For Quick Alerts
ALLOW NOTIFICATIONS  
For Daily Alerts

ಬದುಕಿನ ಪಯಣ ನಿರ್ಧರಿಸಿದ ಬಸ್‌ ಪ್ರಯಾಣ

|

ಇಲ್ಲಿ ನಮ್ಮ ಓದುಗರಾದ ಪೂರ್ಣಿಮಾ ಹೆಗಡೆ ಅವರ ಸುಂದರ ಪ್ರೇಮ ಕತೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್...

ಪ್ರೀತಿ ಅನ್ನೋದೇ ಹಾಗೆ ಅದು ಎಲ್ಲರನ್ನೂ ಕೈಬೀಸಿ ಕರೆಯತ್ತೆ, ಆದ್ರೆ ಎಲ್ಲರ ತೆಕ್ಕೆಗೆ ಸುಲಭವಾಗಿ ಸಿಗುವಂಥದ್ದಲ್ಲ. ಪ್ರೀತಿ ಅನ್ನೋದು ಸುಲಭವಾಗಿ ಹಂಚೋವಂಥದ್ದಾದ್ರೂ ಅದು ಕೈಗೆಟುಕದ ನಕ್ಷತ್ರ ಅನ್ನೋದೂ ಸುಳ್ಳಲ್ಲ. ಇಷ್ಟಾಗಿ ಈ ವಿವರಣೆಗೆ ನಿಲುಕದ ಪ್ರೀತಿಯ ಬಲೆಯಲ್ಲಿ ಬೀಳದೇ ಇರೋರು ಯಾರು ಹೇಳಿ?

Valentines Day

ನಿಮ್ಮ ಅಜ್ಜ ಅಜ್ಜಿಯನ್ನೊಮ್ಮೆ ಕೇಳಿ, ಅವರಲ್ಲೋ ಒಂದು ಪ್ರೀತಿ ಕಹಾನಿ ಇದ್ದೇ ಇರತ್ತೇ! ಅಂದಹಾಗೇ ನಾನಂತೂ ನನ್ನ ಮೊಮ್ಮಕ್ಕಳಿಗೆ ನನ್ನ ಪ್ರೀತಿ ಕಹಾನಿ ಹೇಳೋದಕ್ಕೆ ಕಾಯ್ತಾ ಇದ್ದೇನೆ.. ಅದಕ್ಕೂ ಮೊದಲು ನಿಮ್ಮ ಕಿವಿಗೂ ಒಮ್ಮೆ ಹಾಕಿ ಬಿಡ್ತೇನೆ ಕೇಳಿ!

ನನ್ನ ಪ್ರೀತಿಯ ಜರ್ನಿ ಹೀಗೆ ಶುರುವಾಯ್ತು!

ರೌಡಿ ಹುಡುಗಿಗೆ ಪ್ರೀತಿ ಮೂಡಿತು

ರೌಡಿ ಹುಡುಗಿಗೆ ಪ್ರೀತಿ ಮೂಡಿತು

ಕಾಲೇಜಿನಲ್ಲಿ ಒಂದಿಷ್ಟು ರೌಡಿಸಂ ತೋರಿಸ್ಕೊಂಡು ಹುಡುಗರ ಕಾಲೆಳ್ಕೊಂಡು, ಹುಡುಗಿಯರನ್ನ ಚುಡಾಯಿಸೋ ಹುಡುಗರನ್ನ ಪ್ರಿನ್ಸಿಪಾಲರವರೆಗೂ ಕರ್ಕೊಂಡು ಹೋಗಿ ಉಗಿಸಿರೋ ದೊಡ್ದ ಇತಿಹಾಸ ನಂದು!

ನಿಜವಾಗಿ ಪ್ರೀತಿ ಮಾಡೋರಿಗೆ ಬೆಂಬಲವಾಗಿ ನಿಂತು, ಸರಿಯಾಗಿಲ್ಲದಿದ್ದರೆ ವಿರೋಧಿಸಿ ನಮ್ಮ ವಿರೋಧ ಪಕ್ಷವನ್ನೂ ಕಟ್ಟಿದ್ದೆ ಕಾಲೇಜಿನಲ್ಲಿ. ಆಗ ಬೇರೆಯವರ ಮನೆ ಕಥೆಯೇ ಮುಖ್ಯವಾಗಿತ್ತೇ ಹೊರತು ನನಗ್ಯಾವತ್ತೂ ಪ್ರೀತಿಯಲ್ಲಿ ಬೀಳೋ ಖಾಯಿಲೆ ಅಂಟುಕೊಂಡಿರಲಿಲ್ಲ.

