For Quick Alerts
ALLOW NOTIFICATIONS  
For Daily Alerts

ಜೋಕಾಲಿ ಆಡೋಣ ಬನ್ನಿರೋ ತಂಬಿಟ್ಟು ತಿನ್ನೋಣ ಬನ್ನಿರೋ

By Staff
|
Jokali
ಹಿಂದೂಗಳ ಹಬ್ಬಗಳ ಸ್ವಾರಸ್ಯವೇ ಅಂತಹುದು. ಹಬ್ಬ ನೆಪದಲ್ಲಿ ನಾನಾತರಹದ ಆಟ, ನೆಂಟರಿಷ್ಟರ ಒಡನಾಟ. ಶ್ರಾವಣದಲ್ಲಿ ಭೀಮನ ಅಮವಾಸ್ಯೆ ನಂತರ ಬರುವ ಮೊದಲ ಹಬ್ಬವೇ ನಾಗರಪಂಚಮಿ. ನಾಗರಪಂಚಮಿಯಂದು ಮಾಡೋಣ ಗಟ್ಟಿಮುಟ್ಟಾದ ಹಲ್ಲುಗಳಿಲ್ಲದಿದ್ದರೂ ಅಚ್ಚುಕಟ್ಟಾಗಿ ಮಾಡಿದ ರುಚಿಕಟ್ಟಾದ ತಂಬಿಟ್ಟು!

ಪ್ರಸಾದ ನಾಯಿಕ

ನಾವು ಚಿಕ್ಕವರಿದ್ದಾಗ ನಾಗರಪಂಚಮಿ ಹಬ್ಬ ಬಂದಿತೆಂದರೆ ಒಂದು ಬಗೆಯ ಸಂತಸ ಮತ್ತು ಒಂದು ಬಗೆಯ ದುಃಖ ಒಟ್ಟಿಗೇ ಆಗುತ್ತಿದ್ದವು. ದುಃಖವೇಕೆಂದರೆ ಇದು ಹೆಣ್ಣುಮಕ್ಕಳ ಹಬ್ಬವೆಂದು ಹೆಣ್ಣುಮಕ್ಕಳ ಶಾಲೆಗೆ ಮಾತ್ರ ರಜಾ ಕೊಡುತ್ತಿದ್ದರು. ನಾವು ಓದುತ್ತಿದ್ದುದು ಗಂಡು ಮಕ್ಕಳ ಶಾಲೆ. ಹೀಗಾಗಿ ರಜಾ ಕೊಡದೆ ಶಾಲೆಯವರು ಸಂತಸಪಡುತ್ತಿದ್ದರು.

ಹುಡಿಗ್ಯಾರಿಗೆಲ್ಲಾ ಸೂಟಿ ಕೊಟ್ಟಾರ್ರಿ, ನಮಗಿಲ್ರೀ ಸರ ಅಂತ ಮಾಸ್ತರನ್ನ ಕೇಳಿದ್ರ... ನಿಮಗ್ಯಾಕ ಬೇಕ್ರಲೇ ಸೂಟಿ? ಇಡೀ ದಿನ ಮಂಗ್ಯಾಗೋಳಂಗ ಜೋಕಾಲಿ ಆಡಕೋತ ಕೂಡತೀರಿ ಅಂತ ಚಾಷ್ಟಿ ಮಾಡುತ್ತಿದ್ದರು. ಮಾಸ್ತರುಗಳಿಗೆ ಚೆಲ್ಲಾಟ ಮಕ್ಕಳಿಗೆ ಪ್ರಾಣಸಂಕಟ!

