For Quick Alerts
ALLOW NOTIFICATIONS  
For Daily Alerts

ಭಕ್ಕರಿಯೊಂದಿಗೆ ಇರಲೇಬೇಕು ಝುಣಕ

By Super
|

ಬಿಸಿಬಿಸಿ ಭಕ್ಕರಿಗೂ ಝುಣಕಕ್ಕೂ ಅವಿನಾಭಾವ ಸಂಬಂಧ. ಬೆಳಿಗ್ಗೆ ಎದ್ದ ಮನೆಮಂದಿಗೆ ಮತ್ತು ಉಳಲು ಹೋಗುವ ರೈತರಿಗೆ ಭಕ್ಕರಿ ಮತ್ತು ಝುಣಕದ ನ್ಯಾರಿ ಇರಲೇಬೇಕು. ಉತ್ತರ ಕರ್ನಾಟಕದಲ್ಲಿ ಅದು ಅಲ್ಲಿನ ಆಹಾರ ವೈವಿಧ್ಯದ ಅವಿಭಾಜ್ಯ ಅಂಗ. ಇಷ್ಟಕ್ಕೂ ಝುಣಕದ ಹೆಸರಷ್ಟೇ ಭಾರ. ಅದನ್ನು ಚಪ್ಪರಿಸಿದಷ್ಟೇ ಸಲೀಸು ಮಾಡುವುದು ಕೂಡ. ನೀವೂ ಮಾಡಿ ನೋಡಿ.

* ಸೌಭಾಗ್ಯ ಕಿತ್ತೂರ್, ಧಾರವಾಡ

ಝುಣಕದಲ್ಲಿ ಈ ಎಲ್ಲಾ ಸಾಮಗ್ರಿಗಳಿರುತ್ತವೆ

ಸಾಧಾರಣ ಗಾತ್ರದ ಈರುಳ್ಳಿ 2ರಿಂದ 3
ಕಡಲೆ ಹಿಟ್ಟು
ಒಣಕೊಬ್ಬರಿ
ಜೀರಿಗೆ
ಕೊತ್ತಂಬರಿ
ಕರಿಬೇವು
ಹಸಿ ಮೆಣಸಿನಕಾಯಿ
ಹಸಿಶುಂಠಿ, ಅಡುಗೆ ಎಣ್ಣೆ ಹಾಗೂ ಉಪ್ಪು

ಮಾಡುವ ವಿಧಾನ

ಝುಣಕ ತಯಾರಿಕೆಯದ್ದು ಮೂರು ಹಂತಗಳು. ಮೊದಲನೇ ಹಂತ ಒಗ್ಗರಣೆ ಹಾಕುವುದರೊಂದಿಗೆ ಶುರುವಾಗುತ್ತದೆ. ಹಸಿ ಮೆಣಸಿನ ಕಾಯಿ, ತುಂಡರಿಸಿದ ಈರುಳ್ಳಿ ಹಾಗೂ ಹಸಿಶುಂಠಿ ಎಣ್ಣೆಯಲ್ಲಿ ಕೆಂಪಾಗಿ ಬಾಡಿದರೆ ಒಗ್ಗರಣೆ ಹದಕ್ಕೆ ಬಂದಂತೆ. ಘಮ್ಮೆನ್ನುವ ಒಗ್ಗರಣೆಗೆ ನೀರನ್ನು ಬೆರೆಸಿರಿ. ನೀರು ಸುರಿಯುವ ಕೈಗೆ ಮನೆಯಲ್ಲಿ ಎಷ್ಟು ಮಂದಿಯಿದ್ದಾರೆ, ಅವರಿಗೆಷ್ಟು ಝುಣಕ ಬೇಕಾಗುತ್ತದೆ ಅನ್ನುವ ಅಂದಾಜು ಇದ್ದೇ ಇರುತ್ತದೆ. ಆ ಅಂದಾಜೇ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಲು ಸಹಾಯ ಮಾಡುತ್ತದೆ.

