For Quick Alerts
ALLOW NOTIFICATIONS  
For Daily Alerts

ಮಾಸ್ಟರ್ ಶೆಫ್ ಫೈನಲ್‌ನಲ್ಲಿ ಬೆಂಗಳೂರಿನ ಶಾಜಿಯಾ

By Prasad
|

ಅಡುಗೆಮನೆಯೆಂಬ ಸಾಮ್ರಾಜ್ಯಕ್ಕೆ ಮನೆಯ ಹೆಣ್ಣುಮಗಳೇ ಸಾಮ್ರಾಜ್ಞಿ. ಇದು ಎಲ್ಲರಿಗೂ ತಿಳಿದಿರುವ ವಿಚಾರವೆ. ಅಲ್ಲಿ ಆಕೆ ಹೇಳಿದಂತೆಯೇ ಪಾತ್ರೆ ಪಗಡ ಸೇರಿದಂತೆ ಸರ್ವಸ್ವವೂ ಮಾತು ಕೇಳಬೇಕು. ಅಮ್ಮ, ಅಜ್ಜಿ, ಮುತ್ತಜ್ಜಿ, ಅಕ್ಕ, ತಂಗಿ, ನಾದಿನಿ, ಅತ್ತೆ, ಅತ್ತಿಗೆ... ಯಾರೇ ಆಗಲಿ ಅವರದೇ ಸರ್ವಾಧಿಕಾರ.

ಆದರೆ, ಅಡುಗೆಮನೆಯಿಂದ ಒಮ್ಮೆ ಆಚೆ ಇಣುಕಿ ನೋಡಿ. ಸನ್ನಿವೇಶ ಅಡುಗೆಮನೆಗಿಂತ ತದ್ವಿರುದ್ಧ. ಕೈಯಲ್ಲಿ ಸೌಟು ಹಿಡಿದ ಬಾಣಸಿಗರದೇ ಅಧಿಪತ್ಯ. ಹೋಟೆಲುಗಳಲ್ಲಿ, ಮದುವೆಮನೆಗಳಲ್ಲಿ, ಸಾರ್ವಜನಿಕ ಸಮಾರಂಭದಲ್ಲಿ ಅಡುಗೆ ಮಾಡುವವರು ಮೀಸೆ ಇರುವ ಅಥವಾ ಬೋಳಿಸಿಕೊಂಡಿರುವ ಗಂಡಸರದೇ ಪಾರುಪತ್ಯ. ಪಂಚತಾರಾ ಹೋಟೆಲುಗಳಲ್ಲಿ ಕೂಡ ಭೀಮಸೇನ, ನಳಮಹಾರಾಜರೇ ಕಂಡುಬರುತ್ತಾರೆ.

ಯಾಕೆ ಹೀಗೆ? ಎಂಬ ಸರಳವೆನಿಸಿದರೂ ಕ್ಲಿಷ್ಟಕರ ಪ್ರಶ್ನೆಗೆ ಸುಲಭ ಉತ್ತರ ಸಿಗಲಾರದು. ಕನ್ನಡ ಟಿವಿ ಚಾನಲ್ಲುಗಳಲ್ಲಿ ಕೂಡ ವೈವಿಧ್ಯಮಯ ಪಾಕಪ್ರಾವೀಣ್ಯತೆಯನ್ನು ತೋರಿಸುತ್ತ, ವಿಶಿಷ್ಟ ಹೋಟೆಲುಗಳನ್ನು ಪರಿಚಯಿಸುತ್ತ ಸಿಹಿಕಹಿ ಚಂದ್ರು 'ಬೊಂಬಾಟ್ ಭೋಜನ' ಮತ್ತು 'ನಗೆಪಾಕ' ಮುಂತಾದ ಕಾರ್ಯಕ್ರಮಗಳಲ್ಲಿ ಸಖತ್ ಮಿಂಚಿದ್ದಾರೆ. ಹೊಸರುಚಿ ಕಾರ್ಯಕ್ರಮಗಳಲ್ಲಿ ಅನೇಕ ಹೆಂಗಳೆಯರು ಜರತಾರಿ ಸೀರೆಯುಟ್ಟು ಮಿಂಚುತ್ತಿದ್ದರೂ, ನಳಪಾಕ ಅಂದಂತೆ ದಮಯಂತಿಪಾಕ, ದ್ರೌಪತಿಪಾಕ ಅಂತೆಲ್ಲ ಯಾಕೆ ಕರೆಯುವುದಿಲ್ಲ?

