For Quick Alerts
ALLOW NOTIFICATIONS  
For Daily Alerts

ಮಹಾರಾಷ್ಟ್ರ ಶೈಲಿಯ ವೆಜ್ ಕೊಲ್ಲಾಪುರಿ ರೆಸಿಪಿ

By Super
|

ಸಾಮಾನ್ಯವಾಗಿ ಸಸ್ಯಾಹಾರಿ ಅಡುಗೆಗಳಲ್ಲಿ ಸಾಂಬಾರ ಪದಾರ್ಥಗಳು ಕೊಂಚ ಹೆಚ್ಚು ಕಡಿಮೆಯಾದರೂ ರುಚಿಯಲ್ಲಿ ಹೆಚ್ಚಿನ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದರೂ ಪ್ರತಿಯೊಂದೂ ಸಾಂಬಾರು ವಸ್ತುಗಳನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಸೇರಿಸಿ ಸಸ್ಯಾಹಾರದ ಅಡುಗೆಯನ್ನು ಅತ್ಯಂತ ಸ್ವಾದಿಷ್ಟವಾಗಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆಂದರೆ ಮಹಾರಾಷ್ಟ್ರ. ಅದರಲ್ಲೂ ಖಾರ ಮತ್ತು ಸಿಹಿಯನ್ನು ಜೊತೆಜೊತೆಯಾಗಿ ನೀಡುವ ರಾಜ್ಯಗಳೆಂದರೆ ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ.

ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ಪಾವ್ ಬಾಜಿ, ವಡಾ ಪಾವ್, ದಹಿ ವಡಾ ಮೊದಲಾದವುಗಳಲ್ಲಿ ಸಿಹಿ ಮತ್ತು ಖಾರ ಎರಡರ ಮಿಶ್ರಣ ವಿಭಿನ್ನ ರುಚಿಯನ್ನು ನೀಡುತ್ತದೆ. ಪುಣೆಯಲ್ಲಿ ಅತಿ ಜನಪ್ರಿಯವಾಗಿರುವ ವೆಜ್ ಕೊಲ್ಲಾಪುರಿ ದೇಶದ ಇತರ ಭಾಗಗಳಲ್ಲಿಯೂ ಹೆಚ್ಚು ಜನರ ಇಷ್ಟದ ಖಾದ್ಯವಾಗಿದೆ. ಕೊಲ್ಲಾಪುರದಲ್ಲಿ ಮೊದಲು ಇದರ ಸ್ವಾದ ಪ್ರಾರಂಭವಾಯಿತಾದರೂ ಇದರ ಸ್ವಾದ ಬಹುಬೇಗನೇ ದೇಶದ ಇತರೆಡೆಗೂ ವ್ಯಾಪಿಸಿತು. ವಿಶೇಷವೆಂದರೆ ಇದರಲ್ಲಿ ಬಹುತೇಕ ಎಲ್ಲಾ ಸಾಂಬಾರ ಪದಾರ್ಥಗಳೂ ಇವೆ.

ಇದಕ್ಕೆ ಹೆಲವು ಹಸಿರು ತರಕಾರಿ, ಪನೀರ್ ಮತ್ತು ಇತರ ಸಾಮಾಗ್ರಿಗಳನ್ನು ಸೇರಿಸುವ ಮೂಲಕ ರುಚಿಯನ್ನು ಇನ್ನಷ್ಟು ಹೆಚ್ಚಿಸಬಹುದು. ಇದರ ಇನ್ನೊಂದು ವಿಶೇಷವೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಐಚ್ಛಿಕವಾಗಿದ್ದು ಇದರ ಸೇವನೆ ಬಯಸದವರು ಸೇರಿಸದೇ ಬಹುತೇಕವಾದ ಮೂಲ ರುಚಿಯನ್ನು ಪಡೆಯಬಹುದು. ಇದು ರೊಟ್ಟಿ, ಚಪಾತಿ ನಾನ್ ಕುಲ್ಛಾಗಳೊಂದಿಗೂ ಅನ್ನದೊಂದಿಗೆ ಕಲಸಿ ತಿನ್ನಲೂ ಯೋಗ್ಯವಾಗಿದೆ. ಬನ್ನಿ, ಇದನ್ನು ತಯಾರಿಸುವ ಕಲೆಯನ್ನು ಕಲಿಯೋಣ

