For Quick Alerts
ALLOW NOTIFICATIONS  
For Daily Alerts

ಇಂಥ ಗರ್ಲ್‌ಫ್ರೆಂಡ್‌ ನೀವಾದರೆ ಮಾತ್ರ ಮುಂದೆ ದುಃಖಿಸಬೇಕಾಗಿಲ್ಲ

|

ಹೇಳಿ ಕೇಳಿ ಸಾಮಾಜಿಕ ಜಾಲತಾಣಗಳ ಅಬ್ಬರದ ಕಾಲವಿದು. ಇಂದಿನ ತಲೆಮಾರಿನ ಯುವಕ, ಯುವತಿಯರಂತೂ ಊಟ, ನಿದ್ದೆಯನ್ನಾದರೂ ಬಿಟ್ಟಾರು. ಆದರೆ, ಘಳಿಗೆಗೊಮ್ಮೆ ಜಾಲತಾಣದತ್ತ ಕಣ್ಣು ಹಾಯಿಸದೇ ಇದ್ದರೆ ತಾವದೇನನ್ನೋ ಕಳೆದುಕೊಂಡು ಬಿಟ್ಟೆವೇನೋ ಅನ್ನೋ ತಳಮಳ, ಗೊಂದಲ ಕಾಡಲಾರಂಭಿಸುತ್ತದೆ ಈ ಹದಿಹರೆಯದವರನ್ನ. ತಮ್ಮ ಜೀವನದ ಕ್ಷಣಕ್ಷಣಗಳ ಆಗುಹೋಗುಗಳನ್ನ ಇಂದಿನ ಯುವಕರು ದಾಖಲಿಸುವುದು ಈ ಇನ್ಸ್ಟಾಗ್ರಾಂ, ಪಿಂಟೆರೆಸ್ಟ್, ಫ಼ೇಸ್ಬುಕ್ ನಂತಹ ಜಾಲತಾಣಗಳಲ್ಲಿ.

ಈ ಕ್ಷಣ ತಾವೆಲ್ಲಿದ್ದೇವೆ, ಯಾರೊಂದಿಗಿದ್ದೇವೆ, ಏನು ಮಾಡುತ್ತಲಿದ್ದೇವೆ ಅನ್ನೋದರಿಂದ ಹಿಡಿದು ತಾವು ಯಾವ ಪರಿಕರವನ್ನ ಎಲ್ಲಿ ಖರೀದಿಸಿದೆವು, ಯಾವ ಬೆಲೆಗೆ ಖರೀದಿಸಿದೆವು ಅನ್ನೋವರೆಗೂ, ಬೆಳಗಿನ ಉಪಾಹಾರಕ್ಕೆ ಏನನ್ನು ಸೇವಿಸಿದೆವು ಅನ್ನುವುದರಿಂದ ಹಿಡಿದು ಯಾವ ಸಿನಿಮಾ ಮಂದಿರದಲ್ಲಿ ಯಾವ ಸಿನೆಮಾ ವೀಕ್ಷಿಸಿದೆವು ಅನ್ನೋವರೆಗೂ ಎಲ್ಲವನ್ನೂ ಈ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರೆಗೂ ಈ ಹದಿಹರೆಯದವರಿಗೆ ಸಮಾಧಾನವೇ ಇರುವುದಿಲ್ಲ.

ಇಷ್ಟೆಲ್ಲವನ್ನೂ ಜಾಲತಾಣಗಳಲ್ಲಿ ಹಂಚಿಕೊಳ್ಳುವ ನಮ್ಮ ಯುವಕ, ಯುವತಿಯರು ತಮ್ಮ ಗರ್ಲ್ಫ಼್ರೆಂಡ್ ಅಥವಾ ಬಾಯ್ ಫ಼್ರೆಂಡ್ ಗಳೊಂದಿಗಿನ ಡೇಟಿಂಗ್ ನ ಮಧುರ ಕ್ಷಣಗಳನ್ನು ಹಂಚಿಕೊಳ್ಳದೇ ಬಿಟ್ಟಾರೆಯೇ ? ಹಾಗೆ ಹಂಚಿಕೊಂಡು ತಮ್ಮ ಸ್ನೇಹಿತವಲಯದವರಿಗೆ ಹೊಟ್ಟೆಯುರಿಯಾಗುವಂತೆ ಮಾಡುವ ಅಪೂರ್ವ ಅವಕಾಶದಿಂದ ಖಂಡಿತಾ ನಮ್ಮ ಯುವಕ, ಯುವತಿಯರು ವಂಚಿತರಾಗುವುದಿಲ್ಲ.

