For Quick Alerts
ALLOW NOTIFICATIONS  
For Daily Alerts

ಸಂಗಾತಿ ದೂರದಲ್ಲಿದ್ದರೂ ಪ್ರೀತಿಯ ಬಾಂಧವ್ಯ ವೃದ್ಧಿಗೆ ಹೀಗೆ ಮಾಡಿ..

|

ನಿಮ್ಮ ಪ್ರೀತಿಯ ಸಂಗಾತಿ ಯಾವುದೋ ದೂರದ ಊರಿನಲ್ಲಿ ಅಥವಾ ವಿದೇಶದಲ್ಲಿ ವಾಸಿಸುತ್ತಿದ್ದರೆ ಸಂಗಾತಿಯನ್ನು 'ಮಿಸ್' ಮಾಡಿಕೊಳ್ಳುತ್ತಿರುವ ಭಾವನೆ ಕಾಡಿಸುವುದು ಸಹಜ. ಸಂಗಾತಿ ದೂರದ ಊರಲ್ಲಿದ್ದರೂ ಅನೇಕ ವಿಧಾನಗಳ ಮೂಲಕ ಪ್ರೀತಿ, ಬೆಸುಗೆ ಬಾಡದಂತೆ ಮತ್ತಷ್ಟು ಬೆಳೆಸಿಕೊಳ್ಳಲು ಸಾಧ್ಯವಿದೆ.

ಸಂಗಾತಿಯ ಜೊತೆಗಿದ್ದಾಗ ಪರಸ್ಪರ ಇಷ್ಟಗಳನ್ನು ತಿಳಿದುಕೊಂಡು ಪ್ರೀತಿ ಹಾಗೂ ಆತ್ಮೀಯತೆಯನ್ನು ಬೆಳೆಸಿಕೊಳ್ಳುವುದು ಸುಲಭ. ಆದರೂ ಕೆಲವೊಮ್ಮೆ ಹತ್ತಿರದಲ್ಲಿರುವಾಗ ಸಹ ಸಂಬಂಧಗಳನ್ನು ಉಳಿಸಿಕೊಳ್ಳಲು ಶ್ರಮ ಪಡಬೇಕಾಗುತ್ತದೆ. ಇನ್ನು ಅಂಥದ್ದರಲ್ಲಿ ಸಂಗಾತಿಗಳಿಬ್ಬರೂ ದೂರದಲ್ಲಿದ್ದರೆ ಸಂಬಂಧದಲ್ಲಿನ ಮಾಧುರ್ಯತೆಯನ್ನು ಉಳಿಸಿ, ಬೆಳೆಸಿಕೊಳ್ಳುವುದು ಕೆಲವೊಮ್ಮೆ ಸವಾಲಾಗಿ ಕಾಡುತ್ತದೆ.

ಪ್ರಣಯ ಹಕ್ಕಿಗಳು ಯಾವತ್ತೂ ದೂರದಲ್ಲಿರಲು ಇಷ್ಟಪಡುವುದಿಲ್ಲ. ಆದರೂ ಕೆಲವೊಮ್ಮೆ ವೃತ್ತಿ ಅಥವಾ ಇನ್ನಾವುದೋ ಕಾರಣಕ್ಕೆ ದೀರ್ಘಾವಧಿಯವರೆಗೆ ದೂರವಾಗಿರುವುದು ಅನಿವಾರ್ಯವಾಗುತ್ತದೆ. ಹೀಗಾದಾಗ ಪ್ರೀತಿಯನ್ನು ಹಂಚಿಕೊಳ್ಳಲಾಗದೆ ಸಂಗಾತಿಗಳಿಬ್ಬರೂ ಪರಿತಪಿಸುವಂತಾಗುತ್ತದೆ. ಆದರೂ ಸಂಗಾತಿಗಳು ದೂರವಾಗಿದ್ದಾಗ ಅದಕ್ಕೆ ಅದರದೇ ಆದ ಸುಖಾನುಭೂತಿ ಇದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೆ..! ಹೌದು. ಸಾವಿರಾರು ಮೈಲಿಗಳಷ್ಟು ದೂರದಲ್ಲಿದ್ದರೂ ಗಾಢವಾದ ಪ್ರೀತಿಯ ಭಾವನೆಯಿಂದ ಬೆಸೆದಿರುವುದು ಇಂಥ ದೂರದ ಸಂಬಂಧದಲ್ಲಿರುವ ವೈಶಿಷ್ಟ್ಯತೆಯಾಗಿದೆ.

