For Quick Alerts
ALLOW NOTIFICATIONS  
For Daily Alerts

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್‌ವಾಲ್‌ ಕತೆ ಕೇಳಿದರೆ ಹೃದಯ ಮಿಡಿಯುತ್ತೆ

|

ಲಕ್ಷ್ಮಿ ಅಗರ್‌ವಾಲ್‌ ಎಂಬ ಹೆಣ್ಣು ಮಗಳ ಪರಿಚಯ ಯಾರಿಗೆ ತಾನೆ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಆಕೆಯ ಬಗ್ಗೆ ಗೊತ್ತಿರುತ್ತದೆ. ಆ್ಯಸಿಡ್‌ ದಾಳಿಗೆ ಒಳಗಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳದ ಈಕೆ ಇಂದು ತನ್ನಂಥ ಅನೇಕ ಹೆಣ್ಣು ಮಕ್ಕಳಿಗೆ ಬದುಕುವ ಸ್ಪೂರ್ತಿಯನ್ನು ತುಂಬುತ್ತಿದ್ದಾರೆ. ಆ್ಯಸಿಡ್ ಮಾರಾಟ ಮಾಡಬಾರದೆಂಬ ಅಭಿಯಾನ ನಡೆಸಿ, ಗೆದ್ದ ಗಟ್ಟಿಗಿತ್ತಿ ಲಕ್ಷ್ಮಿ.

ಹದಿಹರೆಯದ ಪ್ರಾಯದಲ್ಲಿ ಇರುವಾಗಲೇ ಪಾಪಿಯೊಬ್ಬನಿಂದ ಆ್ಯಸಿಡ್‌ ದಾಳಿಗೆ ಒಳಗಾಗಿ ಮುಖದ ಆಕಾರ ಬದಲಾಗಿ, ಇನ್ನೇನು ಬದುಕುವುದೇ ಬೇಡವೆಂದು ಯೋಚಿಸಿ, ಕೊನೆಗೆ ತಪ್ಪು ಮಾಡದ ನಾನೇಕೆ ಸಾಯಬೇಕು, ನನ್ನ ಮುಖ ವಿಕಾರವಾಗಿದೆ ಎಂದು ನಾನೇಕೆ ಮುಖ ಮುಚ್ಚಬೇಕು, ಮುಖ ಮುಚ್ಚಿ ಓಡಾಡಬೇಕಾಗಿರುವುದು ಆ ಪಾಪಿ ಎಂದು ತನ್ನ ಮನಸ್ಸಿಗೆ ತಾನೇ ಧೈರ್ಯ ಹೇಳಿ, ಬದುಕನ್ನು ಸುಂದರವಾಗಿಸಿಕೊಂಡಿದ್ದಾರೆ ಲಕ್ಷ್ಮಿ ಅಗರ್‌ವಾಲ್.

Laxmi Agarwal

ಇವರ ಜೀವನಾಧಾರಿತ ಬಾಲಿವುಡ್ ಚಿತ್ರವೇ 'ಛಪಾಕ್‌'. ಇವರ ಜೀವನ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಮನೋಸ್ಥೈರ್ಯ ನೀಡುವಂತಿದೆ. ಇಲ್ಲಿ ನಾವು ಅವರ ಬಗ್ಗೆ ಹೆಚ್ಚಿನ ವಿವರ ನೀಡಿದ್ದೇವೆ ನೋಡಿ.