ಅಂತೂ ಡಿಗ್ರಿಗೊಂದು ಬಾಯ್ ಹೇಳಿ ಸ್ನಾತಕೋತ್ತರ ಅಭ್ಯಾಸಕ್ಕೆ ಊರುಬಿಡೋ ಪ್ರಸಂಗ ಬಂತು, ಆಗಲೇ ಗೊತ್ತಾಗಿದ್ದು, ನನ್ನನ್ನು ಪ್ರೀತಿ ಮಾಡ್ಬೇಕು ಅಂದುಕೊಂಡಿರೋ ಗಂಡು ಜೀವಗಳೂ ಇತ್ತಂತೆ ಅಂತ! ಅದು ಬಿಡಿ ಊರು ಬಿಟ್ಟು ಇನ್ನೊಂದು ಸ್ಥಳಕ್ಕೆ ಪ್ರವೇಶಿಸಿದ್ದೇನೋ ಆಯ್ತು. ಆದ್ರೆ ಗುರುತು ಪರಿಚಯವೇ ಇರದ ಜಾಗಕ್ಕೆ ಬಂದು ಪ್ರೀತಿ ಮಾಡೋದಿರ್ಲಿ, ಪರೀಕ್ಷೆಯಲ್ಲಿ ಪಾಸ್ ಆಗೋದು ಕೂಡ ಕಷ್ಟವಾಗಿತ್ತು..

ಅಲ್ಲಿಯ ಜನರ ಭಾಷೆ, ನಡವಳಿಗೆ, ಆ ಕಾಲೇಜು, ಅಭ್ಯಾಸ ಎಲ್ಲಾ ನುಂಗಲಾರದ ತುತ್ತಾಗಿ ಹೋಯ್ತು. ಇನ್ನೇನು ಆ ಊರಿನ ಸಹವಾಸವೇ ಬೇಡಪ್ಪ ಅಂತ ಗಂಟುಮೂಟೆ ಕಟ್ಕೊಂಡು ಹೊರಡ್ಬೇಕು ಅನ್ನೊವಷ್ಟರಲ್ಲಿ, ಕುದುರೆ ಮೇಲೇರಿ ಬರೋ ಇಮ್ಯಾಜಿನೇಶನ್ ಲ್ಲಿ ಚೇತಕ್ ಸ್ಕೂಟರಲ್ಲಿ ನನ್ನ ಭವಿಷ್ಯ ಕಾಲೇಜಿಗ್ ಎಂಟ್ರಿ ಕೊಡ್ತು.. ನೋಡೋದಕ್ಕೆ ಸುಮಾರಾಗಿದ್ರೂ, ಬರ್ತಾ ಬರ್ತಾ ಕಾಲೇಜಿನಲ್ಲಿ ಸ್ವಲ್ಪ ಜಾಸ್ತಿನೇ ಫೇಮಸ್ ಆಗ್ಬಿಟ್ಟ ಪುಷ್ಪಕ ವಿಮಾನದ (ಚೇತಕ್ ಸ್ಕೂಟರಿಗೆ ನಾನಿಟ್ಟ ಹೆಸರು) ಮಾಲಿಕ!