Long Distance Couples

ಈ ದೂರದ ಸಂಬಂಧಗಳು ಅನೇಕ ಬಾರಿ ಪ್ರೀತಿಯ ಅಗೋಚರ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುತ್ತವೆ. ಇದೆಲ್ಲ ಕಷ್ಟಕರವಾಗಿದ್ದರೂ ದೂರದ ಪ್ರೀತಿಯನ್ನು ಉಳಿಸಿಕೊಳ್ಳುವುದು ಒಂದು ಕಲೆ. ಒಬ್ಬರಿಂದೊಬ್ಬರು ದೂರವಿದ್ದು, ಒಂದು ಅಪ್ಪುಗೆಗಾಗಿ ಪರಿತಪಿಸುವುದು, ವಿರಹ ವೇದನೆಯನ್ನು ಅನುಭವಿಸುವುದು ಯಾರಿಗೂ ಬೇಡದ ಸಂಗತಿ. ಆದರೆ ಇಬ್ಬರೂ ಮಿಲನವಾಗುವ ಘಳಿಗೆಗೆ ದಿನಗಟ್ಟಲೆ ಕಾಯ್ದು ಬಿಸಿಯಪ್ಪುಗೆ ಅನುಭವಿಸುವ ಸುಖವೇ ಬೇರೆ. ಸಂಗಾತಿಗಳಿಬ್ಬರೂ ದೂರದಲ್ಲಿರುವಾಗ ಪ್ರೀತಿಯ ಜ್ವಾಲೆ ಆರದಂತೆ ನೋಡಿಕೊಳ್ಳಲು ಕೆಲ ಮಾರ್ಗಗಳಿವೆ. ಈ ವಿಧಾನಗಳನ್ನು ಅನುಸರಿಸಿದರೆ ವಿರಹದ ನೋವು ಮರೆತು ಪ್ರೀತಿಯ ಭಾವನೆಗಳನ್ನು ಮತ್ತಷ್ಟು ಬೆಳೆಸಿ ಸಂಬಂಧವನ್ನು ಸುಮಧುರವಾಗಿಸಬಹುದು. ಆ ವಿಧಾನಗಳು ಯಾವುವು ಎಂಬುದನ್ನು ನೋಡೋಣ..

ಆನ್ ಲೈನ್‌ನಲ್ಲಿ ಮಲ್ಟಿಪ್ಲೇಯರ್ ಗೇಮ್ ಆನಂದಿಸಿ

ಆನ್ ಲೈನ್‌ನಲ್ಲಿ ಹಲವಾರು ಮಲ್ಟಿಪ್ಲೇಯರ್ ಗೇಮ್‌ಗಳು ಲಭ್ಯವಿವೆ. ಇವು ದೂರದಲ್ಲಿ ಕುಳಿತ ಇಬ್ಬರನ್ನು ಮೋಜಿನ ಆಟದ ಮೂಲಕ ಬೆಸೆಯಬಲ್ಲವು. ಹೀಗಾಗಿ ಸಂಗಾತಿಗಳಿಬ್ಬರೂ ಬಿಡುವಿನ ವೇಳೆಯಲ್ಲಿ ಆನ್ ಲೈನ್ ಗೇಮಿಂಗ್ ಜಗತ್ತಿಗೆ ಪ್ರವೇಶಿಸಿದರೆ ಸಾಕು. ಇಷ್ಟವಾಗುವ ಮಲ್ಟಿ ಪ್ಲೇಯರ್ ಗೇಮ್‌ಗಳನ್ನು ಆಡುತ್ತ ಮಜಾ ಮಾಡಬಹುದು. ಚೆಸ್, ಪೋಕರ್, ಕಾರ್ ರೇಸಿಂಗ್, ಆರ್ಕೇಡ್ ಗೇಮ್ಸ್ ಹೀಗೆ ಹಲವಾರು ರೀತಿಯ ಗೇಮಿಂಗ್ ಆಪ್‌ಗಳನ್ನು ಮೊಬೈಲ್‌ಗೆ ಡೌನಲೋಡ್ ಮಾಡಿಕೊಂಡು ಇಬ್ಬರೂ ಖುಷಿಯಾಗಿ ಆಟವಾಡುತ್ತ ಕಾಲ ಕಳೆಯಬಹುದು.

