For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ನಿಮ್ಮ ಸಂಗಾತಿಗೆ ಈ ಮಾತುಗಳನ್ನು ತಪ್ಪಿಯೂ ಹೇಳದಿರಿ

|

ಜೀವನದಲ್ಲಿ ಎಲ್ಲದಕ್ಕೂ ಒಂದು ಮಿತಿಯಿರಬೇಕು. ಮಿತಿ ಮೀರಿದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ನಿಮ್ಮ ಕೆಲವು ಅಭ್ಯಾಸಗಳಿಂದ ಅರಿವಿಲ್ಲದೇ ಸಂಗಾತಿಯ ಮನಸ್ಸನ್ನು ನೋವು ಉಂಟು ಮಾಡುವುದೂ ಇದೆ. ದಂಪತಿಗಳು ಎಂದ ಮೇಲೆ ಚಿಕ್ಕ ಪುಟ್ಟ ವಿಷಯಗಳಿಗೆಲ್ಲಾ ಸಣ್ಣಪುಟ್ಟ ವೈಮನಸ್ಸು ತೋರುವುದು ಕೋಳಿ ಜಗಳವಾಡುವುದು ಇದ್ದೇ ಇರುತ್ತದೆ.

ಅಷ್ಟಕ್ಕೂ ಜಗಳವಾಡದ ದಂಪತಿಗಳೇ ಈ ಜಗತ್ತಿನಲ್ಲಿಲ್ಲ. ಸಾಮರಸ್ಯದ ದಾಂಪತ್ಯಕ್ಕೆ ಕೊಂಚ ಕೋಳಿ ಜಗಳವೇನೋ ಅಗತ್ಯ. ಆದರೆ ಅದೇ ಅತಿರೇಕವಾಗಬಾರ್ದು. ವಿವಾಹದ ಪ್ರಾರಂಭದ ದಿನಗಳಲ್ಲಿ ಸಂಗಾತಿಯ ಕೇವಲ ಒಳ್ಳೆಯ ಗುಣಗಳು ಮಾತ್ರವೇ ತೋರುತ್ತವೆ. ದಿನ ಕಳೆದಂತೆ ಒಬ್ಬರ ಒಳಗಿನ ಹುಳುಕುಗಳು ನಿಧಾನವಾಗಿ ಇನ್ನೊಬ್ಬರಿಗೆ ಗೊತ್ತಾಗತೊಡಗುತ್ತದೆ. ಆದರೆ ಈ ಹುಳುಕುಗಳೊಂದಿಗೇ ಜೀವನ ನಡೆಸಬೇಕಾದ ಕಾರಣ ಇವುಗಳನ್ನು ಒಪ್ಪಿಕೊಂಡು ಹೋಗುವುದು ಉತ್ತಮ. ಇಲ್ಲವಾದಲ್ಲಿ ಸಂಸಾರವೆಂಬ ನೌಕೆ ಹಳಿತಪ್ಪುವುದರಲ್ಲಿ ಎರಡು ಮಾತಿಲ್ಲ.

ಆದರೆ ಕೆಲವು ವಿಷಯಗಳ ಬಗ್ಗೆ ದಂಪತಿಗಳು ಎಂದಿಗೂ ತಮ್ಮ ಸಂಗಾತಿಯಲ್ಲಿ ಪ್ರಸ್ತಾಪವೆತ್ತಲೇ ಬಾರದು! ಏಕೆಂದರೆ ಈ ವಿಷಯಗಳು ಮನಸ್ಸಿನಾಳಕ್ಕೆ ನಾಟುವಂತಹದ್ದಾಗಿದ್ದು ದಾಂಪತ್ಯದ ಸಾರವನ್ನೇ ನೀಗಿಸಬಹುದು. ನಿಮ್ಮ ನಡುವೆ ಬಿರುಕು ಮೂಡಲು ಕಾರಣವಾಗಬಹುದು. ವರ್ಷಗಳ ಸಾಮೀಪ್ಯ ಹಾಗೂ ಸುಖಕರ ದಾಂಪತ್ಯಕ್ಕೆ ಈ ಒಂದೇ ವಿಷಯ ಲಿಂಬೆ ಹುಳಿ ಹಿಂಡಬಹುದು. ಬನ್ನಿ, ದಾಂಪತ್ಯದ ಬಿರುಕಿಗೆ ಕಾರಣವಾಗಬಲ್ಲ ಹಾಗೂ ಹೆಚ್ಚಿನವರಿಗೆ ಅರಿವೇ ಇಲ್ಲದ ವಿಷಯಗಳ ಬಗ್ಗೆ ತಿಳಿಯೋಣ:

