್ನ ಸಿಟ್ಟು ಇಳಿದ ಬಳಿಕ ವಿಮರ್ಶಿಸೋಣ ಎಂದು ಆದಷ್ಟೂ ಮೃದುವಾಗಿ ಕೇಳಿಕೊಳ್ಳಬಹುದು. ಮನಸ್ಸು ನಿರಾಳವಾಗಲು ಆಕೆಗೆ ಒಂದು ಲೋಟ ತಣ್ಣೀರು ಕೊಟ್ಟು ಕುಳಿತುಕೊಳ್ಳುವಂತೆ ವಿನಂತಿಸಿಕೊಳ್ಳುವ ಮೂಲಕ ಆಕೆಯ ಸಿಟ್ಟು ಇಳಿಯಬಹುದು.

3. ಯಾವುದೇ ಕೆಟ್ಟ ಪದಗಳನ್ನು ಉಪಯೋಗಿಸದಿರಿ
ನಿಮ್ಮ ಪತ್ನಿ ನಿಮ್ಮ ಮೇಲೆ ಪದಗಳ ಪ್ರಹಾರ ಹೇರುತ್ತಿದ್ದರೆ ನೀವೂ ಇದಕ್ಕೆ ಪ್ರತಿಯಾಗಿ ಶಬ್ದಗಳ ಪ್ರಹಾರ ನೀಡಬೇಕಾಗಿಲ್ಲ. ವಾಸ್ತವದಲ್ಲಿ ಹೆಚ್ಚಿನ ಪತಿಯರು ಎಡವುವುದೇ ಇಲ್ಲಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಬಾಯಿಯಿಂದಲೂ ಅವಾಚ್ಯ ಶಬ್ದಗಳು ಹೊಮ್ಮಬಹುದು ಹಾಗೂ ಈ ಪದಗಳು ಕಲ್ಲಿನಲ್ಲಿ ಕೆತ್ತಿದಷ್ಟು ಸ್ಪಷ್ಟವಾಗಿ ಕೇಳಿದವರ ಮನದಲ್ಲಿ ಅಚ್ಚೊತ್ತಿಬಿಡುತ್ತವೆ. ನಿಮ್ಮ ವರ್ಷಗಳ ಒಳ್ಳೆಯತನ ಒಂದೇ ಕೆಟ್ಟ ಪದದಿಂಗಾಗಿ ನೀರಾಗಿ ಹೋಗಬಹುದು.
ಆಕೆ ಈಗಾಗಲೇ ಸಿಟ್ಟಿನಲ್ಲಿದ್ದರೆ ನಿಮ್ಮ ಬಾಯಿಯಿಂದ ಬರುವ ಬೈಗುಳ ಅಥವಾ ಯಾವುದೇ ತಪ್ಪಾದ ಪದಗಳು ಆಕೆಯನ್ನು ಇನ್ನಷ್ಟು ರೊಚ್ಚಿಗೆಬ್ಬಿಸಬಹುದು ಹಾಗೂ ನೀವು ಸೂಕ್ಷ್ಮಸಂವೇದಿಯಲ್ಲ ಅಥವಾ ಆಕೆಯನ್ನು ಅರ್ಥ ಮಾಡಿಕೊಂಡಿಲ್ಲ ಎಂಬುದಾಗಿ ಅಪಾರ್ಥ ಕಲ್ಪಿಸಿಕೊಳ್ಳಬಹುದು. ಆಕೆಯ ಎಲ್ಲಾ ತೊಂದರೆಗಳಿಗೆ ನೀವೇ ಏಕಮಾತ್ರ ಕಾರಣರು ಎಂದು ಆಕೆ ನಿರ್ಧಾರಕ್ಕೆ ಬರಲೂಬಹುದು.