ತಮ್ಮ ಬಾಯ್ಫ಼್ರೆಂಡ್/ಗರ್ಲ್ಫ಼್ರೆಂಡ್ ಗಳೊಡನೆ ಕಳೆದ ರಸಮಯ ಕ್ಷಣಗಳ ಪೋಸ್ಟ್ ಗಳನ್ನ ಈ ಹದಿಹರೆಯದವರು ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ತಾವೇ ಜಗತ್ತಿನ ಆದರ್ಶ ಸಂಗಾತಿಗಳೆಂಬ ರೀತಿಯಲ್ಲಿ ಸ್ವಯಂ ತಮ್ಮನ್ನ ಬಿಂಬಿಸಿಕೊಳ್ಳುತ್ತಾರೆ. ಡೇಟಿಂಗ್ ಅನ್ನೋದು ಬಾಳಿನ ಅತ್ಯಂತ ರೋಮಾಂಚಕ ಅನುಭವಗಳಲ್ಲಿ ಒಂದು ಅನ್ನೋದೇನೋ ನಿಜ. ಆದರೆ ಪ್ರೀತಿ ಅನ್ನೋದು ಹೃದಯಾಂತರಾಳದಿಂದ ಆವಿರ್ಭವಿಸಿದ ಭಾವನೆಯಾಗಿದ್ದಾಗ ಅದಕ್ಕೊಂದು ಬೆಲೆ.

ಡೇಟಿಂಗ್ ಜೋಡಿಗಳ ಪೋಸ್ಟ್ ಗಳನ್ನ ಜಾಲತಾಣಗಳಲ್ಲಿ ನೋಡಿದಾಗ "ಇದೇನಾ ಸ್ವರ್ಗ ?" ಅಂತಾ ಅನ್ನಿಸುವಂತಿದ್ದರೂ "ಕಂಡದ್ದೆಲ್ಲ ನಿಜವಲ್ಲ" ಅನ್ನೋ ಅರಿವು ನಿಮಗಿದೆ ಅಂತಾ ಖಂಡಿತಾ ನಮಗೂ ಗೊತ್ತು. ನೈಜ ಬಾಂಧವ್ಯ ಅನ್ನೋದು ಪರಸ್ಪರರ ಅರ್ಥೈಸಿಕೊಳ್ಳುವಿಕೆ, ತ್ಯಾಗ, ಹಾಗೂ ಇನ್ನೂ ಅನೇಕ ಕೊಡುಕೊಳ್ಳುವಿಕೆಗಳ ಮೇಲೆ ನಿಂತಿರುವಂತಹದ್ದು.

ಈ ಜೋಡಿಗಳ ವಿಚಾರಕ್ಕೆ ಬಂದಾಗ, ಸಾಮಾನ್ಯವಾಗಿ ಕಂಡುಬರುವ ಒಂದು ಅಂಶವೇನೆಂದರೆ, ಪ್ರತಿಬಾರಿಯೂ ಹುಡುಗಿಯರು ಗಮನ ಹರಿಸುವುದು ಒಂದೇ ಒಂದು ವಿಚಾರದತ್ತ. ಅದೇನೆಂದರೆ, ತಮ್ಮ ಬಾಯ್ ಫ಼್ರೆಂಡ್ ಗಳಿಗೆ ತಾವು ಹೇಗೆ ಅತ್ಯುತ್ತಮ ಗರ್ಲ್ಫ಼್ರೆಂಡ್ ಗಳಾಗಿರಬೇಕೆಂಬುದರ ಬಗ್ಗೆ.