ಆ ಒಂದು ಬಸ್‌ ಪಯಾಣ

ಆ ಒಂದು ಬಸ್‌ ಪಯಾಣ

ಕಾಲೇಜಿನ ಒಂದು ವರ್ಷ ಕಳೆಯೋ ಹೊತ್ತಿಗೆ ನಮ್ಮ ಸ್ನೇಹವೂ ಒಂದು ಮಟ್ಟಿಗೆ ಗಟ್ಟಿಯಾಗಿತ್ತು. ಅವನೋ ಶುದ್ಧ ಮೌನಿ, ನಾನೋ ಬಾಯ್ಬಡಿಕಿ. ಓದೊದ್ರಲ್ಲಿ ಅವನೇ ಮುಂದು, ವಿಚಾರಧಾರೆಗಳೂ ಸಾಕಷ್ಟು ವಿಭಿನ್ನ. ಆದ್ರೆ ಈ ವಿಭಿನ್ನತೆ ನಮ್ಮ ಸ್ನೇಹಕ್ಕಂತೂ ಯಾವಾಗಲೂ ಅಡ್ದಿಪಡಿಸಲೇ ಇಲ್ಲ. ನನ್ನ ಅಗತ್ಯಕ್ಕೆ ಅವನು ಅವನ ಅಗತ್ಯಕ್ಕೆ ನಾನು ಪರಸ್ವರ ಸಹಾಯ ಮಾಡ್ಕೊಂಡು ಇದ್ವಿ.

ನಾನು ಅವನೂ ಓದೋಕ್ಕೆ ಬಂದಿದ್ದು ಬೇರೆ ಊರಿನಿಂದಲೇ. ಹಾಗಾಗಿ ಊರಿಗೆ ಹೋಗುವಾಗೆಲ್ಲ ಒಟ್ಟಾಗಿ ಬಸ್ಸಲ್ಲಿ ಹೋಗೊದು ಸಾಮಾನ್ಯವಾಗಿತ್ತು. ಹೀಗೆ ಬಸ್ಸಿನ ಜರ್ನಿ ಸ್ನೇಹವನ್ನ ಪ್ರೀತಿಗೆ ಯಾವಾಗ ತಿರುಗಿಸಿತ್ತೋ ಗೊತ್ತಿಲ್ಲ, ಸಾಮಾನ್ಯ ಎನ್ನಿಸುತ್ತಿದ್ದ ಬಸ್ ಪ್ರಯಾಣ ಬೇರೆಯದೇ ಅನುಭವ ಕೊಡಲು ಆರಂಭಿಸಿತ್ತು. ಅಕ್ಕ ಪಕ್ಕದಲ್ಲಿ ಕುಳಿತು ಹೋಗುವಾಗ ಈ ಪ್ರಯಾಣ ಎಂದೂ ಮುಗಿಯದಿರಲಿ ಎಂಬ ಆಸೆ ಮೂಡುತ್ತಿತ್ತು. ಒಂದಿಷ್ಟು ಹರಟೆ, ನಿದ್ದೆ, ಊಟ ಇವೆಲ್ಲವೂ ಪ್ರಯಾಣವನ್ನು ಇನ್ನಷ್ಟು ಸೊಗಸಾಗಿಸಿತ್ತು.

ಅವಿರಿಲ್ಲದೇ ಅವನ ಬುಜಕ್ಕೊರಗಿ ನಿದ್ರಿಸಿದ್ದು, ಶಾಶ್ವತ ಸುರಕ್ಷತೆಯ ಭರವಸೆ ಒದಗಿಸಿತ್ತು. ಇದೇ ಅನುಭವ ಅವನಿಗೂ ಆಗಿರಬೇಕು, ಒಮ್ಮೆ ಜೊತೆಯಾಗಿ ಬದುಕಬೇಕೆಂಬ ಆಸೆಯ ಮಾತು ನಮ್ಮ ನಡುವೆ ತೇಲಿಹೋಗಿತ್ತು. ಆದರೆ ಪರಸ್ವರ ಉಪಜಾತಿಯವರಾಗಿದ್ದ ನಮಗೆ ನಮ್ಮ ಕುಟುಂಬದವರನ್ನು ಒಪ್ಪಿಸುವುದು ಒಂದು ಸವಾಲಾಗಿತ್ತು. ಈ ಎದುರಿಸಲಾಗದ ಪರಿಸ್ಥಿತಿಗೆ ಸೋತು, ನಮ್ಮಲ್ಲಿರುವ ಕನಸುಗಳನ್ನು ನಮ್ಮಲ್ಲಿಯೇ ಬಚ್ಚಿಟ್ಟುಕೊಂಡು ಸ್ನೇಹಿತರಾಗಿಯೇ ಮುಂದುವರೆಯುವ ನಿರ್ಧಾರ ಮಾಡಿದ್ವಿ.