​

​"ಏನಿಲ್ಲ" ಅಥವಾ "ಮೌನದ ಉತ್ತರ":

ಮೌನ ಸಮ್ಮತಿ ಲಕ್ಷಣ ಎನ್ನುತ್ತಾರೆ, ಆದರೆ ಕೆಲವೊಂದು ಸಮಯದಲ್ಲಿ ಈ ಮೌನ ಅನಾಹುತ ಸೃಷ್ಟಿಸಬಹುದು. ಕೆಲವು ಬಾರಿ ದಂಪತಿಗಳ ನಡುವೆ ಒಬ್ಬರ ಯಾವುದೋ ಮಾತು ಇನ್ನೊಬ್ಬರಿಗೆ ಇಷ್ಟವಾಗದೇ ಹೋಗಬಹುದು. ಅಥವಾ ಒಬ್ಬರ ಯಾವುದೋ ಕೆಲಸ ಇನ್ನೊಬ್ಬರು ಸಹಿಸಲಾಗದಂತಿರಬಹುದು. ಅರಿವಿಲ್ಲದೇ ಒಬ್ಬರ ಸಂಬಂಧಿಕರ ಬಗ್ಗೆ ಆಡಿದ ಮಾತು ಇನ್ನೊಬ್ಬರಿಗೆ ಭಾರೀ ಆಘಾತ ಎದುರಾಗುವಂತೆ ಮಾಡಿರಬಹುದು. ಪರಿಣಾಮವಾಗಿ ಇವರು ಸಂಗಾತಿ ಯೊಂದಿಗೆ ಮಾತು ಆಡುವುದನ್ನೇ ಬಿಟ್ಟು ಬಿಡಬಹುದು ಅಥವಾ ಹೆಚ್ಚಿನ ಪ್ರಶ್ನೆಗಳಿಗೆ 'ಏನೂ ಇಲ್ಲ', 'ಸುಮ್ಮನೆ' 'ಅಷ್ಟೇ' ಮೊದಲಾದ ಚುಟುಕು ಪದಗಳಿಂದ ಉತ್ತರಿಸಬಹುದು. ಇದು ದಾಂಪತ್ಯದ ನಡುವೆ ಬಿರುಕು ಬಿಡುವ ಅಪಾಯದ ಘಂಟೆಯಾಗಿದೆ. ಹೀಗಾದಾಗ, ದಂಪತಿಗಳು ಮನಬಿಚ್ಚಿ ಖಾಸಗಿಯಾಗಿ ಮಾತನಾಡಬೇಕು ಹಾಗೂ ಈ ಪ್ರತಿಕ್ರಿಯೆಗೆ ಕಾರಣವೇನೆಂದು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಈ ಮೌನಕ್ಕೆ ಕಾರಣವನ್ನು ಅರಿತ ಬಳಿಕ ಇದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳುವುದೂ ಅಷ್ಟೇ ಅಗತ್ಯ. ಏನೇ ಆಗಲಿ, ಸಂಗಾತಿಯಲ್ಲಿ ಮಾತನಾಡುವುದನ್ನು ಮಾತ್ರ ಸರ್ವಥಾ ನಿಲ್ಲಿಸಬಾರದು. ಇದು ನಿಮ್ಮ ಸಂಬಂಧವನ್ನೇ ನಿಲ್ಲಿಸಿದರೂ ಆಶ್ಚರ್ಯವೇನಿಲ್ಲ.

