For Quick Alerts
ALLOW NOTIFICATIONS  
For Daily Alerts

ಮದುವೆಯಾದ ಮೊದಲ ವರ್ಷದಲ್ಲಿ ಸಂಗಾತಿಯೊಂದಿಗೆ ಚರ್ಚಿಸಲೇಬೇಕಾದ ವಿಷಯಗಳು

|

ದಾಂಪತ್ಯ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾದ ಸಂಬಂಧವಾಗಿರುತ್ತದೆ ಎನ್ನಲಾಗುತ್ತದೆ. ಅದೇನೇ ಇರಲಿ, ಎರಡು ಜೀವಗಳು ಬೇರೆ ಬೇರೆ ಪರಿಸರ, ಸಂಸ್ಕೃತಿ, ವಾತಾವರಣದಲ್ಲಿ ಬೆಳೆದು ನಂತರ ಒಂದೇ ಸೂರಿನಡಿಯಲ್ಲಿ ಇಬ್ಬರೂ ಪರಸ್ಪರ ಅರಿತು ಬಾಳುವುದು ಎಂದರೆ ಅಷ್ಟು ಸುಲಭದ ಸಂಗತಿಯಲ್ಲ. ವಿವಾಹದ ನಂತರ ಜೀವನವು ಸುಖವಾಗಿರುತ್ತದೆ ಎಂದು ಬಹುತೇಕ ಯುವಕ-ಯುವತಿಯರು ಅಂದುಕೊಳ್ಳುತ್ತಾರೆ. ವಿವಾಹದ ನಂತರದ ಜೀವನ ಸುಖ ಸಂತೋಷದಿಂದ ಕೂಡಿರುವುದು ನಿಜ. ಆದರೆ ಅದು ಹೊಂದಾಣಿಕೆ, ಪರಸ್ಪರ ಗೌರವ ನೀಡುವ ಸ್ವಭಾವ ಇಬ್ಬರಲ್ಲೂ ಇದ್ದಾಗ ಮಾತ್ರ. ಇಲ್ಲವಾದರೆ ಜೀವನ ಕಷ್ಟ ಎನ್ನುವ ನಿಲುವಿಗೆ ಬರುತ್ತಾರೆ.

Things To Disclose To Your Partner In The First Year Of Your Relationship

ವಿವಾಹದ ಹೊಸತರಲ್ಲಿ ಪತಿ-ಪತ್ನಿಗೆ ಪರಸ್ಪರ ಅಷ್ಟು ಪರಿಚಯಗಳಿರುವುದಿಲ್ಲ. ಹಾಗೊಮ್ಮೆ ಸಾಕಷ್ಟು ಮಾತುಕತೆಯನ್ನು ನಡೆಸಿದ್ದಾರೆ ಎಂದಾಗಲೂ ಸಹ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿರುವುದಿಲ್ಲ. ಪರಸ್ಪರ ತಪ್ಪು ತಿಳಿಯಬಹುದು ಅಥವಾ ತಪ್ಪಾಗಿ ಗ್ರಹಿಸಬಹುದು ಎನ್ನುವ ಕಾರಣಕ್ಕೆ ವಿಷಯಗಳನ್ನು ಮುಕ್ತವಾಗಿ ಚರ್ಚಿಸುವುದಿಲ್ಲ. ಕೆಲವು ದಂಪತಿಗಳಲ್ಲಿ ಇಂತಹ ಕಾರಣದಿಂದಲೇ ಸಾಕಷ್ಟು ಅಂತರ ಹುಟ್ಟಿಕೊಳ್ಳುತ್ತವೆ. ನಿಧಾನವಾಗಿ ಅದು ಸಂಬಂಧಗಳ ಬಗ್ಗೆ ಹಾಗೂ ಸಂಗಾತಿಯ ಬಗ್ಗೆ ಬೇಸರವನ್ನುಂಟು ಮಾಡುವುದು.

