For Quick Alerts
ALLOW NOTIFICATIONS  
For Daily Alerts

ನಾನೇ ನಿನ್ನ ವ್ಯಾಲೆಂಟೈನ್‌ ಫಾರ್‌ಎವರ್...

|

ನಿನ್ನ ಪ್ರೇಮಿ ಎಂದೆಂದಿಗೂ...

ಫೆಬ್ರವರಿ ತಿಂಗಳು ಬಂತೆಂದರೆ ಅದೆಂಥಾ ಸಂಭ್ರಮವಿತ್ತಲ್ಲಾ ಕಾರ್ತಿಕ್.... ನೀನು ಕೊಡುವ ಸ್ಪೆಷಲ್ ಗಿಫ್ಟ್‌ಗಾಗಿ ನಾನು ಕಾಯುತ್ತಿದ್ದರೆ, ನಿನಗೆ ನಾನೇನು ಕೊಡಲಿ ಎಂದು ತಲೆಕೆಡಿಸಿಕೊಳ್ಳುತ್ತಿದ್ದೆ...

ವ್ಯಾಲೆಂಟೈನ್‌ ಡೇಯಂದು ಬರುವ ನಿನ್ನ ಮೊದಲ ಕರೆ, ಅದೇ ಮೊದಲು ಎಂಬಂತೆ ಪ್ರಪೋಸ್ ಮಾಡುವ ರೀತಿ....ಅದ್ಹೇಗೆ ಒಮ್ಮೆ ಪ್ರಪೋಸ್‌ ಮಾಡಿದ ಮೇಲೆ ಮತ್ತೆ-ಮತ್ತೆ ಪ್ರಪೋಸ್ ಮಾಡ್ತೀಯಾ ಅಂದಾಗ ನನ್ನ ವ್ಯಾಲೆಂಟೈನ್ ಪ್ರತೀ ಬಾರಿ ನನಗೆ ಸ್ಪೆಷಲ್ ಆಗಿಯೇ ಕಾಣಿಸುತ್ತಾಳೆ ಎಂದು ಅಂದಿದ್ದೆ ಅಲ್ವಾ?

ಅದ್ಯಾಕೆ ಕಾರ್ತಿಕ್ ನನ್ನನ್ನು ಅಷ್ಟೊಂದು ಇಷ್ಟಪಟ್ಟೆ? ಅಷ್ಟೆಲ್ಲಾ ಚೆಂದುಳ್ಳಿ ಚೆಲುವೆಯರು ನಿನ್ನ ಸುತ್ತಾಮುತ್ತ ಒಡಾಡುತ್ತಿದ್ದರೂ, ಅವರು ನಿನ್ನ ಒಂದು ಕುಡಿ ನೋಟಕ್ಕೆ ತುದಿಗಾಲಿನಲ್ಲಿ ನಿಂತಿದ್ದರೂ ಸಾಧಾರಣ ರೂಪಿನ ನಾನು ನಿನ್ನನ್ನು ಹೇಗೆ ತಾನೆ ಮರಳು ಮಾಡಿದೆ? ಇದನ್ನು ಕೇಳುವಾಗೆಲ್ಲಾ ನಿನ್ನ ಸುಂದರ ನಗುಚೆಲ್ಲಿ ನನ್ನ ತಲೆ ನೇವರಿಸುತ್ತಿದ್ದೆ ಅಲ್ವಾ? ಆ ಕ್ಷಣ ಮಗುವಾಗಿ ಬಿಡುತ್ತಿದ್ದೆ. ನಿನ್ನ ಹಾಗೇ ಬಿಗಿದಪ್ಪಿ ಹಿಡಿದಾಗ ಗಡಿಯಾರದ ಮುಳ್ಳು ಚಲಿಸಲೇಬಾರದು ಎಂದು ಬಯಸಿದ್ದೆ, ಆದರೆ....

