For Quick Alerts
ALLOW NOTIFICATIONS  
For Daily Alerts

ಮರಿಹಿರಿಯರಿಗಾಗಿ ಗರಿಗರಿ ಖಾರ ಬಿಸ್ಕತ್ತು

By * ವಾಣಿ ನಾಯಿಕ, ಬೆಂಗಳೂರು
|
Crunchy crispy biscuits
ಮಾಲ್ ಗಳಿಗೆ, ಸೂಪರ್ ಬಜಾರ್ ಗಳಿಗೆ ಹೋದಾಗ ಗರಿಗರಿ ಖಾರ ಬಿಸ್ಕತ್ತುಗಳನ್ನು ಕಂಡರೆ ಮಕ್ಕಳದಷ್ಟೇ ಅಲ್ಲ ಹಿರಿಯರ ಕಣ್ಣುಗಳು ಕೂಡ ಅರಳುತ್ತವೆ. ಬಾಯಿಯಲ್ಲಿ ಲಾಲಾರಸ ತಾನಾಗಿಯೇ ಒಸರಲು ಪ್ರಾರಂಭಿಸುತ್ತದೆ. ಕೊಂಡು ತಿಂದರೆ ಕ್ಷಣಮಾತ್ರದಲ್ಲಿ ಬಿಸ್ಕತ್ತಿನ ಪೊಟ್ಟಣ ಮಾತ್ರವಲ್ಲ ಜೇಬು ಕೂಡ ಖಾಲಿಯಾಗಿರುತ್ತದೆ. ತಾಪತ್ರಯವೇ ಬೇಡವೆಂದು ಮನೇಲೇ ಕ್ರಂಚಿ ಖಾರ ಬಿಸ್ಕತ್ತುಗಳನ್ನು ಮಾಡಿ ಮನೆಮಂದಿಗೆಲ್ಲ ತಿನ್ನಿಸಬಹುದು. ಏನಂತೀರಾ?

ಬೇಕಾಗುವ ಸಾಮಗ್ರಿಗಳು

ಮೈದಾ 2 ಕಪ್ | ಚಿರೋಟಿ ರವೆ 1/4 ಕಪ್ | ಅಚ್ಚ ಖಾರದ ಪುಡಿ 3 ಚಮಚ | ಪುಡಿ ಸಕ್ಕರೆ 5 ಚಮಚ | ಬಿಳಿ ಎಳ್ಳು ಸ್ವಲ್ಪ | ಕರಿಯಲು ಸನ್ ಫ್ಲವರ್ ಎಣ್ಣೆ | ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ ಚಪಾತಿ ಹಿಟ್ಟಿನ ಹದ ಬರುವಂತೆ ಕಲಿಸಿಕೊಳ್ಳಬೇಕು. ಹಿಟ್ಟು ಕಲಿಸುವಾಗ ಒಂದು ಸ್ಪೂನಿನಷ್ಟು ಕಾದ ಎಣ್ಣೆ ಹಾಕಿದರೆ ಬಿಸ್ಕತ್ತುಗಳು ಗರಿಗರಿಯಾಗಿ ಬರುತ್ತವೆ. ಹಿಟ್ಟನ್ನು ದುಂಡಗೆ ಪರೋಟಾದಂತೆ ದಪ್ಪಗೆ ಲಟ್ಟಿಸಿಕೊಂಡು ಬಿಸ್ಕತ್ತಿಗೆ ಬೇಕಾದಂತೆ ದುಂಡಾಕೃತಿಯಲ್ಲೋ, ಚೌಕಾಕೃತಿಯಲ್ಲೋ, ವಜ್ರಾಕಾರದಲ್ಲೋ ಕತ್ತರಿಸಿಕೊಳ್ಳಬೇಕು.

ಇಷ್ಟೆಲ್ಲಾ ಆದ ಮೇಲೆ ಒಂದು ಬಾಣಲೆಗೆ ಸನ್ ಫ್ಲವರ್ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಕತ್ತರಿಸಿಟ್ಟುಕೊಂಡ ಹಿಟ್ಟನ್ನು ನಾಲ್ಕಾರಂತೆ ತೇಲಿಬಿಡಿ. ಕಂದು ಬಣ್ಣ ಬಂದ ನಂತರ ತೆಗೆದು ಒಂದು ಪೇಪರಿನ ಮೇಲೆ ಹರವಿ ಎಣ್ಣೆ ಹೀರಿಕೊಳ್ಳಲು ಬಿಡಿ. ಖಾರ ಬಿಸ್ಕತ್ತುಗಳನ್ನೆಲ್ಲ ಒಂದು ಏರ್ ಟೈಟ್ ಡಬ್ಬದಲ್ಲಿ ಹಾಕಿ ಮಕ್ಕಳು ದೊಡ್ಡವರಿಗೆಲ್ಲ ಬೇಕಾದಾಗ ಕೊಟ್ಟು ಆನಂದಪಡಿಸಿ.

Story first published: Friday, May 14, 2010, 14:36 [IST]
X
Desktop Bottom Promotion