Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ತಂದಿಹೆ ಕೊಡಗಿನ ಕಿತ್ತೀಳೆ...
ವಿಚಿತ್ರಾನ್ನಕ್ಕೆ ಕಿತ್ತಳೆಯ ಹುಳಿ. ಇಲ್ಲಿನ ಕಿತ್ತಳೆಯ ರುಚಿ ಹುಳಿಯಷ್ಟೇ ಅಲ್ಲ ; ಒಂಚೂರು ಸಿಹಿ, ಒಂಚೂರು ಗೊಜ್ಜಿನ ಘಮಲು. ತೊಳೆ ತೊಳೆಯೂ ಸ್ವಾದಿಷ್ಟ . ಜೊಲ್ಲೂರುತ್ತಿದೆಯಾ?
'ಹಣ್ಣು ಮಾರುವವನ ಹಾಡಿ"ನಲ್ಲಿ ನಂಜನಗೂಡಿನ ರಸಬಾಳೆಯ ನಂತರ ಬರುವುದು ಕೊಡಗಿನ ಕಿತ್ತೀಳೆ. ಅಭಿನಯಗೀತವಾಗಿ ಹಾಡುವ ಅನುಕೂಲಕ್ಕಾಗಿ ಕವಿ ಕಿತ್ತಳೆಯನ್ನು ಕಿತ್ತೀಳೆ ಎಂದಿರಬಹುದು. ಆದರೆ ನಾನು ಕೇಳಿದಂತೆ ಕಿತ್ಲೆ... ಕಿತ್ಲೆ... ಎಂದು ಗಾಡಿಯಲ್ಲಿ ಹಣ್ಣು ಮಾರುವವರು ಕೂಗುತ್ತಿರುತ್ತಾರೆಯೇ ವಿನಹ 'ಕಿತ್ತೀಳೆ" ಹಾಡಿಗಷ್ಟೇ ಸೀಮಿತ. ಅಂತಹ ಕಿತ್ತಳೆ ಉರುಫ್ ಕಿತ್ತೀಳೆ ಉರುಫ್ ಕಿತ್ಲೆ ಈ ಸಲದ ಟಾಪಿಕ್. ಚಿತ್ರಾನ್ನ ಮಾಡಲು ಉಪಯೋಗವಾಗುವ ಲಿಂಬೆಹಣ್ಣಿನದೇ 'ಸಿಟ್ರಸ್" ಕುಟುಂಬ ಸಂಜಾತ ಕಿತ್ತಳೆಗೆ ವಿಚಿತ್ರಾನ್ನದ ಒಂದು ಕಂತನ್ನು ಡೆಡಿಕೇಟಿಸುವುದು ಪರವಾ ಇಲ್ಲವಲ್ಲ !?
ಕಿತ್ತಳೆ ಹಣ್ಣಿನ ಕುರಿತಾಗಿ ಒಂದು ವೆಬ್‌ಸೈಟ್‌ನಲ್ಲಿ ಸಿಕ್ಕಿದ ಈ ಮಾಹಿತಿ ಚಿಕ್ಕದಾಗಿ, ಚೊಕ್ಕವಾಗಿದೆ.
The name "orange" comes from the Sanskrit word "naranga", which means fragrant. In the Orient, oranges were regarded as sacred, a heavenly fruit representing everlasting life. Maybe this belief stems from the fact that oranges are rich in an antioxidant that may help protect the cells in the body against damage. Following bananas, apples and watermelon, oranges are the fourth most popular fruit in the United States while orange juice is the most popular juice. One medium orange is an excellent source of vitamin C and fiber.
ಅಂದರೆ, ಅಮೆರಿಕದಲ್ಲೂ 'ಹಣ್ಣುಮಾರುವವನ ಹಾಡು" ಬರೆದರೆ ಬಾಳೆಹಣ್ಣಿಗೇ ಪ್ರಥಮಪಂಕ್ತಿ ! ಕಿತ್ತಳೆಗೆ ನಾಲ್ಕನೇ ಸ್ಥಾನ. ಆದರೆ ಜ್ಯೂಸ್‌ನ ಮಟ್ಟಿಗೆ ಕಿತ್ತಳೆಗೇ ಮೊದಲ ರ್ಯಾಂಕ್! ಭಾರತದಲ್ಲೂ ಅಷ್ಟೆ , 'ರಸ್ನಾ" ಸಾಫ್ಟ್‌ಡ್ರಿಂಕ್ ಕಾನ್ಸಂಟ್ರೇಟ್‌ನಲ್ಲಿ ಅತ್ಯಧಿಕ ಮಾರಾಟವಾಗುವುದು ಆರೆಂಜ್ ಫ್ಲೇವರ್! ('ಐ ಲವ್ ಯೂ ರಸ್ನಾ...." ಜಾಹೀರಾತಿನ ಅಂಕಿತಾ ಝುವೇರಿ ಈಗ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾಳಂತೆ).