ಸಂಗೀತ ಕೇಳಿ

ಈಗಿನ ಆನ್ ಲೈನ್ ಜಗತ್ತಿನಲ್ಲಿ ನಮ್ಮ ಇಷ್ಟದ ಹಾಡುಗಳ ಲೈಬ್ರರಿಯನ್ನು ಶೇರ್ ಮಾಡುವ ಅನುಕೂಲವಿದೆ. ನೀವಿಬ್ಬರೂ ನಿಮ್ಮ ಮ್ಯೂಸಿಕ್ ಲೈಬ್ರರಿಗಳನ್ನು ಪರಸ್ಪರ ಶೇರ್ ಮಾಡಿಕೊಂಡು ಇಬ್ಬರಿಗೂ ಇಷ್ಟವಾದ ಸಂಗೀತವನ್ನು ಆಲಿಸಬಹುದು. ಜೊತೆಗೆ ನಿರ್ದಿಷ್ಟ ರೇಡಿಯೋ ಸ್ಟೇಷನ್‌ಗೆ ಟ್ಯೂನ್ ಮಾಡಿಕೊಂಡು ಇಬ್ಬರೂ ಒಂದೇ ಸಮಯಕ್ಕೆ ರೇಡಿಯೊದಲ್ಲಿನ ಸಂಗೀತವನ್ನು ಕೇಳಬಹುದು. ಸಂಗಾತಿ ಜೊತೆಗಿದ್ದಾಗ ಮಾಡಬಹುದಾದ ಚಟುವಟಿಕೆಗಳಿಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ. ಇನ್ನು ನಿಮ್ಮ ಸಂಗಾತಿಗೆ ಇಷ್ಟವಾಗಿರುವ ಹಾಡುಗಳ ಮಿಕ್ಸ್ ತಯಾರಿಸಿ ಅದನ್ನು ಮೇಲ್ ಮಾಡಬಹುದು.

ಒಗಟು ತಯಾರಿಸಿ ಹಂಚಿಕೊಳ್ಳಿ

ನೀವು ಹಾಗೂ ನಿಮ್ಮ ಸಂಗಾತಿ ಕ್ರಿಯಾಶೀಲ ಮನೋಭಾವದವರಾಗಿದ್ದರೆ ಒಗಟು ಅಥವಾ ಪದಬಂಧ ತಯಾರಿಸಿ ಹಂಚಿಕೊಳ್ಳಬಹುದು. ಪ್ರಶ್ನೆಗಳನ್ನು ಹೊಂದಿರುವ ಒಗಟುಗಳನ್ನು ತಯಾರಿಸಿ ಸಂಗಾತಿಯೊಂದಿಗೆ ಮೇಲ್ ಮೂಲಕ ಹಂಚಿಕೊಳ್ಳಬಹುದು. ಇವು ವಾಸ್ತವ ಜೀವನ ಅಥವಾ ಕಾಲ್ಪನಿಕವಾಗಿರಬಹುದು. ಇವುಗಳಿಗೆ ಪರಸ್ಪರರು ಉತ್ತರಗಳನ್ನು ನೀಡುವ ಮೂಲಕ ಭಾವನೆಗಳಿಗೆ ಜೀವ ತುಂಬುವ ಕೆಲಸ ಮಾಡಬಹುದು. ಸುಲಭವಾಗಿ ಅರ್ಥವಾಗದ ಒಗಟುಗಳಿದ್ದಷ್ಟೂ ಪರಸ್ಪರರನ್ನು ತಿಳಿದುಕೊಳ್ಳುವ ಹಾಗೂ ಸಂವಹನ ಪ್ರಕ್ರಿಯೆ ಉತ್ತಮವಾಗುತ್ತದೆ. ದೂರದಲ್ಲಿರುವ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಇದು ಸಹಕಾರಿಯಾಗಿದೆ.