ಚೌತಿಯಂದು ಶಾಲೆ ಪ್ರಾರಂಭವಾಗಿ ಸಾಯಂಕಾಲ ಗಂಟೆ ಬಾರಿಸುವರೆಗೂ ನಮ್ಮ ಗಮನವೆಲ್ಲ ಜೋಕಾಲಿ ಮೇಲೆ ನೆಟ್ಟಿರುತ್ತಿತ್ತು. ಶಾಲೆ ಬಿಟ್ಟನಂತರ ಪಾಟೀಚೀಲವನ್ನು ಬಿಸಾಕಿ ಯುನಿಫಾರ್ಮ್‌ನಲ್ಲಿಯೇ ಹಂಚಿನ ಮನೆಯ ತೊಲೆಗೆ ಕಟ್ಟಿರುತ್ತಿದ್ದ ಜೋಕಾಲಿಯನ್ನು ಜೀಕಲು ನಾಮುಂದು ತಾಮುಂದು ಎಂದು ಜಗಳಾಡುತ್ತಿದ್ದೆವು. ನಾಮುಂದು ತಾಮುಂದು ಎನ್ನುವುದಕ್ಕೂ ಕಾರಣ ಬೇಕಲ್ಲ. ಮುಂಚಿ ಮನೆಯ ಚೌಕಟ್ಟಿಗೆ ದಾರದಿಂದ ಕಟ್ಟಿದ್ದ ತಂಬಿಟ್ಟು ಉಂಡಿ ಕಾಯುತ್ತಿರುತ್ತಿತ್ತು. ಜೋರಾಗಿ ಜೀಕಿ ಕೈಯಿಂದ ಹಿಡಿಯದೇ ಬಾಯಿಯಲ್ಲಿ ಅದನ್ನು ಹಿಡಿದವನಿಗೇ ಆ ತಂಬಿಟ್ಟು. ಡಬ್ಬಿಯಲ್ಲಿ ತಂಬಿಟ್ಟುಗಳು ತುಂಬಿದ್ದರೂ ಚೌಕಟ್ಟಿಗೆ ಕಟ್ಟಿದ ತಂಬಿಟ್ಟನ್ನು ಕಚ್ಚಿ ತಿನ್ನಬೇಕೆಂಬ ಹುಚ್ಚು ಛಲ ತುಂಬಿರುತ್ತಿತ್ತು. ಆಟದೊಂದಿಗೆ ತಂಬಿಟ್ಟಿನ ಸಿಹಿ. ಮಕ್ಕಳಿಗೆಲ್ಲ ಸಂತಸವೋ ಸಂತಸ.

ನಾಗರಪಂಚಮಿಗೂ ತಂಬಿಟ್ಟಿಗೂ ಅವಿನಾಭಾವ ಸಂಬಂಧ. ವರುಷದ ಯಾವುದೇ ಕಾಲದಲ್ಲಿ ಮಾಡದ ತಂಬಿಟ್ಟು ನಾಗರಪಂಚಮಿಯಂದು ಆಗಲೇಬೇಕು. ಚೌತಿಯ ದಿನವೇ ತಂಬಿಟ್ಟನ್ನು ಮಾಡಿ ಹೆಣ್ಣುಮಕ್ಕಳೆಲ್ಲ ಅರಿಷಿನ ಬೇರಿನಿಂದ ಬರೆದ ನಾಗರಹಾವಿಗೆ ನೀರು, ಹಾಲು, ಬೆಲ್ಲದ ನೀರು ಎರೆದು, ಹುಣಸೆಹಣ್ಣು, ಅರಳು, ಕಡಲೆಕಾಯಿ, ಉಪ್ಪು, ತೆಂಬಿಟ್ಟು ಏರಿಸಿದರೂ ನಮಗೆ ಪಂಚಮಿಯ ದಿನ ಎಣ್ಣೆನೀರು ಸ್ನಾನ ಮಾಡಿ ಬೆಳ್ಳಿಹಾವಿಗೆ ಹಾಲೆರೆಯುವ ಮುನ್ನ ತಂಬಿಟ್ಟು ತಿನ್ನಲು ಸಿಗುತ್ತಿರಲಿಲ್ಲ.

ಹುಬ್ಬಳ್ಳಿಯಂಥ ನಗರಗಳಲ್ಲಿ ಹುಣಸೆಮರಕ್ಕೇ ಬಾವಿಸೇದುವ ಹಗ್ಗದಿಂದ ದೊಡ್ಡದಾದ ಜೋಕಾಲಿಯನ್ನು ಕಟ್ಟಿ ಕಟ್ಟಿಗೆಯ ಮೇಲೆ ನಿಂತು ಜೀಕುತ್ತಿದ್ದ ನೆನಪು ಇನ್ನೂ ಹಸಿರಾಗಿದೆ. ಕೆಹೂ ಅಂದುಕೊಂಡು ಜೀಕುತ್ತಿದ್ದವರ, ಸುತ್ತ ನೆರೆದವರ ಸಂತಸ ಹುಣಸೆ ಮರವನ್ನೂ ದಾಟಿರುತ್ತಿತ್ತು. ಈಗ ಊರಿನಲ್ಲಿ ಹುಣಸೆಮರಗಳೂ ಇಲ್ಲ ಜೋಕಾಲಿಯೂ ಇಲ್ಲ!

ಮತ್ತೊಂದು ವಿಶೇಷವೆಂದರೆ, ತಂಬಿಟ್ಟು, ಚಕ್ಕುಲಿ, ಖಾರವಲಕ್ಕಿ ತುಂಬಿದ ಡಬ್ಬಿ ಎಲ್ಲ ನೆಂಟರಿಷ್ಟರ ಮನೆಗೂ ರವಾನೆಯಾಗುವುದು. ಈಗಲೂ ಕೂಡ ಇದು ಚಾಲ್ತಿಯಲ್ಲಿದೆ. ಸಹೋದರಿ ಸಹೋದರನ ಮನೆಗೆ ಹೋಗಿ ಸಹೋದರನ ಬೆನ್ನಿನ ಮೇಲೆ ಹಾಲು ತುಪ್ಪ ಹಾಕಿ ಅಣ್ಣನ ಮನೆ ಮನಸ್ಸು ಚೆನ್ನಾಗಿರಲಿ ಅಂತ ಹಾರೈಸಿ ತಂಬಿಟ್ಟು ಕೊಟ್ಟು, ತಂಬಿಟ್ಟು ತೊಗೊಂಡು ಬರುತ್ತಾಳೆ.