​

​"ಹುಚ್ಚುಚ್ಚಾಗಿ ಆಡಬೇಡ / ಆಡಬೇಡಿ":

ಈ ಮಾತು ನಿಮ್ಮ ಬಾಯಲ್ಲಿ ಬರುವುದು ನಿಮ್ಮ ಸಂಗಾತಿ ಎಂದಿಗೂ ಸಹಿಸರು. ಒಂದು ವೇಳೆ ಸಂಗಾತಿಯ್ ಅಭಿಪ್ರಾಯ ನಿಮಗೆ ಇಷ್ಟವಾಗಲಿಲ್ಲವೆಂದರೆ ಇದಕ್ಕೆ ಈ ಬಗೆಯ ಪ್ರತಿಕ್ರಿಯೆಯನ್ನು ಎಂದಿಗೂ ನೀಡಬಾರದು. ಇದು ತುಂಬಾ ಬೇಸರ ಮೂಡಿಸುತ್ತದೆ. ನಿಮ್ಮ ಸಂಗಾತಿ ಬೆಳೆದುಬಂದ ಪರಿಸರ, ಸಂದರ್ಭ ಹಾಗೂ ಶಿಕ್ಷಣ ಆತನ / ಆಕೆಯ ವಿಚಾರಧಾರೆಯನ್ನು ನೀವು ಅಂದುಕೊಂಡಿದ್ದಕ್ಕಿಂತಲೂ ಬೇರೆಯೇ ರೀತಿಯಲ್ಲಿ ಮೂಡಿಸಿರಬಹುದು. ಹಾಗಾಗಿ ನಿಮಗೆ ಆತನ ಅಥವಾ ಆಕೆಯ ಮಾತು 'ಹುಚ್ಚುಚ್ಚಾಗಿ' ತೋರಬಹುದು. ಆದರೆ ಈ ಸಮಯದಲ್ಲಿ ತಾಳ್ಮೆ ವಹಿಸಬೇಕು ಹಾಗೂ ಆತನ ಆಕೆಯ ಅಭಿಪ್ರಾಯವನ್ನು ಎಂದಿಗೂ ಒಂದೇ ಮಾತಿನಲ್ಲಿ ಕಡೆಗಣಿಸಬಾರದು. ಈ ಅಭಿಪ್ರಾಯವನ್ನು ಅವರಿಗೆ ಮನವರಿಕೆ ಆಗುವಂತೆ ಹೇಳಬೇಕು. 'ಹೌದು, ನಿನ್ನ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ, ಆದರೆ ವಾಸ್ತವದಲ್ಲಿ ನಿನ್ನ ಅಭಿಪ್ರಾಯದಂತೆ ನಡೆದರೆ ಈ ಬಗೆಯ ತೊಡಕುಗಳು ಎದುರಾಗಬಹುದು, ಹಾಗಾಗಿ ನಾವು ಕೊಂಚ ಎಚ್ಚರಿಕೆಯಿಂದ ಮುಂದುವರೆಯಬೇಕು" ಎಂದು ಸೌಮ್ಯವಾಗಿ ಹೇಳಬೇಕು. ಈ ಬಗೆಯ ಮಾತುಗಳಿಂದ ಸಂಗಾತಿಗೆ ನಿಮ್ಮ ಮೇಲಿನ ಗೌರವ ಇನ್ನಷ್ಟು ಹೆಚ್ಚುತ್ತದೆ.

