For Quick Alerts
ALLOW NOTIFICATIONS  
For Daily Alerts

ರುಚಿಕರ ಪಾಲಕ್ ರೈಸ್ ಬಾತ್ ತಯಾರಿಸುವ ವಿಧಾನ

|

ಮುಂಜಾವಿನ ಬೆಳಕು ನಮ್ಮಲ್ಲಿ ಬತ್ತದ ಉತ್ಸಾಹವನ್ನು ತರಬೇಕೆಂದೇ ನಾವು ಹಲವಾರು ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಬೆಳಗ್ಗಿನ ನಮ್ಮ ಉತ್ತಮ ವಿಚಾರಗಳೇ ದೈನಂದಿನ ನಮ್ಮ ಸಂತಸವನ್ನು ಇಮ್ಮಡಿಗೊಳಿಸುವಂಥದ್ದು. ಅದಕ್ಕಾಗಿಯೇ ನಸುಕಿನ ವೇಳೆಯಲ್ಲಿ ಪ್ರಾಣಾಯಾಮ, ಯೋಗಾಭ್ಯಾಸ, ಓಟ ಮೊದಲಾದ ಚಟುವಟಿಕೆಗಳನ್ನು ವೈದ್ಯರು ನಮಗೆ ಶಿಫಾರಸು ಮಾಡುತ್ತಾರೆ.

ಅಂತೆಯೇ ಬೆಳಗಿನ ಜಾವದಲ್ಲಿ ನಾವು ಸೇವಿಸುವ ಆಹಾರ ಕೂಡ ನಮ್ಮ ಚಟುವಟಿಕೆಯನ್ನು ಉದ್ದೀಪನಗೊಳಿಸುವಲ್ಲಿ ಅತಿ ಮುಖ್ಯವಾದುದು ಎಂಬುದೂ ನಿಮಗೆ ತಿಳಿದಿರಲಿ. ಹಾಗಿದ್ದರೆ ಇದಕ್ಕಾಗಿ ಏನು ಮಾಡುವುದು ಎಂದು ಹೆಚ್ಚು ಚಿಂತಿಸದಿರಿ ನಿಮ್ಮ ಆರೋಗ್ಯವನ್ನು ಕಾಪಾಡುವ ಮತ್ತು ಚಟುವಟಿಕೆಯಿಂದ ನಿಮ್ಮನ್ನು ಇರಿಸುವ ಪಾಲಕ್ ರೈಸ್ ಬಾತ್ ರೆಸಿಪಿಯೊಂದಿಗೆ ಬಂದಿದ್ದೇವೆ...

ಅದರಲ್ಲೂ ಬೆಳಗೆ ಬೇಗನೇ ಉಪಾಹಾರ ಮುಗಿಸಿ ಆಫೀಸ್‌ಗೆ ಹೊರಡುವ ಧಾವಂತದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗಂತೂ ಈ ರೆಸಿಪಿ ಅತ್ಯುಪಯುಕ್ತವಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನದ ಮತ್ತು ರಾತ್ರಿಯೂಟದಲ್ಲಿಯೂ ಪ್ರಮುಖ ಖಾದ್ಯವನ್ನಾಗಿ ಬಡಿಸಬಹುದು. ಬನ್ನಿ, ಬಹು ಬೇಗನೇ ತಯಾರಿಸಬಹುದಾದ ಈ ರುಚಿಕರ ಮತ್ತು ಆರೋಗ್ಯಕರ ಪಾಲಕ್ ರೈಸ್ ತಯಾರಿಸುವ ವಿಧಾನವನ್ನು ನೋಡೋಣ:

ಈ 9 ಕಾಯಿಲೆಯನ್ನು ತಡೆಗಟ್ಟುವ ಗುಣ ಪಾಲಾಕ್ ನಲ್ಲಿದೆ!

*ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಹದಿನೈದು ನಿಮಿಷಗಳು

*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಅಕ್ಕಿ: ಅರ್ಧಕೇಜಿ (ಚೆನ್ನಾಗಿ ತೊಳೆದಿರಬೇಕು)

*ಪಾಲಕ್ ಸೊಪ್ಪು: ಒಂದು ದೊಡ್ಡ ಕಟ್ಟು (ಚಿಕ್ಕದಾದರೆ ಎರಡು ಕಟ್ಟು)

*ಈರುಳ್ಳಿ: ಎರಡು (ಮಧ್ಯಮ ಗಾತ್ರ, ನಾಲ್ಕು ತುಂಡು ಮಾಡಿದ್ದು)