ಕಾರ್ತಿಕ್ ಈ ವ್ಯಾಲೆಂಟೈನ್ ಮನಸ್ಸಿಗೆ ತುಂಬಾ ಭಾರವಾಗುತ್ತಿದೆ.... ಈ ಬಾರಿ ನಿನಗೇನು ಗಿಫ್ಟ್ ನೀಡಲಿ, ಈ ಉಸಿರನ್ನು ನಿಲ್ಲಿಸಿ ನಿನ್ನ ಜೊತೆ ಸೇರಿ ಬಿಡಲೇ... ಹಾಗೆ ಮಾಡಲು ನಿನಗೆ ಕೊಟ್ಟ ಮಾತು ನನ್ನ ತಡೆಯುತ್ತಿದೆ. ನೀನಂದು ತೊಟ್ಟ ಶರ್ಟ್‌ನ ನನ್ನ ಮೈಗೆ ಬಿಗಿದಪ್ಪಿ, ಈ ಶರ್ಟ್ ನೀನಾಗಬಾರದೇ ಎಂದು ಆಶಿಸುತ್ತಿದ್ದೇನೆ. ಪ್ರೇಮಿಗಳಿಗೆ ಈ ಜಗತ್ತಿನಲ್ಲಿ ಶತ್ರುಗಳ ಜಾಸ್ತಿಯಂತೆ, ಅದೇನೋ ನನಗೆ ಗೊತ್ತಿಲ್ಲ. ಆದರೆ ನಮ್ಮಿಬ್ಬರ ಪಾಲಿಗೆ ಆ ದೇವರೇ ಕ್ರೂರಿಯಾದನಲ್ಲಾ....ಇಲ್ಲಾ ನೀನು ನನ್ನ ಪ್ರೀತಿಸುವ ಪರಿ ನೋಡಿ, ಆತನಿಗೂ ನಿನ್ನ ಮೇಲೆ ಪ್ರೀತಿ ಹುಟ್ಟಿತೇ?

ಕಾರ್ತಿಕ್.. ಅಂದು ನಿನಗೆ ತುಂಬಾ ಸರ್‌ಫ್ರೈಸ್‌ ಕೊಡಬೇಕೆಂದಿದ್ದೆ, ಆದರೆ ನೀನು ಕೊಟ್ಟ ಸರ್‌ಫ್ರೈಸ್‌ ತಡೆಯೋಕೆ ಆಗ್ತಾ ಇಲ್ಲ... ನಮ್ಮಿಬ್ಬರ ಪ್ರೀತಿಗೆ ಏನೇ ಅಡ್ಡಬರಲಿ ನಾನು-ನೀನು ಒಂದಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದೆ ಅಲ್ವಾ? ನಾನೂ ಅಷ್ಟೇ ನಮ್ಮಿಬ್ಬರ ಪ್ರೀತಿಗೆ ಮನೆಯವರು ಅಡ್ಡ ಬರಬಹುದೆಂದು ಯೋಚಿಸಿದೆ. ಆದರೆ ನಾನೂ ಊಹಿಸಿರಲೇ ಇಲ್ಲ, ಅವರು ನಮ್ಮ ಪ್ರೀತಿಗೆ ಗ್ನೀನ್ ಸಿಗ್ನಲ್ ತೋರಿಸಿದ್ದರು.