ಅಮೆರಿಕದಲ್ಲಿ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾ - ಈ ಎರಡು ರಾಜ್ಯಗಳು ಕಿತ್ತಳೆ ಬೆಳೆಗೆ ಹೆಸರುವಾಸಿ. ಫ್ಲೋರಿಡಾ ರಾಜ್ಯದ ಎಲ್ಲ ವಾಹನಗಳ ನಂಬರ್‌ಪ್ಲೇಟ್ ಮೇಲೆ ಕಿತ್ತಳೆಹಣ್ಣಿನ ಚಿತ್ರ ರಾರಾಜಿಸಿ ದೂರದಿಂದಲೇ ಗಮನಸೆಳೆಯುತ್ತದೆ! ಕಿತ್ತಳೆಯಲ್ಲಿ ಸಾಕಷ್ಟು ವಿಟಮಿನ್ C ಇರುವುದಕ್ಕೂ, ಕ್ಯಾಲಿಫೋರ್ನಿಯಾದಲ್ಲಿ ಸಿಲಿಕಾನ್ ಕಣಿವೆಯಲ್ಲಿ C, C++ ಪಂಡಿತರೆಲ್ಲ ಜಮೆಯಾಗಿರುವುದಕ್ಕೂ ಏನಾದರೂ ಸಂಬಂಧ...??
ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳ ಇನ್ನೊಂದು ಸಾಮಾನ್ಯತೆ ನಿಮಗೆ ಗೊತ್ತಿರಬಹುದು - 'ಡಿಸ್ನಿ" ಮನೋರಂಜನಾ ಪಾರ್ಕ್‌ಗಳಿರುವುದು ಈ ಎರಡು ರಾಜ್ಯಗಳಲ್ಲಿ. ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ನಿಮಗೆ ತಿಳಿದಿದೆಯೋ ಇಲ್ಲವೋ, ಫ್ಲೋರಿಡಾದ ಡಿಸ್ನಿವರ್ಲ್ಡ್ ಮತ್ತು ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್ ಇರುವ ಸ್ಥಳ ಆಯಾರಾಜ್ಯದ 'ಆರೆಂಜ್" ಎಂಬ ಹೆಸರಿನ ಕೌಂಟಿಯಲ್ಲಿ ! (ಅಮೆರಿಕೆಯಲ್ಲಿ ರಾಜ್ಯಗಳನ್ನು ಆಡಳಿತದನುಕೂಲಕ್ಕೋಸ್ಕರ 'ಕೌಂಟಿ"ಗಳಾಗಿ ವಿಭಾಗಿಸಿದ್ದಾರೆ - ನಮ್ಮಲ್ಲಿ ಜಿಲ್ಲೆಗಳಿದ್ದಂತೆ).
ಭಾರತದಲ್ಲಿ ಅಸ್ಸಾಂ ಮತ್ತಿತರ ಈಶಾನ್ಯ ಪ್ರಾಂತಗಳಲ್ಲಿ , ಮಹಾರಾಷ್ಟ್ರದ ನಾಗಪುರದಲ್ಲಿ ಮತ್ತು ನಮ್ಮ ಹೆಮ್ಮೆಯ ಕರ್ನಾಟಕದ ಕೊಡಗಿನಲ್ಲಿ ಕಿತ್ತಳೆ ಹಣ್ಣು ಸಮೃದ್ಧವಾಗಿ ಬೆಳೆಯುತ್ತದೆ. ಒಂದು ಕಿತ್ತಳೆ ಮರ ಸರಾಸರಿ ನೂರಕ್ಕೂ ಹೆಚ್ಚು ವರ್ಷ ಬದುಕಬಲ್ಲದಂತೆ. ಕ್ರಿ.ಶ 1421ರಲ್ಲಿ ಫ್ರಾನ್ಸ್‌ನಲ್ಲಿ ನೆಟ್ಟ ಕಿತ್ತಳೆಗಿಡವೊಂದು ಹೆಮ್ಮರವಾಗಿ ಬೆಳೆದು 'ಕಾನ್ಸ್‌ಟೇಬಲ್ ಟ್ರೀ" ಎಂದು ಪ್ರಸಿದ್ಧವಾಗಿ 473 ವರ್ಷಗಳ ಕಾಲ ಫಲಕೊಡುತ್ತಿತ್ತಂತೆ!
ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ , ಚಿತ್ರಮಂದಿರದಲ್ಲಿ , ಸಂತೆಬೀದಿಯಲ್ಲಿ , ಆಟದ ಮೈದಾನದಲ್ಲಿ , ಕೊನೆಗೆ ಸ್ವಚ್ಛವಾಗಿರಬೇಕಾದ ಉದ್ಯಾನದಲ್ಲೂ ಶೇಂಗಾ ಸಿಪ್ಪೆ , ಕಿತ್ತಳೆಸಿಪ್ಪೆ ಇತ್ಯಾದಿ ಕಸವನ್ನು ನೀವು ನೋಡಿರುತ್ತೀರಿ. 'ಕಸದಿಂದ ರಸ" ಎನ್ನುವುದನ್ನು ನೀವು ಕೇಳಿರುತ್ತೀರಿ. ಕಸ ಹೆಕ್ಕುವ ಕೆಲಸ ಮುಜುಗರವಾಗುವುದಕ್ಕಿಂತ ಕಸವನ್ನೇ ಉಂಟುಮಾಡದಿದ್ದರೆ ಹೇಗೆ ? ನೆಕ್ಸ್ಟ್ ಟೈಮ್ ನೀವು ಕಿತ್ತಳೆ ಹಣ್ಣು ತಿಂದ ಮೇಲೆ ಅದರ ಸಿಪ್ಪೆಯನ್ನು ಕಸವೆಂದು ಬಿಸಾಡುವ ಬದಲು ಅದರ ಗೊಜ್ಜು ಮಾಡಬಹುದೆನ್ನುವ ಐಡಿಯಾ ಹೇಗಿದೆ? ಮೈಸೂರಲ್ಲಿರುವ ನನ್ನಕ್ಕ ಶಶಿರೇಖಾ ಪರಾಂಜಪೆಯವರು ಪ್ರೀತಿಯಿಂದ ಕಳಿಸಿರುವ ಈ ಹೊಸರುಚಿ ವಿಚಿತ್ರಾನ್ನ ಓದುಗರಿಗಾಗಿ.
ಕಿತ್ತಳೆಹಣ್ಣಿನ ಸಿಪ್ಪೆಯ ಗೊಜ್ಜು : ಕಿತ್ತಳೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಒಂದು ಹಣ್ಣಿನ ಸಿಪ್ಪೆ ಇದ್ದರೆ ಸುಮಾರು 2 ಚಮಚ ಕಡಲೆಬೇಳೆ, 2 ಚಮಚ ಉದ್ದಿನಬೇಳೆ, ಹಾಗೂ 4 ಅಥವಾ 5 ಒಣಮೆಣಸಿನಕಾಯಿ ಹುರಿದು ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ಸ್ವಲ್ಪ ಜಾಸ್ತಿ ಎಣ್ಣೆಯನ್ನು ಒಗ್ಗರಣೆಗೆ ಇಟ್ಟು ಅದರಲ್ಲಿ ಸಾಸಿವೆ, ಉದ್ದಿನಬೇಳೆ ಸಿಡಿಸಿ, ಕತ್ತರಿಸಿದ ಸಿಪ್ಪೆಯನ್ನು ಹಾಕಿ ಹುರಿಯಬೇಕು. ನಂತರ ಉಪ್ಪು (ರುಚಿಗೆ ತಕ್ಕಷ್ಟು), ಬೆಲ್ಲ, ಹುಣಿಸೆಹಣ್ಣಿನ ರಸ, ಸ್ವಲ್ಪ ನೀರು ಹಾಕಿ ಚೆನ್ನಾಗಿ (5 ನಿಮಿಷ) ಕುದಿಸಬೇಕು. ಕೊನೆಗೆ, ಹುರಿದಿಟ್ಟ ಪುಡಿಯನ್ನು ಸೇರಿಸಿ ಕಲಸಿ ಪಾತ್ರೆಯನ್ನು ಒಲೆಯಿಂದ ಇಳಿಸಿದರೆ ಗೊಜ್ಜು ಸಿದ್ಧ. 6-8 ದಿನಗಳವರೆಗೂ ಇದು ಕೆಡುವುದಿಲ್ಲ. ಈ ಗೊಜ್ಜಿನ ಇನ್ನೊಂದು ವೈಶಿಷ್ಟ್ಯವೆಂದರೆ ಇದು ಇಸ್ಪೀಟೆಲೆಗಳಲ್ಲಿ ಜೋಕರ್ ಇದ್ದಂತೆ - ಎಲ್ಲಿಯೂ ಸಲ್ಲುತ್ತದೆ; ಅಂದರೆ ಚಪಾತಿ, ಪೂರಿ, ಅನ್ನ, ದೋಸೆ, ಇಡ್ಲಿ - ಯಾವುದರ ಜೊತೆಗೂ ನಂಚೆಬಲ್!