ಅಧ್ಯಯನಗಳ ಪ್ರಕಾರ, ಹುಡುಗಿಯರ ಏಕೈಕ ಚಿಂತೆ ಏನೆಂದರೆ ತಾವು ಹೇಗೆ ತಮ್ಮ ತಮ್ಮ ಬಾಯ್ ಫ಼್ರೆಂಡ್ ಗಳ ಪಾಲಿಗೆ ಅತ್ಯುತ್ತಮ ಗರ್ಲ್ಫ಼್ರೆಂಡ್ ಆಗಿರಬಲ್ಲೆವು ಎಂಬುದರ ಕುರಿತೇ. ಈ ಧಾವಂತದಲ್ಲಿ ಹುಡುಗಿಯರು ಸಂಬಂಧದ ಕುರಿತಾದ ಇನ್ನಿತರ ಆಯಾಮಗಳ ಬಗ್ಗೆ ಮರೆತೇ ಬಿಡುತ್ತಾರೆ. ಅವರ ಪಾಲಿಗಂತೂ ತಮ್ಮ ಸಂಗಾತಿಗಳ ಪಾಲಿನ ಓರ್ವ ಪರಿಪೂರ್ಣ, ಆದರ್ಶಪ್ರಾಯ ಗರ್ಲ್ಫ಼್ರೆಂಡ್ ಆಗಿ ಬಿಂಬಿಸಿಕೊಳ್ಳುವುದಷ್ಟೇ ಜೀವನದ ಪರಮ ಧ್ಯೇಯ ಅನ್ನುವಂತಾಗಿ ಬಿಟ್ಟಿರುತ್ತದೆ.

ಓರ್ವ ಉತ್ತಮ ಬಾಳಗೆಳತಿಯಾಗಿ ಬಿಂಬಿಸಿಕೊಳ್ಳಬೇಕೆಂಬ ಹುಡುಗಿಯರ ಈ ಯೋಚನೆಯೇನೋ ಸರಿಯೇ. ಆದರೆ ತಮ್ಮ ವೈಯಕ್ತಿಕ ಬೇಕುಬೇಡಗಳನ್ನ, ಅಗತ್ಯಗಳನ್ನ, ಆಸೆ-ಆಕಾಂಕ್ಷೆಗಳನ್ನ, ಆದ್ಯತೆಗಳನ್ನ ಬಲಿಕೊಟ್ಟು ಅಲ್ಲ ಎಂಬ ಅಂಶ ಅವರಿಗೆ ಮನವರಿಕೆಯಾಗಬೇಕು. ಸದಾ ವಿನಮ್ರಳಾಗಿರುತ್ತಾ, ತನ್ನ ಬೇಕುಬೇಡಗಳನ್ನೆಲ್ಲ ಬದಿಗೊತ್ತಿ ಬಾಯ್ಫ಼್ರೆಂಡ್ ಗೆ ಹೇಗೆ ಬೇಕೋ ಹಾಗೆ ವಿಧೇಯಳಾಗಿರುವುದರಿಂದ ಮಾತ್ರವೇ ತನಗೆ "ಅತ್ಯುತ್ತಮ ಗರ್ಲ್ಫ಼್ರೆಂಡ್" ಎಂಬ ಹಣೆಪಟ್ಟಿ ದಕ್ಕುತ್ತದೆ ಎಂಬುದು ಹುಡುಗಿಯ ಅನಿಸಿಕೆಯಾಗಿದ್ದರೆ ಅದು ಕೇವಲ ಆಕೆಯ ಭ್ರಮೆ.