ಒಬ್ಬೊಬ್ಬರ ಮನೆಯದು ಒಂದು ಬಗೆಯ ತಂಬಿಟ್ಟಿನ ರುಚಿ. ಒಂದು ಬಾರಿ ಏನಾಯಿತೆಂದರೆ, ಒಬ್ಬ ನೆಂಟರ ಮನೆಗೆ ಹೋದಾಗ ಬೇಡಬೇಡವೆಂದರೂ ಅವಲಕ್ಕಿ, ಚಕ್ಕುಲಿ, ತಂಬಿಟ್ಟು ತಂದಿಟ್ಟರು. ತಂಬಿಟ್ಟು ತಿಂದು ತಿಂದು ಸಾಕಾಗಿದ್ದ ನನಗೆ ಮತ್ತೆ ತಿನ್ನುವುದು ಬೇಡವಾಗಿತ್ತು. ಅದ್ಯಾವ ರೀತಿ ಮಾಡಿದ್ದರೋ. ಏನು ಜಾಸ್ತಿಯಾಗಿತ್ತೋ, ಏನು ಕಡಿಮೆಯಾಗಿತ್ತೋ ಬಾಯಲ್ಲಿಟ್ಟ ತಕ್ಷಣ ಗಟ್ಟಿ ಕಲ್ಲನ್ನು ಕಡಿದ ಅನುಭವ. ಅವಲಕ್ಕಿಗೆ ಸ್ಪಲ್ಪ ಹಾಲು ಮೊಸರು ಬೇಕಂತ ಅವರನ್ನು ಅಡುಗೆ ಮನೆಗೆ ಅಟ್ಟಿ ತಂಬಿಟ್ಟನ್ನು ಜೋಬಿನಲ್ಲಿ ಏರಿಸಿದ್ದೆ. ನೆನೆಸಿಕೊಂಡರೆ ಈಗಲೂ ನಗೆ ಬರುತ್ತದೆ.

ಸರಿಯಾದ ಹದ ಸೇರಿದ್ದರೆ ತಂಬಿಟ್ಟು ಎಷ್ಟು ರುಚಿಯಾಗಿರುತ್ತದೋ ಹದ ಕೆಟ್ಟರೆ ಅದು ಕಬ್ಬಿಣದ ಕಡಲೆಯಿದ್ದಂತೆ. ಸರಿಯಾದ ಪ್ರಮಾಣದಲ್ಲಿ ಬೇಕಾದ ಪದಾರ್ಥಗಳನ್ನು ಬೆರೆಸಿದ ಸ್ವಾದಿಷ್ಟ ತಂಬಿಟ್ಟನ್ನು ಹೇಗೆ ಮಾಡುವುದು ಎಂದು ನೋಡೋಣ.

ಪದಾರ್ಥಗಳನ್ನು ಗುರುತಿಸಿಕೊಳ್ಳಿ

ಪುಟಾಣಿ (ಕಡ್ಲೆಪಾಪು ಅಂತ ಬೆಂಗಳೂರಿನ ಜನ ಕರೆಯುತ್ತಾರೆ) : ಎರಡು ಕಪ್ಪುಬೆಲ್ಲ : ಒಂದು ಬಟ್ಟಲುತುಪ್ಪ : ಒಂದು ಬಟ್ಟಲುಒಣ ಕೊಬ್ಬರಿ : ಅರ್ಧ ಬಟ್ಟಲುಶೇಂಗಾ (ಕಡ್ಲೆಬೀಜ) : ಕಾಲು ಬಟ್ಟಲುಎಳ್ಳು, ಏಲಕ್ಕಿ ಪುಡಿ