ಲಕ್ಷ್ಮಿ ಅಗರ್‌ವಾಲ್ ಮೊದಲಿನ ಬದುಕು

ಲಕ್ಷ್ಮಿ ಅಗರ್‌ವಾಲ್ ಮೊದಲಿನ ಬದುಕು

ಲಕ್ಷ್ಮಿ ಅಗರ್‌ವಾಲ್ ದೆಹಲಿಯಲ್ಲಿ ಮದ್ಯಮವರ್ಗದ ಕುಟುಂಬದಲ್ಲಿ ಜೂನ್‌1, 1990ರಲ್ಲಿ ಜನಿಸಿದರು. ನೋಡಲು ತುಂಬಾ ಮುದ್ದು-ಮುದ್ದಾಗಿ ಇದ್ದರು. ಲಕ್ಷ್ಮಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆಯಿತ್ತು. ಆದರೆ ತಂದೆ ಸಂಗೀತ ಜತೆಗೆ ಯಾವುದಾದರೂ ವೃತ್ತಿಪರ ಕೋರ್ಸ್‌ ಮಾಡುವಂತೆ ಸೂಚಿಸಿದ್ದರು. ಲಕ್ಷ್ಮಿ ಅಗರ್‌ವಾಲ್‌ ಹದಿಹರೆಯದ ಪ್ರಾತಯದಲ್ಲಿ ನೋಡಲು ತುಂಬಾ ಸುಂದರವಾಗಿದ್ದರು. ಇವರ ಅಂದಕ್ಕೆ ಮನಸೋತು ಅಣ್ಣನ ಸ್ನೇಹಿತ 32 ವರ್ಷದ ವ್ಯಕ್ತಿ ಮದುವೆಯಾಗುವಂತೆ ಲಕ್ಷ್ಮಿ ಬಳಿ ಕೇಳುತ್ತಾನೆ. ಆದರೆ ಈಕೆ ಆತನ ಪ್ರೀತಿಯನ್ನು ನಿರಾಕರಿಸುತ್ತಾಳೆ. ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ 2005ರಲ್ಲಿ ಆತ ಆಕೆಯ ಮುಖಕ್ಕೆ ಆ್ಯಸಿಡ್‌ ಎರಚುತ್ತಾನೆ. ಆಗ ಆಕೆಯ ವಯಸ್ಸು ಕೇವಲ ಹದಿನೈದು. ಬದುಕಿನ ಬಗ್ಗೆ ನೂರಾರು ಕನಸು ಕಂಡಿದ್ದ ಆಕೆಯ ಕನಸುಗಳು ಕಮರಿ ಹೋಗುತ್ತವೆ.

ಆ್ಯಸಿಡ್ ದಾಳಿ

ಆ್ಯಸಿಡ್ ದಾಳಿ

ಒಂದು ಟಿವಿ ಶೋದಲ್ಲಿ ಲಕ್ಷ್ಮಿ ಹೇಳುತ್ತಾಳೆ 'ಆತ ನನ್ನ ಅಣ್ಣನ ಸ್ನೇಹಿತನಾಗಿದ್ದ, ಆತ ನನ್ನ ಮೇಲೆ ದೇಹಲಿಯ ಖಾನ್ ಮಾರ್ಕೆಟ್‌ನಲ್ಲಿ ಆ್ಯಸಿಡ್ ದಾಳಿ ಮಾಡಿದ. ಆತ ತಿಂಗಳುಗಳಿಂದ ನನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ, ಅಂದು ಕೂಡ ಆತ ನನ್ನ ಎದುರಿಗೆ ಬಂದು ಮದುವೆ ಪ್ರಸ್ತಾಪ ಮಾಡಿದ, ನಾನು ಒಪ್ಪದಿದ್ದಾಗ ನನ್ನನ್ನು ತಳ್ಳಿ ನನ್ನ ಮುಖಕ್ಕೆ ಆ್ಯಸಿಡ್ ಎರಚಿದ. ಆತ ಆ್ಯಸಿಡ್‌ ದಾಳಿ ಮಾಡಿದಾಗ ನೋವಿನಿಂದ ಒದ್ದಾಡಿ, ಮೂರ್ಛೆ ಹೋದೆ. ನಾನು ನೋವಿನಿಂದ ಒದ್ದಾಡುತ್ತಿದ್ದಾಗ ಅಲ್ಲಿ ನೆರೆದಿದ್ದವರು ಏನಾಗುತ್ತಿದೆ ಎಂದು ನೋಡುತ್ತಿದ್ದರೇ ಹೊರತು ನನ್ನ ಸಹಾಯಕ್ಕೆ ಬರಲಿಲ್ಲ. ಆದರೆ ಒಬ್ಬ ವ್ಯಕ್ತಿ ಮುಂದೆ ಬಂದು ನನ್ನ ಮುಖಕ್ಕೆ ನೀರು ಎರಚಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು.