​

​" ಎಲ್ಲಾ ನಿನ್ನಿಂದಲೇ ಆಗಿದ್ದು":

ಎಂದಿಗೂ ನಿಮ್ಮ ಸಂಗಾತಿಯ ಕಡೆಗೆ ಬೆರಳು ಮಾಡಿ ತೋರಿಸಬೇಡಿ. ಎಲ್ಲರಿಂದಲೂ ಎಲ್ಲಾ ಕೆಲಸಗಳು ಎಲ್ಲಾ ಸಮಯದಲ್ಲಿ ಸರಿಯಾಗಿಯೇ ಆಗಬೇಕೆಂದಿಲ್ಲ. ಕೆಲವೊಮ್ಮೆ ಎಡವಟ್ಟುಗಳೂ ಆಗುತ್ತವೆ. ದಂಪತಿಗಳ ನಡುವಣ ಕೆಲವು ಕೆಲಸಗಳಲ್ಲಿಯೂ ಎಡವಟ್ಟುಗಳು ಎದುರಾಗಿಯೇ ಆಗುತ್ತವೆ. ಸಾಮಾನ್ಯವಾಗಿ ನಮ್ಮ ಆಪ್ತರಿಂದ ಆದ ಪ್ರಮಾದವನ್ನು ಸಹಿಸಿಕೊಳ್ಳಲಾರದೇ ನಾವು 'ಎಲ್ಲಾ ನಿನ್ನಿಂದಲೇ ಆಗಿದ್ದು' ಎಂದು ತಕ್ಷಣ ಪ್ರತಿಕ್ರಿಯಿಸಿ ಬಿಡುತ್ತೇವೆ. ವಾಸ್ತವದಲ್ಲಿ ದಂಪತಿಗಳ ನಡುವೆ ಹೀಗೆ ಪ್ರತಿಕ್ರಿಯಿಸಬೇಕಾಗಿ ಬಂದಾಗ ಎಂದಿಗೂ ಈ ನಿರ್ಧಾರವನ್ನು ಕೈಗೊಳ್ಳಬಾರದು. ಏಕೆಂದರೆ ನಿಮ್ಮ ಸಂಗಾತಿಗೆ ನೀವೇ ಭುಜ ನೀಡಿ ಸಂತೈಸಬೇಕಾಗಿದ್ದು ನೀವೇ ಹೀಗೆಂದುಬಿಟ್ಟರೆ ಆತ/ಆಕೆ ನಿಂತಲ್ಲೇ ಕುಸಿದು ಹೋಗಬಹುದು. ಆದ್ದರಿಂದ ತಪ್ಪು ಆಗಿಯೇ ಹೋದರೂ ಸರಿ, ಅದನ್ನು ಸರಿಯಾದ ರೀತಿಯಲ್ಲಿ ವಿವ್ರಿಸಿ, ಆಕೆಗೆ ಬೆಂಬಲವಾಗಿರಿ. ಸಂಗಾತಿಯ ತಪ್ಪು ನಿಮ್ಮದೂ ತಪ್ಪು ಎಂದು ಒಪ್ಪಿಕೊಳ್ಳಿ, ಆತನಿಗೆ / ಆಕೆಗೆ ಆಸರೆಯ ಭರವಸೆ ನೀಡಿ, ನಿನ್ನಿಂದಿಗೆ ನಾನಿದ್ದೇನೆ, ಈ ತಪ್ಪನ್ನು ಸರಿಪಡಿಸೋಣ ಎಂಬಂತೆ ನಿಮ್ಮ ಪ್ರತಿಕ್ರಿಯೆ ಇರಲಿ. ಇದು ಆಕೆಗೆ ಜೀವನದಲ್ಲಿ ಭರವಸೆ ಮೂಡಿಸುತ್ತದೆ.