ಪ್ರತಿಬಾರಿಯೂ ನೀವೇ ನಿಮ್ಮ ಬಾಯ್ಫ಼್ರೆಂಡ್ ಗಾಗಿ ತ್ಯಾಗ ಮಾಡಿ, ಆತನಿಗೆ ಡೊಗ್ಗು ಸಲಾಮು ಹೊಡೆಯಬೇಕೆಂದೇನಿಲ್ಲ. ನೀವಂದುಕೊಂಡ ರೀತಿಯಲ್ಲಿ ನಿಮ್ಮ ಬಾಯ್ಫ಼್ರೆಂಡ್ ನ ಪಾಲಿಗೆ ನೀವು ಅತ್ಯುತ್ತಮ ಗರ್ಲ್ಫ಼್ರೆಂಡ್ ಆಗೋದಕ್ಕೆ ಇನ್ನೂ ಬೇಕಾದಷ್ಟು ಬೇರೆ ದಾರಿಗಳಿವೆ. ಅದರಲ್ಲೂ ಒಂದು ಒಳ್ಳೆಯ ಸಂಗತಿಯೇನೆಂದರೆ, ಹಾಗೆ ಒಳ್ಳೆಯ ಗರ್ಲ್ಫ಼್ರೆಂಡ್ ಅನ್ನಿಸಿಕೊಳ್ಳೋದಕ್ಕೆ ನೀವು ಬಲಿಪಶುವಾಗಬೇಕಾದ ಯಾವ ಅಗತ್ಯವೂ ಇಲ್ಲದ ರೀತಿಯಲ್ಲಿ......

1. ನಿಮಗೆ ನೀವೇ ಬೇಲಿ ಹಾಕಿಕೊಳ್ಳಿ

1. ನಿಮಗೆ ನೀವೇ ಬೇಲಿ ಹಾಕಿಕೊಳ್ಳಿ

ಸಂಬಂಧವೊಂದರಲ್ಲಿ, ಬಹುತೇಕ ಮಹಿಳೆಯರ ಪಾಲಿಗೆ ತಮಗಾಗಿಯೇ ಒಂದಿಷ್ಟು ಏಕಾಂತ ಸಮಯವನ್ನ ಹೊಂದಾಣಿಕೆ ಮಾಡಿಕೊಳ್ಳುವುದು ಅಸಾಧ್ಯ ಕೋಟಿಯ ಮಾತು ಎನಿಸಬಹುದು, ಆದರೆ ಇದಂತೂ ತೀರ ಅಗತ್ಯ. ನಿಮಗೆ ಸ್ವತ: ನಿಮ್ಮ ಮೌಲ್ಯದ ಅರಿವಾಗಬೇಕು ಹಾಗೂ ನಿಮಗಾಗದ ಕೆಲನಿರ್ಧಿಷ್ಟ ವಿಷಯಗಳಿಗೆ "ಆಗದು" ಎಂದು ನಿಷ್ಟುರವಾಗಿ ಹೇಳುವುದನ್ನು ನೀವು ರೂಢಿಸಿಕೊಳ್ಳಬೇಕು. ಆತ್ಮಗೌರವದ ರಕ್ಷಣೆಗೆ ನೀವು ಹೀಗೆ ಮಹತ್ವ ನೀಡುವುದನ್ನು ಒಂದು ವೇಳೆ ನಿಮ್ಮ ಬಾಯ್ಫ಼್ರೆಂಡ್ ವಿರೋಧಿಸಿದರೂ ಕೂಡ, ನೀವು ನಿಮ್ಮ ಅಗತ್ಯಗಳನ್ನ ತ್ಯಾಗ ಮಾಡುವುದು ಬೇಡ ಮತ್ತು ಅವುಗಳಿಗಾಗಿ ಕಾದಾಡುವುದನ್ನೂ ನೀವು ಕಲಿಯಲೇಬೇಕು.