ನಾನು ಆಸ್ಪತ್ರೆ ತಲುಪಿದ ತಕ್ಷಣ ನನ್ನ ಮುಖಕ್ಕೆ ಸುಮಾರು 20 ಬಕೆಟ್‌ ನೀರು ಹಾಕಿದರು. ಆದರೂ ನೋವು, ಉರಿ ಕಡಿಮೆಯಾಗಿರಲಿಲ್ಲ. ವಿಷಯ ತಿಳಿದು ನನ್ನ ತಂದೆ ಓಡೋಡಿ ಬಂದರು, ಅವರನ್ನು ನೋಡಿದ ತಕ್ಷಣ ತಬ್ಬಿ ಹಿಡಿದೆ. ನಾನು ತಬ್ಬಿ ಹಿಡಿದಾಗ ನನ್ನ ಮುಖದಲ್ಲಿದ್ದ ಆ್ಯಸಿಡ್‌ ಅವರ ಶರ್ಟ್‌ಗೆ ತಾಗಿ ಶರ್ಟ್ ಕೂಡ ಸುಟ್ಟು ಹೋಗಿತ್ತು.

ಆ್ಯಸಿಡ್ ದಾಳಿಯ ಬಳಿಕ

ಆ್ಯಸಿಡ್ ದಾಳಿಯ ಬಳಿಕ

ಆ್ಯಸಿಡ್‌ ದಾಳಿಯ ನಂತರ ತನ್ನ ಹೊಸ ಮುಖವನ್ನು ಕನ್ನಡಿಯಲ್ಲಿ ನೋಡಿದಾಗ ಈ ಬದುಕೇ ಸಾಕು ಎನ್ನುವಷ್ಟರ ಮಟ್ಟಿಗೆ ನೋವಾಗಿತ್ತು ಎನ್ನುತ್ತಾರೆ ಲಕ್ಷ್ಮಿ. ಈ ಮುಖ ಇಟ್ಟುಕೊಂಡು ಬದುಕಲು ಸಾಧ್ಯವಿಲ್ಲ,ಸ ತ್ತು ಬಿಡಬೇಕೆಂದು ಬಯಸಿದ್ದರು. ಆದರೆ ತನ್ನ ಸಾವಿನಿಂದ ಮನೆಯವರು ಮತ್ತಷ್ಟು ನೊಂದುಕೊಳ್ಳುತ್ತಾರೆ ಎಂದು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಅವರಿಗೋಸ್ಕರ ಬದುಕಬೇಕೆಂಬ ನಿರ್ಧಾರ ಮಾಡಿದ್ದಾರೆ.

ಆ್ಯಸಿಡ್ ದಾಳಿಯ ಬಳಿಕ ಜೀವನದಲ್ಲಿ ಮತ್ತಷ್ಟು ಆಘಾತಗಳು

ಆ್ಯಸಿಡ್ ದಾಳಿಯ ಬಳಿಕ ಜೀವನದಲ್ಲಿ ಮತ್ತಷ್ಟು ಆಘಾತಗಳು

ಆ್ಯಸಿಡ್‌ ದಾಳಿಯಿಂದಾಗಿ ಸುಂದರ ಕನಸುಗಳು ಕಮರಿ ಹೋಗಿದ್ದೆವು, ಅದರ ಜೊತೆಗೆ ಲಕ್ಷ್ಮಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಲಕ್ಷ್ಮಿ ಕುಟುಂಬದಲ್ಲಿ ತಂದೆಯ ದುಡಿಮೆಯಿಂದ ಸಂಸಾರ ಸಾಗಬೇಕಾಗಿತ್ತು. ಆದರೆ 2012ರಲ್ಲಿ ಸಹೋದರನಿಗೆ ಆರೋಗ್ಯ ಸಮಸ್ಯೆ ಎದುರಾಯಿತು, ಆತ ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದರು. ಮಗಳಿಗೆ ಹೀಗಾಯ್ತು, ಮಗನೂ ನಮ್ಮ ಬಿಟ್ಟು ಹೋಗುತ್ತಾನೆ ಎಂಬ ಕೊರಗಿನಲ್ಲಿ ತಂದೆಯೂ ಸಾವನ್ನಪ್ಪಿದರು.

