For Quick Alerts
ALLOW NOTIFICATIONS  
For Daily Alerts

ಪ್ರೇಮವಂಚನೆ : ಭಗ್ನಗೊಳ್ಳುವ ಪ್ರೇಮಿಗಳ ಹೃದಯ

By Arshad
|

ಪ್ರೇಮ ಅತಿ ಸೂಕ್ಷ್ಮವಾದ ಭಾವನೆಯಾಗಿದ್ದು ಇದರಲ್ಲಿ ವಂಚನೆಗೊಳಗಾದವರು ತೀವ್ರವಾದ ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ. ಅದರಲ್ಲೂ ಇದುವರೆಗೆ ಒಳ್ಳೆಯ ಸಂಬಂಧದಲ್ಲಿದ್ದು ಭವಿಷ್ಯದ ಬಗ್ಗೆ ನೂರು ಸವಿಕನಸುಗಳನ್ನು ಕಂಡ ಬಳಿಕ ವಂಚನೆಗೊಳಗಾದರೆ ಇವರಿಗೆ ಜೀವನವೇ ನರಕವಾಗಿಬಿಡುತ್ತದೆ. ಇಂದಿನ ದಿನಗಳಲ್ಲಿ ಪ್ರೇಮವಂಚನೆ ತೀರಾ ಎನಿಸುವಷ್ಟು ಹೆಚ್ಚಾಗಿ ಕಾಣಬರುತ್ತಿದೆ.

ಅದರಲ್ಲೂ ಈಗಾಗಲೇ ಸಂಬಂಧದಲ್ಲಿರುವವರಲ್ಲೊಬ್ಬರು ಮೂರನೆಯ ವ್ಯಕ್ತಿಯೊಂದಿಗೆ ಹೊಸ ಸಂಬಂಧ ಬೆಳೆಸುವುದು ಮೂಲ ಸಂಬಂಧ ಬುಡವನ್ನೇ ಕಡಿದು ಈ ಸಂಬಂಧದ ಮೂಲಕ ಏರ್ಪಟ್ಟಿದ್ದ ಮಾನಸಿಕ ಭಾವನೆಗಳು ಬಾಳೆಮರದಂತೆ ಕುಸಿದು ಅಪಾರವಾದ ಮನೋವೇದನೆಯಲ್ಲಿ ನರಳುವಂತೆ ಮಾಡುತ್ತದೆ.

betrayal in love

ಪ್ರೇಮದಲ್ಲಿ ಬಿದ್ದ ವ್ಯಕ್ತಿಗಳಿಗೆ ಎದುರಾಗುವ ವಂಚನೆ ಹಲವು ರೀತಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಾಡಬಹುದು. ವಂಚನೆಗೊಳಗಾದ ವ್ಯಕ್ತಿಗೆ ಕೆಲವಾರು ಅವ್ಯಕ್ತ ತೊಂದರೆಗಳು ಎದುರಾಗಿ ಅತೀವವಾದ ಮಾನಸಿಕ ಒತ್ತಡವನ್ನು ಹೇರಬಹುದು. ವಂಚನೆ ನೀಡಿದ ವ್ಯಕ್ತಿಯ ಕುರಿತು ವಿಷಭಾವನೆ, ಸಂಬಂಧದಿಂದ ಬೇರ್ಪಡುವ ಅತೀ ನೋವಿನ ಅನುಭವ ಪ್ರೇಮಿಯ ಹೃದಯವನ್ನೇ ಒಡೆಯುತ್ತದೆ. ಆದ್ದರಿಂದ ಯಾವುದೇ ಸಂಬಂಧ ಯಶಸ್ವಿಯಾಗಬೇಕೆಂದರೆ ಇದಕ್ಕೆ ಅತಿ ಸೂಕ್ಷ್ಮ ಹಾಗೂ ಕಠಿಣವಾದ ಪರಿಶ್ರಮದ ಅಗತ್ಯವಿದೆ ಎಂಬುದೇನೂ ಈಗ ಗುಟ್ಟಿನ ಮಾತಾಗಿ ಉಳಿದಿಲ್ಲ.

