For Quick Alerts
ALLOW NOTIFICATIONS  
For Daily Alerts

ಸ್ಟ್ರಾಬೆರ್ರಿ ಬಾಳೆಹಣ್ಣು ಜ್ಯೂಸ್ ಹೀರೋಣು ಬರ್ರಿ

By * ಕುಮಾರಿಕನ್ಯಾ, ಬೆಂಗಳೂರು
|
Strawberry and Banana
ಬೇಸಿಗೆಯಲ್ಲಿ ಸೂರ್ಯ ನೆತ್ತಿ ಸುಡುತ್ತಿರುವ ವೇಳೆಯಲ್ಲಿ ತಂಪಾದ ಜ್ಯೂಸಿಗಿಂದ ಅಪ್ಯಾಯಮಾನವಾದದ್ದು ಇನ್ನೊಂದಿಲ್ಲ. ಬೇಸಿಗೆಯಲ್ಲಿ ಸಾರ್ವಕಾಲಿಕ ಬಾಳೆಹಣ್ಣಿನಿಂದ ಹಿಡಿದು ತರಹೇವಾರಿ ಹಣ್ಣುಗಳು ಮಾರ್ಕೆಟ್ಟಿನಲ್ಲಿ ಲಭ್ಯ. ಹಣ್ಣು ತಂದು ಮನೇಲಿ ವಿವಿಧ ಬಗೆಯ ಜ್ಯೂಸ್ ಮಾಡಿ ಕುಡಿದರೆ ದಾಹ ತೀರಿದಂತೆಯೂ ಆಯಿತು, ಹಣ ಉಳಿತಾಯ ಮಾಡಿದಂತೆಯೂ ಆಯಿತು. ನಾಲ್ಕಾರು ಹಣ್ಣು ತಂದರೆ ಹೋಲ್ಸೇಲಾಗಿ ಮನೆಮಂದಿಯೆಲ್ಲ ಕುಡಿಯಬಹುದು, ನೆಂಟರಿಗೂ ಸರ್ವ್ ಮಾಡಬಹುದು.

ಮೊನ್ನೆ ಸ್ಟ್ರಾಬೆರ್ರಿ ಕೆನ್ನೆಯ ಓ ಹುಡುಗಿಯೆ ಅಂತ ಎಫ್ಎಂ ಚಾನಲ್ಲಿನಲ್ಲಿ ಹಾಡೊಂದು ಬರುತ್ತಿತ್ತು. ಹಾಡು ಕೇಳುತ್ತಿದ್ದಂತೆ ಐಡಿಯಾವೊಂದು ಹೊಳೆಯಿತು. ಸ್ಟ್ರಾಬೆರ್ರಿ ಜೊತೆ ಕಳಿತ ಬಾಳೆಹಣ್ಣು ಸೇರಿಸಿ ಮಾಡಿದ ಜ್ಯೂಸ್ ಏನು ಸಖತ್ತಾಗಿತ್ತು ಅಂತೀರಾ? ನೀವೂ ತಯಾರಿಸಿ ನೋಡಿ.

ಪದಾರ್ಥಗಳ ಪಟ್ಟಿ ಮಾಡಿಕೊಳ್ಳಿ

ಸ್ಟ್ರಾಬೆರ್ರಿ 10
ಬಾಳೆಹಣ್ಣು 2
ಸಕ್ಕರೆ ಒಂದು ಬಟ್ಟಲು
ಮೊಸರು ಕಾಲು ಬಟ್ಟಲು
ಏಲಕ್ಕಿ ಪುಡಿ
ಐಸ್ ಕ್ಯೂಬ್ (ಬೇಕಿದ್ದರೆ)

ತಯಾರಿಸುವ ವಿಧಾನ

ಸ್ಟ್ರಾಬೆರ್ರಿ ಎಲೆಗಳನ್ನು ಕಿತ್ತು ಬಿಸಾಡಿ ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಯಾಲಕ್ಕಿ ಬಾಳೆ ಅಥವಾ ಪಚಬಾಳೆಹಣ್ಣಿನ ಸಿಪ್ಪೆ ಸುಲಿದು ನಾಲ್ಕು ಭಾಗ ಮಾಡಿ ಒಂದು ಪಾತ್ರೆಯಲ್ಲಿ ಸ್ಟ್ರಾಬೆರ್ರಿ ಜೊತೆ ಬೆರೆಸಿಟ್ಟುಕೊಳ್ಳಿ. ಹಣ್ಣುಗಳನ್ನು ಮಿಕ್ಸಿ ಜಾರಿಗೆ ಸುರಿದು ಅದಕ್ಕೆ ಸಕ್ಕರೆ, ಮೊಸರು ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಗಿರ್ ಅಂತ ಅನ್ನಿಸಿಬಿಡಿ. ತೀರಾ ಗಟ್ಟಿ ಬೇಡವೆಂದಿದ್ದರೆ ಅಥವಾ ನೆಂಟರು ಜಾಸ್ತಿಯಿದ್ದರೆ ಅರ್ಧ ಅಥವಾ ಒಂದು ಲೋಟ ನೀರು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿಬಿಡಿ.

ಕೂಡಲೇ ಕುಡಿಯಬೇಕೆನ್ನಿಸಿದರೆ ಐಸ್ ಕ್ಯೂಬ್ ಸೇರಿಸಿ ಸ್ಟ್ರಾ ಜೊತೆ ಸ್ಟ್ರಾಬೆರ್ರಿ ಬಾಳೆಹಣ್ಣು ಜ್ಯೂಸ್ ಹೀರಿರಿ. ನಂತರ ಕುಡಿಯಬೇಕೆನ್ನಿಸಿದ್ದರೆ ಫ್ರಿಜ್ಜಲ್ಲಿ ತೆಗೆದಿಟ್ಟು ಅರ್ಧಗಂಟೆಯ ನಂತರ ಕುಡಿಯಬಹುದು.

Story first published: Friday, March 26, 2010, 18:19 [IST]
X
Desktop Bottom Promotion