For Quick Alerts
ALLOW NOTIFICATIONS  
For Daily Alerts

ಜೀರಿಗೆ ಮೆಂತ್ಯದ ಮಜ್ಜಿಗೆ ತಂಪು ತಂಬುಳಿ

By * ಕಲಾವತಿ, ಮಂಗಳೂರು
|
Healthy recipe for summer
ಇತ್ತೀಚಿನ ದಿನಗಳಲ್ಲಿ ಅಡುಗೆ ಸ್ಪರ್ಧೆ ನಡೆಸುವ ರಿಯಾಲಿಟಿ ಶೋಗಳಿಗೆ, ನಮ್ಮ ಸಿಹಿಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಮುಂತಾದ ಕಾರ್ಯಕ್ರಮಗಳಿಗೆ ಬೇರಾವುದೇ ರಿಯಾಲಿಟಿ ಶೋಗಳಿಗೆ ಇರುವಂಥ ಬೇಡಿಕೆ ಬಂದುಬಿಟ್ಟಿದೆ. ನಳ, ಭೀಮರು ಕೂಡ ತಾವು ಮಹಿಳೆಯರಿಗಿಂತ ಯಾವುದಕ್ಕೂ ಕಡಿಮೆಯಿಲ್ಲ ಎಂದು ತೋರಿಸಿಕೊಡುತ್ತಿದ್ದಾರೆ. ಪುರುಷರು ನಿಜಕ್ಕೂ ಹೆಮ್ಮೆ ಪಡಬೇಕಾದಂಥ ಸಂಗತಿಯಿದು.

ಹೀಗೇ ಯಾವುದೇ ಚಾನಲ್ಲಿನಲ್ಲಿ ಪುರುಷರೊಬ್ಬರು ನಡೆಸಿಕೊಟ್ಟ ಅಡುಗೆ ರಿಲಾಯಿಟಿ ಶೋ ನೋಡುತ್ತಿದ್ದಾಗ, ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಮತ್ತು ಬೇಸಿಗೆಯಲ್ಲಿ ಸರ್ವಜನರೂ ಸೇವಿಸಬಹುದಾದ ಆರೋಗ್ಯಕಾರಿ ರೆಸಿಪಿ ನನ್ನನ್ನು ಭಾರೀ ಸೆಳೆಯಿತು. ಜೀರಿಗೆ ಮತ್ತು ಮೆಂತ್ಯ ಕಾಳು ಬಳಸಿ ತಯಾರಿಸಿದ ಜೀರಿಗೆ ಮೆಂತ್ಯ ಮಜ್ಜಿಗೆ ತಂಬುಳಿ ಯಾರು ಬೇಕಾದರೂ ಮಾಡಬಹುದಾಗ ಪೇಯ.

ಕಾವಿನ ಪ್ರಕೃತಿ ಉಳ್ಳವರು, ನಿದ್ರಾಹೀನತೆಯಿಂದ ಬಳಲುವವರು, ನೆಗಡಿ ಕಮ್ಮಿನಿಂದ ತೊಳಲಾಡುವವರು, ಬೇಸಿಗೆಯ ಬಿಸಿಲಲ್ಲಿ ಬಳಲಿದವರು ಇದನ್ನು ಸೇವಿಸಬಹುದು. ಹೊಟ್ಟೆ ನೋವಿಗೆ ಕೂಡ ಇದು ಮನೆಮದ್ದು. ಇದನ್ನು ಆಗಾಗ್ಗೆ ಕುಡಿಯುತ್ತಿದ್ದರೆ ದೇಹಕ್ಕೆ ಒಂದು ರೀತಿಯ ಸಮತೋಲನ ತರುತ್ತದೆ. ನಾನು ಕೂಡ ಇದನ್ನು ಮನೆಯಲ್ಲಿ ತಯಾರಿಸಿ ನಿಮಗೀಗ ಹೇಳುತ್ತಿದ್ದೇನೆ.

ಬೇಕಾಗುವ ಪದಾರ್ಥಗಳ ಪಟ್ಟಿ

* ಜೀರಿಗೆ 1 ಚಮಚ
* ಮೆಂತ್ಯ ಕಾಳು 1 ಚಮಚ
* ಗಟ್ಟಿ ಮಜ್ಜಿಗೆ 1 ಲೋಟ
* ಹಸಿ ಕೊಬ್ಬರಿ ಕಾಲು ಬಟ್ಟಲು
* ಒಗ್ಗರಣೆಗಾಗಿ ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವು
* ಉಪ್ಪು ಚಿಟಿಕೆಯಷ್ಟು

ತಯಾರಿಸುವ ರೀತಿ

* ಮೊದಲಿಗೆ ಜೀರಿಗೆ ಮತ್ತು ಮೆಂತ್ಯದ ಕಾಳನ್ನು ಎಣ್ಣೆ ಹಾಕದೆ ಹಾಗೆಯೇ ಬಾಣಲೆಯಲ್ಲಿ ತುಸು ಕೆಂಪಾಗುವಂತೆ ಹುರಿದುಕೊಳ್ಳಿ.

* ಇವುಗಳನ್ನು ತುರಿದಿಟ್ಟುಕೊಂಡ ಹಸಿ ಕೊಬ್ಬರಿಯೊಂದಿಗೆ ಮಿಕ್ಸ್ ಮಾಡಿ ಸಣ್ಣಗಾಗುವಂತೆ ಮೂರು ನಿಮಿಷ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

* ಈ ರುಬ್ಬಿಕೊಂಡ ಪದಾರ್ಥವನ್ನು ಗಟ್ಟಿ ಮಜ್ಜಿಗೆಗೆ ಸೇರಿಸಿ ಕೈಯಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

* ಇದಾದ ನಂತರ ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಜ್ಜಿಗೆಗೆ ಸೇರಿಸಿ.

* ಈ ತಂಬುಳಿಯನ್ನು ಇನ್ನಷ್ಟು ನೀರು ಮಾಡಿಕೊಂಡು ಹಾಗೆಯೇ ಕುಡಿಯಬಹುದು ಅಥವಾ ಬಿಸಿಬಿಸಿ ಅನ್ನದೊಡನೆ ಸೇರಿಸಿ ತಿನ್ನಬಹುದು.

* ರಾತ್ರಿ ವೇಳೆಯಲ್ಲಿ ಈ ಮೆಂತ್ಯ ಜೀರಿಗೆ ತಂಬುಳಿಯನ್ನು ಸೇವಿಸಿದರೆ ಸೊಂಪಾದ ನಿದ್ದೆ ಬರುವುದು ಗ್ಯಾರಂಟಿ.

;
English summary

Menthya Jeera Tambli | Healthy recipe for summer | ಮೆಂತ್ಯ ಜೀರಿಗೆ ಮಜ್ಜಿಗೆ ತಂಬುಳಿ | ಬೇಸಿಗೆಗೆ ಆರೋಗ್ಯಕರ ರೆಸಿಪಿ

Jeera Menthya tambli is a perfect recipe for summer. This tambuli has many health benefits. This can be taken for sleeplessness, indigestion etc. Recipe sent by Kalavathi from Mangalore.
Story first published: Thursday, May 26, 2011, 7:59 [IST]
X
Desktop Bottom Promotion