For Quick Alerts
ALLOW NOTIFICATIONS  
For Daily Alerts

ಕಪ್ಪು,ನಸುಗೆಂಪು,ಕರಿಮಣಿ ರಾಗಿ

By Super
|
Ragi crops
ಯೋಗ್ಯ ರಾಗಿ ಭೋಗ್ಯ ರಾಗಿ ಎಂದರು ಕನಕದಾಸರು . ಕವಿ, ದಾರ್ಶನಿಕ, ಭಕ್ತಶ್ರೇಷ್ಠ, ಯೋಗಿ ಕನಕರು ಮಂದಿಮನೆಮುಂದೆ ಭಿಕ್ಷೆ ಕೇಳುವುದು ರಾಗಿಯನ್ನು ಮಾತ್ರ. ಮನೆಬಾಗಿಲಿಗೆ ಬಂದು ಬೇಡುವ ಬಂಧುವಿಗೆ ನೀವು ಒಂದು ಪಾವು ರಾಗಿ ಭಿಕ್ಷೆ ಹಾಕುತ್ತೀರಾ? ಕಪ್ಪು,ನಸುಗೆಂಪಗಿನ ಕರಿಮಣಿ ರಾಗಿ, ಸಾಸಿವೆ ಕಾಳನ್ನು ಹೋಲುತ್ತದೆ. ದಣಿವರಿಯದೆ ದುಡಿಯುವ ಗ್ರಾಮೀಣ ಪ್ರದೇಶದವರಿಗೆ ರಾಗಿಮುದ್ದೆ ರಾಗಿರೊಟ್ಟಿ ರಾಗಿಗಂಜಿ ದೈನಂದಿನ ಆಹಾರವಾದರೆ, ನಗರವಾಸಿ ಮಧಮೇಹಿಗಳಿಗೆ ಮತ್ತು ಕ್ಯಾಲ್ ಶಿಯಂ ಕೊರತೆಯಿಂದ ಬಳಲುವವರಿಗೆ ರಾಗಿ,ಊಟವೂ ಆಗುತ್ತದೆ,ಔಷಧೋಪಚಾರವೂ ಆಗುತ್ತದೆ.

ತಮಿಳು ನಾಡು,ಒರಿಸ್ಸಾ ಮತ್ತು ಕರ್ನಾಟಕದಲ್ಲಿ ರಾಗಿಯನ್ನು ಯಥೇಶ್ಚವಾಗಿ ಬೆಳೆಯುತ್ತಾರೆ. ಜೋಳ, ನವಣೆಯಂತೆ ರಾಗಿ ಮೂಲತಃ ಮಳೆಯನ್ನು ನಂಬಿ ಬಹುಶಃ, ಭಾಗಶಃ ಅರಳುವ ಬೆಳೆ. ಬಯಲು ಸೀಮೆಯಲ್ಲಿ ಎಂಟು ಕುಂಟೆ ಜಮೀನು ಇದ್ದರೆ ಒಬ್ಬ ರೈತನ ಸಂಸಾರವನ್ನು ವರ್ಷಪೂರ್ತ ಕಾಪಾಡುವ ಶಕ್ತಿ ರಾಗಿಗೆ ಇದೆ. ಅದಕ್ಕೇ, ಬಡ ರೈತರು ಮತ್ತು ರೈತ ಕಾರ್ಮಿಕರು ಭೂಮಿ ಹದಮಾಡುವುದಕ್ಕೆ ಮುಂಚೆ ಚಲಿಸುವ ಮೋಡಗಳನ್ನು ನೋಡುತ್ತಲೇ ಇರುತ್ತಾರೆ. ಬೀಜಬಿತ್ತಿದ ಮೇಲೆ ಆಕಾಶಕ್ಕೆ ಕೈಮುಗಿಯುತ್ತಾರೆ.

ಬಿಸಿಬಿಸಿ ರಾಗಿ ಮುದ್ದೆ ಗರಿಗರಿ ರಾಗಿ ರೊಟ್ಟಿ ಎಂದರೆ ಯಾರಿಗಿಷ್ಟವಿಲ್ಲ. ನಮ್ಮ ಕರ್ನಾಟಕದಲ್ಲಿ ಆಹಾರ ಪದ್ದತಿಯಾಗಿ ರಾಗಿ ಜನಪ್ರಿಯವಾಗಿದ್ದರೂ ಅದರ ಜನಪ್ರಿಯತೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತ. ಚಿತ್ರದುರ್ಗದಿಂದ ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ಚಾಚಿಕೊಂಡಿರುವ ತುಮಕೂರು, ರಾಮನಗರ, ಕೋಲಾರ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಮೈಸೂರು , ಹಾಸನದ ಕೆಲವು ತಾಲೂಕುಗಳಲ್ಲಿ, ಮುಖ್ಯವಾಗಿ ನೀರಾವರಿ ಸೌಲಭ್ಯವಿಲ್ಲದ ಹೊಲಗಳಲ್ಲಿ ರಾಗಿ ಬೆಳೆಯುವುದುಂಟು.

ಕಂಪ್ಯೂಟರ್ ಕಪಿಮುಷ್ಟಿಯಲ್ಲಿ ಜೀವನ ನೂಕುತ್ತಾ, ಇಂಟರ್ ನೆಟ್ಟಿನ ಮೂಲಕವೇ ಅನ್ನ ಸಾರು ಬಯಸುವಂಥ ನಾವು ಉತ್ತು ಬಿತ್ತಿ ಕೊಯಿಲು ಮಾಡಿ, ಕಣ ಮಾಡಿ, ಕೇರಿ, ತೂರಿ, ಅಳೆದು, ತುಂಬಿ, ಮಿಷನ್ನಿಗೆ ಹಾಕಿಸಿ, ಜರಡಿಯಾಡಿ ಮುದ್ದೆ ಮತ್ತು ರೊಟ್ಟಿ ಮಾಡುವುದು ಅಷ್ಟರಲ್ಲೇ ಇದೆ. ಅಂಗಡಿ ಹೋದರೆ ಅರ್ಧ ಕೆಜಿ ಒಂದು ಕೆಜಿ ರಾಗಿ ಹಿಟ್ಟಿನ ಪ್ಯಾಕೆಟ್ಟುಗಳು ಸಿಗುತ್ತವೆ. ಅಂಗಡಿ ಎಂದರೆ ಕುಪರ್ಟಿನೊದ ಇಂಡಿಯನ್ ಸ್ಟೋರ್ಸ್ ಅಲ್ಲ, ನಮ್ಮ ಚಿಂತಾಮಣಿಯ ಆಜಾದ್ ಚೌಕದಲ್ಲೂ ಪ್ಯಾಕಡ್ ಗ್ರೋಸರಿ ಸಿಕ್ಕತ್ತೆ. ಸುಮ್ಮನೆ ತಂದು ರೊಟ್ಟಿ ಮಾಡಿಕೊಂಡು ತಿಂದು ತೇಗುವುದನ್ನು ಕಲಿಯುವಾ!

English summary

Ragi | Dry Crops | Bayalu Seeme| Food Grains| Ragi Recipes | Karnataka Food| ಕಪ್ಪು,ನಸುಗೆಂಪು,ಕರಿಮಣಿ ರಾಗಿ

About Ragi, cultivation, crop and the food habit in south karnatak region. ಕಪ್ಪು,ನಸುಗೆಂಪು,ಕರಿಮಣಿ ರಾಗಿ
X
Desktop Bottom Promotion