For Quick Alerts
ALLOW NOTIFICATIONS  
For Daily Alerts

ಅಕ್ಕರೆಯ ಅಕ್ಕತಂಗಿಯರಿಗೆ ಸಕ್ಕರೆ ಹೋಳಿಗೆ

By Super
|
Sakkare Holige
ಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ. ಅಳಿಯ ಅಲ್ಲ ಮಗಳ ಗಂಡ. ಆಕಾರ, ಸವಿ ಒಂದೇ ಆದರೂ ಕರೆಯುವ ಹೆಸರು ನಾನಾ ಬಗೆ.

ವಾಣಿ ನಾಯಿಕ

ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಹೊಟ್ಟೆ ಚುರುಗುಟ್ಟಲು ಪ್ರಾರಂಭಿಸುತ್ತದೆ. ದೇವಿಯ ಪೂಜೆಯಾದ ಮೇಲೆ ಪೇಟ್ ಕಿ ಪೂಜಾ. ಪೂಜೆ ಮುಗಿಸಿ ಧನ್ಯತಾಭಾವ ಹೊಂದಿದ ಕೈಗಳಿಗೆ ವಿವಿಧ ಬಗೆಯ ಐಟಂಗಳನ್ನು ಮಾಡಿ ಮನೆಮಂದಿಗೆಲ್ಲ ಬಡಿಸುವ ಸಡಗರ. ಬಾಳೆ ಎಲೆತುಂಬ ಬಡಿಸಿದ ತಿನಿಸುಗಳಲ್ಲಿ ಹೋಳಿಗೆಗೆ ವಿಶೇಷ ಸ್ಥಾನ.

ಹೋಳಿಗೆಯಾದರೂ ಅನ್ನಿ, ಒಬ್ಬಟ್ಟಾದರೂ ಅನ್ನಿ, ಪೋಳಿಯಾದರೂ ಅನ್ನಿ. ಅಳಿಯ ಅಲ್ಲ ಮಗಳ ಗಂಡ. ಆಕಾರ, ಸವಿ ಒಂದೇ ಆದರೂ ಕರೆಯುವ ಹೆಸರು ನಾನಾ ಬಗೆ. ಅನೇಕತೆಯಲ್ಲಿ ಏಕತೆ! ಹೋಳಿಗೆಗಳಲ್ಲಿಯೂ ವೆರೈಟಿ ವೆರೈಟಿ ಹೋಳಿಗೆಗಳಿವೆ.

ಹೋಳಿ ಹುಣ್ಣಿಮೆಯ ದಿನ ಹೂರಣದ ಹೋಳಿಗೆಯೇ ಆಗಬೇಕಾದರೆ, ಕಾಯಿ ಒಬ್ಬಟ್ಟಿಗೆ ನಿಗದಿತ ಹಬ್ಬವೆಂದೇ ಇಲ್ಲ. ಕೆಲವರ ಮನೆಯಲ್ಲಿ ಎಲ್ಲ ಹಬ್ಬ ಸಮಾರಂಭಗಳಲ್ಲಿ ಹೂರಣದ ಹೋಳಿಗೆಯನ್ನೇ ಮಾಡಿದರೆ ಸಕ್ಕರೆ ಹೋಳಿಗೆ ಮಾತ್ರ ಸರ್ವರಿಂದ ಪೂಜಿತವಾಗುವ ವರಮಹಾಲಕ್ಷ್ಮಿ ಹಬ್ಬದಂದು ಮಾಡಬೇಕಾದ ವಿಶೇಷ ಸಿಹಿ. ಸಕ್ಕರೆ ಹೋಳಿಗೆಯನ್ನು ಹೇಗೆ ಮಾಡುವುದೆಂದು ನೋಡೋಣ.

