For Quick Alerts
ALLOW NOTIFICATIONS  
For Daily Alerts

ಅಲ್ಲೆಲ್ಲ ಏಕೆ ಅಡುಗೆಮನೆಯಲ್ಲಿಯೂ ಕನ್ನಡ ಮಾಯ!

By * ಪ್ರಸಾದ ನಾಯಿಕ
|
Speak Kannada at home
ಮಾರಾಟ ಸಂಕೀರ್ಣ(ಮಾಲ್)ಗಳಲ್ಲಿ ಕನ್ನಡ ಇಲ್ಲ, ಶಾಲೆಗಳಲ್ಲಿ ಕನ್ನಡ ಇಲ್ಲ, ಆಡಳಿತದಲ್ಲಿ ಕನ್ನಡ ಇಲ್ಲ, ಕಚೇರಿಗಳಲ್ಲಿ ಕನ್ನಡವಿಲ್ಲ, ಮೆಟ್ರೋದಲ್ಲಿ ಕನ್ನಡವಿಲ್ಲ, ಅಷ್ಟೇ ಏಕೆ ಅನೇಕಾನೇಕ ರಸಪಾಕಗಳ ಪ್ರಯೋಗಶಾಲೆಯಾಗಿರುವ ಅಡುಗೆಮನೆಯಲ್ಲಿಯೂ ಕನ್ನಡ ಮಂಗಮಾಯವಾಗಿದೆ.

ನಾವು ಹೇಳುವ ತಿಂಡಿತಿನಿಸುಗಳು, ತರಕಾರಿಗಳು, ಹಣ್ಣುಗಳು, ವೈವಿಧ್ಯಮಯ ಭಕ್ಷ್ಯಗಳು, ಅವನ್ನು ಮೆಲ್ಲುತ್ತ ಆಡುವ ನುಡಿಮುತ್ತುಗಳಲ್ಲಿಯೂ ಕನ್ನಡ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ. ಚಮಚದಿಂದ ಹಿಡಿದು ದೊಡ್ಡದೊಡ್ಡ ಪಾತ್ರೆಪಗಡಗಳ ಹೆಸರುಗಳೆಲ್ಲ ಆಂಗ್ಲ ಹೆಸರುಗಳಿಂದ ಫಳಫಳಿಸುತ್ತಿರುತ್ತಿವೆ.

ಕನ್ನಡ ಅಲ್ಲಿಲ್ಲ ಇಲ್ಲಿಲ್ಲ, ಎಲ್ಲೆಲ್ಲೂ ಇಲ್ಲ, ಕನ್ನಡ ಸಾವಿನಂಚಿಗೆ ಸಾಗುತ್ತಿದೆ... ಮುಂತಾಗಿ ಕೊರಗುವ ಬದಲು ನಮ್ಮ ಅಡುಗೆಮನೆಯನ್ನು ನಾವು ಕನ್ನಡದಲ್ಲಿಯೇ ಸ್ವಚ್ಛವಾಗಿಟ್ಟುಕೊಳ್ಳೋಣ. ಇದು ಒಬ್ಬಿಬ್ಬರ ಕಥೆಯಲ್ಲ, ಎಲ್ಲ ಮನೆಮನೆಗಳ ಕಥೆ. ಕಾನ್ವೆಂಟ್ ಓದುವ ಮಕ್ಕಳಿಂದ ಹಿಡಿದು ಕನ್ನಡ ಮಾಧ್ಯಮದಲ್ಲಿ ಓದಿಬಂದ ಹಿರಿಯರು ಕೂಡ ಇಂಗ್ಲಿಷ್ ಪದಗಳನ್ನು ಬಳಸುತ್ತಾರೆ.

ಯಾರಿಗಾದ್ರೂ ಕೇಳಿ ನೋಡಿ ದೊಡ್ಡಮೆಣಸಿನಕಾಯಿ ಪಲ್ಯ ಹೇಗೆ ಮಾಡ್ತೀರೆಂದು. "ಮೊದಲು ಕ್ಯಾಪ್ಸಿಕಂ, ಅನಿಯನ್, ಮೆಣಸಿನಕಾಯಿ ಕಟ್ ಮಾಡಿಕೊಂಡು, ಸ್ಟೌ ಹೊತ್ತಿಸಿ ಒಂದು ಪ್ಯಾನ್ ನಲ್ಲಿ ಸ್ವಲ್ಪವೇ ಆಯಿಲ್ ಹಾಕಿ, ಒಗ್ಗರಣೆ ಮಾಡಿಕೊಂಡು ಚೆನ್ನಾಗಿ ಫ್ರೈ ಮಾಡಬೇಕು. ಅದಕ್ಕೆ ಸ್ವಲ್ಪ ನೀರು ಹಾಕಿ ಬಾಯ್ಲಿಂಗಿಗೆ ಇಡಬೇಕು. ಕುದಿಬಂದಮೇಲೆ ಸ್ವಲ್ಪ ಸಾಲ್ಟು, ಸ್ವಲ್ಪ ಕೋಕೋನಟ್ ತುರಿ ಹಾಕಿ ಚೆನ್ನಾಗಿ ಬೇಯಿಸಬೇಕು" ಅಂತ ಹೇಳುತ್ತಾರೆ.