ಸುಂದರ ಕ್ಷಣಚಿತ್ರಗಳನ್ನು ಹಂಚಿಕೊಳ್ಳಿ

ನೀವಿಬ್ಬರೂ ಫೋಟೊ ಪ್ರಿಯರಾಗಿದ್ದರೆ ತಿಂಗಳಿಗೊಮ್ಮೆ ಅಥವಾ ಆಗಾಗ ಪರಸ್ಪರರ ಹೊಸ ಫೋಟೊಗಳನ್ನು ಹಂಚಿಕೊಳ್ಳಿ. ಫೋಟೊಗಳು ಪರಸ್ಪರರಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುತ್ತವೆ ಹಾಗೂ ಸಂಬಂಧವನ್ನು ಸ್ಮರಣೀಯವಾಗಿಸುತ್ತವೆ. ಪ್ರೀತಿಯ ಸಂಗಾತಿ ದೂರದಲ್ಲಿ ಇದ್ದಾಗ ನೆನಪುಗಳು ಎಲ್ಲಿಲ್ಲದ ಮಹತ್ವ ಪಡೆದುಕೊಳ್ಳುತ್ತವೆ. ಹೀಗಾಗಿ ಚಿತ್ರಗಳ ಮೂಲಕ ಪ್ರೀತಿಯ ಸಂಬಂಧವನ್ನು ಬೆಸೆಯಿರಿ.

ಮಾಡಬೇಕೆಂದಿರುವ ಕೆಲಸಗಳ ಪಟ್ಟಿ ಮಾಡಿ

ಇಬ್ಬರೂ ಸೇರಿ ಮಾಡಬೇಕೆಂದುಕೊಂಡಿರುವ ಕೆಲಸಗಳ ಪಟ್ಟಿ ತಯಾರಿಸಿಕೊಳ್ಳಿ. ಎಷ್ಟೋ ಸಲ ಹಾಗೆ ಮಾಡೋಣ, ಹೀಗೆ ಮಾಡೋಣ ಎಂದೆಲ್ಲ ಮಾತಾಡಿರುತ್ತೀರಿ. ಈಗ ಅವುಗಳದೇ ಒಂದು ಲಿಸ್ಟ್ ತಯಾರಾಗಲಿ. ಮುಂದಿನ ಸಲ ಭೇಟಿ ಆದಾಗ ಇದರಿಂದ ಒಂದೊಂದನ್ನೇ ಚೆಕ್ ಮಾಡಿ ಯಾವುದು ಪ್ರಮುಖವಾಗಿದೆಯೋ ಅದನ್ನು ಮಾಡಬಹುದು.
ಇಬ್ಬರೂ ಪ್ರತ್ಯೇಕವಾಗಿಯೂ ಲಿಸ್ಟ್ ಮಾಡಬಹುದು. ನಿಮ್ಮ ಲಿಸ್ಟ್ ಅನ್ನು ಸಂಗಾತಿ ಹಾಗೂ ಸಂಗಾತಿಯ ಲಿಸ್ಟ್ ಅನ್ನು ನೀವು ಸಹ ಮಾಡಬಹುದು. ಮುಂದಿನ ಭೇಟಿಯ ಮೊದಲು ಇದನ್ನು ಅಂತಿಮಗೊಳಿಸಬಹುದು. ಲಿಸ್ಟ್‌ಗಳನ್ನು ಹಂಚಿಕೊಂಡು ಎರಡರಲ್ಲೂ ಸಾಮಾನ್ಯವಾಗಿರುವ ಅಂಶಗಳನ್ನು ಪರಿಗಣಿಸಬಹುದು.

ವಿಡಿಯೋ ಚಾಟ್ ಮಾಡಿ

ವಿಡಿಯೊ ಚಾಟ್ ಮಾಡುವುದು ಸಾಮಾನ್ಯವಾಗಿದ್ದರೂ ಅದನ್ನೇ ಸ್ವಲ್ಪ ವಿಭಿನ್ನವಾಗಿ ಮಾಡಿ. ಬೇರೆ ಯಾವುದೋ ಪ್ರಸಿದ್ಧ ನಟ ದಂಪತಿಗಳ ಮಿಮಿಕ್ರಿ ಮಾಡುವ ಮೂಲಕ ತಮಾಷೆಯ ಸಮಯ ಕಳೆಯಬಹುದು. ಇಂಥ ಚಿಕ್ಕ ವಿಡಿಯೋ ಚಾಟ್‌ಗಳು ಸಹ ದೂರದ ಸಂಬಂಧಗಳನ್ನು ಮತ್ತಷು ಹತ್ತಿರವಾಗಿಸುತ್ತವೆ.