"ಬೇಡ ಅಂದ್ರೆ ಬೇಡ ಅಷ್ಟೇ" ಅಂತಾ ಖಡಕ್ಕಾಗಿ ಹೇಳೋದನ್ನ ರೂಢಿಸಿಕೊಳ್ಳಬೇಕು. ಅದು ಬೇಕಿದ್ದರೆ ಭಾವನಾತ್ಮಕ ವಿಚಾರಕ್ಕೆ ಸಂಬಂಧಿಸಿದ್ದಾಗಿರಲೀ ಅಥವಾ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ್ದಾಗಿರಲೀ..... ನಿಮ್ಮ ಸ್ವತಂತ್ರ ಯೋಚನೆಗಳು ಮತ್ತು ನಂಬಿಕೆಗಳ ಕುರಿತು ನಿಮ್ಮ ಬಾಯ್ಫ಼್ರೆಂಡ್ ನ ನಡವಳಿಕೆಯನ್ನ ವಿಶ್ಲೇಷಿಸುವುದಕ್ಕೂ ಇಂತಹ ಪರಿಸ್ಥಿತಿಯು ಸಹಕಾರಿ. ಒಂದೊಮ್ಮೆ ನಿಮ್ಮ ಬಾಯ್ಫ಼್ರೆಂಡ್ ತುಸು ಕಾಲಾವಕಾಶದೊಂದಿಗೆ ನಿಮ್ಮ ಹೊಸ ವಿಚಾರಗಳನ್ನ ಒಪ್ಪಿಕೊಂಡನೆಂದಾದರೆ, ಆತನು ನಿಮ್ಮ ಸಂಗಾತಿಯಾಗಿರಲು ಯೋಗ್ಯನೆಂದರ್ಥ. ಅದಕ್ಕೆ ಬದಲು ಆತ, ನಿಮ್ಮ ಭಾವನೆಗಳನ್ನ ಧಿಕ್ಕರಿಸಿ, ತನ್ನ ಮನಬಂದಂತೆ ನಿಮ್ಮನ್ನ ನಡೆಸಿಕೊಳ್ಳಲು ಮುಂದಾದನೆಂದರೆ, ನೀವು ಆತನೊಂದಿಗೆ ಡೇಟಿಂಗ್ ಮುಂದುವರೆಸುವುದರ ಕುರಿತು ಮತ್ತೊಮ್ಮೆ ಯೋಚಿಸುವುದು ಒಳಿತು.

2. ಒಬ್ಬರಿಂದ ಒಬ್ಬರು ಏನನ್ನು ಬಯಸುವಿರೆಂಬ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ

2. ಒಬ್ಬರಿಂದ ಒಬ್ಬರು ಏನನ್ನು ಬಯಸುವಿರೆಂಬ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ

ಸಂಬಂಧಗಳಲ್ಲಿ ನಿರೀಕ್ಷೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ, ಮೊದಲನೆಯ ದಿನದಿಂದಲೇ ಆರಂಭಿಸಿ ಒಬ್ಬರಿಂದ ಇನ್ನೊಬ್ಬರು ಏನನ್ನು ನಿರೀಕ್ಷಿಸುತ್ತೀರಿ ಅನ್ನೋದರ ಬಗ್ಗೆ ಮಾತುಕತೆ ನಡೆಸುವುದು ಒಳ್ಳೆಯದು. ಸಂಬಂಧದ ವಿಚಾರ ತೀರಾ ಸಾಮಾನ್ಯವಾದದ್ದು, ಹಾಗಾಗಿ ಮೊದಲನೆಯ ದಿನದಿಂದಲೇ ಪ್ರಬಲ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತರವಲ್ಲ ಅನ್ನೋದು ಕೆಲವರ ಅಭಿಪ್ರಾಯ ಆಗಿರಬಹುದು. ಆದರೆ ಒಂದು ವಿಚಾರ ನೆನಪಿಟ್ಟುಕೊಳ್ಳಿ, ನಿರೀಕ್ಷೆಗಳೇನೂ ತೀರಾ ದೊಡ್ಡವಾಗಿರಬೇಕೆಂದೇನೂ ಇಲ್ಲ, ಅವು ಸಣ್ಣಮಟ್ಟದವೂ ಆಗಿರಬಹುದು. ಉದಾಹರಣೆಗೆ, ಒಂದು ವೇಳೆ ನಿಮ್ಮ ಸಂಗಾತಿಯು ನಿಮ್ಮನ್ನು ರಾತ್ರಿಭೋಜನಕ್ಕೋ ಅಥವಾ ಹಾಗೆಯೇ ಸ್ವಲ್ಪ ಲಘು ಉಪಾಹಾರಕ್ಕೆಂದೋ ಹೊರಗೆ ಕರೆದೊಯ್ಯುವುದಾದರೆ ಆ ಕುರಿತು ಆತನು ನಿಮಗೆ ಮೊದಲೇ ತಿಳಿಸಲೆಂದು ನೀವು ನಿರೀಕ್ಷಿಸಬಹುದು. ತಿಂಡಿತಿನಿಸು ಅನ್ನೋದು ನಿಮಗೆ ಕೇವಲ ಒಂದು ನೆಪವಾಗಿರಬಹುದು, ಆದರೆ ಇಂತಹ ಸನ್ನಿವೇಶಗಳೇ ಪರಸ್ಪರರನ್ನು ಹತ್ತಿರ ತರೋದು. ನೀವೂ ಅನುಸರಿಸಬೇಕೆಂದು ಬಯಸುವಂತಹ ಕೆಲನಿರ್ಧಿಷ್ಟ ಆದ್ಯತೆಗಳು ನಿಮ್ಮ ಬಾಯ್ಫ಼್ರೆಂಡ್ ಗೂ ಇದ್ದಾವು. ಒಂದು ವೇಳೆ ಅಂತಹ ಆದ್ಯತೆಗಳು ಸಕಾರಣಾತ್ಮಕ ಎಂದು ನಿಮಗನಿಸಿದಲ್ಲಿ, ನೀವು ಅವನ್ನು ಒಪ್ಪಿ ಅನುಸರಿಸುವುದರಲ್ಲಿ ತಪ್ಪಿಲ್ಲ.

