For Quick Alerts
ALLOW NOTIFICATIONS  
For Daily Alerts

ಹಲ್ವಾದಷ್ಟೇ ಸಿಹಿಯಾಗಿರಲಿ ಅಣ್ಣ-ತಂಗಿಯರ ಅನುಬಂಧ

By
|

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸುಗ್ಗಿ. ಈ ಮೂರು ನಾಲ್ಕು ತಿಂಗಳುಗಳಲ್ಲಿ ಒಂದಾದ ಮೇಲೊಂದರಂತೆ ಸಾಲುಸಾಲಾಗಿ ಹಬ್ಬಗಳು ಬರುತ್ತಾ ಹೋಗುತ್ತವೆ, ಸಂತೋಷವನ್ನು ನೀಡುತ್ತಾ ಹೋಗುತ್ತವೆ. ಅದರಲ್ಲಿ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ.

ಅಣ್ಣನ ಕೈಗಂಟಿಗೆ ಬಣ್ಣದ ರಾಖಿ ಕಟ್ಟುವ ಮೂಲಕ ತಂಗಿ ತನ್ನ ಅಣ್ಣನು ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನುನೀಡುವಂತಾಗಲಿ ಎಂದು ಹಾರೈಸುತ್ತಾಳೆ. ಅಲ್ಲದೇ ಬಗೆಬಗೆಯ ರುಚಿಕಟ್ಟಾದ ಅಡುಗೆಗಳನ್ನು ಮಾಡಿ ಅಣ್ಣನ ಜೊತೆಗೆ ಮನೆಯವರಿಗೆಲ್ಲಾ ತಿನ್ನಿಸಿ ಸಂಭ್ರಮಿಸುವ ಮೂಲಕ ಹಬ್ಬವನ್ನು ಇಡಿಯ ಕುಟುಂಬ ಆಚರಿಸಿ ಸಂಭ್ರಮಿಸುತ್ತದೆ. ಭಾರತದೆಲ್ಲೆಡೆ ಈ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸಲಾಗುತ್ತದೆ.

ರಕ್ಷಾಬಂಧನಕ್ಕೆ ಸೂಕ್ತವಾದ ಸಿಹಿತಿಂಡಿಗಳೆಂದರೆ ಹಾಲು, ಕುಂಬಳ, ಸಿಹಿಗುಂಬಳ, ಸೋರೆ, ಕೊಬ್ಬರಿ ಮೊದಲಾದವುಗಳಿಂದ ಮಾಡಿದ ಹಲ್ವಾ. ಇಂದು ಸ್ವಾದಿಷ್ಟವಾದ ಸಿಹಿಗುಂಬಳ ಹಲ್ವಾ ಮಾಡುವುದು ಹೇಗೆ ಎಂದು ಕಲಿಯೋಣ. ಕರ್ನಾಟಕದ ಹಲವೆಡೆ ಚೀನೀಕಾಯಿ ಎಂದೂ ಕರೆಯಲ್ಪಡುವ ಈ ಸಿಹಿಗುಂಬಳ ಅತಿ ಹೆಚ್ಚು ಸಿಹಿಯೂ ಅಲ್ಲದ ಸಪ್ಪೆಯೂ ಅಲ್ಲದ ಮಧ್ಯಮ ಸಿಹಿ ಹೊಂದಿರುವ, ಪೌಷ್ಟಿಕವಾದ ತರಕಾರಿಯಾಗಿದ್ದು ಮನೆಯವರೆಲ್ಲರೂ ಸವಿಯಬಹುದಾಗಿದೆ. ಸಿಹಿ ಕುಂಬಳ ಕಾಯಿ ಪಾಯಸ

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಗ್ರಿಗಳು:
*ಸಿಹಿಗುಂಬಳ ತುರಿದದ್ದು: ಎರಡು ಕಪ್
*ಹಾಲು: ಒಂದು ಕಪ್
*ಸಕ್ಕರೆ: ಒಂದು ಕಪ್
*ತುಪ್ಪ: ಒಂದು ಕಪ್
*ಒಣದ್ರಾಕ್ಷಿ : ಸುಮಾರು ಹತ್ತು
*ಏಲಕ್ಕಿ ಪುಡಿ: ಕಾಲು ಟೀ ಚಮಚ (ಅಥವಾ ನಾಲ್ಕು ದೊಡ್ಡ ಗಾತ್ರದ ಏಲಕ್ಕಿಯನ್ನು ಪುಡಿಮಾಡಿ)
*ಗೋಡಂಬಿ: ಸುಮಾರು ಆರು (ಬಿಳಿಯದ್ದು), (ಲಭ್ಯವಿದ್ದರೆ ಬಾದಾಮಿಯನ್ನೂ ಸೇರಿಸಬಹುದು)
*ಕೇಸರಿ: ಎರಡರಿಂದ ಮೂರು ಎಸಳು ಸಾಕು.