​

​"ಸ್ವಲ್ಪ ಸರಿಯಾಗಿ ಇರುವುದನ್ನು ಕಲಿ":

ಈ ಮಾತು ಎಂದಿಗೂ ನಿಮ್ಮ ಮಧ್ಯೆ ಬರಬಾರದು. ಏಕೆಂದರೆ ಈ ಮಾತು ನೇರವಾಗಿ ಟೀಕಿಸುವುದಕ್ಕಿಂತಲೂ ಹೆಚ್ಚು ಘೋರವಾಗಿ ಸಂಗಾತಿಗೆ ನಾಟುತ್ತದೆ. ಹೌದು, ವಿಶೇಷವಾಗಿ ವಿವಾಹ ಸಮಾರಂಭ ಅಥವಾ ಇತರ ಯಾವುದೋ ಪ್ರಮುಖ ಕಾರ್ಯಕ್ರಮಗಳಲ್ಲಿ ಒಬ್ಬರ ವರ್ತನೆ ಇನ್ನೊಬ್ಬರಿಗೆ ಸರಿಹೋಗದೇ ಹೋಗಬಹುದು. ತಮ್ಮ ಸಂಗಾತಿಯಿಂದ ತಮಗೆ ಇಷ್ಟವಾಗದೇ ಇರುವ ಈ ಸಂಗತಿಯನ್ನು ವಿವರಿಸಲು ಹೀಗೆ ಹೇಳುವುದಕ್ಕಿಂತಲೂ ಬೇರೆಯಾದ ಹಲವು ವಿಧಾನಗಳಿವೆ. ಮೊತ್ತ ಮೊದಲಿಗೆ ಎಲ್ಲರ ಎದುರಿಗೆ ಎಂದಿಗೂ ಆತನನ್ನು ಆಕೆಯನ್ನು ಈ ಪರಿಯಾಗಿ ಗದರಿಸಬಾರದು. ಬದಲಿಗೆ ಸೌಮ್ಯವಾಗಿ 'ನೀನು / ನೀವು ಹೀಗೆ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ' ಅಥವಾ 'ನಾವು ಜೊತೆಯಾಗಿ ಹಿರಿಯರಿಗೆ ಗೌರವ ನೀಡೋಣ" ಎಂದು ವಿವರಿಸಬಹುದು. ಆಕೆ ಅಥವಾ ಆತನಿಂದ ನೀವು ಏನು ಅಪೇಕ್ಷಿಸುತ್ತಿದ್ದೀರಿ ಎಂಬುದನ್ನು ಖಾಸಗಿಯಾಗಿ ಸ್ಪಷ್ಟವಾಗಿ ವಿವರಿಸಿ ತಿಳಿಸಿ.

​ದೂರುವ ಚಾಳಿ:

​ದೂರುವ ಚಾಳಿ:

ಇದು ಸಂಬಂಧದಲ್ಲಿ ಕಹಿ ಹುಟ್ಟು ಹಾಕುತ್ತದೆ. ವಿವಾಹ ವಿಚ್ಛೇದನಕ್ಕೆ ಸಾಮಾನ್ಯವಾಗಿರುವ ನಾಲ್ಕು ಕಾರಣಗಳಲ್ಲಿ ದೂರುವುದು ಪ್ರಮುಖ ಕಾರಣವಾಗಿದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಯಾವ ದಂಪತಿಗಳಲ್ಲಿ ಪರಸ್ಪರ ದೂರುವ ಅಭ್ಯಾಸ ಇರುತ್ತದೆಯೋ ಅವರ ನಡುವೆ ಬಿರುಕು ಬಿಡುವುದು ಸಾಮಾನ್ಯವಾಗಿರುತ್ತದೆ. ಈ ಜಗತ್ತಿನಲ್ಲಿ ಯಾವ್ ವ್ಯಕ್ತಿಯೂ ಒಬ್ಬರಂತೆ ಮತ್ತೊಬ್ಬರಿಲ್ಲ. ಹಾಗಾಗಿ ನಾವು ಆ ವ್ಯಕ್ತಿಯನ್ನು ಹೇಗಿದ್ದಾರೋ ಹಾಗೇ ಸ್ವೀಕರಿಸಿಕೊಳ್ಳುವ ವಿಶಾಲ ಮನೋಭಾವ ಇರಿಸಿಕೊಳ್ಳಬೇಕು. ಇನ್ನೊಬ್ಬರಲ್ಲಿ ತಮ್ಮ ಸಂಗಾತಿಯ ಬಗ್ಗೆ ದೂರುವ ಬದಲು ನೇರವಾಗಿ ಅವರಲ್ಲಿಯೇ ಸ್ಪಷ್ಟವಾಗಿ ಕೇಳಿ ತಮ್ಮನ್ನು ತಾವು ಬದಲಿಸಿಕೊಳ್ಳುವಂತೆ ಮನ ಒಲಿಸಬೇಕು. ಒಂದು ವೇಳೆ ಸಂಗಾತಿಯ ಪ್ರೇಮ ನಿಜವೇ ಆಗಿದ್ದರೆ ಆತ / ಆಕೆ ತಮ್ಮನ್ನು ಖಂಡಿತವಾಗಿಯೂ ಬದಲಿಸಿಕೊಳ್ಳುತ್ತಾರೆ. ಅವರ ಸ್ವಭಾವದ ಬಗ್ಗೆ ಸದಾ ದೂರುತ್ತಿದ್ದರೆ, ನಿಮ್ಮಲ್ಲಿ ಬಿರುಕಿಗೆ ಕಾರಣವಾಗುತ್ತದೆ.