Maharashtrian Special Veg Kolhapuri Gravy Recipe

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಬೀನ್ಸ್- 1 ಕಪ್
*ಕ್ಯಾರೆಟ್ ತುರಿ - 1 ಕಪ್
*ದೊಣ್ಣೆಮೆಣಸು - 1 ಕಪ್
*ಪನೀರ್ - 1 ಕಪ್
*ಹೂಕೋಸು- 1 ಕಪ್
*ಹಸಿರು ಬಟಾಣಿ - 1 ಕಪ್
*ಟೊಮೇಟೊ - 2
*ಗೋಡಂಬಿ - 10 (ಒಂದು ಗಂಟೆ ನೀರಿನಲ್ಲಿ ನೆನೆಸಿದ್ದು)
*ಹಸಿಮೆಣಸು - 4 ರಿಂದ 5
*ಗರಂ ಮಸಾಲೆ ಪುಡಿ - 1 ಚಿಕ್ಕ ಚಮಚ
*ಅರಿಶಿನ - 1 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಮಚ)
*ದಾಲ್ಚಿನ್ನಿ ಎಲೆ- 1 ರಿಂದ 2
*ಜೀರಿಗೆ - 1/2 ಚಿಕ್ಕ ಚಮಚ
*ಹಸಿಶುಂಠಿ ಪೇಸ್ಟ್- 1/2 ಚಿಕ್ಕ ಚಮಚ
*ಬೆಣ್ಣೆ - 1 ದೊಡ್ಡ ಚಮಚ
*ಎಣ್ಣೆ-ಹುರಿಯಲು ಅಗತ್ಯವಿದ್ದಷ್ಟು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು (ಕಡೆಯ ಅಲಂಕಾರಕ್ಕಾಗಿ)

ವಿಧಾನ:
1) ದಪ್ಪತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಮೊದಲು ಹೂಕೋಸು, ಬಳಿಕ ಪನೀರ್ ನಂತರ ಎಲ್ಲಾ ತರಕಾರಿಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಕೊಂಚ ಕಂದು ಬಣ್ಣ ಬಂದ ಬಳಿಕ ಬೀನ್ಸ್, ಕ್ಯಾರೆಟ್, ದೊಣ್ಣೆಮೆಣಸು ಹಾಕಿ. ಇವು ಕೂಡಲೇ ಬೇಯುತ್ತವೆ. ಬಳಿಕ ಇವನ್ನೆಲ್ಲಾ ಒಂದು ತಟ್ಟೆಯಲ್ಲಿ ಹರಡಿ.
2) ಮಿಕ್ಸಿಯ ಜಾರ್ ನಲ್ಲಿ ಟೊಮೇಟೊಗಳನ್ನು ಹಾಕಿ ನುಣ್ಣಗೆ ಅರಿಯಿರಿ. ಈಗ ನೆನೆಸಿಟ್ಟ ಗೋಡಂಬಿಗಳನ್ನು ಹಾಕಿ ಅರೆಯಿರಿ.
3) ಇನ್ನೊಂದು ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಜೀರಿಗೆ, ದಾಲ್ಚಿನ್ನಿ ಎಲೆ, ಅರಿಶಿನ, ಶುಂಠಿ ಪೇಸ್ಟ್, ಹಸಿಮೆಣಸು ಎಲ್ಲವನ್ನೂ ಹಾಕಿ ಕೊಂಚ ಹುರಿಯಿರಿ. ಬಳಿಕ ಗರಂ ಮಸಾಲಾ, ಕೆಂಪುಮೆಣಸಿನ ಪುಡಿ ಹಾಕಿ ಹುರಿಯಿರಿ. ಬಳಿಕ ಕೊಂಚ ನೀರು ಹಾಕಿ ಚೆನ್ನಾಗಿ ಬಾಡಿಸಿ.
4) ಐದು ನಿಮಿಷಗಳ ಬಳಿಕ ಮಿಕ್ಸಿ ಜಾರ್ ನಲ್ಲಿದ್ದ ಟೊಮೇಟೊ ಮತ್ತು ಗೋಡಂಬಿ ಲೇಪನವನ್ನು ಸೇರಿಸಿ ತಿರುವಿ.
5) ಚೆನ್ನಾಗಿ ಮಿಶ್ರಣಗೊಂಡ ಬಳಿಕ ಹುರಿದಿಟ್ಟ ಎಲ್ಲಾ ತರಕಾರಿಗಳನ್ನು ಒಂದೊಂದಾಗಿ ಸೇರಿಸಿ. ನಂತರ ಬೆಣ್ಣೆ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
6) ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಒಂದು ವೇಳೆ ಚಪಾತಿಗೆ ಬೇಕಿದ್ದರೆ ಕಡಿಮೆ ನೀರು ಹಾಕಿ. ಅನ್ನಕ್ಕಾದರೆ ಕೊಂಚ ಹೆಚ್ಚು ಸೇರಿಸಬಹುದು.
7) ಚೆನ್ನಾಗಿ ಕುದಿಬಂದ ಬಳಿಕ ಇಳಿಸಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಅಲಂಕರಿಸಿ.
ಸ್ವಾದಿಷ್ಟ ಕೊಲ್ಲಾಪುರಿ ಕರಿ ಹೇಗಿನಿಸಿತು ಎಂದು ನಮಗೆ ತಿಳಿಸಿ. ಇದಕ್ಕಾಗಿ ಮುಖ್ಯ ಪುಟದ ಕಮೆಂಟ್ಸ್ ಸ್ಥಳವನ್ನು ಉಪಯೋಗಿಸಿ.

English summary

Maharashtrian Special Veg Kolhapuri Gravy Recipe

The only state in India where all the spices are perfectly used in food recipes is the Maharashtra. Yes, you can find a mixture of spicy foods, sweets and mild dishes. Many dishes like pav bhaji, vada pav, dahi vada originated from Maharashtra. Apart from them, even veg kolhapuri dish is very famous.
X
Desktop Bottom Promotion