ನಾವೊಂದು ಬಗೆದರೆ ದೈವವೊಂದು ಬಗೆದೀತು

ನಾವೊಂದು ಬಗೆದರೆ ದೈವವೊಂದು ಬಗೆದೀತು

ಕಾಲಚಕ್ರ ಸರಿಯುತ್ತಿದ್ದ ಹಾಗೇ ನಮ್ಮ ನಡುವೆ ಬಾಂಧವ್ಯ ಹೆಚ್ಚಾಗುತ್ತಾ ಹೋಯಿತೇ ಹೊರತು ಒಂದಿಂಚೂ ಕಮ್ಮಿಯಾಗಲೇ ಇಲ್ಲ. ಆದರೆ ಇದನ್ನು ಒಪ್ಪಿಕೊಂಡು ಸಂಗಾತಿಗಳಾಗಿ ಮುಂದುವರೆಯುವ ಧೈರ್ಯ ಇಬ್ಬರಲ್ಲೂ ಇರಲಿಲ್ಲ.

ಆದ್ರೆ 'ನಾವೊಂದು ಬಗೆದರೆ ದೈವವೊಂದು ಬಗೆದೀತು' ಎಂಬ ಮಾತಿದ್ಯಲ್ಲ, ಹಾಗೇ ನಾವು ಬಚ್ಚಿಟ್ಟ ನಮ್ಮ ಕನಸುಗಳಿಗೆ ರೆಕ್ಕೆ ಹಚ್ಚುವ ದಿನ ಬಂದೇ ಬಿಡ್ತು. ಕಾಲೇಜು ಮುಗಿಸಿ ಒಂದೆರಡು ದಿನಕ್ಕೆ ಊರಿಗೆ ಹೋಗುವ ಸಂದರ್ಭ ಬಂತು. ಇಬ್ಬರೂ ಜೊತೆಯಾಗಿ ಹೊರಟವರು ಬರುವಾಗ ಮಾತ್ರ ಕಾರಣಾಂತರಗಳಿಂದ ಬೇರೆ ಬೇರೆಯಾಗಿ ಹಿಂತಿರುಗಬೇಕಾಯಿತು.

ಹಿಂತಿರುಗಿಬರುವಾಗ ನನಗಂತೂ ಏನನ್ನೋ ಕಳೆದುಕೊಂಡ ಭಾವನೆ, ಯಾರಿಂದಲೋ ದೂರವಾಗುತ್ತಿರುವ ಕಲ್ಪನೆ, ಒಲ್ಲದ ಮನಸ್ಸಿನಿಂದ ಅವನಿಗಿಂತಲೂ ಒಂದು ದಿನ ಮೊದಲೇ ಹೊರಟೆ. ಬಂದು ಇತರ ಸ್ನೇಹಿತರೊಂದಿಗೆ ಬೆರೆತರೂ ಮನಸ್ಸು ಮಾತ್ರ ಖಾಲಿಯಾಗಿಯೇ ಇತ್ತು. ಅಂದು ರಾತ್ರಿ ನಿದ್ದೆಯೇ ಬರದೇ ಹೊರಳಾಡುತ್ತಿರುವಾಗ ಮೊಬೈಲ್ ನಲ್ಲೊಂದು ಮೆಸೆಜ್ ರಿಂಗಣಿಸಿತು.

ತೆರೆದು ನೋಡಿದರೆ, ಜಗತ್ತಿನ ಸಂತೋಷವೆಲ್ಲವೂ ನನ್ನ ಕಣ್ಮುಂದೆ! 'ನೀನಿಲ್ಲದೇ ಈ ಪ್ರಯಾಣ ಅಪೂರ್ಣ, ನನ್ನೇಲ್ಲಾ ಪ್ರಯಾಣಕ್ಕೂ ಜೊತೆಯಾಗಿ ಸಾಗ್ತಿಯಾ?' ಅನ್ನೊ ಅವನ ಮೆಸೇಜ್! ಬಯಸಿದ್ದು ಸಿಕ್ಕಿದರೆ ಬೇರೆನು ಬೇಕು ಜೀವಕ್ಕೆ?! ಕ್ಷಣದಲ್ಲಿ ಉತ್ತರಿಸಬಲ್ಲೆನಾದರೂ, ಉತ್ತರಿಸದೇ ಆ ಕ್ಷಣವನ್ನೇ ಅನುಭವಿಸುತ್ತ ರಾತ್ರಿ ಕಳೆದೆ.