ಜೊತೆಯಾಗಿ ಒಂದೊಳ್ಳೆ ಪುಸ್ತಕ ಓದಿ

ಜೊತೆಯಾಗಿ ಒಂದೊಳ್ಳೆ ಪುಸ್ತಕ ಓದುವುದು ದೂರದ ಸಂಬಂಧವನ್ನು ಹತ್ತಿರ ತರಲು ಸಹಾಯಕವಾಗುತ್ತದೆ. ನಿಮ್ಮಿಬ್ಬರಿಗೂ ಇಷ್ಟವಾದ ಗ್ರಂಥವೊಂದನ್ನು ಆಯ್ಕೆ ಮಾಡಿಕೊಳ್ಳಿ. ಪ್ರತಿದಿನ ಅದರಲ್ಲಿನ ಒಂದು ಭಾಗವನ್ನು ಇಬ್ಬರೂ ಓದಿ ರಾತ್ರಿ ಅದರ ಬಗ್ಗೆ ಫೋನ್ ಮೂಲಕ ಚರ್ಚಿಸಿ. ಇದು ನಿಮ್ಮಿಬ್ಬರ ಸಾಂಗತ್ಯವನ್ನು ಬೆಸೆಯುವುದರೊಂದಿಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಕೂಡ ಸಹಾಯ ಮಾಡುತ್ತದೆ.

ಸಂಗಾತಿಗಾಗಿ ಕವನ ಬರೆಯಿರಿ

ನೀವಿಬ್ಬರೂ ಕತೆ, ಕವನ ಇಷ್ಟಪಡುವವರಾಗಿದ್ದರೆ ಕವನಗಳನ್ನು ಬರೆದು ಅವುಗಳ ಮೂಲಕ ಪ್ರೀತಿಯನ್ನು ಹಂಚಿಕೊಳ್ಳಬಹುದು. ಪ್ರೀತಿಯ ಉತ್ಕಟ ಭಾವನೆಗಳನ್ನು ವ್ಯಕ್ತಪಡಿಸಲು ಕವನ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದೆ. ಸಂಗಾತಿಯ ಕುರಿತು ಕವನ ರಚಿಸಿ ಅವುಗಳನ್ನು ಹಂಚಿಕೊಳ್ಳಿ. ಇವು ಸದಾಕಾಲ ಸುಮಧುರ ನೆನಪುಗಳಾಗಿ ಉಳಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಸಂಗಾತಿಗಳು ದೂರದಲ್ಲಿರುವುದು ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯವಾಗುತ್ತಿದೆ. ಆದರೆ ಈಗಿನ ಇಂಟರ್‌ನೆಟ್ ಯುಗದಲ್ಲಿ ದೂರದಲ್ಲಿದ್ದರೂ ಭಾವನಾತ್ಮಕವಾಗಿ ಹತ್ತಿರವಾಗಿರುವಂತೆ ನೋಡಿಕೊಳ್ಳುವುದು ಸುಲಭವಾಗಿದೆ. ನೀವೂ ಒಂದು ವೇಳೆ ದೂರದ ಸಂಗಾತಿಗಳಾಗಿದ್ದಲ್ಲಿ ಮೇಲೆ ತಿಳಿಸಿದ ೮ ಪ್ರಮುಖ ವಿಧಾನಗಳನ್ನು ಟ್ರೈ ಮಾಡಿ ನೋಡಿ.

English summary

Activities For Long Distance Couples

Long Distance Relationship; Activites To Keep Up The Love ConnectionMissing your partner today? Well, you can start doing activities with them even if you and your partner are in a long distance relationship. We usually work hard for our relationships to get better every day but when we are in a long distance relationship the 'working hard' part gets harder and we double it or more to keep up the love and the happiness in the relationship.
Story first published: Saturday, August 11, 2018, 17:01 [IST]
X
Desktop Bottom Promotion