ಒಂದು ಸಂಬಂಧಕ್ಕೆ ಒಳಗೊಳ್ಳುವ ಹುಮ್ಮಸ್ಸಿನಲ್ಲಿ ನೀವಿದ್ದರೆ ಇದು ಜೀವನಪರ್ಯಂತ ಬದ್ದತೆಗೊಳಪಡಬೇಕಾದ ಬಂಧನ, ಇದಕ್ಕಾಗಿ ಇಬ್ಬರೂ ಪರಸ್ಪರರಲ್ಲಿ ಅನ್ಯೋನ್ಯತೆ ಹಾಗೂ ವಿಶ್ವಾಸವನ್ನಿರಿಸಿಕೊಳ್ಳುವುದು ಅಗತ್ಯವಾಗಿದ್ದು ವಿಶ್ವಾಸಘಾತುಕತನದ ಒಂದು ಎಳೆಯೂ ನಿಮ್ಮ ಸಂಗಾತಿಯನ್ನು ನಿಮ್ಮಿಂದ ದೂರವಾಗಿಸಲು ಪ್ರಾರಂಭದ ಕಿಡಿಯಾಗಿ ಮಾರ್ಪಾಡು ಹೊಂದಬಹುದು. ಸಂಬಂಧವೊಂದು ಮುಂದೆ ಸರಾಗವಾಗಿ ಸಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈಗ ಪ್ರತಿದಿನವೂ ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ ಹಾಗೂ ಕೆಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಕಾಲ ಮುಂದುವರೆದಂತೆ ಪ್ರೇಮದ ಬಗ್ಗೆ ಯುವಜನತೆಯ ಭಾವನೆಯೂ ಬದಲಾಗುತ್ತಿದ್ದು ಆ ಪ್ರಕಾರ ಇಂದಿನ ದಿನಗಳಲ್ಲಿ ಯಾವ ರೀತಿಯ ಪ್ರೇಮವಂಚನೆಗಳು ಕಂಡುಬರುತ್ತಿವೆ ಎಂಬುದನ್ನು ನೋಡೋಣ:-

ಷರತ್ತುಬದ್ಧ ಪ್ರೇಮ

ಸಂಬಂಧಕ್ಕೆ ಒಳಪಡುವ ವ್ಯಕ್ತಿಯನ್ನು ಅತಿಯಾದ ಭೀತಿಗೊಳಪಡಿಸುವ ವಿಷಯವೆಂದರೆ ಪ್ರೇಮಕ್ಕೆ ಸಂಬಂಧಿಸಿದ ಕೆಲವು ಷರತ್ತುಗಳು. ವಾಸ್ತವವಾಗಿ, ಅನ್ಯೋನ್ಯತೆ ಇದ್ದಲ್ಲಿ ಷರತ್ತಿನ ಮಾತೇ ಬರುವುದಿಲ್ಲ. ಹಾಗಾಗಿ ಯಾವಾಗ ಪ್ರೇಮದಲ್ಲಿ ಷರತ್ತುಗಳು ಕಾಣಬರುತ್ತವೆಯೋ ಈ ಸಂಬಂಧ ಯಶಸ್ವಿಯಾಗುವ ಸಂಭವ ಕಡಿಮೆ ಎಂದೇ ತಿಳಿದುಕೊಳ್ಳಬಹುದು. ಷರತ್ತುಬದ್ದ ಪ್ರೇಮ, ನಿಜವಾದ ಪ್ರೇಮವೇ ಅಲ್ಲ. ಇಂದು ಪ್ರೇಮವಂಚನೆಗೆ ಒಳಗಾದವರಲ್ಲಿ ಈ ಬಗೆಯ ಸಂಬಂಧಗಳೇ ಗರಿಷ್ಟ ಪ್ರಮಾಣದಲ್ಲಿವೆ. ಇದಕ್ಕೆ ಕಾರಣವೇನೆಂದರೆ ಘರತ್ತಿಗೆ ಒಳಪಟ್ಟ ವ್ಯಕ್ತಿ ಈ ಷರತ್ತನ್ನು ಮುರಿಯುವ ಅಥವಾ ಬದಲಾಯಿಸಿಕೊಳ್ಳುವ ಸಾಧ್ಯತೆಯನ್ನು ಹೊಂದಿರುವುದು. ಓರ್ವ ವ್ಯಕ್ತಿ ತನ್ನ ಪ್ರೇಮಿಯ ಹೃದಯ ಗೆಲ್ಲಲು ತನ್ನದೇ ಆದ ಷರತ್ತುಗಳನ್ನೂ ಮಿತಿಗಳನ್ನೂ ಒಡ್ಡುತ್ತಾನೆ. ಆದರೆ ಇದು ಆ ಕ್ಷಣದಲ್ಲಿ ನಿರ್ವಹಿಸಬಹುದಾದ ಷರತ್ತು ಎಂದು ಕಂಡುಬಂದರೂ ಯಾವಾಗ ಇದು ನಿಭಾಯಿಸಲು ಸಾಧ್ಯವಿಲ್ಲ ಎಂದು ಅರಿವಾಗುತ್ತದೆಯೋ ಆಗ ಷರತ್ತಿಗೊಳಪಟ್ಟ ವ್ಯಕ್ತಿ ತಾನು ತನ್ನ ಪ್ರೇಮಿ ಹಾಕಿದ ಮಿತಿಗಳ ಬೇಲಿಯಲ್ಲಿ ಒಳಗಾಗಿರುವುದು ಕಂಡುಬರುತ್ತದೆ. ತನ್ನ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಈ ಬೇಲಿಯನ್ನು ಯಾರೂ ಇಷ್ಟಪಡುವುದಿಲ್ಲ. ಪರಿಣಾಮವಾಗಿ ಬೇಲಿಯನ್ನು ದಾಟಿ ಪ್ರೇಮಿಯನ್ನೇ ಧಿಕ್ಕರಿಸುವ ಮೂಲಕ ಪ್ರೇಮವಂಚನೆ ತಾಂಡವವಾಡುತ್ತದೆ. ಯಾವುದೇ ಸಂಬಂಧ ಯಶಸ್ವಿಯಾಗಬೇಕಾದರೆ ಯಾವುದೇ ಷರತ್ತುಗಳ ಬೇಲಿಯನ್ನು ಕಟ್ಟಬಾರದು, ಬದಲಿಗೆ ಇಬ್ಬರೂ ಸ್ವತಂತ್ರ ಹಕ್ಕಿಗಳಂತೆ ಮನಬಂದತ್ತ ಹಾರುವ ಮನೋಭಾವವನ್ನು, ಪರಸ್ಪರರ ಜೀವನದ ಗುರಿಯನ್ನು ಅರಿತು ಪ್ರೋತ್ಸಾಹಿಸುವ ಮೂಲಕ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬಹುದು.