ಎರಡನೇ ಹಂತದಲ್ಲಿ - ಈಗಾಗಲೇ ಜೀರಿಗೆ, ಕೊತ್ತಂಬರಿ ಹಾಗೂ ಒಣ ಕೊಬರಿಯನ್ನು ರುಬ್ಬಿಕೊಂಡಿರುತ್ತೀರಿ. ಆ ಮಿಶ್ರಣವನ್ನು ನೀರಿಗೆ ಬೆರೆಸಿದ ನಂತರ, ಕುದಿ ಹತ್ತುವವರೆಗೂ ಆರಾಮಾಗಿರಬಹುದು. ನೀರು ಕುದಿ ಹತ್ತಿದ ನಂತರದ್ದು ಅಂದರೆ ಮೂರನೇ ಹಂತ ಅತ್ಯಂತ ನಾಜೂಕಿನದ್ದು. ಝುಣಕದ ಗುಣಮಟ್ಟವನ್ನು ನಿರ್ಧರಿಸುವುದು ಆ ಹಂತದ ಕೈ ಕುಶಲತೆಯೇ.

ಎರಡು ಕೈಯ್ಯಿರುವುದರಿಂದ ಒಂದು ಕೈಯ್ಯಲ್ಲಿ ಕಡಲೆಹಿಟ್ಟಿನ ಬಟ್ಟಲು ಹಿಡಿಯಿರಿ. ಮತ್ತೊಂದು ಕೈಯ್ಯಲ್ಲಿ ಲಟಾಯಿಸುವ ಸೌಟು. ಬಲಗೈ ಕಡಲೆ ಹಿಟ್ಟನ್ನು ಇಷ್ಟಿಷ್ಟೇ ಸುರಿಯುತ್ತಿದ್ದಂತೆ, ಎಡಗೈ ಗಾಣ ಸುತ್ತಿದಂತೆ ಸೌಟಿನಿಂದ ನೀರನ್ನು ಕಲಕುತ್ತಿರಬೇಕು. ಯಾವುದೇ ಹಂತದಲ್ಲಿ ಕಡಲೆಹಿಟ್ಟು ಗಂಟಾಗಬಾರದು. ದ್ರಾವಣ ಗಟ್ಟಿಸಾರಿನ ಮಂದಕ್ಕೆ ಬಂದಮೇಲೆ ಕಡಲೆಹಿಟ್ಟು ಸುರಿಯುವುದನ್ನು ನಿಲ್ಲಿಸಿ. ಅಲ್ಲಿಗೆ ಝುಣಕ ತಯಾರು. ಆಮೇಲೆ ಝಣ ಝಣಕ ಎಂದು ಭಕ್ರಿ ಅಥವಾ ಅಕ್ಕಿರೊಟ್ಟಿ ಅಥವಾ ಚಪಾತಿಯಾಂದಿಗೆ ಜಮಾಯಿಸಬಹುದು.

ಗುಂಡಿನ ಝುಣಕ ಮತ್ತು ಝುಣಕದ ವಡೆ ಕೂಡ ಮಾಡುತ್ತಾರೆ. ಅವುಗಳನ್ನು ಹೇಗೆ ಮಾಡುತ್ತಾರೆಂದು ಮುಂದಿನ ದಿನಗಳಲ್ಲಿ ತಿಳಿದುಕೊಳ್ಳೋಣ. ಅಲ್ಲಿಯವರೆಗೆ ಬಿಸಿಬಿಸಿ ಭಕ್ಕರಿ ಮತ್ತು ಝುಣಕ ಜಮಾಯಿಸುತ್ತಿರಿ. ಇಷ್ಟವಿದ್ದರೆ ಜೊತೆಗೆ ಒಂದಿಷ್ಟು ಹಸಿ ಉಳ್ಳಾಗಡ್ಡಿ ಮತ್ತು ಹಸಿ ಮೆಣಸಿನಕಾಯಿ ಇಟ್ಟುಕೊಳ್ಳುವುದು ಮರೆಯಬೇಡಿ. ಝುಣಕವನ್ನು ಬಿಸಿಬಿಸಿ ಅನ್ನದೊಡನೆಯೂ ಕಲಿಸಿ ತಿನ್ನಬಹುದು, ತುಂಬಾ ರುಚಿಯಾಗಿರುತ್ತದೆ.

English summary

Zunaka | North karnataka recipe | Rotti | Bhakkari - ಭಕ್ಕರಿಯೊಂದಿಗೆ ಇರಲೇಬೇಕು ಝುಣಕ

Soubhagya Kittur from dharwad tells us how to prepare zunaka, which is appropriate side dish with rotti or bhakkari. ಭಕ್ಕರಿಯೊಂದಿಗೆ ಇರಲೇಬೇಕು ಝುಣಕ.
X
Desktop Bottom Promotion