For Quick Alerts
ALLOW NOTIFICATIONS  
For Daily Alerts

ಮನೆಯಲಿ ಮಾಡೋಣ ಬನ್ನಿ ಪಾವ್ ಭಾಜಿ

|
Pav Bhaji
ಪಾವ್ ಭಾಜಿ ಈಗ ಮುಂಬೈಕರುಗಳ ದಿನನಿತ್ಯದ ತಿಂಡಿಯಾಗಿ ಉಳಿದಿಲ್ಲ. ಕರ್ನಾಟಕದ ಪಟ್ಟಣಗಳು ಮಾತ್ರವಲ್ಲ ಹಳ್ಳಿಗಳ ಜನರ ಬೀದಿಬದಿಯ ಫೆವರಿಟ್ ತಿಂಡಿಗಳಲ್ಲಿ ಅಗ್ರಸ್ಥಾನ ಪಡೆದಿದೆ. ಭಾಜಿ ಅಂದ್ರೆ ಪಲ್ಯ, ಪಾವ್ ಅಂದ್ರೆ ಬ್ರೆಡ್ ಜಾತಿಗೆ ಸೇರಿದ ಇನ್ನೊಂದು ತಿನಿಸು. ಇರಡೂ ಸೇರಿದರೆ ಪಾವ್ ಭಾಜಿ. ಬರೀ ಬ್ರೆಡ್ ಪಲ್ಯ ತಿನ್ನಲು ಜನ ಇಷ್ಟು ಆಸೆಪಡುತ್ತಾರೆನ್ನುವುದಕ್ಕೆ ಭಾಜಿಯ ರುಚಿಯೇ ಕಾರಣ. ಬೇಕಾದರೆ ಯಾರಾದರೂ ಬಾಜಿ ಕಟ್ಟಿ ನೋಡಲಿ.

ಬೀದಿಬದಿಯ ಗಾಡಿ, ಚಾಟ್ ಹೌಸ್, ಹೊಟೇಲುಗಳಲ್ಲಿ ತಯಾರಿಸುವ ಪಾವ್ ಭಾಜಿ ರುಚಿ ಹೇಗೇ ಇರಲಿ. ಮನೆಯಲ್ಲಿಯೇ ತಯಾರಿಸಿ, ಮನೆಮಂದಿಯೆಲ್ಲ ಸೇರಿ, ಹರಟೆ ಹೊಡೆಯುತ್ತಾ ಪಾವ್ ಭಾಜಿ ತಿನ್ನುವಗಿನ ಸಂತಸದ ಘಳಿಗೆಗೆ ಸರಿಸಮಾನ ಯಾವುದಿದೆ?

ಹಾಗಂತ ಮನೆಯಲ್ಲಿ ಪಾವ್ ಭಾಜಿ ಮಾಡುವುದು ಈಜಿಯೇನಲ್ಲ. ಭಾಜಿ ತಯಾರಿಸಲು ಸಾಕಷ್ಟು ಪದಾರ್ಥಗಳ ಅಗತ್ಯವಿದೆ. ತಯಾರಿಸಲು ಕೂಡ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

* ಬಾಲರಾಜ್, ಬೆಂಗಳೂರು

ಅಗತ್ಯವಾದ ಸಾಮಗ್ರಿಗಳು (ಮೂವರಿಗೆ ಬೇಕಾಗುವಷ್ಟು)

1- ಅಲೂಗಡ್ಡೆ
1- ಸಣ್ಣಗಾತ್ರದ ಕಾಲಿ ಫ್ಲವರ್‌
1/2 - ಕಪ್‌ ಬಟಾಣಿ
1 - ದೊಡ್ಡ ಮೆಣಸಿನಕಾಯಿ (ಚಿಕ್ಕ ಗಾತ್ರದ್ದು)
2 - ಈರುಳ್ಳಿ
4- ಟೊಮಾಟೊ
ಖಾರದಪುಡಿ (ರುಚಿಗೆ ತಕ್ಕಷ್ಟು)
ಉಪ್ಪು (ರುಚಿಗೆ ತಕ್ಕಷ್ಟು)
ಪಾವ್‌-ಭಾಜಿ ಮಸಾಲೆ ಎರಡು ಚಮಚ
ಶುಂಠಿ (ಒಂದಿಂಚು)
ಬೆಳ್ಳುಳ್ಳಿ ಎರಡು ಎಸಳು (ಬೇಕಿದ್ದರೆ)
ಕೊತ್ತಂಬರಿ ಸೊಪ್ಪು
150ಗ್ರಾಂ ಬೆಣ್ಣೆ
1 ನಿಂಬೆ ಹಣ್ಣು
ಪಾವ್ ‌(ಸಿಗದಿದ್ದಲ್ಲಿ ಬ್ರೆಡ್‌ ಉಪಯೋಗಿಸಬಹುದು)