ಮಾಡುವ ವಿಧಾನ

ಮೊದಲು ಪುಟಾಣಿಯನ್ನು ಗ್ರೈಂಡರ್‌ಗೆ ಹಾಕಿ ಸಣ್ಣಗೆ ಪುಡಿ ಮಾಡಿಕೊಳ್ಳಬೇಕು. ಅದಕ್ಕೆ ಚೆನ್ನಾಗಿ ಹುರಿದ ಶೇಂಗಾ, ಎಳ್ಳು, ಏಲಕ್ಕಿಪುಡಿ ಬೆರೆಸಿಟ್ಟುಕೊಳ್ಳಬೇಕು. ನಂತರ ಬಾಣಲೆಗೆ ತುಪ್ಪ ಸುರಿದು ಅದು ಕರಗಿದಮೇಲೆ ಅದಕ್ಕೆ ಬೆಲ್ಲವನ್ನು ಸೇರಿಸಿ ನಿರಂತರವಾಗಿ ಕೈಯಾಡಿಸುತ್ತಿರಬೇಕು. ಚೌಕ ಬೆಲ್ಲಕ್ಕಿಂದ ದುಂಡಗಿನ ಮೆತ್ತನೆಯ ಬೆಲ್ಲ ಉತ್ತಮ. ಬೆಲ್ಲ ತುಪ್ಪದೊಡನೆ ಚೆನ್ನಾಗಿ ಬೆರೆತು ಅದು ಕುದಿ ಬಂದನಂತರ ಕೆಳಕ್ಕಿಳಿಸಬೇಕು. ನೆನಪಿರಲಿ, ಬೆಲ್ಲ ತುಪ್ಪದ ಮಿಶ್ರಣ ತೀರಾ ಗಟ್ಟಿಯೂ ಆಗಬಾರದು.

ಬೆಲ್ಲದ ಪಾಕ ತುಸು ಆರಿದ ನಂತರ ಪುಟಾಣಿ ಮತ್ತಿತರ ಪದಾರ್ಥಗಳ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪ ಸೇರಿಸುತ್ತ ಉಂಡಿ ಮಾಡಲು ಶುರು ಮಾಡಬೇಕು. ತಂಬಿಟ್ಟಿನ ಆಕಾರವೇ ವಿಶೇಷ ರೀತಿಯದು. ಬೇರೆಲ್ಲ ಉಂಡಿಗಳಂತೆ ದುಂಡಗೆ ಮಾಡಿಟ್ಟರೆ ಅಂದು ತಂಬಿಟ್ಟೇ ಅಲ್ಲ. ಅದನ್ನು ದುಂಡಗೆ ಮಾಡಿ ಭೂಮಿಯ ಉತ್ತರ ದಕ್ಷಣ ಧ್ರುವ ಚಪ್ಪಟೆಗಾಗಿದ್ದಕ್ಕಿಂತ ಜಾಸ್ತಿಯಾಗಿ ತಂಬಿಟ್ಟಿನ ಎರಡು ಧ್ರುವಗಳನ್ನು ಚಪ್ಪಟೆ ಮಾಡಬೇಕು.

ಈಗ ಖಮ್ಮಗಿನ ತಂಬಿಟ್ಟು ತಯಾರ್. ತಂಬಿಟ್ಟು ಮಾಡುವಾಗ ನೀರನ್ನು ಬೆರೆಸುವ ವಿಧಾನವನ್ನೂ ಕೆಲವರು ಅನುಸರಿಸುತ್ತಾರೆ. ಆದರೆ ತುಪ್ಪದ ಪ್ರಮಾಣ ಹೆಚ್ಚಾಗಿದ್ದಷ್ಟು ತಂಬಿಟ್ಟು ಮೆತ್ತಗಿರುತ್ತದೆ ಮತ್ತು ರುಚಿಯಾಗಿರುತ್ತದೆ. ಇಲ್ಲದಿದ್ದರೆ ನಿಮ್ಮ ಮನೆಗೆ ಬಂದವರು ಅವರು ನಾನು ಮಾಡಿದಂತೆ ಜೋಬಲ್ಲಿಟ್ಟು ಹೋಗುವಂತಾಗುತ್ತದೆ. ಮಾಡುವ ವಿಧಾನ ನಿಮಗೇ ಬಿಟ್ಟದ್ದು.

ತಂಬಿಟ್ಟಿನ ಜೊತೆಗೆ ಬೇಸನ್ ಲಾಡು ಖಾಯಂ ಆಗಿ ಇರುತ್ತದೆ ನಮ್ಮ ಮನೆಯಲ್ಲಿ. ತಂಬಿಟ್ಟು ಇಷ್ಟವಿಲ್ಲದವರಿಗೆ ಬೇಸನ್. ಹಾಗೇಯೇ ಹಲವರು ತಂಬಿಟ್ಟಿನ ಜೊತೆಗೆ ಬರೀ ಶೇಂಗಾ ಪುಟಾಣಿಯಿಂದ ಮಾಡಿದ ಉಂಡಿ, ರವೆ ಉಂಡಿ, ಎಳ್ಳಿನ ಉಂಡಿ ಸೇರಿದಂತೆ ಐದು ಬಗೆಯ ಉಂಡಿಗಳನ್ನು ಮಾಡುವ ಪರಿಪಾಠವೂ ಇದೆ.

Story first published: Tuesday, June 16, 2009, 18:15 [IST]
X
Desktop Bottom Promotion