ಮನೆ ಖರ್ಚು ನಿಭಾಯಿಸುವುದು ಹೇಗೆ ಎಂಬ ಸಮಸ್ಯೆ ಎದುರಾಯಿತು. ಲಕ್ಷ್ಮಿ ಕೆಲಸಕ್ಕಾಗಿ ಅಲೆದಾಡಿದರು, ಆದರೆ ಆಕೆಗೆ ಕೆಲಸ ಕೊಡಲು ಯಾರೂ ಸಿದ್ಧವಿರಲಿಲ್ಲ.

ಹೋರಾಟಗಾರ್ತಿ

ಹೋರಾಟಗಾರ್ತಿ

ಆ್ಯಸಿಡ್ ದಾಳಿಯ ಬಳಿಕ 2006ರಲ್ಲಿ ಆ್ಯಸಿಡ್‌ ಮಾರಾಟ ನಿಷೇಧ ಮಾಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಎಂಟು ವರ್ಷಗಳ ಸತತ ಹೋರಾಟದ ಬಳಿಕ 2013ರಲ್ಲಿ ಸರ್ವೋಚ್ಛ ನ್ಯಾಯಾಲಯ ಆ್ಯಸಿಡ್ ಮಾರಾಟ ಹಾಗೂ ಖರೀದಿ ನಿಷೇಧ ಎಂಬ ಕಾನೂನು ಜಾರಿಗೆ ತಂದಿತು.

ಆ್ಯಸಿಡ್ ದಾಳಿಯ ವಿರುದ್ಧ ಲಕ್ಷ್ಮಿ ಅಭಿಯಾನವನ್ನು ಮಾಡಿದರು. ಇದೀಗ ತನ್ನಂತೆ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆಯರ ಪಾಲಿಗೆ ಸ್ಪೂರ್ತಿದಾಯಕವಾಗಿದ್ದಾರೆ. ಲಕ್ಷ್ಮಿ ಈಗ ಉದಾನ್ ಎಂಬ ಟಿವಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದಾರೆ.

ಮಾದರಿಯಾದ ಲಕ್ಷ್ಮಿ ಅಗರ್‌ವಾಲ್

ಮಾದರಿಯಾದ ಲಕ್ಷ್ಮಿ ಅಗರ್‌ವಾಲ್

2014ರಲ್ಲಿ ಇಂಟರ್‌ನ್ಯಾಷನಲ್ ವುಮನ್ ಆಫ್‌ ಕರೇಜ್ ಪ್ರಶಸ್ತಿಯನ್ನು ಮಿಷೆಲ್ ಒಬೆಮಾ ಕೈಯಿಂದ ಸ್ವೀಕರಿಸಿದ್ದರು. 2019ರಲ್ಲಿ ಯುನೆಸೆಫ್ ಕಡಿಯಿಮದ ಅಂತರಾಷ್ಟ್ರೀಯ ಮಹಿಳಾ ಸಬಲೀಕರಣ ಪ್ರಶಸ್ತಿ ಲಭಿಸಿದೆ.

ಲಕ್ಷ್ಮಿ ಪ್ರಕಾರ ಬಾಹ್ಯ ಸೌಂದರ್ಯ ದೊಡ್ಡ ವಿಷಯವಲ್ಲ, ವ್ಯಕ್ತಿಯ ಗುಣ ಹಾಗೂ ದೃಷ್ಟಿಕೋನ ತುಂಬಾ ಮುಖ್ಯ. ಆತ ನನ್ನ ಮುಖದ ಮೇಲೆ ಆ್ಯಸಿಡ್‌ ದಾಳಿ ಮಾಡಿರಬಹುದು, ಆದರೆ ನನ್ನ ಕನಸುಗಳಿಗೆ ಅಲ್ಲ.

English summary

Laxmi Agarwal: Know About The Acid Attack Survivor

Chhapaak, the upcoming movie of Deepika Padukone is based on the life struggles of Laxmi Agarwal, the acid attack survivor.
X
Desktop Bottom Promotion