For Quick Alerts
ALLOW NOTIFICATIONS  
For Daily Alerts

ಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ

By Super
|
Obbattu (courtesy : wikipedia)
ಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ ಫಲಿತರೂಪ ಹೋಳಿಗೆಯ ಊಟವೇ.

ಯುಗಾದಿ ಹಬ್ಬದಂದು ಎಲ್ಲರ ಮನೆಯಲ್ಲಿಯೂ ಲಟ್ಟಣಿಗೆಗಳು ಕಣಕ ಹೂರಣವನ್ನು ಲಟ್ಟಿಸುತ್ತಿರುತ್ತವೆ. ಹೊಸದಾಗಿ ಮದುವೆಯಾಗಿ ಮನೆಗೆ ಬಂದಿರುವ ಸೊಸೆ ಕೈನ ಒಬ್ಬಟ್ಟು ರುಚಿ ನೋಡಬೇಕು ಅಂತ ಛೇಡಿಸುತ್ತಲೇ ಮನೆಯವರೆಲ್ಲರೂ ಅಸೈನ್‌ಮೆಂಟ್‌ ನಿಮ್ಮ ಹೆಗಲಿಗೆ ತಗುಲಿಸಿದರೆ ಗಾಬರಿ ಬೇಡ. ಅತ್ತೆಯನ್ನು ಕೇಳಿದರೆ ಏನಂದುಕೊಳ್ಳುತ್ತಾರೋ ಅಂತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಡಿ.

ನಿಮ್ಮ ಅಡುಗೆ ಮನೆ ಷೆಲ್ಫ್‌ನಲ್ಲಿ ಒಬ್ಬಟ್ಟಿಗೆ ಬೇಕಾದ ವಸ್ತುಗಳಿದ್ದರೆ ಸಾಲದು. ಮನೆ ಮಂದಿಯೆಲ್ಲಾ ಖುಷಿಯೆನಿಸುವಷ್ಟು ಒಬ್ಬಟ್ಟು ತಿನ್ನಬೇಕಿದ್ದರೆ, ನಿಮ್ಮ ಲೆಕ್ಕಾಚಾರ ಈಗಲೇ ಶುರುವಾಗಬೇಕು. ನಾಲ್ಕು ದೊಡ್ಡ ಹೊಟ್ಟೆಗಳಿಗೆ ಈ ಲೆಕ್ಕಾಚಾರ ಸರಿಹೊಂದುತ್ತದೆ.

ಒಬ್ಬಟ್ಟಿಗೆ ಬೇಕಾದ ವಸ್ತುಗಳು -

ಚಿರೋಟಿ ರವೆ- ಅರ್ಧ ಕಿಲೋ
ಸಕ್ಕರೆ - ಕಾಲು ಕಿಲೋ
ಮೈದಾ ಹಿಟ್ಟು ಸಕ್ಕರೆಯ ಅರ್ಧದಷ್ಟು
ಅಕ್ಕಿ ಹಿಟ್ಟು - ಐವತ್ತು ಗ್ರಾಂ
ಏಲಕ್ಕಿ - ಎಂಟ್ಹತ್ತು

ಎಲ್ಲವೂ ಸರಿಯಾಗಿದೆಯಾ ಅಂತ ಸರಿಯಾಗಿ ಪರೀಕ್ಷಿಸಿ. ಯಾಕೆಂದರೆ ಹೊತ್ತಿಗಾಗುವಾಗ ಅಂಗಡಿಗೆ ಹೋಗುವ ಪರಿಸ್ಥಿತಿ ಬಂದರೆ ಒಬ್ಬಟ್ಟಿನ ರುಚಿ ಕೈ ಕೊಡಬಹುದು. ಕೆಲಸ ಶುರುಹಚ್ಚಿಕೊಳ್ಳುವ ಮುನ್ನ ಸೀರಿಯಲ್‌ ನೋಡುವುದು ಬೇಡಿ, ಟೇಪ್‌ರೆಕಾರ್ಡರ್‌ ಆಫ್‌ ಮಾಡಿ.

ನಿಮ್ಮ ಕೈ ಚಳಕ ಶುರುವಾಗಲಿ -

ಮೈದಾ ಹಿಟ್ಟನ್ನು ಬೆಚ್ಚಗೆ ಹುರಿದು ಅದಕ್ಕೆ ಸಕ್ಕರೆ ಮತ್ತು ಉಳಿದ ತುಪ್ಪ ಸೇರಿಸಿ ಕಲೆಸಿದರೆ ಹೂರಣ ತಯಾರಾಗುತ್ತದೆ. ಒಬ್ಬಟ್ಟು ತಿನ್ನುತ್ತಿರುವಂತೆಯೇ ಘಮಗುಡುವ ಪರಿಮಳವಿದ್ದರೆ ಚೆಂದ ಅಲ್ಲವಾ ? ಹೂರಣಕ್ಕೆ ನುಣ್ಣಗೆ ಪುಡಿ ಮಾಡಿದ ಏಲಕ್ಕಿ ಬೆರೆಸಿ.