ಅದೇನೇ ಇರಲಿ, ಸ್ಟಾರ್ ಪ್ಲಸ್ ಹಿಂದಿ ಚಾನಲ್ಲಿನಲ್ಲಿ ಈಗ ಬರುತ್ತಿರುವ 'ಮಾಸ್ಟರ್ ಶೆಫ್ ಇಂಡಿಯಾ 2' ರಿಯಾಲಿಟಿ ಶೋನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಫೈನಲ್ಲಿಗೆ ಬಂದಿದ್ದಾರೆಂಬುದು ವಿಶೇಷ. ಆಕೆ, 34 ವರ್ಷದ, ಬೆಂಗಳೂರಿನಲ್ಲಿ ಶಾಲೆ ನಡೆಸುತ್ತಿರುವ, ಪ್ರತಿಭಾವಂತ ಆಧುನಿಕ ಮುಸ್ಲಿಂ ಮಹಿಳೆ ಸಲ್ಮಾ ಶಾಜಿಯಾ ಫಾತಿಮಾ.

ಸಾಕಷ್ಟು ಪ್ರಯೋಗಗಳನ್ನು ನಡೆಸಿ, ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಿ, ಒತ್ತಡದ ಸಂದರ್ಭಗಳನ್ನು ಅತ್ಯಂತ ಆಸ್ವಾದಿಸುವ ಶಾಜಿಯಾ ಅವರು, ಅಮೃತಸರದ 40 ವರ್ಷದ ಟೇಕ್ವಂಡೋ ಪಟು ಜೋಸೆಫ್ ಮತ್ತು ಶೀಮ್ಲಾದ ಸುಂದರಿ 29 ವರ್ಷದ ಗೃಹಿಣಿ ಶಿಪ್ರಾ ಅವರೊಂದಿಗೆ ಫೈನಲ್ ನಲ್ಲಿ ಪಾಕಪ್ರಾವೀಣ್ಯವನ್ನು ತೋರಲಿದ್ದಾರೆ. ಕಾರ್ಯಕ್ರಮ ಇದೇ ಡಿ.31 ಮತ್ತು ಜ.1ರಂದ ಸ್ಟಾರ್ ಪ್ಲಸ್ ಚಾನಲ್ ನಲ್ಲಿ ಸಂಜೆ 9 ಗಂಟೆಗೆ ಪ್ರಸಾರವಾಗಲಿದೆ. ವಿಶೇಷ ಅತಿಥಿಯಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾಗವಹಿಸುತ್ತಿದ್ದಾರೆ.

ಯಾವತ್ತಿದ್ದರೂ ನಗುನಗುತ್ತಲೇ ಇರುವ ಶಾಜಿಯಾ ಅವರು ಶಾಲೆಯನ್ನು ನಡೆಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದಾರೆ. ನಗುನಗುತಾ ನಲಿನಲಿಯುತ್ತಿದ್ದರೆ ಎಂಥದೇ ಪರಿಸ್ಥಿತಿಯನ್ನು ಸರಳವಾಗಿ ನಿಭಾಯಿಸಬಹುದು ಎಂಬುದು ಶಾಜಿಯಾ ಅವರ ಮಂತ್ರ. ಹಾಗೆಯೆ, ಕರ್ನಾಟಕದ ಹಳ್ಳಿಯ ಬಡಮಹಿಳೆಯರಿಗೆ ಉಚಿತವಾಗಿ ಅಡುಗೆಹೇಳಿಕೊಡುವ ಇರಾದೆಯನ್ನೂ ಅವರು ಹೊಂದಿದ್ದಾರೆ. ಅವರಿಗೆ ಶುಭವಾಗಲಿ.

English summary

Master Chef India 2 | Bangalore woman in final | Reality show on Star Plus | ಮಾಸ್ಟರ್ ಶೆಫ್ ಇಂಡಿಯಾ 2 | ಫೈನಲ್‌ನಲ್ಲಿ ಬೆಂಗಳೂರಿನ ಶಾಜಿಯಾ

34-year-old Salma Shazia Fathima from Bangalore has reached final of Master Chef India 2 reality show. Shazia claims to smile through all situations. She intends to teach cooking to under-privileged women in rural Karnataka. Wish her all the best.
Story first published: Saturday, December 31, 2011, 13:47 [IST]
X