ಪ್ರೇಮದಲ್ಲಿ ಭಾವನಾತ್ಮಕ ನಿರಾಕರಣೆ

ಕೆಲವೊಂದು ವಿಷಯಗಳು ಸಂಬಂಧದಲ್ಲಿರುವವರಿಗೆ ಅನಾನುಕೂಲಕರವಾಗಿರಬಹುದು. ಈ ವಿಷಯದಿಂದ ತನ್ನನ್ನು ತಾನೇ ಹೊರಗಿಡುವುದೂ ಒಂದು ಬಗೆಯ ವಂಚನೆಯೇ ಸರಿ. ಏಕೆಂದರೆ ಸಂಬಂಧಕ್ಕೆ ಒಳಪಡುವ ಇಬ್ಬರೂ ಪರಸ್ಪರರ ಕಷ್ಟ ಮತ್ತು ಸುಖಗಳಲ್ಲಿ ಸಮನಾಗಿ ಭಾಗಿಯಾಗಬೇಕು. 'ಸುಖಕ್ಕೆ ಮಾತ್ರ್ತನಾನಿದ್ದೇನೆ, ನಿನ್ನ ಕಷ್ಟದಲ್ಲಿ ನಾನಿಲ್ಲ' ಎಂಬ ಭಾವನೆ ವಾಸ್ತವವಾಗಿ ಪ್ರೇಮವಂಚನೆಯ ಪ್ರತೀಕವೇ ಆಗಿದೆ. ಹಾಗಾಗಿ ಇಬ್ಬರೂ ಪರಸ್ಪರರ ಕಷ್ಟಗಳಲ್ಲಿಯೂ ಸಮನಾಗಿ ಭಾಗಿಯಾಗಿ ಇವುಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಜೊತೆಯಾಗಿ ಕಾರ್ಯನಿರ್ವಹಿಸಬೇಕು. ವಾಸ್ತವದಲ್ಲಿ, ಸುಖಕ್ಕೆ ಆದ ಜೊತೆಗಿಂತಲೂ ಕಷ್ಟಕ್ಕೆ ಆದ ಜೊತೆಯೇ ಜೀವನಪರ್ಯಂತ ನೆನಪಿನಲ್ಲಿರುವಂತಹ ಕ್ಷಣಗಳಾಗಿವೆ. ಕಷ್ಟಕಾಲದಲ್ಲಿ ತನ್ನ ಪ್ರೇಮಿ ನೀಡುವ ಜೊತೆ ಯಾವುದೇ ವ್ಯಕ್ತಿಗೆ ಬಲುವಾದ ಶಕ್ತಿಯನ್ನು ತಂದುಕೊಡುತ್ತದೆ. 'ನಿನ್ನ ಸಹಕಾರ ಸಿಕ್ಕಿದ ಬಳಿಕ ನನಗೆ ಆನೆಯ ಬಲ ಬಂದಂತಾಗಿದೆ' ಎಂದು ಸಾಹಿತಿಗಳು ತಮ್ಮ ಕಾದಂಬರಿಗಳಲ್ಲಿ ಉಲ್ಲೇಖಿಸುವುದು ಇದೇ ಕಾರಣಕ್ಕೆ! ಯಾವುದೋ ಭಯದಿಂದ ನಿಮ್ಮ ಸಂಗಾತಿಯ ಕಷ್ಟದಲ್ಲಿ ಭಾಗಿಯಾಗಲು ಹಿಂದೇಟು ಹಾಕಿದರೆ, ಕಷ್ಟಕಾಲದಲ್ಲಿ ನಿಮ್ಮ ಪ್ರೇಮಿಯನ್ನು ನಡುನೀರಿನಲ್ಲಿ ಕೈಬಿಟ್ಟಂತಾಗುತ್ತದೆ. ಈ ನಡೆಯೂ ಪ್ರೇಮವಂಚನೆಯೇ ಹೌದು.