ನಿನ್ನ ಮನೆಯಲ್ಲಿ ನಮ್ಮ ಪ್ರೀತಿ ಮೊದಲೇ ತಿಳಿದಿದ್ದರಿಂದ ನಮ್ಮ ಪ್ರೀತಿಗೆ ಇನ್ನೇನೂ ಅಡ್ಡವಿಲ್ಲ ಎಂದೇ ಯೋಚಿಸಿದ್ದೆ. ಮನೆಯವರು ನೀಡಿದ ಒಪ್ಪಿಗೆಯನ್ನು ಪ್ರೇಮಿಗಳ ದಿನದಂದೇ ಸರ್‌ಫ್ರೈಸ್‌ ಆಗಿ ತಿಳಿಸಲು ಪ್ಲಾನ್ ಮಾಡಿದ್ದೆ. ನಾನದನ್ನು ಹೇಳುವಾಗ ನಿನ್ನ ಕಣ್ಣುಗಳನ್ನು ಅರಳುವ ಸಂತೋಷವನ್ನು ನನ್ನ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು ಎಂದೆಲ್ಲಾ ಬಯಸಿದ್ದೆ. ಆದರೆ ನೀನು ಹಾಗೇ ಮೆಲ್ಲ ಮೆಲ್ಲನೆ ಕಣ್ಮುಚ್ಚಿಬಿಟ್ಟೆಯೆಲ್ಲಾ... ನಮ್ಮಿಬ್ಬರ ಬೇರೆ ಮಾಡಲೂ ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದ ನಿನಗೆ ನನ್ನ ಒಂಟಿಯಾಗಿ ಬಿಟ್ಟು ಹೋಗಲು ಹೇಗೆ ತಾನೆ ಸಾಧ್ಯವಾಯಿತು.

ಫೆ. 13 ನೈಟ್ ಕಾಲ್‌ ಮಾಡಿ ನನ್ನ ವ್ಯಾಲೆಂಟೈನ್‌ಗೆ Happy valentine forever ಅಂದಿದ್ದೆ ಅಲ್ವಾ? ಹೌದು ಕಾರ್ತಿಕ್‌ ಅದೇ ನನ್ನ ಫಾರ್‌ಎವರ್‌ ವ್ಯಾಲೆಂಟೈನ್ ಆಗಿ ಬಿಡ್ತು. ನನ್ನ ನೋಡಲು ಬುಲೆಟ್ ಏರಿ ಬರುತ್ತಿದ್ದ ನಿನ್ನ ನೋಡಿ ಆ ಜವರಾಯನಿಗೆ ಹೊಟ್ಟೆಕಿಚ್ಚು ಆಯ್ತೋ... ಕಾರ್ತಿಕ್‌ ನಿನ್ನ ಬರುವಿಗಾಗಿ ಕಾಯುತ್ತಿದ್ದ ನನಗೆ ಒಂದು ಕರೆ ಬಂತು, ನೀನು ಆಸ್ಪತ್ರೆಯಲ್ಲಿ ಇದ್ದೀಯ ಅಂದ್ರು... ನನಗೆ ಏನು ಕೇಳಿಸಿಕೊಳ್ಳುತ್ತಿದ್ದೇನೆ, ಏನು ಮಾಡಬೇಕು ಎಂದು ಒಂದೂ ಅರ್ಥವಾಗಲಿಲ್ಲ, ಓಡೋಡಿ ಬಂದಾಗ ನೀನು ಆಸ್ಪತ್ರೆಯ ಬೆಡ್‌ನಲ್ಲಿದೆ. ನಿನ್ನ ಕಣ್ಣುಗಳು ನನ್ನನ್ನೇ ನೋಡ್ತಾ ಇದ್ವು... ಆ ಕಣ್ಣುಗಳು ಹಾಗೇ ಮುಚ್ತಾ ಹೋದ್ವು...

ಕಾರ್ತಿಕ್ ನೀನೆಲ್ಲಾ ಅನ್ನುವುದಕ್ಕಿಂತ ನೀನು ನನ್ನ ಉಸಿರು ಇರುವವರಿಗೆ ಇರ್ತೀಯಾ ಎನ್ನುವುದೇ ಸರಿ...ಹೇ.. ತುಂಟ ನಗುವಿನ ಮುದ್ದು ಮುಖದ ನನ್ನ ಹುಡುಗ... ಹ್ಯಾಪಿ ನೀನೇ ನನ್ನ ವ್ಯಾಲೆಂಟೈನ್ forever...

English summary

love story You are my valentine forever

Here is heart touching love story for valentine day...read on
X