3. ನಿಮ್ಮನ್ನು ಮುಜುಗುರಕ್ಕೀಡು ಮಾಡುವ ವಿಚಾರಗಳ ಕುರಿತು ಮೊದಲೇ ಆತನಿಗೆ ತಿಳಿಸಿಬಿಡಿ

3. ನಿಮ್ಮನ್ನು ಮುಜುಗುರಕ್ಕೀಡು ಮಾಡುವ ವಿಚಾರಗಳ ಕುರಿತು ಮೊದಲೇ ಆತನಿಗೆ ತಿಳಿಸಿಬಿಡಿ

ಇನ್ನೊಬ್ಬರ ಮನದಲ್ಲಿ ಏನಿದೆ ಅನ್ನೋದನ್ನ ತಿಳಿದುಕೊಳ್ಳುವ ಹಂಬಲ ಯಾರಿಗೆ ತಾನೇ ಇರೋಲ್ಲ ಹೇಳಿ ? ಆದರೆ ಹಾಗೆಲ್ಲ ಇನ್ನೊಬ್ಬರ ಮನಸ್ಸಿನ ಆಲೋಚನಾ ಲಹರಿಯನ್ನು ಕರಾರುವಕ್ಕಾಗಿ ತಿಳಿದುಕೊಳ್ಳೋದು ಅಷ್ಟು ಸುಲಭ ಅಲ್ಲ. ಯಾವುದೇ ಒಂದು ವಿಚಾರದ ಬಗ್ಗೆ ನಿಮಗೇನಾದರೂ ಮುಜುಗುರವಾದಲ್ಲಿ, ಅದನ್ನ ಹಾಗೇನೇ ಮನಸ್ಸಿನಲ್ಲೇ ಮುಚ್ಚಿಟ್ಟುಕೊಳ್ಳೋದಕ್ಕೆ ಹೋಗ್ಬೇಡಿ. ಸಂಗಾತಿಗಳನ್ನ ಹತ್ತಿರಕ್ಕೆ ಬೆಸೆಯುವುದು ಮುಕ್ತ ಮಾತುಕತೆಯೇ. ಹಾಗಾಗಿ, ನೀವು ನಿಮ್ಮ ಭಾವನೆಗಳನ್ನ ನಿಮ್ಮ ಸಂಗಾತಿಯೊಂದಿಗೆ ಮುಕ್ತಮನಸ್ಸಿನಿಂದ ಹೇಳಿಕೊಳ್ಳದೇ ಹೋದಲ್ಲಿ, ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ನೀವೀಬ್ಬರೂ ಪದೇ ಪದೇ ಕಿತ್ತಾಡಿಕೊಳ್ಳೋರಾಗಿದ್ರೆ, ಒಮ್ಮೆ ನಿಮ್ಮ ಕಿತ್ತಾಟವನ್ನು ನಿಲ್ಲಿಸಿ ವಿಷಯದ ಬಗ್ಗೆ ಗಂಭೀರ ಚರ್ಚೆ ಮಾಡೋದೇ ಒಳ್ಳೇದು. ಕೆಲನಿರ್ಧಿಷ್ಟ ಸಂಗತಿಗಳು ನಿಮ್ಮ ಸಂಗಾತಿಗೆ ಅರ್ಥವಾಗದೇ ಹೋಗಬಹುದು. ಅಂತಹ ಪ್ರಕರಣಗಳಲ್ಲಿ, ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿ. ಕಾಲಕ್ರಮೇಣ ಅವರಿಗೆ ವಾಸ್ತವತೆ ಅರಿವಾಗಲೂಬಹುದು. ಪ್ರೀತಿ ಮತ್ತು ಕಾಳಜಿಯೊಂದಿಗೆ ಸಂಬಂಧದ ಕುರಿತಾದ ಒಳಿತು, ಕೆಡುಕುಗಳ ಕುರಿತು ಅವರಿಗೆ ಮನದಟ್ಟು ಮಾಡಿಕೊಳ್ಳಲು ನೆರವಾಗಿ.