ರವೆಗೆ ಸ್ವಲ್ಪ ತುಪ್ಪ ಹಾಕಿ ಅಕ್ಕಿ ಹಿಟ್ಟನ್ನು ಬೆರೆಸಿದ ನಂತರ ಜಾಗರೂಕತೆಯಿಂದ ನೀರು ಹಾಕಿ ಉಂಡೆ ಕಟ್ಟಲು ಸುಲಭವಾಗುವಂತೆ ಚೆನ್ನಾಗಿ ಕಲೆಸಿ. ಕಣಕ ಚೆನ್ನಾಗ ಬೇಕಿದ್ದರೆ ಈ ಮಿಶ್ರಣವನ್ನು ಚೆನ್ನಾಗಿ ನಾದಬೇಕು . ಕಣಕ ತಯಾರಿಸುವುದರಲ್ಲೇ ಅಡುಗೆಯವರು ಫೇಮಸ್‌ ಆಗಿರುವುದನ್ನು ಕೇಳಿದ್ದೀರಾ ? ಹೂರಣಕ್ಕಿಂತ ಸಣ್ಣ ಕಣಕ ತಯಾರಿಸಿದರೂ ಒಂದಿಷ್ಟು ಒಡಕಿಲ್ಲದೆ ಒಬ್ಬಟ್ಟು ಲಟ್ಟಿಸುವ ಸ್ಕಿಲ್‌ ಇರುವವರೂ ಇದ್ದಾರೆ. ಅಂದರೆ ಕಣಕವನ್ನು ನಾದುವ ಕೈ ಚಳಕ ಹಾಗೂ ನೀರು ಮತ್ತು ತುಪ್ಪದ ಬೆರೆಸುವಿಕೆಯ ಮೂಲೆಯಾಂದರಲ್ಲಿ ಈ ಕೈಗುಣ ಅಡಗಿರುತ್ತದೆ.

ಈ ಸ್ಕಿಲ್‌ಗಳ ಬಗೆಗೆಲ್ಲಾ ತಲೆ ಕೆಡಿಸಿಕೊಳ್ಳದೇ ಇದ್ದರೆ, ಕಣಕವನ್ನು ಚೆನ್ನಾಗಿ ನಾದಿ ಹೂರಣದ ಉಂಡೆಗಿಂತ ತುಸು ದೊಡ್ಡ ಉಂಡೆಗಳನ್ನಾಗಿ ಮಾಡಿ. ಕಣಕವನ್ನು ಚಿಕ್ಕ ಪೂರಿ ಗಾತ್ರಕ್ಕೆ ಮಾಡಿ ಲಟ್ಟಿಸಿ, ಅದರಲ್ಲಿ ಹೂರಣದ ಉಂಡೆಯನ್ನು ಇಟ್ಟು ಕಣಕವನ್ನು ಹೂರಣದ ಉಂಡೆಯ ಸುತ್ತಲೂ ಮುಚ್ಚಿ. ಅಕ್ಕಿ ಹಿಟ್ಟು ಉಪಯೋಗಿಸಿಕೊಂಡು ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿ. ಹೂರಣ ಕಣಕದ ಹೊರಗೆ ಹಣಿಕಿ ಹಾಕಿದರೆ ಕಾವಲಿಯಲ್ಲಿ ಸುಟ್ಟು ಹೋಗಬಹುದು. ಆದ್ದರಿಂದ ಲಟ್ಟಿಸುವಾಗ ನಾಜೂಕಿರಲಿ. ಕಾವಲಿಗೆ ತುಪ್ಪ ಸವರಿ, ಹೋಳಿಗೆ ಮೇಲೂ ತುಪ್ಪ ಹಾಕಿ ಬೇಯಿಸಿಕೊಳ್ಳಿ.

ಒಬ್ಬಟ್ಟು ತಿನ್ನಲು ಸ್ಪೂನ್‌ ತುಪ್ಪ ಇದ್ದರೂ ಸಾಕು. ಆದರೆ ಕಾಯಿ ಹಾಲು ಒಬ್ಬಟ್ಟಿನ ಜೊತೆಗೂಡಿದರೆ ಮೇಡ್‌ ಫಾರ್‌ ಈಚ್‌ ಅದರ್‌.

ಕಾಯಿಹಾಲು ತಯಾರಿಸುವುದು ಅಷ್ಟೇನೂ ಕಷ್ಟವಲ್ಲ

ಒಂದು ಫ್ರೆಶ್‌ ತೆಂಗಿನ ಕಾಯಿಯ ತುರಿಯನ್ನು ಚೆನ್ನಾಗಿ ರುಬ್ಬಿ. ಬೆಳ್ಳಗಿನ ಬಟ್ಟೆಯಲ್ಲಿ ನೀಟಾಗಿ ಸೋಸಿ. ಹತ್ತು ಹನ್ನೆರಡು ಏಲಕ್ಕಿಯನ್ನು ಪುಡಿ ಮಾಡಿ, ನಾಲ್ಕೈದು ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ತುಸು ದಪ್ಪನೆ ಪುಡಿಯಾಗಿಸಿ ಬೆರೆಸಿ. ಸಿಹಿಯ ಅಂದಾಜಿಗೆ ತಕ್ಕಷ್ಟು ಸಕ್ಕರೆ ಬೇರೆಸಿದರೆ ಒಬ್ಬಟ್ಟು ಕಾಯಿ ಹಾಲು ತಯಾರು. ಬಡಿಸುವಾಗ ಜೊತೆಗಷ್ಟು ಅಕ್ಕರೆಯನ್ನು ಸೇರಿಸಿದರೆ ಅದು ಯುಗಾದಿ.

English summary

Sweet dish : Obbattu for Ugadi - ಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ

Sweets for Ugadi. If you don't know how to prepare Obbattu, just read this. This sweet is also called as Holige.
Story first published: Tuesday, March 27, 2012, 12:11 [IST]
X
Desktop Bottom Promotion