For Quick Alerts
ALLOW NOTIFICATIONS  
For Daily Alerts

ಹಿತಕವರೆಬೇಳೆ ಹುಳಿ

By Staff
|

ಈಗ ಅವರೆಕಾಯಿ ಕಾಲ. ಯಾವುದೇ ಮಾರುಕಟ್ಟೆಗೆ ಹೋದರೂ ತಾಜಾತಾಜಾ ಅವರೆಕಾಯಿ ಕಣ್ಣಿಗೆ ರಾಚುತ್ತದೆ. ಕೊಳ್ಳಲು ಹೋದರೆ ಕೈಸುಡುವ ಬೆಲೆ. ಏನ್ಮಾಡಕ್ಕಾಗುತ್ತದೆ ವಾತಾವರಣದ ಏರುಪೇರುಗಳು ಬೆಳೆಗೆ ಕಂಟಕವಾಗಿ ಅವರೆಕಾಯಿ ಇಳುವರಿ ಈ ಬಾರಿ ಕಡಿಮೆ. ಹಾಗಾಗಿ ಬೆಲೆ ಹೆಚ್ಚು. ಬೆಲೆ ಹೆಚ್ಚಾದರೂ ಹಿತಕವರೆ ತಿನ್ನದಿರಲು ಮನಸು ಒಪ್ಪಬೇಕಲ್ಲಾ. ಸಾಲದ್ದಕ್ಕೆ ಬೀದಿಗಳಲ್ಲಿ ಓಡಾಡಿದರೆ ಘಂ ಎನ್ನುವ ಹಿತಕವರೆ ಘಮಲು ಮೂಗಿಗೆ ಅಡರುತ್ತಿರುತ್ತದೆ. ಮುಂದೆ ಉಳಿದಿರುವ ದಾರಿ ಎಂದರೆ ರುಚಿಕಟ್ಟಾದ ಹಿತಕರೆ ಮಾಡಿ ತಿನ್ನುವುದು! ಇದರ ಜತೆಗೆ ರಾಗಿಮುದ್ದೆ ಇದ್ದರೆ ಫಸಂದಾಗಿರುತ್ತೆ.

ಬೇಕಾಗುವ ಪದಾರ್ಥಗಳು :

ಹಿತಕವರೆ : ಎರಡು ಲೋಟ
ಉದ್ದಿನಬೇಳೆ :1 ಟೀ ಚಮಚ
ಮೆಣಸು : 10 ರಿಂದ 12 ಕಾಳು
ಸಾರಿನಪುಡಿ :1 ಟೀ ಚಮಚ
ತೆಂಗಿನಕಾಯಿ ತುರಿ : 1 ಬಟ್ಟಲು
ಎಣ್ಣೆ : ಒಂದೂವರೆ ಟೀ ಚಮಚ
ಸಾಸಿವೆ, ಕರಿಬೇವು : ಒಗ್ಗರಣೆಗೆ
ಉಪ್ಪು : ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಒಂದು ಹಿಡಿ

ಮಾಡುವ ವಿಧಾನ:

ಮೊದಲು ಬಿಡಿಸಿಟ್ಟು ಕೊಂಡ ಅವರೆಕಾಳನ್ನು ನೀರಿನಲ್ಲಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ಹೀಗೆ ಮಾಡುವುದರಿಂದ ಅವರೆಕಾಳನ್ನು ಸುಲಭವಾಗಿ ಹಿಚುಕಬಹುದು. ಈಗ ಅವರೆಕಾಳನ್ನು ಹಿಚುಕಿಟ್ಟುಕೊಳ್ಳಿ.

ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಮೆಣಸನ್ನು ಕೂಡಾ ಇದೇ ರೀತಿ ಚಿಟಗುಟ್ಟುವವರೆಗೂ ಹುರಿಯಿರಿ. ಬಾಣಲೆಯನ್ನು ಇಳಿಸಿ, ತಣ್ಣಗಾದ ನಂತರ ಎರಡನ್ನು ಪುಡಿಮಾಡಿಕೊಳ್ಳಿ. ಈ ಪುಡಿಗೆ ಸಾರಿನಪುಡಿ, ತೆಂಗಿನತುರಿ, ಉಪ್ಪು, ಇಂಗು ಸ್ವಲ್ಪ ನೀರನ್ನು ಹಾಕಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.

ಈಗ ಹಿತಕವರೆಯನ್ನು ನೀರಿಗೆ ಹಾಕಿ. ಸುಮಾರು ಹದಿನೈದು ನಿಮಿಷ ಬೇಯಿಸಿ. ಹಿತಕವರೆ ಬೆಂದ ಮೇಲೆ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಆಗಾಗ ಸೌಟಿನಿಂದ ಕದಡುತ್ತಿರಿ. ಚೆನ್ನಾಗಿ ಬೆಂದ ನಂತರ ಒಗ್ಗರಣೆ ಹಾಕಿ. ರುಚಿಕಟ್ಟಾದ ಹಿತಕವರೆ ಹುಳೀ ಸಿದ್ಧವಾದಂತೆ.

(ದಟ್ಸ್‌ಕನ್ನಡ ಪಾಕಶಾಲೆ)

English summary

ಹಿತಕವರೆಬೇಳೆ ಹುಳಿ - Hitakavarebele : Savoury rasam from 'avare kaayi'

Hitakavarebele : Savoury rasam from 'avare kaayi'
X
Desktop Bottom Promotion