ಭಾವನಾತ್ಮಕವಾಗಿ ಸಂಗಾತಿಗೆ ಮೋಸ ಮಾಡುವುದು

ವಂಚನೆ ಕೇವಲ ದೈಹಿಕವಾದ ರೂಪದಲ್ಲಿಯೇ ಇರಬೇಕೆಂದಿಲ್ಲ, ಸಂಬಂಧದ ಹೊರಗಿನ ಮೂರನೆಯ ವ್ಯಕ್ತಿಯೊಂದಿಗೆ ಪ್ರೇಮಸಂಬಂಧವನ್ನು ಹೊಂದಿದ್ದರೆ ಮಾತ್ರವೇ ಇದನ್ನು ಪ್ರೇಮವಂಚನೆ ಎನ್ನಲಾಗುವುದಿಲ್ಲ. ನಿಮ್ಮ ಸಂಗಾತಿಯ ಹೊರತಾಗಿ ಮೂರನೆಯ ವ್ಯಕ್ತಿಯನ್ನು ಸ್ಪರ್ಷಿಸುವ ಅಥವಾ ಕನಿಷ್ಟ ಚುಂಬಿಸುವುದೂ ಅಗತ್ಯವಿಲ್ಲ. ಒಂದು ವೇಳೆ ಕೇವಲ ಭಾವನಾತ್ಮಕವಾಗಿಯೇ ಸರಿ ಮೂರನೆಯ ವ್ಯಕ್ತಿಯೊಂದಿಗಿನ ಒಡನಾಟವೂ ನಿಮ್ಮ ಸಂಗಾತಿಗೆ ಎಸಗುವ ಪ್ರೇಮವಂಚನೆಯ ಇನ್ನೊಂದು ರೂಪವಾಗಿದೆ. ಇನ್ನೊಬ್ಬ ವ್ಯಕ್ತಿಯ ಕುರಿತಾಗಿ ಪ್ರಬಲ ಭಾವನೆಗಳನ್ನು ಪ್ರಕಟಿಸುವುದು ಹಾಗೂ ಅವರ ಸರಳ ಅಗತ್ಯತೆಗಳಿಗೂ ಅಗತ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು ನಿಮ್ಮ ಸಂಗಾತಿ ನಿಮಗೆ ಪ್ರೇಮ ವಂಚನೆಯನ್ನು ಹೇರುತ್ತಿದ್ದಾರೆ ಎಂದೇ ಪರಿಗಣಿಸಲ್ಪಡುತ್ತದೆ.

