For Quick Alerts
ALLOW NOTIFICATIONS  
For Daily Alerts

ಹೊಸರುಚಿ : ಸೀಮೆ ಬದನೆಕಾಯಿ ಹಲ್ವಾ

By * ವಾಣಿ, ಬೆಂಗಳೂರು
|
Seeme Badane halwa
ಬದನೆಕಾಯಿ ಬಳಸಿ ತಯಾರಿಸಿದ ಹಲ್ವಾ ಎಂದಾದರೂ ತಯಾರಿಸಿದ್ದೀರಾ? ಬದನೆಕಾಯಿ ಹಲ್ವಾನಾ? ಎಂದು ಮುಖ ಕಿವುಚಿಕೊಳ್ಳುವ ಮೊದಲು, ಎಂಥ ಬದನೆಕಾಯಿ ಎಂಬುದನ್ನು ತಿಳಿದುಕೊಳ್ಳಿ. ನಮ್ಮಲ್ಲಿ ಅನೇಕ ಬಗೆಯ ಬದನೆಗಳಿವೆ. ಕೃಷ್ಣಾ ನದಿ ತೀರದಲ್ಲಿ ಹೆಚ್ಚಾಗಿ ಬೆಳೆಯುವ ಕಪ್ಪು ಬದನೆಯಿದೆ, ಗುಳ್ಳ ಬದನೆಯಿದೆ, ಉದ್ದ ಹಸಿರು (ಬಳ್ಳಿ) ಬದನೆಯಿದೆ ಮತ್ತು ಸೀಮೆ ಬದನೆಯಿದೆ. ಬಿಟಿ ಬದನೆಯೂ ಈ ಪಟ್ಟಿ ಸೇರಿಕೊಳ್ಳುವ ಹವಣಿಕೆಯಲ್ಲಿದೆ.

ಇವುಗಳಲ್ಲಿ ಸೀಮೆ ಬದನೆಕಾಯಿಯನ್ನು ಆಯ್ದುಕೊಳ್ಳಿ. ಮಾರುಕಟ್ಟೆಯಲ್ಲಿ ಈಗ ಸಖತ್ ಸೋವಿಯಾಗಿ ಸಿಗುತ್ತಿದೆ. ಹತ್ತು ರುಪಾಯಿಗೆ ಮೂರಂತೂ ಗ್ಯಾರಂಟಿ. ಸೀಮೆಬದನೆಯ ಹುಳಿ, ಪಲ್ಯ, ಕೋಸಂಬರಿ ಮಾಡಿ ತಿಂದು ಬೇಜಾರಾಗಿದ್ದರೆ ಇದೇ ಸೀಮೆ ಬದನೆ ಬಳಸಿ ಹಲ್ವಾ ಮಾಡಲು ತಯಾರಾಗಿ.

ಈ ಸೀಮೆ ಬದನೆ ಹಲ್ವಾ ಸಿಹಿ ತಿನಿಸು ಬೂದುಗುಂಬಳಕಾಯಿಯಿಂದ ತಯಾರಿಸುವ ಹಲ್ವಾಗಿಂತ ಕಡಿಮೆಯೇನೂ ಇಲ್ಲ. ರುಚಿ ಕೂಡ ಅದರಷ್ಟೇ ಸವಿಯಾಗಿರುತ್ತದೆ. ದುಡ್ಡು ಕೂಡ ಉಳಿಸುವ ಈ ಹೊಸರುಚಿಯನ್ನು ಮನೆಯಲ್ಲೇ ಮಾಡಿ ಮನೆಮಂದಿಗೆಲ್ಲ ಬಡಿಸಿರಿ.

ಬೇಕಾಗುವ ಪದಾರ್ಥಗಳ ಪಟ್ಟಿ

* ಸೀಮೆ ಬದನೆ 6
* ಸಕ್ಕರೆ 1 ಬಟ್ಟಲು
* ತುಪ್ಪ ಅರ್ಧ ಬಟ್ಟಲು
* ಹಾಲು ಅರ್ಧ ಬಟ್ಟಲು
* ಗೋಡಂಬಿ, ಬಾದಾಮಿ ನಾಲ್ಕಾರು
* ಏಲಕ್ಕಿ ಪುಡಿ ಅರ್ಧ ಚಮಚ

ತಯಾರಿಸುವ ವಿಧಾನ

20 ರುಪಾಯಿ ಖರ್ಚು ಮಾಡಿ ತಂದ 6 ಜಾಸ್ತಿ ಬಲಿತಿಲ್ಲದ ಸೀಮೆ ಬದನೆಕಾಯಿಗಳನ್ನು ಚೆನ್ನಾಗಿ ತೊಳೆದು ಸಿಪ್ಪೆಯನ್ನು ಸುಲಿದುಕೊಳ್ಳಿ. ಇವುಗಳನ್ನು ಹೆರೆಯುವ ಮಣೆಯಲ್ಲಿ ಹೆರೆದುಕೊಳ್ಳಿ. ಹೆರೆದಾಗ ಮೇಲೆ ನೀರನ್ನೆಲ್ಲ ಬಸಿದು ಒಂದು ಪಾತ್ರೆಯಲ್ಲಿ ತೆಗೆದಿಡಿ.

ಒಲೆಯ ಮೇಲೆ ತಳಹೊತ್ತದ ಪಾತ್ರೆಯನ್ನು ಕಾಯಲಿಟ್ಟು, ಎರಡು ಚಮಚ ತುಪ್ಪ ಹಾಕಿ ಬಸಿದ ಸೀಮೆ ಬದನೆ ತುರಿಯನ್ನು ಮೂರು ನಿಮಿಷ ತಾಳಿಸಿಕೊಳ್ಳಿ. ಇಷ್ಟಾದ ಮೇಲೆ ಹಾಲು ಹಾಕಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.

ಕುದಿಯಲು ಪ್ರಾರಂಭಿಸುತ್ತಿದ್ದಂತೆ ಅದಕ್ಕೆ ಸಕ್ಕರೆ ಮತ್ತು ತುಪ್ಪವನ್ನು ಸುರುವಿ, ಸ್ವಲ್ಪ ಉರಿ ಏರಿಸಿ ಕಾಯಾಡಿಸಲು ಪ್ರಾರಂಭಿಸಿ. ಮಿಶ್ರಣ ಕುದ್ದು ಗಟ್ಟಿಯಾಗಿ ತಳಬಿಟ್ಟು ಏಳುತ್ತಿದ್ದಂತೆ ಪಾತ್ರೆಯನ್ನು ಕೆಳಗಿಳಿಸಿ ಇನ್ನೊಂದು ಪಾತ್ರೆಗೆ ಸುರುವಿಕೊಳ್ಳಿ.

ಇದಕ್ಕೆ ಇನ್ನೊಂದು ಪಾತ್ರೆಯಲ್ಲಿ ತುಪ್ಪದಲ್ಲಿ ಫ್ರೈ ಮಾಡಿಕೊಂಡ ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಬಟ್ಟಲದಲ್ಲಿ ತಿನ್ನಲು ನೀಡಿರಿ. ಏನು ಬೊಂಬಾಟಾಗಿರುತ್ತೆ ಗೊತ್ತಾ?

English summary

Seeme Badane halwa | Brinjal halwa recipe | ಸೀಮೆ ಬದನೆಕಾಯಿ ಹಲ್ವಾ

Seeme badane or brinjal halwa sweet recipe for any occasion. This sweet dish is as delicious as halwa made of ash gourd. Try it at home and serve it to entire family.
Story first published: Monday, November 7, 2011, 16:17 [IST]
X
Desktop Bottom Promotion