ಬೇಕಾಗುವ ಪದಾರ್ಥಗಳು
ಸಕ್ಕರೆ ಪುಡಿ
ಚಿರೋಟಿ ರವೆ
ಏಲಕ್ಕಿ ಪುಡಿ
ತುಪ್ಪ
ಹಾಲು
ಒಣ ಕೊಬ್ಬರಿ ತುರಿ

ಮಾಡುವ ವಿಧಾನ :
ಮೊದಲು ಸಕ್ಕರೆಯನ್ನು ಒಣ ಕೊಬ್ಬರಿ ತುರಿಯೊಂದಿಗೆ ಮಿಕ್ಸಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ಸಕ್ಕರೆ ಪುಡಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಅದಕ್ಕೆ ಹಾಲು ತುಪ್ಪ ಹಾಕಿ ಚೆನ್ನಾಗಿ ಕಲಿಸಿಟ್ಟುಕೊಳ್ಳಬೇಕು. ಹಾಲು ಜಾಸ್ತಿಯಾಗಿ ಅಳ್ಳಕಾಗದಂತೆ ನೋಡಿಕೊಳ್ಳಬೇಕು. ನಂತರ ಚಿರೋಟಿ ರವೆಗೆ ಸ್ವಲ್ಪ ಮಾತ್ರ ತುಪ್ಪ ಬೆರೆಸಿ ನೀರು ಹಾಕಿ ಚಪಾತಿ ಹಿಟ್ಟಿನಂತೆ ಚೆನ್ನಾಗಿ ನಾದಿಕೊಳ್ಳಬೇಕು.

ಆ ಹಿಟ್ಟನ್ನು ಪೂರಿಯಂತೆ ಸಣ್ಣದಾಗಿ ಮೊದಲು ಲಟ್ಟಿಸಿಕೊಂಡು ಅದಕ್ಕೆ ಸಕ್ಕರೆ ಹುದುವಿನ ಸಣ್ಣ ಉಂಡೆಯನ್ನು ಮಧ್ಯದಲ್ಲಿಟ್ಟು ಹಿಟ್ಟಿನಿಂದ ಪೂರ್ತಿ ಮುಚ್ಚಬೇಕು. ಅದನ್ನು ಕೈಯಿಂದ ತಟ್ಟಿಯೋ ಲಟ್ಟಣಿಗೆಯಿಂದ ಲಟ್ಟಿಸಿಯೋ ತವಾ ಮೇಲೆ ಹಾಕಿ ಕಂದುಬಣ್ಣಬರುವವರೆಗೆ ಬೇಯಿಸಬೇಕು. ಬೇಯಿಸುವಾಗ ಸ್ವಲ್ಪ ಎಣ್ಣೆ ಅಥವ ತುಪ್ಪ ಹಾಕಿದರೆ ಅಂಟಿಕೊಳ್ಳದಂತೆ ಎದ್ದುಬರುತ್ತದೆ.

ಪೂಜೆ ಪುನಸ್ಕಾರಗಳನ್ನೆಲ್ಲ ಮುಗಿಸಿಕೊಂಡು ಬಂಧುಬಾಂಧವರೊಂದಿಗೆ ಬಾಳೆ ಎಲೆ ಮುಂದೆ ಕುಳಿತುಕೊಂಡು ಊಟ ಮಾಡುವಾಗ ಡಯಾಬಿಟಿಕ್ ಪೇಷಂಟ್‌ಗಳೂ ಎರ‌ಡು ಹೆಚ್ಚಿಗೆ ತಿನ್ನಬೇಕು ಹಾಗಿರುತ್ತದೆ ಸಕ್ಕರೆ ಹೋಳಿಗೆಯ ರುಚಿ. ಹಬ್ಬ ಸಮೃದ್ಧವಾಗಲಿ. ನಿಮ್ಮ ಬಾಳು ಸಿಹಿಯಾಗಲಿ. ಸಕ್ಕರೆ ಹೋಳಿಗೆ ತಯಾರಿಸುವ ಕ್ರಮವನ್ನು ನಿಮ್ಮ ಸ್ನೇಹಿತರು , ಬಂಧು ಬಾಂಧವರಿಗೆ ಈಮೇಲ್‌ ಮಾಡಿ.

X
Desktop Bottom Promotion