ವ್ಯಕ್ತಿಯೊಬ್ಬರೊಂದಿಗೆ ಭಾವನಾತ್ಮಕ ಸಂಬಂಧವನ್ನು ಮುಂದುವರೆಸುವಾಗ ಇದರಲ್ಲಿ ಪ್ರತಿ ವ್ಯಕ್ತಿಗೂ ತನ್ನದೇ ಆದ ಪ್ರಲೋಭನೆಗಳಿಲ್ಲದೇ ಇರುವುದಿಲ್ಲ. ಜೀವನದ ಎಲ್ಲಾ ಹಂತಗಳಲ್ಲಿರುವಂತೆ ಪ್ರೇಮದಲ್ಲಿಯೂ ಕೆಲವು ಪ್ರಲೋಭನೆಗಳು ಇದ್ದೇ ಇರುತ್ತವೆ. ಆದರೆ ಸಂಬಂಧ ಗಟ್ಟಿಯಾಗಿರಬೇಕೆಂದರೆ ಈ ಪ್ರಲೋಭನೆಗಳಿಗೆ ಸುಲಭವಾಗಿ ಮನಸೋಲದ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯ. ಯಾವಾಗ ಈ ಪ್ರಲೋಭನೆಗಳು ನಿಮ್ಮನ್ನು ಸೋಲಿಸಲು ವಿಫಲಗೊಳ್ಳುತ್ತವೆಯೋ, ಆಗ ನೀವು ನಿಮ್ಮ ಸಂಗಾತಿಗೆ ಬದ್ದತೆಯನ್ನು ಜೀವನಪರ್ಯಂತ ಪ್ರಕಟಿಸಲು ಸಾಧ್ಯ. ಪ್ರಲೋಭನೆಗಳು ಯಾವಾಗಲೂ ಆಯ್ಕೆಯ ರೂಪದಲ್ಲಿಯೇ ಇರುತ್ತವೆ ಹಾಗೂ ಆ ಸಮಯದಲ್ಲಿ ಮನಸ್ಸನ್ನು ನಿಯಂತ್ರಿಸಿಕೊಂಡು ಈ ಪ್ರಲೋಭನೆಗೆ ಒಳಗಾಗದೇ ಇದ್ದರೆ ನೀವು ನಿಮ್ಮ ಸಂಬಂಧದಲ್ಲಿ ಜೀವಂತಪರ್ಯಂತ ಗಟ್ಟಿತನವನ್ನು ಪ್ರಕಟಿಸಬಹುದು.

ಒಂದು ವೇಳೆ ಮೇಲೆ ವಿವರಿಸಿದ ಮೂರು ಬಗೆಯ ವಂಚನೆಗಳಲ್ಲಿ ಕನಿಷ್ಟ ಒಂದು ಬಗೆಯ ವಂಚನೆಯನ್ನು ನಿಮ್ಮ ಸಂಗಾತಿಗೆ ಎಸಗಿದ್ದೇ ಆದಲ್ಲಿ ಇದು ಪ್ರೇಮಿಯ ಹೃದಯವನ್ನು ಒಡೆದು ಸಂಬಂಧವನ್ನು ನುಚ್ಚುನೂರಾಗಿಸಬಹುದು. ನೆನಪಿರಲಿ, ಪ್ರೇಮವೆಂಬ ಅಮೂಲ್ಯ ಉಡುಗೊರೆಯನ್ನು ಪಡೆಯಬೇಕಾದರೆ ಇದಕ್ಕೆ ಸಾಕಷ್ಟು ತ್ಯಾಗವನ್ನೂ ಮಾಡಬೇಕಾಗುತ್ತದೆ. ಈ ತ್ಯಾಗವನ್ನು ನೀವು ಮಾಡುತ್ತಿಲ್ಲವೆಂದರೆ ನಿಮ್ಮ ಸಂಗಾತಿಯನ್ನು ಸಂಬಂಧದ ಹೆಸರಿನಲ್ಲಿ ನೀವು ವಂಚಿಸುತ್ತಿದ್ದೀರಿ ಎಂದೇ ಅರ್ಥ! ಎಂದೂ ಸಂಗಾತಿಗೆ ನೀಡಿದ ವಚನ ಅಥವಾ ವಿಶ್ವಾಸವನ್ನು ಮುರಿಯದಿರಿ, ಏಕೆಂದರೆ ಇವು ಕನ್ನಡಿಯಿದ್ದಂತೆ, ಒಮ್ಮೆ ಒಡೆದರೆ ಮತ್ತೆ ಜೋಡಿಸಲು ಸಾಧ್ಯವಿಲ್ಲ! ಈ ಮೂಲಕ ಮುರಿದ ಸಂಬಂಧವೂ ಮತ್ತೆ ಮೊದಲಿನಂತಾಗಲು ಸಾಧ್ಯವಿಲ್ಲ.ಒಂದು ವೇಳೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

Betrayals In Loave And Broken Hearts Of Lovers

Betrayals in love and relationships are a damage to the heart of lovers. Having affairs in a relationship kills the charm. Betrayals in love have become very common in the present generation. Having an affair with someone out of your relationship can create a mess and a lot of stress. It is also not the only form of betrayal that you can have in your romance. There are more subtle acts of betrayal that bring a lot of stress to the picture. These other kinds of betrayals also carry the venom of ending the relationship and breaking the heart of the lovers. It's not a secret that relationships always require a lot of hard work.
X
Desktop Bottom Promotion