ಮಗುಮನಸ್ಸಿನ ನನ್ನವನಿಗೆ ಹ್ಯಾಪಿ ವ್ಯಾಲಂಟೈನ್ಸ್ ಡೇ!

ಮಗುಮನಸ್ಸಿನ ನನ್ನವನಿಗೆ ಹ್ಯಾಪಿ ವ್ಯಾಲಂಟೈನ್ಸ್ ಡೇ!

ಬೆಳಗ್ಗೆ ಕಾಲೇಜಿಗೆ ಹೋಗುವ ತವಕ, ಆದರೂ ಏನೊ ಒಂಥರಾ ಆತಂಕ. ರಾತ್ರಿ ನಡೆದಿದ್ದೆಲ್ಲ ಸತ್ಯವೇ ಕನಸೇ ಅನ್ನೊ ತಳಮಳ. ಈ ಎಲ್ಲ ಮಿಶ್ರ ಭಾವನೆಗಳೊಂದಿಗೆ ಕಾಲೇಜು ಪ್ರವೇಶಿಸಿ ಅವನನ್ನು ನೋಡಿದಾಕ್ಷಣ ನನ್ನವನು ಎನ್ನುವ ಭಾವನೆ ದೃಢವಾಯಿತು.

ಅವನ ಆ ನೋಟ ನನ್ನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತು. ಕಾಲೇಜಿನ ಕ್ಲಾಸ್ ರೂಮಿನಲ್ಲಿ ಒಂದೆಡೆ ಕೂತು ನಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗೊಣ ಎಂಬ ಮಾತು ನನ್ನ ಸುಂದರ ಭವಿಷ್ಯವನ್ನು ನನ್ನ ಕಣ್ಣೆದುರಿಗೆ ತಂದಿರಿಸಿತು.

ಹಾಗೆಂದ ಮಾತ್ರಕ್ಕೆ ನಮ್ಮ ಮನೆಯವರನ್ನೆಲ್ಲಾ ಒಪ್ಪಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕಾಲೇಜಿ ಮುಗಿಸಿ ವೃತ್ತಿಯ ದಾರಿ ಹಿಡಿದು ಸಂಪಾದನೆ ಮಾಡುತ್ತಿರುವ ಆತ್ಮವಿಶ್ವಾಸದಲ್ಲಿ ಒಬ್ಬ ಜವಾಬ್ದಾರಿಯುಳ್ಳವನಾಗಿ, ನನ್ನ ಮನೆಯವರೆದುರು ಅವನು ನಿಂತ ಆ ಘಳಿಗೆ ನನ್ನೆದೆಯಲ್ಲಿ ಇನ್ನೂ ಅಚ್ಚೊತ್ತಿದೆ.

ಸಾಕಷ್ಟು ಸಮಸ್ಯೆಗಳ ನಡುವೆ ನಮ್ಮಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆಂಬ ಭರವಸೆ ನಮ್ಮನ್ನು ಇಂದಿಗೆ ಜೊತೆಯಾಗಿಸಿದೆ. ಪ್ರೀತಿಸಿದವರನ್ನೇ ಮದುವೆಯಾಗದ ಅವಕಾಶವಂಚಿತರು ಬಹಳ ಜನ. ಅವರ ನಡುವೆ ನಾನು ತುಂಬಾ ಲಕ್ಕಿ! ಪ್ರೀತಿಸಿದವನನ್ನೇ ವರಿಸಿ, ಸಂತೋಷದ ಜೀವನವನ್ನು ಕಂಡುಕೊಂಡಿದ್ದೇನೆ. ನೋವಿನಲ್ಲೂ ಜೊತೆಯಾಗಿ, ಕಷ್ಟದಲ್ಲೂ ನೆರಳಾಗಿ, ನನ್ನ ಪ್ರೀತಿಗೆ ನೂರರಷ್ಟು ಅಧಿಕ ಪ್ರೀತಿಯ ಧಾರೆಯೆರೆಯುವ ಮಗುಮನಸ್ಸಿನ ನನ್ನವನಿಗೆ ಹ್ಯಾಪಿ ವ್ಯಾಲಂಟೈನ್ಸ್ ಡೇ!

English summary

Poornima Sanketh Love story

Our reader Proornima send to us her cute love story. Here is that love story, Read this heart touching love story.
X
Desktop Bottom Promotion