ದಂಪತಿಯಲ್ಲಿ ಗುಪ್ತ ಸಂಗತಿಗಳು ಮನೆಮಾಡಬಾರದು

ದಂಪತಿಯಲ್ಲಿ ಗುಪ್ತ ಸಂಗತಿಗಳು ಮನೆಮಾಡಬಾರದು

ಹಾಗಾಗಿ ಆಪ್ತ ಸಲಹೆಗಾರರು ಹೇಳುವ ಪ್ರಕಾರ ಸಂಬಂಧ ಎನ್ನುವುದು ಅತ್ಯಂತ ಸೂಕ್ಷ್ಮವಾದದ್ದು. ಸಂಗಾತಿಗಳ ನಡುವೆ ಯಾವುದೇ ಗುಪ್ತ ಸಂಗತಿಗಳು ಮನೆಮಾಡಬಾರದು. ಇಬ್ಬರ ನಡುವೆಯೂ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಗೌರವಗಳು ಇರಬೇಕು. ಇಲ್ಲವಾದರೆ ಸಂಬಂಧ ದೀರ್ಘ ಸಮಯಗಳ ಕಾಲ ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರುವುದಿಲ್ಲ. ಎರಡು ಜೀವಗಳು ಕಷ್ಟ-ಸುಖದಲ್ಲಿ ಸರಿಸಮನಾಗಿ ಭಾಗಿಯಾಗಿ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲಬೇಕು ಎಂದರೆ ಕೆಲ ವಿಷಯಗಳ ಬಗ್ಗೆ ಮೊದಲ ವರ್ಷದಲ್ಲಿಯೇ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಆ ಸಂಗತಿಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಜೀವನದ ಯೋಜನೆಯ ಬಗ್ಗೆ

ಜೀವನದ ಯೋಜನೆಯ ಬಗ್ಗೆ

ಸಂಸಾರ ಎಂದ ಮೇಲೆ ಆರ್ಥಿಕ ವಿಷಯದಲ್ಲಿ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಸಾಕಷ್ಟು ಯೋಜನೆಯನ್ನು ಕೈಗೊಳ್ಳಬೇಕು. ಇಲ್ಲವಾದರೆ ಮಿತಿಮೀರಿದ ಖರ್ಚುಗಳು ನಮ್ಮ ಆರ್ಥಿಕ ಸ್ಥಿತಿಯನ್ನು ಅಲ್ಲಾಡಿಸುವುದು. ಭವಿಷ್ಯದ ಬಗ್ಗೆ ಯಾವುದೇ ಒಂದು ಸೂಕ್ತ ಗುರಿ ಅಥವಾ ನಿಲುವು ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ಪತಿ-ಪತ್ನಿಗಳ ನಡುವೆ ಸಂಭವಿಸುವುದು. ಕೆಲವು ಬಹಳ ಕ್ಷುಲ್ಲಕ ಕಾರಣದಿಂದ ಕೂಡಿರಬಹುದು, ಅದೇ ದೊಡ್ಡ ಸಂಗತಿಯಾಗಿ ಪರಿಣಮಿಸುವುದು. ಹಾಗಾಗಿ ಪತಿ-ಪತ್ನಿಯರಿಬ್ಬರು ನಿಮ್ಮ ಜೀವನದ ಗುರಿ, ಹವ್ಯಾಸ ಹಾಗೂ ಆಕಾಂಕ್ಷೆಗಳ ಬಗ್ಗೆ ಪರಸ್ಪರ ಚರ್ಚೆ ಹಾಗೂ ಮಾತುಕತೆಯನ್ನು ನಡೆಸುವುದು ಅತ್ಯಗತ್ಯ.

