For Quick Alerts
ALLOW NOTIFICATIONS  
For Daily Alerts

ಎಣ್ಣೆರಹಿತ ಹೆಸರುಕಾಳಿನ ಮಸಾಲಾ

By Staff
|
Green Gram
ಚಪಾತಿ, ಪೂರಿ, ಪರೋಟ ಜತೆಗೆ ನೆಂಜಿಕೊಳ್ಳಲು ಹೊಸರುಚಿ ಹೆಸರುಕಾಳು ಮಸಾಲಾ. ಇತರ ಬೇಳೆಕಾಳುಗಳಿಗೆ ಹೋಲಿಸಿದರೆ ಹೆಸರುಕಾಳು ಅಂಥ ತುಟ್ಟಿಯೇನೂ ಅಲ್ಲ. ಎಣ್ಣೆರಹಿತವಾದ್ದರಿಂದ ಆರೋಗ್ಯಕ್ಕೂ ಉತ್ತಮ. ಜೀರ್ಣಕ್ರಿಯೆಗೆ ಹೆಸರುಕಾಳು ಸಹಕಾರಿ. ಅಪೆಂಡಿಸೈಟಿಸ್ ಗೆ ಇದು ಉಪಶಮನಕಾರಿ.

* ಧರ್ಮಸ್ಥಳ ಮಮತಾ ಶೆಣೈ

ಇಬ್ಬರ ಊಟಕ್ಕೆ ಪ್ರಮಾಣ : ಎರಡು ಕಪ್ ಹೆಸರುಕಾಳುಗಳನ್ನು ನೀರಲ್ಲಿ ನೆನೆ ಹಾಕಿ. ರಾತ್ರಿ ಅಥವಾ ಬೆಳಗ್ಗೆ ನೆನೆ ಹಾಕಿದರೆ ಸುಮಾರು ಎಂಟು ಗಂಟೆಕಾಲ ನೆನೆಯಬೇಕು. ನೆನೆದ ಹೆಸರು ಕಾಳನ್ನು ಬೇಯಲು ಇಡಿ. ಹೆಚ್ಚಿಗೆ ಬೆಂದು ನುಣ್ಣಗಾಗದಂತೆ ಎಚ್ಚರ ವಹಿಸಿ. ಮುಕ್ಕಾಲು ಭಾಗದಷ್ಟು ಬೆಂದರೆ ಸಾಕು. ಅದು ಒಂದು ಕಡೆ ಹಾಗಿರಲಿ.

ಮಸಾಲೆಗೆ ಸಿದ್ಧಮಾಡಿಕೊಳ್ಳೋಣ : ಗಸಗಸೆ ಒಂದು ಚಮಚ, ಚೂರು ಚಕ್ಕೆ, ಗೋಲಿ ಗಾತ್ರ ಹುಣಿಸೆ ಹಣ್ಣು, ಗೋಲಿ ಗಾತ್ರ ಬೆಲ್ಲ, ಐದಾರು ಗೋಡಂಬಿ, ಸಣ್ಣ ಹಿಡಿ ಕಾಯಿ ತುರಿ, ನಾಲಕ್ಕು ಹಸಿಮೆಣಸಿನಕಾಯಿ, ಐದಾರು ಎಸಳು ಕೊತ್ತಂಬರಿ ಸೊಪ್ಪು. ಇವಿಷ್ಟನ್ನು ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಬೆಂದ ಹೆಸರುಕಾಳಿಗೆ ಈ ಮೇಲಿನ ಮಸಾಲೆಯನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕುದಿಸಬೇಕು. ಹೆಚ್ಚಿಗೆ ನೀರು ಹಾಕಬಾರದು, ಪದಾರ್ಥ ತೊವ್ವೆ ಮಾದರಿಯಲ್ಲಿ ಇರಬೇಕು. ಈ ಅಡುಗೆಯ ವಿಶೇಷವೆಂದರೆ ಎಣ್ಣೆ, ಬೆಣ್ಣೆ ಅಥವಾ ತುಪ್ಪ ಅಥವಾ ಯಾವುದೇ ವನಸ್ಪತಿ ಇಲ್ಲದೆ ಮಸಾಲಾ ತಯಾರಾಗಿರುತ್ತದೆ. ದುಬಾರಿ ಬೇಳೆಯಲ್ಲಿ ಕಳೆದುಕೊಂಡದ್ದನ್ನು ಜಿಡ್ಡುರಹಿತ ಮಸಾಲಾದಲ್ಲಿ ಗಳಿಸಿ!

Story first published: Monday, August 3, 2009, 13:40 [IST]
X
Desktop Bottom Promotion