4. ತೊಂದರೆ ಎಲ್ಲಿ ಎಂದು ಅನ್ವೇಶಿಸಿ
ಈ ತೊಂದರೆಯ ಮೂಲವನ್ನು ಹುಡುಕುವುದು ಪತ್ನಿಯ ಸಿಟ್ಟನ್ನು ಶಮನಗೊಳಿಸಲು ಒಂದು ಸೂಕ್ತ ವಿಧಾನವಾಗಿದೆ. ಆಕೆಯ ಸಿಟ್ಟಿಗೆ ಏನು ಕಾರಣ ಎಂಬುದನ್ನು ಕೆದಕಿ ತಿಳಿದುಕೊಳ್ಳಬೇಕು ಮತ್ತು ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಈ ಮಾತಿನಲ್ಲಿ ಎಷ್ಟು ಹುರುಳಿದೆ ಎಷ್ಟು ಹುರುಳಿಲ್ಲ ಎಂಬುದನ್ನು ಪರಿಶೀಲಿಸಬೇಕು.
ಸಾಮಾನ್ಯವಾಗಿ ಎಲ್ಲರ ಮನೆಯ ದೋಸೆಯೂ ತೂತು ಎಂಬಂತಹ ಮನೆಯ ಸಮಸ್ಯೆಗಳು ಅಥವಾ ಆಕೆ ಉದ್ಯೋಗಸ್ಥೆಯಾಗಿದ್ದರೆ ಕೆಲಸದ ಸ್ಥಳದಲ್ಲಿ ಉಂಟಾಗಿರುವ ಯಾವುದೋ ತೊಂದರೆ ಈ ಸಿಟ್ಟಿಗೆ ಮೂಲವಾಗಿರಬಹುದು. ಸಾವಧಾನದಿಂದ ತೊಂದರೆಯ ಮೂಲವನ್ನು ಹುಡುಕಿ ತಕ್ಕ ಪರಿಹಾರವನ್ನು ನೀಡುವ ಭರವಸೆ ನೀಡಿದರೆ ಆಕೆಯ ಸಿಟ್ಟು ಇಳಿಯಬಹುದು.

5. ಆಕೆಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಿ
ನಿಮ್ಮ ಹೆಂಡತಿ ಜಗಳ ಮಾಡುತ್ತಿದ್ದಾಗ ಆಕೆಗೆ ಸಂಗತಿಗಳು ತನ್ನದೇ ಆದ ರೀತಿಯಲ್ಲಿ ನಡೆಯಬೇಕು ಎಂದು ಆಕೆ ಬಯಸಬಹುದು ಎಂಬುದು ಸ್ಪಷ್ಟ. ಆಕೆ ನಿರೀಕ್ಷಿಸಿದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಬಗ್ಗೆ ಆಕೆ ಅಸಮಾಧಾನಗೊಂಡಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಅವಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕು. ಆಕೆಯ ದೃಷ್ಟಿಯಲ್ಲಿ ವಿಷಯವನ್ನು ನೋಡಿದಾಗ ನಿಮಗೆ ಈ ಸಮಸ್ಯೆಗೆ ಬೇರೆಯೇ ವ್ಯಾಖ್ಯಾನ ಕಂಡುಬರಬಹುದು.
ನೀವು ಆಕೆಯ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಿರಿ ಎಂದು ಆಕೆ ಗೊತ್ತಾದರೂ ಸಾಕು ಆಕೆಯ ಸಿಟ್ಟು ಮುಕ್ಕಾಲು ಪಾಲು ಇಳಿದು ಹೋಗುತ್ತದೆ. ಈ ಸಮಸ್ಯೆಗೆ ನೀವೆಷ್ಟು ಪರಿಹಾರ ಒದಗಿಸಬಲ್ಲಿರಿ ಎಂಬುದು ಬೇರೆ ಪ್ರಶ್ನೆ, ಆದರೆ ನೀವು ಆಕೆಯ ದೃಷ್ಟಿಕೋನವನ್ನು ಅರ್ಥ ಮಾಡಿಕೊಂಡಿರೆ ಎಂದರೆ ಆಕೆಗೆ ಅಷ್ಟೇ ಸಾಕು! ಸಾಮಾನ್ಯವಾಗಿ ಪತಿಯರು ವಿಷಯವನ್ನು ಕೇವಲ ತಮ್ಮ ದೃಷ್ಟಿಕೋನದಲ್ಲಿ ಮಾತ್ರವೇ ನೋಡಿ ತಮ್ಮದೇ ನಿರ್ಧಾರಗಳನ್ನು ತಳೆಯುತ್ತಾರೆ. ಇದು ಪತ್ನಿಯರ ಕೋಪ ಇನ್ನಷ್ಟು ಭುಗಿಲೆಬ್ಬಿಸಲು ಸಾಕಾಗುತ್ತದೆ.

6. ಶಾಂತವಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ
ಈಗ ನೀವು ಸಮಸ್ಯೆಯನ್ನು ಕಂಡುಕೊಂಡಿದ್ದೀರಿ ಮತ್ತು ನಿಮ್ಮ ಹೆಂಡತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಿದ್ದೀರಿ, ಈಗ ಶಾಂತವಾಗಿ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಕೋಪ ಮತ್ತು ಅಸಮಾಧಾನಗೊಂಡಾಗ ಯಾರಿಗೂ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿರಬಹುದು. ನಿಮ್ಮ ಹೆಂಡತಿಯೊಂದಿಗೆ ವಿಷಯವನ್ನು ಮುಕ್ತ ಸಂಭಾಷಣೆ ನಡೆಸುವ ಮೂಲಕ ಚರ್ಚಿಸಿ ಸಾಧಕ ಬಾಧಕಗಳನ್ನು ಪರಾಮರ್ಶಿಸಿ.
ಹೀಗಾದಾಗ ಆಕೆಯ ಸಿಟ್ಟು ಇಳಿದು ಈ ಸಮಸ್ಯೆಗೆ ಆಕೆಯೇ ಸೂಕ್ತ ಪರಿಹಾರವನ್ನೂ ಸೂಚಿಸಬಹುದು. ಪರಸ್ಪರರು ತಮ್ಮ ಭಾವನೆಗಳನ್ನು ಮತ್ತು ಅನಿಸಿಕೆಗಳನ್ನು ಸ್ಪಷ್ಟಪಡಿಸುವ ಮೂಲಕ ಕೇವಲ ಈಗಿನ ಸಮಸ್ಯೆಯನ್ನು ಪರಿಹರಿಸುವುದು ಮಾತ್ರವಲ್ಲ, ಜೀವನಮಾನವಿಡೀ ಇಂತಹ ಸಮಸ್ಯೆ ಬಾರದಿರುವಂತೆ ನೋಡಿಕೊಳ್ಳಬಹುದು.

7. ಆಕೆಯ ಬಗ್ಗೆ ಈಗಲೂ ನಿಮಗೆ ಕಾಳಜಿ ಇದೆ ಎಂದು ಅವಳಿಗೆ ತಿಳಿಸಿ
ನಿಮ್ಮ ಹೆಂಡತಿ ಆಗಾಗ ಸಿಟ್ಟಿಗೇಳುತ್ತಿದ್ದರೆ ಎಲ್ಲೋ ಏನೋ ಒಂದು ತಪ್ಪು ಖಂಡಿತವಾಗಿಯೂ ಇದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದರೆ ಈ ತಪ್ಪು ಇರುವುದನ್ನೇ ಗುರಿಯಾಗಿಸದೇ ಆಕೆಯ ವರ್ತನೆಯನ್ನು ಟೀಕಿಸುವ ಬದಲು, ನೀವು ಇನ್ನೂ ಆಕೆಯನ್ನು ಪ್ರೀತಿಸುತ್ತೀರಿ ಮತ್ತು ಆಕೆಯ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದು ನೀವು ಅವಳಿಗೆ ಮನವರಿಕೆ ಮಾಡಿ ಕೊಡಬೇಕು.
ನೀವು ಅವಳೊಂದಿಗೆ ಸದಾ ಇರುತ್ತೀರಿ ಮತ್ತು ಜೀವನದ ಪ್ರತಿಯೊಂದು ವಿಷಯದಲ್ಲೂ ನೀವು ಯಾವಾಗಲೂ ಆಕೆಗೆ ಸಹಾಯ ಮಾಡುತ್ತೀರಿ ಎಂದು ಸ್ಪಷ್ಟಪಡಿಸಿ. ನಮ್ಮ ಹಿರಿಯರು ಇದನ್ನೇ 'ಅನ್ಯೋನ್ಯತೆ' ಎಂದು ಕರೆದಿದ್ದಾರೆ. ಯಾವಾಗ ನಿಮ್ಮ ಪ್ರೀತಿಯ ಬಗ್ಗೆ ಆಕೆಗೆ ಗೌರವ ಉಂಟಾಯಿತೋ ಆಗ ಆಕೆಯೇ ಇಂತಹ ಯಾವುದೇ ಸಂದರ್ಭದಲ್ಲಿ ತನ್ನನ್ನು ತಾನು ನಿಯಂತ್ರಿಸಿಕೊಂಡು ನಿಮ್ಮ ಮುಂದೆ ಸಿಟ್ಟಿಗೇಳದೇ ನಿಧಾನವಾಗಿ ನಿಮ್ಮಲ್ಲಿ ವಿಚಾರ ವಿಮರ್ಶಿಸಬಹುದು. ಹೀಗಾದರೆ ನಿಮ್ಮ ದಾಂಪತ್ಯ ಗೆದ್ದಂತೆ!.



Click it and Unblock the Notifications