'ವಿಚ್ಚೇದನ' ಎಂಬ ಪದವನ್ನು ಎಂದೂ ಬಳಸದಿರಿ:

'ವಿಚ್ಚೇದನ' ಎಂಬ ಪದವನ್ನು ಎಂದೂ ಬಳಸದಿರಿ:

ದಂಪತಿಗಳ ಬಾಯಲ್ಲಿ ಈ ಪದ ಎಂದೂ ಬರಕೂಡದು. ಉಳಿದವರಿಗೆ ಈ ಪದ ಅಷ್ಟೊಂದು ಪ್ರಭಾವ ಬೀರದೇ ಇದ್ದರೂ ದಂಪತಿಗಳ ನಡುವೆ ಈ ಪದಕ್ಕೆ ಹೆಚ್ಚು ಬೆಲೆಯಿದೆ. ಈ ಪದ ಒಂದು ಕುಟುಂಬವನ್ನೇ ನಾಶಪಡಿಸಬಲ್ಲುದು, ನೀವು ಯಾವುದೇ ಉದ್ದೇಶವಿಲ್ಲದೇ ಈ ಪದವನ್ನು ಹೇಳಿದರೂ ಸಹ, ನಿಮ್ಮ ಸಂಗಾತಿಯ ಹೃದಯವನ್ನೇ ಇದು ಇರಿಯುತ್ತದೆ. ಅಷ್ಟಕ್ಕೂ ತಮಾಷೆಯಲ್ಲದ ಈ ಪದವನ್ನು ಆಡುವ ಅಗತ್ಯತೆ ಏಕೆ ಉಂಟಾಯಿತು? ಇದು ಮೊದಲಾಗಿ ನೀವು ನಿಮ್ಮನ್ನು ಕೇಳಿಕೊಳ್ಳಬೇಕು. ನಿಮ್ಮ ಸಂಗಾತಿಯಿಂದ ಆಗಿರುವ ತಪ್ಪೇ? ಆತನ ಆಕೆಯ ವರ್ತನೆಯೇ ಅಥವಾ ಬೇರಾವ ಕಾರಣದಿಂದ? ಮೊದಲಾಗಿ ಆ ಕಾರಣಗಳನ್ನು ಹುಡುಕಿ ಇದನ್ನು ಸರಿಪಡಿಸುವತ್ತ ಗಮನ ಹರಿಸಬೇ ಕೇ ವಿನಃ ಈ ಪದವನ್ನು ನೀವು ಎಂದಿಗೂ ಉಚ್ಚರಿಸಲೂ ಬಾರದು. ಸಿಟ್ಟು ಏರಿದ್ದು ಈ ಭರದಲ್ಲಿ ನೀವು ಈ ಮಾತನ್ನು ಆಡಿದ್ದರೆ ಸಿಟ್ಟು ಇಳಿಯುವವರೆಗೂ ಸಂಗಾತಿಯಿಂದ ದೂರ ಹೋಗಿ ಬಳಿಕ ನೇರವಾಗಿ ಮಾತನಾಡಿ ಈ ಬಗ್ಗೆ ಮೊದಲು ಕ್ಷಮೆ ಯಾಚಿಸಿ. ಆದರೆ ಎಂದಿಗೂ ಸಂಗಾತಿಯಿಂದ ದೂರವಾಗಬೇಡಿ.