'ಮಮ್ಮಿ ಏನ್ ಮಾಡ್ತಿದ್ದಾಳೋ ಪುಟ್ಟಾ' ಅಂತ ಪಕ್ಕದ ಮನೆ ಆಂಟಿ (ಕ್ಷಮಿಸಿ ಏನನ್ನಬೇಕೋ ಗೊತ್ತಿಲ್ಲ) ಕೇಳಿದ್ರೆ, 'ಮಮ್ಮಿ ಕಿಚನ್ ನಲ್ಲಿ ಕುಕ್ಕಿಂಗ್ ಮಾಡ್ತಿದ್ದಾಳೆ' ಅನ್ನತ್ತೆ ಇಂದಿನ ಪೀಳಿಗೆಯ ಪುಟಾಣಿ. ಅಡುಗೆಮನೆಗೆ ಕಿಚನ್, ಚಮಚಕ್ಕೆ ಸ್ಪೂನ್, ಸಿಹಿಗೆ ಸ್ವೀಟ್, ತರಕಾರಿಗೆ ವೆಜಿಟೇಬಲ್, ಪಾತ್ರೆಗೆ ಬೌಲ್, ಒಲೆಗೆ ಸ್ಟೌ, ಅಗಲತಳದ ಬೋಗುಣಿಗೆ ಪ್ಯಾನ್... ಹೀಗೇ ಏನೇನೋ. ನಮ್ಮ ಅಡುಗೆಮನೆಯಂತೂ ಇಂಗ್ಲಿಷ್ ಮಯವಾಗಿ ಕುಲಗೆಟ್ಟುಹೋಗಿದೆ.

ಟಿಫನ್, ಲಂಚ್, ಕ್ಯಾರಟ್, ಕ್ಯಾಪ್ಸಿಕಂ, ಅನಿಯನ್, ಬ್ರಿಂಜಾಲ್, ಡ್ರಮ್ ಸ್ಟಿಕ್, ರೈಸ್ ಬಾತ್, ಕೋಕೋನಟ್ ರೈಸ್, ಜೀರಾ ರೈಸ್, ಫ್ರೈಡ್ ರೈಸ್... ಮುಂತಾದ ಪದಗಳಿಗೆಲ್ಲ ಕನ್ನಡಪದಗಳಿಲ್ಲವೆ? ಇತ್ತೀಚೆಗೆ ಮದುವೆಮನೆಯಲ್ಲಿ ಊಟ ಮಾಡುತ್ತಿದ್ದಾಗ, 'ಯಾರಿಗೆ ಮೊಸರೈಸ್' ಎಂದು ಕೇಳುತ್ತ ಬಂದ ಮಾಣಿ. ದಂಗಾಗಿ ಹೋದೆ. ಆತ ಕೇಳಿದ್ದು ಮೊಸರನ್ನ!

ಕನಿಷ್ಠಪಕ್ಷ ಅಡುಗೆಮನೆಯಲ್ಲಾದರೂ ಕನ್ನಡವನ್ನು ಜೀವಂತವಾಗಿಡಲು ನಾವು ಪ್ರಯತ್ನಿಸಬೇಕಿದೆ. ಮಕ್ಕಳಿಗೆ ಕನ್ನಡಪದಗಳನ್ನೇ ಹೇಳಿಕೊಡಿ. ಅಡುಗೆಪದಗಳು ಮಾತ್ರವಲ್ಲ, ಬಣ್ಣಗಳು, ಮಾಸಗಳು, ಪ್ರಾಣಿಗಳ ಹೆಸರುಗಳನ್ನು ಕನ್ನಡದಲ್ಲಿಯೇ ಹೇಳಿಕೊಡಿ. ಅದು ಆದಾಗ ಮಾತ್ರ ನಿಜವಾದ ಕನ್ನಡ ರಾಜ್ಯೋತ್ಸವ.

English summary

Kannada vanished from kitchen | Speak Kannada at home | Colloquial Kannada | ಅಡುಗೆಮನೆಯಲ್ಲಿಯೂ ಕನ್ನಡ ಮಾಯ

No point in cribbing that Kannada is not being used in public places. In fact, Kannada is vanished from our kitchen itself. It is every Kannadigas duty to use colloquial Kannada words in day-to-day life and teach children the same.
Story first published: Tuesday, November 1, 2011, 17:43 [IST]
X
Desktop Bottom Promotion