4. ಅಲ್ಪಮಟ್ಟಿಗಿನ ಇರಿಸುಮುರುಸುಗಳನ್ನ ನೀವೂ ಸಹಿಸಿಕೊಳ್ಳಿ

4. ಅಲ್ಪಮಟ್ಟಿಗಿನ ಇರಿಸುಮುರುಸುಗಳನ್ನ ನೀವೂ ಸಹಿಸಿಕೊಳ್ಳಿ

ಪರಸ್ಪರರ ಸಂಬಂಧ ಪ್ರವಾಹದಲ್ಲಿ ನೀವೂ ಸಾಗಿರಿ. ನೀವು ನೀವಾಗಿಯೇ ಇರುವ ಮತ್ತು ನಿಮ್ಮ ಸಂಗಾತಿಯು ಏನಂದುಕೊಳ್ಳುತ್ತಾರೋ ಎಂಬ ಭಯದಿಂದ ಮುಕ್ತವಾದ ಸಂಬಂಧದಲ್ಲಿ ನೀವೀಗ ಇದ್ದೀರಿ. ನಿಜವಾದ ಪ್ರೀತಿ, ನಂಬಿಕೆ, ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆ ಅಂದ್ರೆ ಇವೇನೇ. ಹಾಗಾದ್ದರಿಂದ ನಿಮ್ಮೆಲ್ಲ ಭಾವನೆಗಳನ್ನೂ ನಿಮ್ಮ ಮನದಲ್ಲೇ ಅದುಮಿಟ್ಟುಕೊಂಡು ಧುಮುಧುಮು ಕುದಿಯುವವರು ನೀವಾಗೋದು ಬೇಡ. ಒಮ್ಮೆಲೇ ಎಲ್ಲವನ್ನೂ ಹೇಳಿಬಿಡುವುದಕ್ಕೆ ನಿಮಗೆ ಭಯವೆಂದಾದಲ್ಲಿ, ಆಗಾಗ್ಗೆ ಸಾಂದರ್ಭಿಕವಾಗಿ ನಿಮ್ಮ ಯೋಚನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತಪಡಿಸಿ. ಹಾಗೇನೇ ನಿಮ್ಮ ಸಂಗಾತಿಯ ಭಾವನೆಗಳನ್ನೂ, ಯೋಚನೆಗಳನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದುವೇ ಭಾವನೆಗಳ ಗಟ್ಟಿ ಬೆಸುಗೆಗೆ ಸೋಪಾನ.