ಹಣಕಾಸಿನ ಗುರಿಗಳು ಮತ್ತು ಇತಿಹಾಸ

ಹಣಕಾಸಿನ ಗುರಿಗಳು ಮತ್ತು ಇತಿಹಾಸ

ವಿವಾಹದ ಆರಂಭದಲ್ಲಿ ದಂಪತಿಗಳು ಮೋಜಿನ ಜೀವನ ನಡೆಸಲು ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ. ಅವರು ವ್ಯಯಿಸುವ ಹಣದ ಬಗ್ಗೆ ಯಾವುದೇ ಕಾಳಜಿ ಅಥವಾ ಲೆಕ್ಕಚಾರಗಳು ಸಹ ಕೆಲವೊಮ್ಮೆ ಇರುವುದಿಲ್ಲ. ಲೆಕ್ಕವಿಲ್ಲದ ಖರ್ಚು ಭವಿಷ್ಯದಲ್ಲಿ ಚಿಂತೆಯನ್ನು ಸೃಷ್ಟಿಸಬಹುದು. ದಂಪತಿಗಳ ನಡುವೆ ಪರಸ್ಪರ ವರಮಾನಗಳ ಬಗ್ಗೆ ಅಥವಾ ಸಂಸಾರದ ಆಯವ್ಯಯದ ಬಗ್ಗೆ ಮಾಹಿತಿ ಇಲ್ಲದೆ ಇದ್ದರೆ ತೊಂದರೆ ಉಂಟಾಗುವುದು. ಹಾಗಾಗಿ ಸಂಗಾತಿಗಳು ಪರಸ್ಪರ ಇಬ್ಬರ ವರಮಾನ, ಮಗೆಯ ಖರ್ಚು, ಉಳಿತಾಯ, ಭವಿಷ್ಯದ ಯೋಜನೆ ಹಾಗೂ ಆಸ್ತಿಯ ಬಗ್ಗೆ ಸೂಕ್ತ ಚಿಂತನೆ ಹಾಗೂ ಲೆಕ್ಕಚಾರದ ಬಗ್ಗೆ ಚರ್ಚಿಸಬೇಕು. ಆರ್ಥಿಕ ಸ್ಥಿತಿಯು ಸಂಸಾರದ ಭದ್ರತೆಗೆ ಅತ್ಯಮೂಲ್ಯವಾದ ಸಂಗತಿ. ಅದರ ಬಗ್ಗೆ ಸಂಗಾತಿಗಳಿಬ್ಬರಿಗೂ ಸೂಕ್ತ ಅರಿವು ಇರಬೇಕು. ಹಾಗಾಗಿ ಈ ವಿಷಯಗಳ ಬಗ್ಗೆ ಯಾವುದೇ ಮುಚ್ಚುಮರೆ ಮಾಡದೆ ಹೇಳಿಕೊಳ್ಳಿ.

ಮಕ್ಕಳನ್ನು ಹೊಂದುವ ಸಂಗತಿಗಳು

ಮಕ್ಕಳನ್ನು ಹೊಂದುವ ಸಂಗತಿಗಳು

ಕೆಲವರು ಸಂಗಾತಿಯೊಂದಿಗೆ ಮಕ್ಕಳ ವಿಷಯ ಅಥವಾ ಯೋಜನೆಯ ಬಗ್ಗೆ ಮಾತನಾಡಲು ಸಾಕಷ್ಟು ಮುಜುಗರ ಹಾಗೂ ನಿಷಿದ್ಧವಾದ ಸಂಗತಿ ಎಂದುಕೊಳ್ಳುತ್ತಾರೆ. ಈಗ ತಾನೇ ವಿವಾಹವಾಗಿದೆ ಇದರ ಬಗ್ಗೆ ಹೇಗೆ ಮಾತನಾಡುವುದು? ಎಂದು ಯೋಚಿಸುವುದು ಉಂಟು. ನಮ್ಮ ಸಂಸಾರದ ಬಗ್ಗೆ ನಾವು ಸರಿಯಾಗಿ ತಿಳಿದುಕೊಳ್ಳುವ ಮೊದಲೇ ಮಕ್ಕಳನ್ನು ಪಡೆಯಬೇಕೇ? ಹಾಗೊಮ್ಮೆ ಪಡೆದುಕೊಂಡರೆ ಯಾವ ಬಗೆಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು. ಮಕ್ಕಳಿಗೆ ನಾವು ಯಾವ ಭ್ರತೆಯನ್ನು ಒದಗಿಸುತ್ತೇವೆ? ಎನ್ನುವಂತಹ ವಿಷಯಗಳ ಬಗ್ಗೆ ಸರಿಯಾಗಿ ಚರ್ಚೆ ಮಾಡಬೇಕು. ಇಲ್ಲವಾದರೆ ನಿಮ್ಮ ಭವಿಷ್ಯ ಮಕ್ಕಳ ಭವಿಷ್ಯ ಹಾಗೂ ನೆಮ್ಮದಿಯು ಹಾಳಾಗುವುದು. ಸಂಗಾತಿಗಳ ನಡುವೆ ಮಕ್ಕಳ ಬಗ್ಗೆ ಅಥವಾ ಮಕ್ಕಳನ್ನು ಪಡೆಯುವುದರ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಮುಜುಗರಬೇಡ ಎನ್ನುವುದನ್ನು ಅರಿಯಬೇಕು.

