For Quick Alerts
ALLOW NOTIFICATIONS  
For Daily Alerts

ಲಂಬೋದರನಿಗೆ ಪ್ರಿಯವಾದ ಲಡ್ಡು ಹೀಗೆ ಮಾಡಿ

|
Boondi ladoo
ಬೂಂದಿ ಲಾಡು ಗಣೇಶನಿಗೆ ತುಂಬಾ ಇಷ್ಟದ ಸಿಹಿ ತಿನಿಸು. ಗಣೇಶ ಚತುರ್ಥಿ ಇನ್ನೇನು ಹತ್ತಿರ ಬರುತ್ತಿರುವ ಕಾರಣ (ಸೆ.1) ಸಿಹಿತಿಂಡಿಗಳ ತಯಾರಿಕೆ ಈಗಲೇ ಮಾಡಿಕೊಳ್ಳಬಹುದು. ಭಾರತೀಯ ಹಬ್ಬಗಳಲ್ಲಿ ವಿಶೇಷವೆನಿಸಿರುವ ಮತ್ತು ಹಬ್ಬಗಳಲ್ಲಿ ಎಲ್ಲ ಮಕ್ಕಳ ಕೈಲೂ ಕಾಣಿಸಿಕೊಳ್ಳುವ ಈ ಬೂಂದಿ ಲಾಡುವನ್ನು ಗಣೇಶ ಹಬ್ಬಕ್ಕೆ ನೀವೇ ತಯಾರು ಮಾಡಿ. ಲಾಡು ಮಾಡುವುದು ಕಷ್ಟವೇನಲ್ಲ. ಸುಲಭವಾಗಿ ಮನೆಯಲ್ಲೇ ತಯಾರುಮಾಡಬಹುದು.

ಲಾಡು ಮಾಡಲು ಬೇಕಾಗುವ ಪದಾರ್ಥಗಳು:

* 2 1/2 ಕಪ್ ಕಡಲೆ ಹಿಟ್ಟು
* 500 ಮಿಲಿ ಹಾಲು
* 1/2 ಚಮಚ ಏಲಕ್ಕಿ ಪುಡಿ
* 3 ಕಪ್ ತುಪ್ಪ
* ಬಾದಾಮಿ ಮತ್ತು ಪಿಸ್ತ

ಪಾಕಕ್ಕೆ ಬೇಕಾಗುವ ಪದಾರ್ಥ

* 2 1/2 ಕಪ್ ಸಕ್ಕರೆ
* 3 1/2 ಕಪ್ ನೀರು
* 2 ಚಮಚ ಹಾಲು
* ಕೇಸರಿ ಬಣ್ಣ

ಲಾಡು ತಯಾರಿಸುವ ವಿಧಾನ:
1. ಪಾಕ: ಲಾಡುವಿಗೆ ಮೊದಲು ಪಾಕವನ್ನು ತಯಾರಿಸಿಟ್ಟುಕೊಳ್ಳಬೇಕು. ನೀರನ್ನು ಕಾಯಲು ಇಟ್ಟು ಸಕ್ಕರೆ ಹಾಕಿ ಅದು ಕರಗುವ ತನಕವೂ ಕಾಯಿಸಬೇಕು. ಅದಕ್ಕೆ 2 ಚಮಚ ಹಾಲು ಬೆರೆಸಿ 3-4 ನಿಮಿಷ ಕಾಯಿಸಬೇಕು. ಮೇಲೆ ನೊರೆ ಏಳಲು ಆರಂಭಿಸುತ್ತಿದ್ದಂತೆ ಚೆನ್ನಾಗಿ ತಿರುಗಿಸಿ ಮತ್ತೆ ಕಾಯಿಸಬೇಕು. ಇದಕ್ಕೆ ಯಾಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಸೇರಿಸಿ ಪಾಕವನ್ನು ಒಂದೆಡೆ ಇಟ್ಟುಕೊಳ್ಳಬೇಕು.

2. ಕಡಲೆಹಿಟ್ಟು ಮತ್ತು ಹಾಲನ್ನು ತೆಳ್ಳನೆ ಹಿಟ್ಟಿನಂತೆ ಕಲೆಸಿಕೊಳ್ಳಬೇಕು. ಬಾಣಲೆಗೆ ತುಪ್ಪ ಹಾಕಿ ಕಾಯಿಸಿ, ಬೆರೆಸಿರುವ ಕಡಲೆ ಹಿಟ್ಟನ್ನು ಸಣ್ಣ ತೂತುಗಳಿರುವ ಹಿಡಿ (ಬೂಂದಿ ತಯಾರಿಸುವಂತಹ ಹಿಡಿ) ಮೂಲಕ ಬಾಣಲೆಗೆ ಸಣ್ಣ ಸಣ್ಣ ಉಂಡೆಗಳಾಗಿ ಬೀಳುವಂತೆ ನೋಡಿಕೊಳ್ಳಬೇಕು.

3. ಬೂಂದಿ ಕೆಂಬಣ್ಣಕ್ಕೆ ತಿರುಗುವ ತನಕ ಬೇಯಿಸಿ ತೆಗೆಯಬೇಕು. ಹೀಗೆ ಎಲ್ಲ ಹಿಟ್ಟು ಖಾಲಿಯಾಗುವ ತನಕ ಬೇಯಿಸಿ, ಕರಿದ ಬೂಂದಿಯನ್ನು ಪಾಕಕ್ಕೆ ಹಾಕಿ ಮತ್ತೆ ಎತ್ತಿ ತಟ್ಟೆಯ ಮೇಲೆ ಹಾರಲು ಬಿಡಬೇಕು.

4. ಅದಕ್ಕೆ ಬಾದಾಮಿ, ಪಿಸ್ತಾ ಚೂರುಗಳನ್ನು ಸೇರಿಸಬೇಕು.

5. 5 ನಿಮಿಷದ ನಂತರ ಬೂಂದಿಗೆ ಸ್ವಲ್ಪ ಬಿಸಿ ನೀರು ಚುಮುಕಿಸಿ ತೇವದ ಕೈಗಳಲ್ಲಿ ಉಂಡೆ ಕಟ್ಟಬೇಕು.

ಈಗ ಗಣಪನಿಗೆ ಇಷ್ಟವಾದ ಬೂಂದಿ ಲಾಡು ತಯಾರಾಗಿದೆ. ಹಬ್ಬದ ಹಿಂದಿನ ದಿನವೇ ಲಾಡುವನ್ನು ಮಾಡಿಟ್ಟುಕೊಂಡು ಗಣಪನಿಗೆ ಪೂಜೆಗೆ ಇಡಬಹುದು. ಮನೆಯಲ್ಲೇ ತಯಾರಿಸಿದ ಈ ಲಾಡು ಮಕ್ಕಳಿಗೂ ಕೂಡ ಅಚ್ಚುಮೆಚ್ಚಾಗುತ್ತದೆ.

English summary

Motichur Ladoo for Ganesh Chaturthi | Boondi Ladoo for Ganesha Festival | ಗಣೇಶ ಚತುರ್ಥಿಗೆ ಬೂಂದಿ ಲಾಡು ರೆಸಿಪಿ

Motichur ladoo or Boondi ladoo is considered as Lord Ganesha's favorite food. For this Ganesh Chaturthi, prepare motichur laddo as the recipe is not very difficult and can be prepared in a matter of minutes. Lets check out the motichur or Boondi ladoo recipe.
Story first published: Saturday, August 27, 2011, 12:36 [IST]
X
Desktop Bottom Promotion