5. ಯಾವಾಗಲೂ ನೀವು ನೀವಾಗಿಯೇ ಇರೋದನ್ನ ಖಚಿತಪಡಿಸಿಕೊಳ್ಳಿ

ಸಂಬಂಧದಲ್ಲಿರುವಾಗ ನಿಮ್ಮ ಸ್ವಾತಂತ್ರ್ಯವನ್ನೂ ಕಾಪಾಡಿಕೊಳ್ಳಿ. ನಿಮ್ಮದೇ ಆದ ಯೋಚನೆಗಳು, ಭಾವನೆಗಳಿರುವ ಸ್ವತಂತ್ರ ವ್ಯಕ್ತಿ ನೀವು ಎಂಬ ಅರಿವು ನಿಮಗಿರಲಿ. ಕೆಲ ವಿಚಾರಗಳಲ್ಲಿ ಅದು ಬೇಕಾದರೆ ನಿಮ್ಮ ಸಂಗಾತಿಯ ಯೋಚನೆಗಳು, ಭಾವನೆಗಳಿಗೆ ತದ್ವಿರುದ್ಧವಾಗಿದ್ದರೂ ಪರವಾಗಿಲ್ಲ. ಬಹಳ ಸಾರಿ, ವಿರುದ್ಧ ಭಾವನೆಗಳೇ ಪರಸ್ಪರ ಆಕರ್ಷಿಸುತ್ತವೆ. ಹಾಗಾಗಿ, ಎಲ್ಲ ವಿಚಾರಗಳಲ್ಲೂ ನೀವು ನಿಮ್ಮ ಸಂಗಾತಿಯ ನಿಲುವನ್ನೇ ಒಪ್ಪಬೇಕೆಂದೇನೂ ಇಲ್ಲ. ನಿಮ್ಮದೇ ಆದ ರೀತಿಯಲ್ಲಿ ಉತ್ಪಾದನಾಶೀಲರಾಗಿರಿ, ಇಬ್ಬರಿಗೂ ಪರಸ್ಪರ ಪೂರಕ ಹಾಗೂ ಸ್ವತಂತ್ರ ಎನಿಸುವಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಿರಿ. ತೀರಾ ಬಾವುಕರಾಗಿ ಸಂಗಾತಿಯನ್ನು ಅವಲಂಬಿಸಿರುವುದು ಬೇಡ. ನಿಮ್ಮ ಸಂಗಾತಿಗೂ ಅವರದ್ದೇ ಆದ ವೈಯಕ್ತಿಕ ನಿಲುವುಗಳಿರುತ್ತವೆ. ನಿಮಗಾಗಿ ಹಾಗೂ ನಿಮ್ಮ ಬಾಂಧವ್ಯಕ್ಕಾಗಿ ಅನ್ನೋ ಹಾಗೆ ನಿಮ್ಮ ದಿನದ ಚಟುವಟಿಕೆಗಳನ್ನ ಸಮಾನವಾಗಿ ವಿಭಾಗ ಮಾಡಿ. ಇಬ್ಬರ ನಡುವಿನ ಬಾಂಧವ್ಯ ಸಮತೋಲನವಾಗಿರಬೇಕು ಹಾಗೂ ಅಂತಿಮವಾಗಿ ಅವರವರ ಸ್ವತಂತ್ರವೂ ಅವರವರಿಗೇ ಉಳಿಯಬೇಕು. ಇದೇ ಚಿರಬಾಂಧವ್ಯದ ಗುಟ್ಟು.

ಓರ್ವ ಗರ್ಲ್ಫ಼್ರೆಂಡ್ ಆಗಿ ಕೇವಲ ನಿಮ್ಮ ಬಾಯ್ಫ಼್ರೆಂಡ್ ನ ಬೇಕು-ಬೇಡಗಳನ್ನ ಪೂರೈಸುವುದಷ್ಟೇ ನಿಮ್ಮ ಕೆಲಸವಲ್ಲ ಅನ್ನೋ ಸತ್ಯನಾ ನಿಮಗೆ ಮನದಟ್ಟು ಮಾಡಿಕೊಡುತ್ತವೆ ನಾವು ಪಟ್ಟಿ ಮಾಡಿರುವ ಈ ಮೇಲಿನ ಅಂಶಗಳು. ಪ್ರತೀ ವಿಚಾರದಲ್ಲೂ ಸಮಭಾಗ ಅನ್ನೋದು ಸಂತಸದಾಯಕ, ಕಲಹ-ರಹಿತ ಬಾಂಧವ್ಯಕ್ಕಾಗಿ ಹೆದ್ದಾರಿ ಇದ್ದಂತೆ.

English summary

How To Be The Perfect Girlfriend Without Sacrifing Your Wish

Here are tips to be a perfect girlfriend without sacifing your wish read on,
Story first published: Tuesday, November 10, 2020, 15:00 [IST]
X