*ಬೆಳ್ಳುಳ್ಳಿ: 4 ರಿಂದ 5 ಸಿಪ್ಪೆ ನಿವಾರಿಸಿ ಜಜ್ಜಿದ್ದು

*ಹಸಿಮೆಣಸು: 4 ರಿಂದ 5

*ದಾಲ್ಚಿನ್ನಿ ಎಲೆ: 2

*ಏಲಕ್ಕಿ: 2-3

*ಚೆಕ್ಕ : ಸುಮಾರು ಒಂದಿಂಚಿನ ತುಂಡು

*ಲವಂಗ : 2-3

*ಸಾಸಿವೆ: 1 ದೊಡ್ಡ ಚಮಚ

*ಕರಿ ಬೇವಿನ ಎಲೆ : 5 ರಿಂದ 8

*ಕಾಯಿ ತುರಿ: 1 ಚಿಕ್ಕ ಕಪ್ (ಅಥವಾ ಅರ್ಧ ಹೋಳಿನ ತುರಿ)

*ಅಡುಗೆ ಎಣ್ಣೆ: 3 ದೊಡ್ಡ ಚಮಚ

*ಉಪ್ಪು : ರುಚಿಗನುಸಾರ

*ಲಿಂಬೆ ಹಣ್ಣಿನ ರಸ- 2 ಚಮಚ

ವಿಧಾನ:

1 ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ಸಾಕಷ್ಟು ನೀರು ಹಾಕಿ ಮೂರು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಕ್ಷಣ ಸೀಟಿಯನ್ನು ಸುರಿಯುವ ತಣ್ಣೀರಿನಡಿ ಇಟ್ಟು ತಣಿಸಿ ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು ಅಕ್ಕಿಯನ್ನು ಬೇರೆ ಪಾತ್ರೆಗೆ ವರ್ಗಾಯಿಸಿ.

2) ಮಿಕ್ಸಿಯಲ್ಲಿ ಈರುಳ್ಳಿ, ಹಸಿಮೆಣಸು, ಪಾಲಕ್ ಸೊಪ್ಪು, ದಾಲ್ಚಿನ್ನಿ ಎಲೆ, ಏಲಕ್ಕಿ, ದಾಲ್ಚಿನ್ನಿ, ಕಾಯಿತುರಿ ಹಾಕಿ ಒಣಗಿರುವಂತೆಯೇ ಅರೆಯಿರಿ. ನೀರು ಸೇರಿಸಬೇಡಿ, ಒಣದಾಗಿಯೇ ಇರಲಿ.

3) ಇನ್ನು ಒಂದು ದಪ್ಪತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿದ ನಂತರ, ಕರಿ ಬೇವಿನ ಎಲೆ ಹಾಕಿ ತಿರುವಿ.

4) ಎರಡು ನಿಮಿಷದ ಬಳಿಕ ಅರೆದ ಮಸಾಲೆಯನ್ನು ಇದಕ್ಕೆ ಹಾಕಿ ತಿರುವುದನ್ನು ಮುಂದುವರೆಸಿ. ಮಸಾಲೆ ಚೆನ್ನಾಗಿ ಬೆಂದ ಬಳಿಕ (ಮಸಾಲೆಯಿಂದ ಎಣ್ಣೆ ಹೊರಹರಿಯಲು ಪ್ರಾರಂಭವಾದ ಬಳಿಕ) ಬೇಯಿಸಿದ್ದ ಅಕ್ಕಿಯನ್ನು ಹಾಕಿ ತಿರುವಿ. ಉಪ್ಪು ಹಾಕಿ ಕೊಂಚ ಕಾಲ ತಿರುವುದನ್ನು ಮುಂದುವರೆಸಿ. ಕೊನೆಯಲ್ಲಿ ಲಿಂಬೆ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಸ್ಟವ್ ಆರಿಸಿ ಒಂದೆರಡು ನಿಮಿಷ ಮುಚ್ಚಳ ಮುಚ್ಚಿಡಿ.

5) ಬಿಸಿಬಿಸಿ ಇದ್ದಂತೆಯೇ ಬಡಿಸಿ, ಮನೆಯವರ ಮೆಚ್ಚುಗೆ ಪಡೆಯಿರಿ

English summary

Mouthwatering Palak Rice recipe for morning breakfast

Palak or Spinach is a rich source of vitamins and Iron. So try making some mouth watering palak rice. Take a look and try the delicious “Palak Rice Recipe" at home, also share the simple rice recipe with those who are looking for lunch box recipe options.
X