​ಹೋಲಿಕೆ ಬೇಡ:

ನಿಮ್ಮ ಸಂಗಾತಿಯನ್ನು ಅಥವಾ ನಿಮ್ಮ ವಿವಾಹ ಜೀವನವನ್ನು ಇನ್ನೊಬ್ಬರಿಗೆ ಎಂದಿಗೂ ಹೋಲಿಸದಿರಿ. ಬದಲಿಗೆ ನಿಮ್ಮ ದಾಂಪತ್ಯದಲ್ಲಿ ನಿಮ್ಮ ಸಂಗಾತಿಯ ಕೊಡುಗೆ ಏನು ಎಂಬ ಬಗ್ಗೆ ಕಾಳಜಿ ವಹಿಸಿ. ಪ್ರತಿ ವ್ಯಕ್ತಿಯಿಂದಲೂ ದಿನದಲ್ಲಿ ಎಷ್ಟೋ ಒಳ್ಳೆಯ ಕೆಲಸಗಳಾಗುತ್ತಿರುತ್ತವೆ. ಈ ಕೆಲಸಗಳಿಗೆ ನೀವು ಗಮನವನ್ನಾಗಲೀ ಮಹತ್ವವನ್ನಾಗಲೀ ನೀಡಿರುವುದಿಲ್ಲ. ಉದಾಹರಣೆಗೆ ಕಸ ಗುಡಿಸುವುದು. ನಿಮ್ಮ ಸಂಗಾತಿ ಮನೆಯ ಕಸ ಗುಡಿಸದೇ ಇದ್ದರೆ ನಿಮಗೆ ಹೇಗೆನಿಸುತ್ತದೆ? ಅದೇ ಕೆಲಸವನ್ನು ಇದುವರೆಗೆ ನೀವು ಮಾಡಿರದೇ ಇದ್ದಾಗ ಈಗ ಮಾಡಿದರೆ ಹೇಗಾಗುತ್ತದೆ? ಅಲ್ಪ ಎನಿಸಿದರೂ ಈ ಚಿಕ್ಕ ವಿಷಯ ದೊಡ್ಡ ಪಾಠವನ್ನೇ ಕಲಿಸುತ್ತದೆ. ಎಂದಿಗೂ ನಿಮ್ಮ ಸಂಗಾತಿಯನ್ನಾಗಲೀ, ನಿಮ್ಮ ದಾಂಪತ್ಯ ಅಥವಾ ಆರ್ಥಿಕ ಸ್ಥಿತಿ, ಮನೆಯ ಪರಿಸ್ಥಿತಿ ಮೊದಲದವುಗಳನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳದಿರಿ. ಏನಿದ್ದರೂ ನೀವು ದಂಪತಿಗಳಾಗಿ ಎಷ್ಟು ಪರಸ್ಪರರಲ್ಲಿ ಸಂತೋಷವಾಗಿದ್ದೀರಿ ಎಂಬುದೇ ಮುಖ್ಯವಾಗಿದ್ದು ಈ ಸಂತೋಷ ನೆಮ್ಮದಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

English summary

Things You Should Never Say To Your Spouse

Some things, what you told to your partner, that may affect your relationshio, so here we told about Things You Should Never Say to Your Spouse, have a look.
X