ನಾಲಿಗೆಗೆ ಗೊಜ್ಜಿನ ಸವಿಯ ನಂತರ ಈಗ ಮೆದುಳಿಗೂ ಸ್ವಲ್ಪ ಗ್ರಾಸ. ಇಲ್ಲಿದೆ ಒಂದು ಜಾಣ್ಮೆಲೆಕ್ಕ - ಟ್ರೈ ಮಾಡುತ್ತೀರಾ ನೋಡಿ.
ರಂಗಣ್ಣ ಒಂದಿಷ್ಟು ಕಿತ್ತಳೆ ಮತ್ತು ಸೇಬುಹಣ್ಣು ಖರೀದಿಸಿ ಮೂರು ಪೆಟ್ಟಿಗೆಗಳಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ ತನ್ನ ಮಗನ ಹಾಸ್ಟೆಲ್‌ಗೆ ಕಳಿಸಿದ್ದಾನೆ. ಒಂದರಲ್ಲಿ ಕಿತ್ತಳೆ ಹಣ್ಣು ಮಾತ್ರ, ಇನ್ನೊಂದರಲ್ಲಿ ಸೇಬು ಮಾತ್ರ ಮತ್ತು ಮೂರನೆಯದರಲ್ಲಿ ಕಿತ್ತಳೆ ಮತ್ತು ಸೇಬು - ಹೀಗೆ ಪ್ಯಾಕಿಂಗ್ ಮಾಡಿದ್ದಾನೆ. ರಂಗಣ್ಣ ಮೂರು ಪೆಟ್ಟಿಗೆಗಳಿಗೂ ಒಳಗೇನಿದೆ ಎಂದು ಲೇಬಲ್ ಕೂಡ ಹಚ್ಚಿದ್ದಾನೆ; ಅದರೆ ಕಣ್ತಪ್ಪಿನಿಂದಾಗಿ ಈ ಮೂರೂ ಪೆಟ್ಟಿಗೆಗಳ ಲೇಬಲ್‌ಗಳೂ ತಪ್ಪುತಪ್ಪಾಗಿವೆ. ಆದರೂ ಈ ತಪ್ಪನ್ನೇ ಮಗನ ಜಾಣ್ಮೆಯನ್ನು ಪರೀಕ್ಷಿಸಲು ಉಪಯೋಗಿಸಬಹುದೆಂದು ಎಣಿಸಿ ರಂಗಣ್ಣ ಒಂದು ಚೀಟಿಯನ್ನೂ ಪೆಟ್ಟಿಗೆಗಳ ಜತೆ ಕಳಿಸುತ್ತಾನೆ. ಅದರಲ್ಲಿ ಬರೆದಿರುತ್ತದೆ - 'ಮೂರರ ಪೈಕಿ ಯಾವುದಾದರೂ ಒಂದು ಪೆಟ್ಟಿಗೆಯಿಂದ ಒಂದೇ ಒಂದು ಹಣ್ಣನ್ನು ಹೊರತೆಗೆದು ನೋಡಿ ಮೂರೂ ಪೆಟ್ಟಿಗೆಗಳ ಲೇಬಲ್‌ಗಳನ್ನು ಸರಿಪಡಿಸಬೇಕು!"
ಸ್ವಲ್ಪ 'ಧಿಮಾಕ್" ಬಳಸಿದರೆ ರಂಗಣ್ಣನ ಮಗನಿಗೆ ಇದೇನೂ ಕಷ್ಟದ ವಿಷಯವಲ್ಲ. ಆದರೂ ಆತ ನೆರವು ಕೇಳಿದರೆ ನಿಮ್ಮ ಉತ್ತರ?