ನಿಮ್ಮ ಮಾನಸಿಕ ಸ್ಥಿತಿ-ಗತಿಯ ಬಗ್ಗೆ

ನಿಮ್ಮ ಮಾನಸಿಕ ಸ್ಥಿತಿ-ಗತಿಯ ಬಗ್ಗೆ

ಸಂಗಾತಿಯೊಂದಿಗೆ ಮೊದಲು ಹೇಳಿಕೊಳ್ಳಬೇಕಾದ ವಿಷಯಗಳಲ್ಲಿ ಇದೂ ಒಂದು. ಈ ಮೊದಲು ನೀವು ಯಾವ ಸಂಗತಿಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದೀರಿ? ನಿಮ್ಮ ಸ್ವಭಾವ, ಹವ್ಯಾಸ ಬಯಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು. ಮಾನಸಿಕ ಒತ್ತಡಕ್ಕೆ ಅಥವಾ ಯಾವುದಾದರೂ ಗೀಳಿಗೆ ಒಳಗಾಗಿದ್ದರೆ ಅದನ್ನು ಸಹ ಹೇಳಿಕೊಳ್ಳುವುದು ಸೂಕ್ತ. ಅದರಿಂದ ಒಬ್ಬರನ್ನೊಬ್ಬರು ಪರಸ್ಪರ ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ನಿಮ್ಮ ಕುಟುಂಬದ ಬಗ್ಗೆ

ನಿಮ್ಮ ಕುಟುಂಬದ ಬಗ್ಗೆ

ನಮ್ಮ ಹೆತ್ತವರು, ಒಡ ಹುಟ್ಟಿದವರು, ಮನೆಯ ಪರಿಸ್ಥಿತಿ, ಅನುಕೂಲತೆ ಹಾಗೂ ಅನಾನುಕೂಲತೆಯ ಬಗ್ಗೆ ಸಂಗಾತಿಗಳು ಪರಸ್ಪರ ಚರ್ಚಿಸಿಕೊಳ್ಳುವುದು ಅತ್ಯಗತ್ಯ. ಆಗ ಇಬ್ಬರಿಗೂ ತಮ್ಮ ಕುಟುಂಬ ಸಂಬಂಧಿಕರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ನಮ್ಮವರ ಬಗ್ಗೆ ತಿಳಿದುಕೊಂಡಾಗ ಅವರೊಂದಿಗೆ ಹೊಂದಾಣಿಕೆಗೂ ಸಹಾಯವಾಗುವುದು. ಇಲ್ಲವಾದರೆ ಸಂಬಂಧಿಕರು ಮಾತನಾಡುವುದು ಅಥವಾ ಅವರ ವರ್ತನೆಗಳು ನಮಗೆ ನೋವು ಮತ್ತು ಅಪಾರ್ಥ ಮಾಡಿಕೊಳ್ಳುವಂತೆ ಮಾಡಬಹುದು. ಅವರೊಂದಿಗೆ ಬೆರೆಯಲು ಮನಸ್ಸು ಇಚ್ಛಿಸದೆ ಇರಬಹುದು.