ತಯಾರಿಸುವ ವಿಧಾನ :

1. ಆಲೂ, ಬಟಾಣಿ ಮತ್ತು ಕಾಲಿಫ್ಲವರ್‌ ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ.
2. ದೊಡ್ಡ ಮೆಣಸಿನಕಾಯಿ, ಒಂದು ಈರುಳ್ಳಿ ಸಣ್ಣಗೆ ಹೆಚ್ಚಿ ಪಕ್ಕಕ್ಕಿಡಿ.
3. ಬೆಳ್ಳುಳ್ಳಿ, ಶುಂಠಿ ಮತ್ತು ಇನ್ನೊಂದು ಈರುಳ್ಳಿಯನ್ನು ಮಿಕ್ಸರಿನಲ್ಲಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ.
4. ಟೊಮಾಟೊ ಹಣ್ಣನ್ನು ಹೆಚ್ಚಿ ಅದನ್ನು ಕೂಡ ಮಿಕ್ಸರಿನಲ್ಲಿ ಹಾಕಿ ರಸ ತೆಗೆದು ಇಟ್ಟುಕೊಳ್ಳಿ.

ಬಾಣಲೆಯಲ್ಲಿ ಎರಡು ಚಮಚ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ನಂತರ ರುಬ್ಬಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್‌ ಹಾಕಬೇಕು. ಬೆಳ್ಳುಳ್ಳಿ, ಈರುಳ್ಳಿಯ ಹಸಿವಾಸನೆ ಹೋಗುವ ತನಕ ಸ್ವಲ್ಪ ಹುರಿಯಿರಿ.

ನಂತರ ಸಣ್ಣಗೆ ಹೆಚ್ಚಿದ ದೊಡ್ಡ ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವ ಮತ್ತೆ ಬಾಡಿಸಿರಿ. ಆಮೇಲೆ ಹದ ಮಾಡಿದ ತರಕಾರಿ, ಟೊಮಾಟೋ ರಸವನ್ನು ಸೇರಿಸಿ, ಉಪ್ಪು, ಖಾರದಪುಡಿ ಮತ್ತು ಪಾವ್‌-ಬಾಜಿ ಮಸಾಲ ಬೆರೆಸಿ ಚೆನ್ನಾಗಿ ಅಂದ್ರೆ ಸ್ವಲ್ಪ ಗಟ್ಟಿ ಅಗುವ ತನಕ ಕುದಿಸಿ. ಮೇಲೆ ಸ್ವಲ್ಪ ಬೆಣ್ಣೆ ಹಾಕಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.

ಬಿಸಿಯಾದ ದೋಸೆ ತವದ ಮೇಲೆ ಬೆಣ್ಣೆ ಸವರಿದ ಪಾವ್‌ ಅಥವಾ ಬ್ರೆಡ್‌ತುಣುಕುಗಳನ್ನು ಹಾಕಿ ಸ್ವಲ್ಪ ಟೊಸ್ಟ್‌ ಮಾಡಿ. ಪಾವ್‌ ಮೇಲೆ ಭಾಜಿಯನ್ನಿಡಿ. ಅದರ ಮೇಲೆ ಹಚ್ಚಿದ ಹಸಿ ಈರುಳ್ಳಿ, ಕೊತ್ತಂಬರಿ, ಅರ್ಧ ನಿಂಬೆಹಣ್ಣಿನ ರಸ ಹಾಕಿ ಕಣ್ಣಿಗೆ ಅಂದಕಾಣುವಂತೆ ಮಾಡಬಹುದು.

Story first published: Wednesday, November 11, 2009, 18:37 [IST]
X
Desktop Bottom Promotion