ವಿಧಾನ:
1) ಸಿಹಿಗುಂಬಳದ ತುರಿಯನ್ನು ಕುಕ್ಕರ್ ನಲ್ಲಿ ಕೊಂಚವೇ ನೀರಿನೊಡನೆ ಎರಡು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆಗೆಯಿರಿ. ಸಿಹಿಗುಂಬಳವನ್ನು ಹೊರತೆಗೆದು ಒಂದು ತಟ್ಟೆಯ ನಡುವೆ ಹರಡಿ. ತಟ್ಟೆ ಕೊಂಚ ಓರೆಯಾಗಿಸಿದರೆ ಉಳಿದಿದ್ದ ನೀರು ಹರಿದು ಹೋಗುತ್ತದೆ. ಈ ನೀರನ್ನು ನಿವಾರಿಸಿ. ಕೊಂಚ ಒತ್ತಿ ಉಳಿದ ನೀರು ಸಹಾ ಹರಿದು ಹೋಗುವಂತೆ ಮಾಡಿ.
2) ಒಂದು ದಪ್ಪತಳದ ಬಾಣಲೆ ಅಥವಾ ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಎರಡು ದೊಡ್ಡ ಚಮಚ ತುಪ್ಪವನ್ನು ಕಾಯಿಸಿ. ತುಪ್ಪ ಬಿಸಿಯಾದ ಕೂಡಲೇ ಬೇಯಿಸಿದ ಸಿಹಿಗುಂಬಳ ತುರಿಯನ್ನು ಹಾಕಿ
3) ಕುಂಬಳ ಪೂರ್ಣವಾಗಿ ಬೇಯುವವರೆಗೆ ತಿರುವುತ್ತಾ ಇರಿ. ಇದು ಹುರಿಯಲು ಸುಮಾರು ಐದು ನಿಮಿಷ ಬೇಕಾಗಬಹುದು. ಆದರೆ ನಡುನಡುವೆ ತಿರುವುತ್ತಾ ಇರಬೇಕು, ಇಲ್ಲದಿದ್ದರೆ ತಳ ಕಪ್ಪಾಗಿ ರುಚಿ ಹುಳಿಯಾಗುತ್ತದೆ.
4) ಈಗ ಹಾಲು ಹಾಕಿ ಕಲಕಿ. ಬಳಿಕ ಸಕ್ಕರೆ, ಕೇಸರಿ ಹಾಕಿ ಕಲಕಿ. ಹಾಲನ್ನು ಕುಂಬಳದ ತುರಿ ಪೂರ್ಣವಾಗಿ ಹೀರಿಕೊಂಡ ಬಳಿಕ ಉರಿಯನ್ನು ಚಿಕ್ಕದಾಗಿಸಿ ಇನ್ನೂ ಎರಡು ದೊಡ್ಡ ಚಮಚ ತುಪ್ಪವನ್ನು ಹಾಕಿ ತಿರುವಿ.
5) ಈಗ ಏಲಕ್ಕಿಪುಡಿ ಹಾಕಿ ತಿರುವಿ. ತುಪ್ಪ ಬಿಡುತ್ತಿದೆ ಎಂದೆನ್ನಿಸಿದಾಗ ಉರಿ ಆರಿಸಿ ಪಾತ್ರೆಯನ್ನು ಕೆಳಗಿಳಿಸಿ
6) ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಇನ್ನೆರಡು ದೊಡ್ಡ ಚಮಚ ತುಪ್ಪ ಬಿಸಿಮಾಡಿ ಗೋಡಂಬಿ, ದ್ರಾಕ್ಷಿ (ಮತ್ತು ಬಾದಾಮಿ) ಗಳನ್ನು ಹಾಕಿ ಕೆಂಪಗಾಗುವಷ್ಟು ಹುರಿಯಿರಿ.
7) ಹುರಿದ ಗೋಡಂಬಿ ದ್ರಾಕ್ಷಿಯನ್ನು ಕುಂಬಳ ತುರಿಗೆ ಹಾಕಿ ಮಿಶ್ರಣ ಮಾಡಿ.
8) ಬಿಸಿಬಿಸಿಯಿರುವಂತೆಯೇ ನಿಮ್ಮ ಅಣ್ಣನಿಗೆ ತಿನ್ನಿಸಿ, ಜೀವನದ ಆನಂದ ಪಡೆಯಿರಿ.

ಸಲಹೆ:
ಇದರಲ್ಲಿ ಸಕ್ಕರೆ ಮಧ್ಯಮ ಪ್ರಮಾಣದಲ್ಲಿರುವುದರಿಂದ ಮಧುಮೇಹಿಗಳು ಕೊಂಚ ಪ್ರಮಾಣದಲ್ಲಿ ಮಾತ್ರ ಸೇವಿಸಬಹುದು. ಇನ್ನುಳಿದಂತೆ ಎಲ್ಲರೂ ಸವಿಯಬಹುದು.

English summary

Raksha Bandhan Special: Sweet Pumpkin Halwa Recipe

The most loved season for all the Indians is shravan. During this time there are many festivals that are celebrated during this span of 3 to 4 months. Among these festivals there is one famous festival that all Indians wait to celebrate, and it is the 'raksha bandhan'. On this occasion, today we shall teach you how to prepare halwa with sweet pumpkin. This is the one of the best recipes that you have to try for raksha bandhan
X
Desktop Bottom Promotion