ಜೀವನದಲ್ಲಿ ನಡೆದ ಘಟನೆಗಳು ಅಥವಾ ಸಂಬಂಧಗಳ ಬಗ್ಗೆ

ಜೀವನದಲ್ಲಿ ನಡೆದ ಘಟನೆಗಳು ಅಥವಾ ಸಂಬಂಧಗಳ ಬಗ್ಗೆ

ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಹಿನ್ನೆಲೆ, ಕಥೆಗಳು ಅಥವಾ ಕಷ್ಟದ ಪರಿಸ್ಥಿತಿಗಳು ಇರುತ್ತವೆ. ಅವುಗಳ ಬಗ್ಗೆ ಹೆಚ್ಚು ಮುಚ್ಚಿಡುವುದು ಅಥವಾ ರಹಸ್ಯವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ಮಾಡಬಾರದು, ಹಾಗೆ ಮಾಡಿದಾಗ ಸಮಸ್ಯೆಗಳು ಹೆಚ್ಚುತ್ತವೆ. ಜೊತೆಗೆ ನಮ್ಮ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ನಮ್ಮವರಿಗೆ ನಮ್ಮ ವಿಷಯಗಳನ್ನು ನಾವು ಹೇಳಿದರೆ ಸೂಕ್ತ. ಆ ವಿಷಯಗಳನ್ನು ನಾವು ಮುಚ್ಚಿಟ್ಟು, ಮೂರನೇ ವ್ಯಕ್ತಿಗಳಿಂದ ತಿಳಿದರೆ ಅದು ಅತ್ಯಂತ ದುಃಖ ಹಾಗೂ ಬೇಸರವನ್ನು ಉಂಟುಮಾಡುತ್ತದೆ. ಅದೇ ನಮ್ಮ ಸಂಗತಿಗಳನ್ನು ಪಾಲುದಾರರೊಂದಿಗೆ ಹಂಚಿಕೊಂಡಾಗ ಯಾವುದೇ ಭಯ ಅಥವಾ ಮುಜುಗರ ಇರುವುದಿಲ್ಲ. ಮುಕ್ತವಾದ ಭಾವನೆಯಿಂದ ಸಂತೋಷದ ಜೀವನ ನಡೆಸಬಹುದು.

ಲೈಂಗಿಕ ಸಮಸ್ಯೆ ಅಥವಾ ಸಂಗತಿಗಳು

ಲೈಂಗಿಕ ಸಮಸ್ಯೆ ಅಥವಾ ಸಂಗತಿಗಳು

ವಿವಾಹದ ಸಂಬಂಧ ಅಥವಾ ದಾಂಪತ್ಯವು ಪ್ರಮುಖವಾಗಿ ಲೈಂಗಿಕ ವಿಷಯವನ್ನು ಅವಲಂಬಿಸಿರುತ್ತದೆ. ಇದು ನೈಸರ್ಗಿಕವಾಗಿ ಪರಸ್ಪರ ಎರಡು ಲಿಂಗದವರು ಅಪೇಕ್ಷಿಸುವ ಸಂಗತಿ. ಈ ವಿಷಯದಲ್ಲಿ ಯಾವುದೇ ತೊಂದರೆ ಅಥವಾ ಮುಜುಗರ ಇದ್ದರೆ ಪಾಲುದಾರರು ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಹಾಗೇನಾದರೂ ಗಂಭೀರ ಸಮಸ್ಯೆಗಳಿದ್ದರೂ ವೈದ್ಯರಲ್ಲಿ ತಪಾಸಣೆ ಅಥವಾ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಕೆಲವರಿಗೆ ಸಂಗಾತಿಯ ಜೊತೆಗೆ ಲೈಂಗಿಕ ವಿಷಗಳ ಬಗ್ಗೆ ಮಾತನಾಡಲು ಅಥವಾ ಹೇಳಿಕೊಳ್ಳಲು ಮುಜುಗರ ಹಾಗೂ ಮಡಿವಂತಿಕೆಯನ್ನು ತೋರುತ್ತಾರೆ. ಅದು ಅವರ ಸಂಬಂಧಗಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವುದು. ಸಂಗಾತಿಗಳಲ್ಲಿ ಒಬ್ಬರಿಗೆ ಲೈಂಗಿಕ ವಿಷಯದಲ್ಲಿ ಸಮಸ್ಯೆ ಅಥವಾ ಆಸಕ್ತಿ ಇಲ್ಲದೆ ಇರುವ ಸ್ಥಿತಿ ಇದ್ದರೂ ಇಬ್ಬರ ನೆಮ್ಮದಿ ಹಾಗೂ ಜೀವನ ಹಾಳಾಗುವುದು. ಹಾಗಾಗಿ ಪ್ರಮುಖ ಸಂಗತಿಯಾದ ಈ ವಿಷಯದಲ್ಲಿ ರಹಸ್ಯವನ್ನು ಅಥವಾ ಮುಚ್ಚಿಡುವ ಪ್ರಯತ್ನ ಮಾಡದಿರಿ. ಬದಲಿಗೆ ಮೊದಲೇ ಚರ್ಚೆ ಹಾಗೂ ನಿರ್ಣಯವನ್ನು ತೆಗೆದುಕೊಳ್ಳಿ.

English summary

Things To Disclose To Your Partner In The First Year Of Your Relationship

During the initial days of the relationship, people choose not to disclose certain things about themselves. They tend to share secrets and other information once they start to know their partner in a better way. If you are sure that your partner is the one you want to share your entire life with, below are the things that you should share with your partner in the first year of your relationship.
X
Desktop Bottom Promotion